ದೂರದೃಷ್ಟಿಯ ಯೋಜನೆಗಳ ಅನುಷ್ಠಾನ ಡಬಲ್ ಎಂಜಿನ್ ಸರಕಾರದಿಂದ ಮಾತ್ರ ಸಾಧ್ಯ: ಸಂಜೀವ ಮಠಂದೂರು

0

ಉಪ್ಪಿನಂಗಡಿ: ಊರಿನ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಿರುವುದು ರಸ್ತೆಗಳು. ಇದರಿಂದಾಗಿ ರಾಜ್ಯ ಬಿಜೆಪಿ ಸರಕಾರವು ರಸ್ತೆಗಳ ಅಭಿವೃದ್ಧಿಗೆ ಮೊದಲ ಆದ್ಯತೆಯನ್ನು ನೀಡುತ್ತಿದೆ. ಈಗಲೇ ಮುಂದಿನ 50 ವರ್ಷಕ್ಕಾಗುವಷ್ಟು ದೂರದೃಷ್ಟಿಯನ್ನಿಟ್ಟುಕೊಂಡು ಯೋಜನೆಗಳನ್ನು ಅನುಷ್ಠಾನ ಮಾಡಲಾಗುತ್ತಿದ್ದು, ಇಂತಹ ಅಭಿವೃದ್ಧಿ ಕೆಲಸಗಳನ್ನು ಮಾಡಲು ಡಬಲ್ ಎಂಜಿನ್ ಸರಕಾರವಾಗಿರುವ ಬಿಜೆಪಿಗೆ ಮಾತ್ರ ಸಾಧ್ಯ ಎಂದು ಶಾಸಕ ಸಂಜೀವ ಮಠಂದೂರು ತಿಳಿಸಿದರು.


ಲೋಕೋಪಯೋಗಿ ಇಲಾಖೆಯ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯಡಿ 10 ಕೋಟಿ ರೂ. ವೆಚ್ಚದಲ್ಲಿ ಪುತ್ತೂರು- ಉಪ್ಪಿನಂಗಡಿ- ಗುರುವಾಯನಕೆರೆ ರಾಜ್ಯ ಹೆದ್ದಾರಿಯ ಬೇರಿಕೆಯಿಂದ 34 ನೆಕ್ಕಿಲಾಡಿಯವರೆಗಿನ ಚತುಷ್ಪಥ ರಸ್ತೆ ಕಾಮಗಾರಿಯ ಶಂಕು ಸ್ಥಾಪನೆಯನ್ನು 34 ನೆಕ್ಕಿಲಾಡಿಯ ಶಕ್ತಿನಗರದಲ್ಲಿ ನೆರವೇರಿಸಿ ಅವರು ಮಾತನಾಡಿದರು.


ಈ ರಸ್ತೆಯೀಗ ರಾಜ್ಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿದ್ದು, ನಾನು ಶಾಸಕನಾದ ಪ್ರಾರಂಭದಲ್ಲೇ 10 ಕೋಟಿಯನ್ನು ಈ ರಸ್ತೆಗೆ ಇಟ್ಟಿದ್ದು, ಬೇರಿಕೆಯವರೆಗೆ ಅದರ ಕಾಮಗಾರಿ ನಡೆಯುತ್ತಿದೆ. ಇದೀಗ ವಾಪಸ್ ಒಂದೇ ಪ್ಯಾಕೇಜ್‌ನಡಿಯಲ್ಲಿ 12.70 ಕೋಟಿ ರೂ.ಗಳನ್ನು ಇಟ್ಟಿದ್ದು, ಇದರಲ್ಲಿ 10 ಕೋಟಿ ರೂ.ನಲ್ಲಿ ಈ ರಸ್ತೆಯ ಮುಂದುವರಿದ ಭಾಗವಾದ ಬೇರಿಕೆಯಿಂದ 34 ನೆಕ್ಕಿಲಾಡಿಯ ಪೆಟ್ರೋಲ್ ಪಂಪ್‌ನವರೆಗೆ ಕಾಮಗಾರಿ ನಡೆಯಲಿದೆ. ಇನ್ನುಳಿದ 2.70 ಕೋಟಿಯಲ್ಲಿ ಹಳೆಗೇಟು- ಮರ್ಧಾಳ ರಾಜ್ಯ ಹೆದ್ದಾರಿಯಲ್ಲಿ ಹಳೆಗೇಟಿನಿಂದ ಕೆಮ್ಮಾರದವರೆಗೆ ಕಾಮಗಾರಿ ನಡೆಯಲಿದೆ. ಪುತ್ತೂರು- ಉಪ್ಪಿನಂಗಡಿ- ಗುರುವಾಯನಕೆರೆ ರಾಜ್ಯ ಹೆದ್ದಾರಿಯಲ್ಲಿ ಉಳಿದ ಕಾಮಗಾರಿಗಳನ್ನು ಪೂರ್ಣಗೊಳಿಸಲು ಮತ್ತೆ 10 ಕೋಟಿಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಅದು ಆರ್ಥಿಕ ಇಲಾಖೆಗೆ ಹೋಗಿದೆ. ಅಲ್ಲಿ ಮಂಜೂರಾತಿ ದೊರಕಿದರೆ ಮತ್ತೆ 10 ಕೋಟಿಯ ಕಾಮಗಾರಿ ನಡೆಯಲಿದೆ. ಉಪ್ಪಿನಂಗಡಿಯನ್ನು ಪ್ರವಾಸೋದ್ಯಮ ಕೇಂದ್ರವಾಗಿಸುವ ನಿಟ್ಟಿನಲ್ಲಿ ಸಂಗಮ ಸ್ಥಳದಲ್ಲಿ ಅಣೆಕಟ್ಟು ನಿರ್ಮಿಸಲು ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಅದು ಮಂಜೂರಾತಿಗೊಂಡರೆ ಅಲ್ಲಿ ಬೋಟಿಂಗ್ ಸೌಲಭ್ಯವವೂ ದೊರಕಲಿದೆ. ಒಟ್ಟಿನಲ್ಲಿ ನನ್ನ ಶಾಸಕತ್ವದ ಅವಧಿಯಲ್ಲಿ ಕ್ಷೇತ್ರದಲ್ಲಿ ಉತ್ತಮ ಅಭಿವೃದ್ಧಿ ಕೆಲಸಗಳು ನಡೆದಿವೆ ಎಂದರು.


ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ ಮಾತನಾಡಿ, ಬಿಜೆಪಿ ಸರಕಾರದ ಅವಧಿಯಲ್ಲಿ ರಾಜ್ಯದಲ್ಲಿ ಬಹಳಷ್ಟು ಅಭಿವೃದ್ಧಿ ಕೆಲಸಗಳಾಗಿದ್ದು, ಜನರ 90% ಬೇಡಿಕೆಗಳು ಈಡೇರಿವೆ. ಕರಾವಳಿ ಅಭಿವೃದ್ಧಿ ಪ್ರಾಧಿಕಾರದಿಂದ ಪುತ್ತೂರು ವಿಧಾನ ಸಭಾ ಕ್ಷೇತ್ರಕ್ಕೆ ಸುಮಾರು 4 ಕೋಟಿ ರೂ. ಅನುದಾನವನ್ನು ವಿವಿಧ ಅಭಿವೃದ್ಧಿ ಕೆಲಸಗಳಿಗೆ ನೀಡಲಾಗಿದೆ. 34 ನೆಕ್ಕಿಲಾಡಿಗೆ 16 ಲಕ್ಷದಷ್ಟು ಅನುದಾನವನ್ನು ನೀಡಲಾಗಿದೆ ಎಂದರು.


ಲೋಕೋಪಯೋಗಿ ಇಲಾಖೆಯ ಸಹಾಯಕ ಅಭಿಯಂತರರಾದ ಬಿ. ರಾಜಾರಾಮ್ ಪ್ರಾಸ್ತಾವಿಕವಾಗಿ ಮಾತನಾಡಿ, 10 ಕೋಟಿ ರೂ.ನಲ್ಲಿ ಬೇರಿಕೆಯಿಂದ 34 ನೆಕ್ಕಿಲಾಡಿಯ ಪೆಟ್ರೋಲ್ ಪಂಪ್‌ಗಿಂತ ಸ್ವಲ್ಪ ಮುಂದಿನ ತನಕ ಅಂದರೆ 2.3 ಕಿ.ಮೀ.ನಷ್ಟು ರಸ್ತೆ ನಿರ್ಮಾಣವಾಗಲಿದೆ ಎಂದರು.


ವೇದಿಕೆಯಲ್ಲಿ ಬಿಜೆಪಿಯ ಪುತ್ತೂರು ಗ್ರಾಮಾಂತರ ಮಂಡಲ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಕೋಡಿಂಬಾಡಿ ಗ್ರಾ.ಪಂ. ಅಧ್ಯಕ್ಷ ರಾಮಚಂದ್ರ ಪೂಜಾರಿ, ಉಪ್ಪಿನಂಗಡಿ ಗ್ರಾ.ಪಂ. ಅಧ್ಯಕ್ಷೆ ಉಷಾ ಮುಳಿಯ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಪ್ರಮುಖರಾದ ಕರುಣಾಕರ, ಜಯಂತ ಪೊರೋಳಿ, ಗೋಪಾಲ ಹೆಗ್ಡೆ, ಬಿಜೆಪಿ ಮುಖಂಡರಾದ ಸುನೀಲ್ ಕುಮಾರ್ ದಡ್ಡು, ಉಮೇಶ್ ಶೆಣೈ, ಸಂತೋಷ್ ಕುಮಾರ್ ಪಂರ್ದಾಜೆ, ಶಯನಾ ಜಯಾನಂದ್, ಮುಕುಂದ ಬಜತ್ತೂರು, ಲಕ್ಷ್ಮಣ ಗೌಡ ಬೆಳ್ಳಿಪ್ಪಾಡಿ, ರಾಮಣ್ಣ ಗುಂಡೋಲೆ, ಪುರುಷೋತ್ತಮ ಮುಂಗ್ಲಿಮನೆ, ಮೋಹನ್ ಪಕಳ, ಸದಾನಂದ ನೆಕ್ಕಿಲಾಡಿ, ಗಣೇಶ್ ನಾಯಕ್ ದರ್ಬೆ, ದಿನಕರ ಆಚಾರ್ಯ, ರತ್ನಾವತಿ, ಮೀನಾಕ್ಷಿ ಹಾಗೂ ೩೪ ನೆಕ್ಕಿಲಾಡಿ ಗ್ರಾ.ಪಂ. ಸದಸ್ಯರಾದ ವಿಜಯಕುಮಾರ್, ಸುಜಾತ ರೈ, ವೇದಾವತಿ, ರಮೇಶ್, ಹರೀಶ್ ಡಿ., ಹರೀಶ್ ಲೋಕೋಪಯೋಗಿ ಇಲಾಖೆಯ ಕಿರಿಯ ಎಂಜಿನಿಯರ್ ಎಲ್.ಸಿ. ಸಿಕ್ವೇರಾ, ಗುತ್ತಿಗೆದಾರ ವಿಜಯಾನಂದ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.


34 ನೆಕ್ಕಿಲಾಡಿ ಗ್ರಾ.ಪಂ. ಉಪಾಧ್ಯಕ್ಷೆ ಸ್ವಪ್ನ ಸ್ವಾಗತಿಸಿದರು. ಅಧ್ಯಕ್ಷ ಪ್ರಶಾಂತ್ ಎನ್. ವಂದಿಸಿದರು. ಉಪ್ಪಿನಂಗಡಿ ಬಿಜೆಪಿ ಮಹಾಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ಸುರೇಶ್ ಅತ್ರೆಮಜಲು ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here