ಸಿಎಲ್‌ಸಿಯಿಂದ ಫಿಲೋಮಿನಾ ಕ್ರೀಡಾಂಗಣದಲ್ಲಿ 30ನೇ ವರ್ಷದ ಮೊ|ಪತ್ರಾವೋ ಅಂತರ್-ವಾಳೆ ಕ್ರಿಕೆಟ್

0


ಕಲ್ಲಾರೆ ವಾಳೆ ಚಾಂಪಿಯನ್, ಸಂಟ್ಯಾರ್ ವಾಳೆ ರನ್ನರ್ಸ್

ಪುತ್ತೂರು: ಮಾಯಿದೆ ದೇವುಸ್ ಚರ್ಚ್ ಆಧೀನದಲ್ಲಿರುವ ಕ್ರಿಶ್ಚಿಯನ್ ಲೈಫ್ ಕಮ್ಯೂನಿಟಿ(ಸಿಎಲ್‌ಸಿ) ವತಿಯಿಂದ ದರ್ಬೆ ಸಂತ ಫಿಲೋಮಿನಾ ಕಾಲೇಜಿನ ಕ್ರೀಡಾಂಗಣದಲ್ಲಿ ಫೆ.5 ರಂದು ಒಗ್ಗಟ್ಟಿಗಾಗಿ ಕ್ರೀಡೆ' ಎಂಬ ಧ್ಯೇಯವಾಕ್ಯದಡಿಯಲ್ಲಿ ಮೊ|ಆಂಟನಿ ಪತ್ರಾವೋ ಸ್ಮರಣಾರ್ಥ ಜರಗಿದ 30 ನೇ ವರ್ಷದ ಅಂತರ್-ವಾಳೆ ಓವರ್ ಆರ್ಮ್ ಕ್ರಿಕೆಟ್‌ನಲ್ಲಿ ಕಲ್ಲಾರೆ ವಾಳೆ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ. ಸಂಟ್ಯಾರ್ ವಾಳೆಯು ರನ್ನರ್ಸ್ ಪ್ರಶಸ್ತಿಗೆ ತೃಪ್ತಿ ಪಟ್ಟುಕೊಂಡಿತು. ಸೆಮಿಯಲ್ಲಿ ವಿಜೇತ ಕಲ್ಲಾರೆ ವಾಳೆಯೊಂದಿಗೆ ಸೋತ ಸಾಮೆತ್ತಡ್ಕ ವಾಳೆಯು ತೃತೀಯ, ರನ್ನರ್ಸ್ ಸಂಟ್ಯಾರ್ ವಾಳೆಯೊಂದಿಗೆ ಸೋತ ತೆಂಕಿಲ ವಾಳೆಯು ಚತುರ್ಥ ಸ್ಥಾನ ಪಡೆಯಿತು. ಕಳೆದ ವರ್ಷ ಸಾಮೆತ್ತಡ್ಕ ವಾಳೆ ವಿಜಯಿಯಾಗಿದ್ದು, ಸಂಟ್ಯಾರ್ ವಾಳೆ ರನ್ನರ್ಸ್ ಪ್ರಶಸ್ತಿಯನ್ನು ಪಡೆದಿತ್ತು

.

ಸಂಜೆ ನಡೆದ ಸಂಟ್ಯಾರ್ ಹಾಗೂ ಕಲ್ಲಾರೆ ನಡುವಣ ಬಿಗ್ ಫೈನಲ್ ಸಮರದಲ್ಲಿ ಟಾಸ್ ಸೋತ ಕಲ್ಲಾರೆ ತಂಡವು ಮೊದಲು ಬ್ಯಾಟಿಂಗ್ ಮಾಡಿ ನಿಗದಿತ ಆರು ಓವರ್‌ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 53 ಮೊತ್ತವನ್ನು ಪೇರಿಸಿತ್ತು. ತಂಡದ ಪರ ರಾಯನ್(16), ವಿಲ್ಸನ್(1), ಐವನ್(0), ರೋಶನ್(5), ರಾಹುಲ್(ಏಕೈಕ ಸಿಕ್ಸರ್), ಶಾನ್(ಅಜೇಯ 11)ರನ್‌ಗಳನ್ನು ಗಳಿಸಿರುತ್ತಾರೆ. ಉತ್ತರವಾಗಿ ಬ್ಯಾಟಿಂಗ್ ಆರಂಭಿಸಿದ ಸಂಟ್ಯಾರ್ ತಂಡವು ಕಲ್ಲಾರೆ ತಂಡದ ಶರೊನ್(5 ರನ್‌ಗಳಿಗೆ 4 ವಿಕೆಟ್), ಐವನ್(11/1)ರವರ ಕರಾರುವಾಕ್ ಬೌಲಿಂಗ್‌ಗೆ ತತ್ತರಿಸಿತ್ತು. ಸಂಟ್ಯಾರ್ ತಂಡದ ಆರಂಭಿಕ ಬ್ಯಾಟರ್ ಹೊಡಿಬಡಿ ದಾಂಡಿಗ ಜೇಮ್ಸ್ ರವರು ಗೋಲ್ಡನ್ ಡಕ್‌ಗೆ ಔಟಾಗುವುದರೊಂದಿಗೆ ಪೆವಿಲಿಯನ್ ಪೆರೇಡ್ ಪ್ರಾರಂಭಗೊಂಡಿತ್ತಾದರೂ ಕೊನೆಗೆ ತಂಡದ ಮೆಲ್ವಿನ್‌ರವರು ಮೂರು ಬೌಂಡರಿಗಳನ್ನು ಬಾರಿಸಿ ಹೋರಾಟವನ್ನು ಜಾರಿಯಲ್ಲಿರಿಸಿದ್ದರು. ಆದರೆ ಕೊನೆಗೆ ಐದು ವಿಕೆಟ್ ನಷ್ಟಕ್ಕೆ 45 ರನ್‌ಗಳನ್ನು ಗಳಿಸಿ 8 ಗಳಿಂದ ಸಂಟ್ಯಾರ್ ತಂಡ ಸೋಲೊಪ್ಪಿಕೊಂಡಿತು. ಎರಡೂ ಸೆಮಿ ಸೋತ ಅಂತರ 22 ರನ್: ಈ ಮೊದಲು ನಡೆದ ಸೆಮಿಫೈನಲಿನಲ್ಲಿಎ’ ಬಣದಲ್ಲಿ ಕಲ್ಲಾರೆ ವಾಳೆ(57/5)ಯು ಎದುರಾಳಿ ಸಾಮೆತ್ತಡ್ಕ ವಾಳೆ(35/6)ಯನ್ನು ಹಾಗೂ ಬಿ' ಬಣದಲ್ಲಿ ಸಂಟ್ಯಾರ್ ವಾಳೆ(62/3)ಯು ತೆಂಕಿಲ ವಾಳೆ(40/5)ಯನ್ನು ಸೋಲಿಸಿ ಅಧಿಕಾರಯುತವಾಗಿ ಫೈನಲ್ ಹಂತಕ್ಕೆ ನೆಗೆದಿತ್ತು. ಕಾಕತಾಳೀಯ ಏನೆಂದರೆ ಸೆಮಿಫೈನಲ್‌ನಲ್ಲಿ ನಡೆದ ಪಂದ್ಯಗಳು 22 ರನ್‌ಗಳಿಂದ ಸೋತಿರುವುದು ವಿಶೇಷವಾಗಿದೆ.

ಮಾಯಿದೆ ದೇವುಸ್ ಚರ್ಚ್ ವ್ಯಾಪ್ತಿಯ 19 ವಾಳೆಗಳ ಪೈಕಿ 16 ವಾಳೆಗಳು ಪಂದ್ಯಾಟದಲ್ಲಿ ಭಾಗವಹಿಸಿದ್ದು ಬಲ್ನಾಡು, ದರ್ಬೆ, ಗುಂಡ್ಯಡ್ಕ, ಮಿತ್ತೂರು, ಪದವು, ಪಾಂಗ್ಲಾಯಿ, ಪರ್ಲಡ್ಕ, ನಿತ್ಯಾಧರ್, ಪುತ್ತೂರು, ರೋಟರಿಪುರ, ಸೈಂಟ್ ತೆರೆಜಾ ಸಾಲ್ಮರ, ಶಿಂಗಾಣಿ ವಾಳೆ ತಂಡಗಳು ನಾಕೌಟ್ ಹಂತದಲ್ಲಿಯೇ ನಿರ್ಗಮಿಸಿದ್ದವು.

ಸಮಾರೋಪ:

ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಬನ್ನೂರು ಸಂತ ಅಂತೋನಿ ಚರ್ಚ್ ಧರ್ಮಗುರು ವಂ|ಪ್ರಶಾಂತ್ ಫೆರ್ನಾಂಡೀಸ್, ಸಂತ ಫಿಲೋಮಿನಾ ಕಾಲೇಜಿನ ಕ್ಯಾಂಪಸ್ ನಿರ್ದೇಶಕ ವಂ|ಸ್ಟ್ಯಾನಿ ಪಿಂಟೋ, ಮಾಯಿದೆ ದೇವುಸ್ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಜೆರಾಲ್ಡ್ ಡಿ'ಕೋಸ್ಟ, ಸಿಎಲ್‌ಸಿ ಎಜ್ಯುಕೇರ್ ಸಮಿತಿಯ ಗೌರವಾಧ್ಯಕ್ಷ ಸಿಎ ಆಲ್ವಿನ್ ರೊಡ್ರಿಗಸ್ ಮಂಗಳೂರು ಹಾಗೂ ಅವರ ಪುತ್ರ ಮಂಗಳೂರು ಆರ್‌ಎಂ ಅಸೆಟ್ ಮ್ಯಾನೇಜ್‌ಮೆಂಟ್‌ನ ಎಲ್ರೋನ್ ರೊಡ್ರಿಗಸ್, ಉದ್ಘಾಟನಾ ಸಮಾರಂಭದ ಅತಿಥಿ, ಸೋಜಾ ಮೆಟಲ್ ಮಾರ್ಟ್ ಮಾಲಕ ದೀಪಕ್ ಮಿನೇಜಸ್‌ರವರು ವಿಜೇತರಿಗೆ ಬಹುಮಾನ ವಿತರಿಸಿ ಶುಭ ಹಾರೈಸಿದರು.

ಸಿಎಲ್‌ಸಿ ಅಧ್ಯಕ್ಷ ಮಾರ್ಟಿನ್ ಡಿ'ಸೋಜ ಸ್ವಾಗತಿಸಿ, ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯದರ್ಶಿ ನವೀನ್ ಡಿ'ಸೋಜ ವಂದಿಸಿದರು. ಪಂದ್ಯಾಟದಲ್ಲಿ ಅಂಪೈರುಗಳಾಗಿ ಪುನೀತ್ ಕುಮಾರ್, ರಕ್ಷಿತ್, ಧನುಷ್, ನಿರ್ಮಲ್ ಸ್ಕೋರರ್ ಆಗಿ ಸೃಜನ್, ಆಕಾಶ್, ವೀಕ್ಷಕ ವಿವರಣೆಗಾರರಾಗಿಎ’ ಬಣದಲ್ಲಿ ಕ್ಲಬ್ ಸದಸ್ಯ ಹಾಗೂ ಫಿಲೋಮಿನಾ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಎಲ್ಯಾಸ್ ಪಿಂಟೋ, ಬಿ' ಬಣದಲ್ಲಿ ಸದಸ್ಯ ಜೇಸನ್ ವರ್ಗೀಸ್‌ರವರು ಸಹಕರಿಸಿದರು. ಹಿರಿಯ ಸದಸ್ಯ ಜೋನ್ ಪಿಂಟೋರವರು ಕಾರ್ಯಕ್ರಮ ನಿರೂಪಿಸಿದರು.

ಸಾಮೆತ್ತಡ್ಕಕ್ಕೆ ಸತತ ೪ನೇ ಕಪ್ ಮಿಸ್...

ಸಾಮೆತ್ತಡ್ಕ ವಾಳೆಯು 2020, 2021 ಹಾಗೂ 2022ರಲ್ಲಿ ಸತತ ಮೂರು ವರ್ಷ ಪಂದ್ಯಾಕೂಟದ ಚಾಂಪಿಯನ್ ಎನಿಸಿಕೊಂಡುಹ್ಯಾಟ್ರಿಕ್’ ಸಾಧನೆಯನ್ನು ಮೆರೆದಿದ್ದು ಈ ಬಾರಿ ನಾಲ್ಕನೇ ಸಲ ಸಾಧನೆ ಮಾಡಲು ಅಸಾಧ್ಯವಾಗಿ ಅದು ಸೆಮಿ ಹಂತದಲ್ಲಿಯೇ ಮುಗ್ಗರಿಸಿತ್ತು. ಆದರೆ ಸಾಮೆತ್ತಡ್ಕ ವಾಳೆಯ ನೆರೆಹೊರೆಯ ವಾಳೆ ಎನಿಸಿದ ಕಲ್ಲಾರೆ ವಾಳೆ ಈ ಬಾರಿ ಚಾಂಪಿಯನ್ ಎನಿಸಿಕೊಂಡಿದೆ. ಗ್ರಾಮೀಣ ವಾಳೆ ಎನಿಸಿದ ರನ್ನರ್ಸ್ ವಿಜೇತ ಸಂಟ್ಯಾರ್ ವಾಳೆಯು ದ್ವಿತೀಯ ಬಾರಿಗೆ ಫೈನಲ್ ಪ್ರವೇಶಿಸಿ ರನ್ನರ್ಸ್ ಪ್ರಶಸ್ತಿಯನ್ನು ಗಳಿಸಿರುತ್ತದೆ.

13-14ರ ಪೋರರ ಸಾಧನೆ..
ಈ ಕ್ರಿಕೆಟ್ ಕೂಟದ ಬೆಸ್ಟ್ ಬೌಲರ್ ಆಗಿ ಕಲ್ಲಾರೆ ವಾಳೆಯ ಶರನ್ ಡಿ’ಸಿಲ್ವ, ಬೆಸ್ಟ್ ಬ್ಯಾಟರ್ ಆಗಿ ಕಲ್ಲಾರೆ ವಾಳೆಯ ಐವನ್ ಡಿ’ಸಿಲ್ವ, ಬೆಸ್ಟ್ ಅಲೌರೌಂಡರ್ ಆಟಗಾರನಾಗಿ ಸಂಟ್ಯಾರ್ ವಾಳೆಯ ಮೆಲ್ವಿನ್‌ರವರು ಆಯ್ಕೆಯಾಗಿರುತ್ತಾರೆ. ಇದರಲ್ಲಿ ಕಲ್ಲಾರೆ ತಂಡದ ಶರನ್ ಹಾಗೂ ಸಂಟ್ಯಾರ್ ತಂಡದ ಮೆಲ್ವಿನ್‌ರವರೀರ್ವರು 13-14ರ ಹರೆಯದ ಪೋರರಾಗಿದ್ದು, ಈ ಸಣ್ಣ ಹರೆಯಲ್ಲಿಯೇ ಉತ್ತಮ ಸಾಧನೆಯನ್ನು ಮಾಡಿರುತ್ತಾರೆ ಮಾತ್ರವಲ್ಲ ಫಿಲೋಮಿನಾ ಕಾಲೇಜು ದೈಹಿಕ ಶಿಕ್ಷಣ ನಿರ್ದೇಶಕರಾದ ಎಲ್ಯಾಸ್ ಪಿಂಟೋರವರಿಂದ ಲೆದರ್‌ಬಾಲ್ ಕ್ರಿಕೆಟ್ ಆನ್ನು ತರಬೇತಿ ಪಡೆದವರಾಗಿದ್ದಾರೆ.

ಕ್ರಿಕೆಟ್ ಕೂಟ ಆರಂಭ ಹಿನ್ನೆಲೆ…


ಚರ್ಚ್ ವ್ಯಾಪ್ತಿಯ ವಾಳೆಗಳಲ್ಲಿನ ಯುವಸಮೂಹದ ಒಗ್ಗಟ್ಟಿಗೋಸ್ಕರ ಮೊ|ಪತ್ರಾವೋರವರ ಹೆಸರಿನಲ್ಲಿ ಕ್ರೀಡೆಯನ್ನು ಹಮ್ಮಿಕೊಳ್ಳುವಂತಾಗಲಿ ಎಂದು ಮಾಯಿದೆ ದೇವುಸ್ ಚರ್ಚ್‌ನ ಅಂದಿನ ಪ್ರಧಾನ ಧರ್ಮಗುರುವಾಗಿದ್ದ ವಂ|ವಿಲಿಯಂ ಗೊನ್ಸಾಲ್ವಿಸ್‌ರವರು ಚರ್ಚ್ ವ್ಯಾಪ್ತಿಯಲ್ಲಿನ ಸಂಘ-ಸಂಸ್ಥೆಗಳಿಗೆ ಕರೆ ನೀಡಿದ್ದರು. ಅವರ ಕರೆಯನ್ನು ಸ್ವೀಕರಿಸಿದ ಸಿಎಲ್‌ಸಿ ಸಂಸ್ಥೆಯು 1992 ರಲ್ಲಿ ಯುವಕರಿಗೆ ಅಂಡರ್ ಆರ್ಮ್ ಕ್ರಿಕೆಟ್ ಅನ್ನು ಫಿಲೋಮಿನಾ ಕ್ರೀಡಾಂಗಣದಲ್ಲಿ ಆರಂಭಿಸಿದರು. 2008ರಿಂದ ಅಂಡರ್ ಆರ್ಮ್ ಕ್ರಿಕೆಟ್‌ಗೆ ಗುಡ್‌ಬೈ ಹೇಳಿ ಓವರ್ ಆರ್ಮ್ ಕ್ರಿಕೆಟ್‌ನ್ನು ಮುನ್ನೆಲೆಗೆ ತರಲಾಯಿತು ಮಾತ್ರವಲ್ಲದೆ ಪ್ರಸ್ತುತ ವರ್ಷ ಸಂಸ್ಥೆಯು 29ನೇ ವರ್ಷವನ್ನು ಆಚರಿಸುತ್ತಿದೆ.

ಹೈಲೈಟ್ಸ್…
-16 ತಂಡಗಳನ್ನು ಎ' ಹಾಗೂಬಿ’ ವಿಭಾಗಗಳನ್ನಾಗಿ ಮಾಡಿ ಕ್ರೀಡಾಂಗಣದಲ್ಲಿನ ಎರಡು ಅಂಕಣಗಳಲ್ಲಿ ಏಕಕಾಲದಲ್ಲಿ ಆಡಿಸಲಾಯಿತು.
-ಆಗಮಿಸಿದ ಆಟಗಾರರಿಗೆ ಹಾಗೂ ಪ್ರೇಕ್ಷಕರಿಗೆ ಬೆಳಗ್ಗಿನ ಉಪಹಾರ ಮತ್ತು ಮಧ್ಯಾಹ್ನ ಭೋಜನದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಲಾಗಿತ್ತು.
-ಪಂದ್ಯಾಟವು ಬೆಳಿಗ್ಗೆ ಸರಿಯಾಗಿ 9.15 ಕ್ಕೆ ಆರಂಭವಾಗಿ ಸಂಜೆ 5.45ಕ್ಕೆ ಪಂದ್ಯಾಟವು ಸಮಾಪ್ತಿಯನ್ನು ಕಂಡಿತ್ತು.
-ಸಿಎಲ್‌ಸಿ ಸಂಸ್ಥೆಯ ಸದಸ್ಯರು ಸಿಎಲ್‌ಸಿ ಲೋಗೊನೊಂದಿಗೆ ನೀಲಿ-ಹಳದಿ ಬಣ್ಣದ ಜೆರ್ಸಿಯನ್ನು ಧರಿಸಿ ಕಂಗೊಳಿಸುತ್ತಿದ್ದರು.
-ಸಂಘಟನೆಯ ಸದಸ್ಯರು ಪಂದ್ಯಾಟದ ಬಳಿಕ ಕ್ರೀಡಾಂಗಣವನ್ನು ಮತ್ತು ಕ್ರೀಡಾಂಗಣದ ಸುತ್ತಲಿನ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಹೆಕ್ಕುವ ಮೂಲಕ ಸ್ವಚ್ಚತೆಗೆ ಆದ್ಯತೆಯನ್ನು ನೀಡಿದ್ದರು.

LEAVE A REPLY

Please enter your comment!
Please enter your name here