ಕಡಬ: ಕೆಎಸ್‌ಆರ್‌ಟಿಸಿ ಬಸ್ ಹಾಗೂ ಕಾರು ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಬಾಲಕನೋರ್ವ ಮೃತಪಟ್ಟು, ಆರು ಮಂದಿ ಗಾಯಗೊಂಡ ಘಟನೆ ಧರ್ಮಸ್ಥಳ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಮರ್ದಾಳ ಎಂಬಲ್ಲಿ ಫೆ.13ರಂದು ನಡೆದಿದೆ.
ಮಂಡ್ಯದ ಕೆ.ಆರ್.ಪೇಟೆ ಮೂಲದ ಕುಟುಂಬವೊಂದು ಶ್ರೀ ಕ್ಷೇತ್ರ ಧರ್ಮಸ್ಥಳ ದೇವಸ್ಥಾನ ಸಂದರ್ಶಿಸಿ ಕುಕ್ಕೆ ಸುಬ್ರಹ್ಮಣ್ಯ ದೇವರ ದರ್ಶನಕ್ಕೆಂದು ತೆರಳುತ್ತಿದ್ದ ವೇಳೆ ಮರ್ದಾಳ ಸಮೀಪದ ಭ್ರಾಂತಿಕಟ್ಟೆ ಎಂಬಲ್ಲಿ ಐತ್ತೂರು ಗ್ರಾಮ ಪಂಚಾಯತಿ ಕಛೇರಿಯ ಮುಂಭಾಗದಲ್ಲಿ ಓವರ್ ಟೇಕ್ ಮಾಡುವ ಭರದಲ್ಲಿ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಗೆ ಢಿಕ್ಕಿ ಹೊಡೆದಿದೆ. ಘಟನೆಯಲ್ಲಿ ಕಾರಿನಲ್ಲಿದ್ದ 12 ವರ್ಷದ ಬಾಲಕ ಪೃಥ್ವಿ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟಿದ್ದಾರೆ. ಕಾರಿನಲ್ಲಿದ್ದ ಕೃಷ್ಣೇಗೌಡ, ನಟೇಶ್, ರೋಹಿಣಿ, ರೂಪಾ, ಪಾರ್ವತಿ ಹಾಗೂ ಕಾರು ಚಾಲಕ ರವಿ ಗಂಭೀರವಾಗಿ ಗಾಯಗೊಂಡಿದ್ದು, ಕಡಬ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಸ್ಸಿನಲ್ಲಿದ್ದ ಮೂವರಿಗೆ ಹಾಗೂ ಚಾಲಕನಿಗೆ ಸಣ್ಣಪುಟ್ಟ ಗಾಯವಾಗಿದೆ. ಘಟನೆಯಲ್ಲಿ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಸ್ಥಳೀಯರು ಗಾಯಳುಗಳನ್ನು ಕಾರಿನಿಂದ ಹೊರತೆಗೆಯಲು ಹರಸಾಹಸಪಟ್ಟರು. ಬಸ್ ಚಾಲಕ ವಿಜಯಪುರ ನಿವಾಸಿ ಜಗಪ್ಪ ಮಾದರಿ ನೀಡಿದ ದೂರಿನಂತೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.