ಸಿರಿತನ ಮತ್ತು ಬಡತನ ಎರಡೂ ಅಲ್ಲಾಹನ ಪರೀಕ್ಷೆಯಾಗಿದೆ: ಇ ಪಿ ಅಬೂಬಕ್ಕರ್ ಖಾಸಿಮಿ
ಪುತ್ತೂರು: ಸಂಪತ್ತನ್ನು ಅಲ್ಲಾಹನು ಎಲ್ಲರಿಗೂ ನೀಡದೆ ಕೆಲವರಿಗೆ ಮಾತ್ರ ಕರುಣಿಸಿದ್ದಾನೆ, ಸಂಪತ್ತು ಕೊಡುವುದು, ಬಡತನವನ್ನು ನೀಡುವುದು ಇವೆರಡೂ ಅಲ್ಲಾಹನ ಇಚ್ಚೆಯಾಗಿದೆ. ಸಂಪತ್ತು ಕೂಡಿಡುವ ಬದಲು ಅದನ್ನು ದಾನ ಮಾಡಬೇಕೆಂಬುದು ಇಸ್ಲಾಂನ ಆದೇಶವಾಗಿದೆ. ಭಕ್ತಿಯಿಂದ ನೀಡಿದ ದಾನವು ನಮ್ಮನ್ನು ವಿಪತ್ತುಗಳಿಂದ ಸಂರಕ್ಷಿಸುತ್ತದೆ ಎಂದು ಹಾಫಿಳ್ ಇ ಪಿ ಅಬೂಬಕ್ಕರ್ ಖಾಸಿಮಿ ಪತ್ತನಾಪುರಂ ಹೇಳಿದರು.
ಅವರು ಇರ್ದೆ-ಪಳ್ಳಿತ್ತಡ್ಕ ದರ್ಗಾ ಶರೀಫ್ ಇದರ 47 ನೇ ಉರೂಸ್ ಮುಬಾರಕ್ ಇದರ ಎರಡನೇ ದಿನದ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣ ಮಾಡಿದರು.
ಅಲ್ಲಾಹನ ಭವನ ಮತ್ತು ಮದ್ರಸ ನಿರ್ಮಾಣದ ಕಾರ್ಯದಲ್ಲಿ ಎಲ್ಲರೂ ಸಹಾಯ ಮಾಡುವರಾಗಬೇಕು. ಮರಣಾನಂತರ ನಮಗೆ ಬಾಕಿಯಾಗುವ ಏಕೈಕ ಸೊತ್ತು ದಾನವಾಗಿದೆ. ಆಧುನಿಕ ಕಾಲಘಟ್ಟದಲ್ಲಿ ನಾವು ಏನನ್ನೂ ನಿರೀಕ್ಷೆ ಮಾಡದ ಕಾಲವಾಗಿದೆ. ದಾನಿಗಳನ್ನು ಅಲ್ಲಾಹನು ಎಂದಿಗೂ ಕೈ ಬಿಡುವುದಿಲ್ಲ ಎಂಬುದಕ್ಕೆ ಅನೇಕ ದೃಷ್ಟಾಂತಗಳು ಇದ್ದು ಹಠಾತ್ತನೆ ಸಂಭವಿಸುವ ಮರಣಗಳಿಂದ ನಮ್ಮನ್ನು ಕಾಪಾಡುತ್ತದೆ ಎಂದು ಹೇಳಿದರು. ಮರಣದ ಬಳಿಕ ನಾವು ಸಂತೋಷದಿಂದ ಇರಬೇಕಾದಲ್ಲಿ ಜೀವಿತದ ಅವಧಿಯಲ್ಲಿ ನಾವು ಸಜ್ಜನರಾಗಿರಬೇಕು ಎಂದು ಹೇಳಿದ ಅವರು ಸಜ್ಜನರ ಸಾವಿಗೆ ಆಕಾಶ, ಭೂಮಿ, ಸೇರಿದಂತೆ ಅಲ್ಲಾಹನ ಭವನಗಳು ಕಣ್ಣೀರು ಹಾಕುತ್ತದೆ ಎಂದು ಹೇಳಿದರು.
ಪಳ್ಳಿತ್ತಡ್ಕ ದರ್ಗಾ ಬಳಿ ನೂತನವಾಗಿ ನಿರ್ಮಾಣವಾಗಲಿರುವ ನಮಾಝ್ ಹಾಲ್ ಮತ್ತು ವಿಶ್ರಾಂತ ಕೊಠಡಿಗೆ ಸಭೆಯಲ್ಲಿ ದೇಣಿಗೆಯನ್ನು ಸಂಗ್ರಹಿಸಲಾಯಿತು. ನಮಾಜ್ ಮಾಡಲು ಸ್ಥಳವಕಾಶ ಒದಗಿಸುವುದು ಅಲ್ಲಾಹನ ಬಳಿ ಅತ್ಯಂತ ಪುಣ್ಯದ ಕಾರ್ಯವಾಗಿದ್ದು , ಪುಣ್ಯ ಕಾರ್ಯದಲ್ಲಿ ಎಲ್ಲರೂ ಕೈ ಜೋಡಿಸುವಂತೆ ಅವರು ಕರೆ ನೀಡಿದರು.
ತಂಬುತ್ತಡ್ಕ ಬದ್ರಿಯಾ ಜುಮಾ ಮಸೀದಿ ಖತೀಬರಾದ ಜಲೀಲ್ ದಾರಿಮಿ ಮಾತನಾಡಿ ಪಳ್ಳಿತ್ತಡ್ಕ ದರ್ಗಾ ಶರೀಫ್ ನಮ್ಮೂರಿನ ಭಾಗ್ಯವಾಗಿದೆ. ಅಲ್ಲಾಹನ ಇಷ್ಟದಾಸರು ನಮ್ಮೂರಲ್ಲಿ ಅಂತ್ಯ ವಿಶ್ರಾಂತಿ ಪಡೆಯುತ್ತಿರುವುದು ನಮ್ಮೆಲ್ಲರ ಪುಣ್ಯವಾಗಿದೆ.
ಕೊರಿಂಗಿಲ ಜುಮಾ ಮಸೀದಿ ಅಧ್ಯಕ್ಷರಾದ ಮಹಮ್ಮದ್ ಕುಂಞಿ ಹಾಜಿ ಕೊರಿಂಗಿಲ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಅಜ್ಜಿಕಟ್ಟೆ ಜುಮಾ ಮಸೀದಿ ಅಧ್ಯಕ್ಷರಾದ ಪಿ ಉಮ್ಮರ್ ಪಟ್ಟೆ, ಕೂರ್ನಡ್ಕ ರೇಂಜ್ ಮದ್ರಸ ಮೆನೆಜ್‌ಮೆಂಟ್ ಅಧ್ಯಕ್ಷರಾದ ಅಬೂಬಕ್ಕರ್ ಮುಲಾರ್,ಕೆಯ್ಯೂರು ಗ್ರಾಪಂ ಮಾಜಿ ಸದಸ್ಯ ಹನೀಫ್ ಕೆ ಎಂ ಮಾಡವು, ಉದ್ಯಮಿ ಅಬ್ದುಲ್ ಹಮೀದ್ ಹಾಜಿ ಕೈಕಂಬ, ಸಲಾಂ ಪದಡ್ಕ, ಬೆಳ್ಳಾರೆ ಗ್ರಾಪಂ ಮಾಜಿ ಉಪಾಧ್ಯಕ್ಷರಾದ ಪಿ ಅಬ್ಬಾಸ್ , ಕೊರಿಂಗಿಲ ಜಮಾತ್ ಕಾರ್ಯದರ್ಶಿ ಖಾಸಿಂ ಕೇಕನಾಜೆ, ಮಾಜಿ ಕಾರ್ಯದರ್ಶಿ ಶಾಹುಲ್ ಹಮೀದ್ ಕೊರಿಂಗಿಲ, ಉರೂಸ್ ಕಮಿಟಿ ಅಧ್ಯಕ್ಷರಾದ ಅಲಿ ಶಾಲಾ ಬಳಿ, ಕಾರ್ಯದರ್ಶಿ ಅಶ್ರಫ್ ಕುಕ್ಕುಪುಣಿ , ಇಂಜನಿಯರ್ ಆಲಿಕುಂಞಿ ಕೊರಿಂಗಿಲ ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು.
ಅನ್ವರ್ ಮುಸ್ಲಿಯಾರ್ ಸ್ವಾಗತಿಸಿ, ಅಬ್ದುಲ್ಲ ಮೌಲವಿ ಬೇಂಗತ್ತಡ್ಕ ವಂದಿಸಿದರು.