ಪೆರ್ನೆ ಕೊರತಿಕಟ್ಟೆ ಮಾಡತ್ತಾರು ಸಪರಿವಾರ ಶ್ರೀ ವ್ಯಾಘ್ರಚಾಮುಂಡಿ ಬ್ರಹ್ಮಕಲಶೋತ್ಸವ

0

ಧರ್ಮದ ಬಗ್ಗೆ ಅರಿವು ಮೂಡಿಸುವ ಅಗತ್ಯವಿದೆ- ಮಾಣಿಲಶ್ರೀ

ಪುತ್ತೂರು: ಮಕ್ಕಳಿಗೆ ಸಂಪತ್ತು ಮಾಡಿಡಬಾರದು. ಮಕ್ಕಳನ್ನೇ ಸಂಪತ್ತುಗಳನ್ನಾಗಿ ಪರಿವರ್ತಿಸಬೇಕು. ಮಕ್ಕಳಿಗೆ ಜೀವನದ ನೈತಿಕ ಶಿಕ್ಷಣ ನೀಡಿದಾಗ ಎಲ್ಲಾ ಶಿಕ್ಷಣ ದೊರೆತು ಅವರ ಬದುಕು ಉಜ್ವಲವಾಗಲಿದೆ. ಜಾತಿ,ಸಂಘಟನೆಗಳು ಪರಸ್ಪರ ಪ್ರೀತಿಯಿಂದ ಸಮಾಜ,ದೇಶವನ್ನು ಉಳಿಸುವ ಕಾರ್ಯವಾಗಬೇಕು. ಸಂಸ್ಕೃತಿ, ಆಚರಣೆಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಶ್ರೀಧಾಮ ಮಾಣಿಲ ಶ್ರೀಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮಿಜಿಯವರು ಹೇಳಿದರು.


ಬಂಟ್ವಾಳದ ಪೆರ್ನೆ ಕೊರತಿಕಟ್ಟೆ ಮಾಡತ್ತಾರು ಸಪರಿವಾರ ಶ್ರೀ ವ್ಯಾಘ್ರಚಾಮುಂಡಿ ದೈವಸ್ಥಾನದಲ್ಲಿ ಫೆ.21ರಂದು ಸಂಜೆ ನಡೆದ ಬ್ರಹ್ಮಕಲಶೋತ್ಸವದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು. ಋಷಿ ಮುನಿಗಳು ಸಮಾಜದ ಕಣ್ಣು. ಅವರು ನಮ್ಮ ಆಂತರ್ ಜ್ಞಾನವನ್ನು ಬಿಡಿಸುವ ಕೆಲಸ ಮಾಡಿದ್ದಾರೆ. ಧರ್ಮದ ಬಗ್ಗೆ ಅರಿವು ಮೂಡಿಸುವ ಅಗತ್ಯತೆಯಿದೆ. ದೈವಗಳ ಶಕ್ತಿ,ಕಾರಣಿಕ,ಲೀಲೆ, ಕಟ್ಟುಪಾಡುಗಳನ್ನು ತಿಳಿಸುವ ಆವಶ್ಯಕತೆಯಿದೆ. ಆಪತ್ಕಾಲದಲ್ಲಿ ನೆರವಾಗುವವರೇ ನಿಜವಾದ ದೇವರು. ಅವರನ್ನು ಮರೆಯಬಾರದು. ಕೃತಜ್ಞತಾ ಭಾವನೆ ನಮ್ಮಲ್ಲಿರಬೇಕು ಎಂದು ಶ್ರೀಗಳು ಹೇಳಿದರು.


ಅಧ್ಯಕ್ಷತೆ ವಹಿಸಿದ್ದ ಮಾಜಿ ಸಚಿವ ರಮಾನಾಥ ರೈ ಮಾತನಾಡಿ,ನಾವು ಹುಟ್ಟುವಾಗ ನಿರ್ದಿಷ್ಟ ಜಾತಿ, ಅಂತಸ್ಥಿನಲ್ಲಿ ಹುಟ್ಟಬೇಕು ಎಂದು ಯಾರೂ ಅರ್ಜಿ ಹಾಕಿ ಹುಟ್ಟುವುದಲ್ಲ. ದೈವದತ್ತವಾದ ಜನ್ಮ. ಅದನ್ನು ಸಾರ್ಥಕಗೊಳಿಸುವುದೆ ಧರ್ಮ. ನಾವು ಪರಸ್ಪರ ಪ್ರೀತಿಯಿಂದ ಬದುಕುವುದೇ ಜೀವನ. ಭೂ ಸುಧಾರಣೆ ಕಾಯಿದೆಯಿಂದಾಗಿ ಇಂದು ಎಲ್ಲಾ ಕಡೆ ಜೀರ್ಣೋದ್ಧಾರ, ಬ್ರಹ್ಮಕಲಶೋತ್ಸವ ನಡೆಯುವಂತಾಗಿದೆ. ಕಾಯಿದೆಯಿಂದ ಎಲ್ಲರೂ ಆರ್ಥಿಕವಾಗಿ ಸ್ಥಿತಿವಂತರಾಗಿದ್ದಾರೆ. ಸುಂದರ ಜೀವನ ನಡೆಸುವಂತಾಗಿದೆ ಎಂದರು.


ಧಾರ್ಮಿಕ ಉಪನ್ಯಾಸ ನೀಡಿದ ಶ್ರೀಕಾಂತ್ ಶೆಟ್ಟಿ ಕಾರ್ಕಳ ಮಾತನಾಡಿ, ಸ್ಟೇಟಸ್ ಹಾಕುವುದೇ ಭಕ್ತಿಯಲ್ಲ. ಕುಟುಂಬದ ತರವಾಡು, ಗ್ರಾಮದ ದೈವ, ದೇವರುಗಳ ಕಾರ್ಯಕ್ರಮದಲ್ಲಿ ಸಂಪೂರ್ಣ ಪಾಲು ಪಡೆಯುವುದೇ ನಿಜವಾದ ಭಕ್ತಿ. ಧರ್ಮದ ಕಾರ್ಯದಲ್ಲಿ ತೊಡಗಿಸಿಕೊಂಡು ನಮ್ಮ ಸಂಸ್ಕೃತಿಯ ಉಳಿಸುವ ಕಾರ್ಯವಾಗಬೇಕು ಎಂದು ಹೇಳಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಂಟ್ವಾಳ ತಾಲೂಕು ಯೋಜನಾಧಿಕಾರಿ ಚೆನ್ನಪ್ಪ ಗೌಡ ಮಾತನಾಡಿ, ಮಾಡತ್ತಾರು ದೈವೀ ಸಾನಿಧ್ಯವು ಆಶ್ಚರ್ಯ ಎಂಬಂತೆ ಜೀರ್ಣೋದ್ಧಾರಗೊಂಡಿದೆ. ಈ ಕ್ಷೇತ್ರವನ್ನು ಮುನ್ನಡೆಸುವ ಹೊಣೆ ನಮ್ಮಮೇಲಿದೆ ಎಂದರು.


ಉಪ್ಪಿನಂಗಡಿ ಅಮೂಲ್ಯ ಗ್ಯಾಸ್‌ನ ಡಿ. ಚಂದಪ್ಪ ಮೂಲ್ಯ, ನಿರ್ಣಾಮವಾಗಿದ್ದ ದೈವ ಸಾನಿಧ್ಯಗಳನ್ನು ಮತ್ತೆ ನಿರ್ಮಾಣ ಮಾಡಿ ಶ್ರದ್ಧಾ ಕೇಂದ್ರವಾಗಿ ನಿರ್ಮಿಸಿರುವುದಕ್ಕೆ ಅಭಿನಂದನೆ ಸಲ್ಲಿಸಿದರು.


ಪಡ್ನೂರು ಕುಂಜಾರು ಮದಗ ಶ್ರೀ ಜನಾರ್ದನ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹಾರಕರೆ ವೆಂಕಟ್ರಮಣ ಭಟ್ ಮಾತನಾಡಿ, ಕೇವಲ ಮೂರು ವರ್ಷದಲ್ಲಿ ಭಕ್ತರ ಶ್ರದ್ಧಾ ಕೇಂದ್ರ ನಿರ್ಮಾಣಗೊಂಡಿರುವುದು ಶ್ಲಾಘನೀಯ. ಅತೀ ಕಡಿಮೆ ಅವಧಿಯಲ್ಲಿ ನಿರ್ಮಾಣ ಗೊಂಡ ದೈವ ಸಾನಿಧ್ಯವು ಕಾರಣಿಕ ಕ್ಷೇತ್ರವಾಗಿ ಬೆಳೆಯಲಿದೆ. ಕ್ಷೇತ್ರವು ಗ್ರಾಮಕ್ಕೆ ದೊಡ್ಡ ಕೊಡುಗೆಯಾಗಿ ಬೆಳೆಯಲಿ ಎಂದರು.


ಮೈಸೂರು ಲ್ಯಾಂಪ್ಸ್ ಮಹಾಮಂಡಲದ ಉಪಾಧ್ಯಕ್ಷ, ನ್ಯಾಯವಾದಿ ಮಂಜುನಾಥ ಎನ್.ಎಸ್. ಮಾತನಾಡಿ, ಧರ್ಮ ಜಾಗೃತಿ ಪ್ರತಿಯೊಬ್ಬರ ಹೃದಯದಲ್ಲಿ ಬರಬೇಕು. ನಾವು ಬದಲಾಗುವ ಮೂಲಕ ಸಮಾಜದ ಬದಲಾವಣೆಯಾಗಬೇಕು. ನಮ್ಮಲ್ಲಿರುವ ಕೆಟ್ಟ ಹವ್ಯಾಸಗಳನ್ನು ಬಿಟ್ಟು ಉತ್ತಮ ಹವ್ಯಾಸದೆಡೆಗೆ ಹೋಗುವ ಮೂಲಕ ಸಮಾಜದ ಬದಲಾವಣೆಗೆ ನಾವು ಪ್ರೇರಣೆಯಾಗಬೇಕು ಎಂದರು.


ಉದ್ಯಮಿ ಸಹಜ್ ರೈ ಬಳಜ್ಜ ಮಾತನಾಡಿ, ಬ್ರಹ್ಮಕಲಶೋತ್ಸವ ಜೊತೆ ಧರ್ಮ ರಕ್ಷಣೆಯ ಕಾರ್ಯವಾಗಬೇಕು. ಊರಿನ ಯುವ ಜನತೆ ಒಂದಾಗಿ ಗ್ರಾಮದಲ್ಲಿರುವ ಬಡವರನ್ನು ಗುರುತಿಸಿ ದಾನಿಗಳ ಮೂಲಕ ನೆರವಾಗಬೇಕು. ಕಾಲೆಳೆಯುವ ಆಟ ಕಬಡ್ಡಿಗೆ ಮಾತ್ರ ಸೀಮಿತವಾಗಿರಲಿ ಎಂದರು.


ದೈವಸ್ಥಾನದ ಕಾರ್ಯದರ್ಶಿ ಶಿವಪ್ಪ ನಾಯ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಧನ್ಯ ಪ್ರಾರ್ಥಿಸಿದರು. ದೈವಸ್ಥಾನದ ಅಧ್ಯಕ್ಷ ಕಿರಣ್ ಶೆಟ್ಟಿ ಮುಂಡೋವಿನಕೋಡಿ ಸ್ವಾಗತಿಸಿದರು. ರೇಣುಕಾ ಕಣಿಯೂರು ಕಾರ್ಯಕ್ರಮ ನಿರೂಪಿಸಿದರು. ಸತೀಶ್ ಶೆಟ್ಟಿ ಮುಂಡೋವಿನಕೋಡಿ ವಂದಿಸಿದರು.


ಕಾರ್ಯಕ್ರಮದ ಅಂಗವಾಗಿ ಸಂಜೆ ಸ್ಥಳೀಯ ಮಕ್ಕಳಿಂದ ಮನೋರಂಜನಾ ಕಾರ್ಯಕ್ರಮಗಳು, ರಾತ್ರಿ ಸಭಾ ಕಾರ್ಯಕ್ರಮದ ಬಳಿಕ ಶ್ರೀರಾಗ್ ಮ್ಯೂಸಿಕ್ಸ್‌ರವರ ಶ್ರೀವಿ ಕ್ರಿಯೇಷನ್ ಇವರ ಸಂಯೋಜಕತ್ವದಲ್ಲಿ ನೃತ್ಯ ಗಾನ ವೈಭವ ನಡೆಯಿತು.

LEAVE A REPLY

Please enter your comment!
Please enter your name here