ಗಾಂಧಿ ವಿಚಾರ ವೇದಿಕೆ ಪುತ್ತೂರು ಘಟಕ, ಮಂಗಳೂರು ಮಹಾತ್ಮ ಗಾಂಧಿ ಶಾಂತಿ ಪ್ರತಿಷ್ಠಾನದಿಂದ ಕರ್ನಾಟಕದ ಇಂದಿನ ಅಗತ್ಯಗಳು-ಜನ ಸಂವಾದ

0


ಹಿಂದಿನ ಜನತಾ ಸೇವೆ, ಮಾನವೀಯತೆ ಮೌಲ್ಯ ಇಂದು ಇದೆಯೇ?.-ನಿವೃತ್ತ ಲೋಕಾಯುಕ್ತ ಜ|ಸಂತೋಷ್ ಹೆಗ್ಡೆ

ಪುತ್ತೂರು: ಇಂದು ರಾಜಕೀಯವೇ ಮೇಲುಗೈ ಆಗಿದೆ. ದೇಶ ಉತ್ತಮದೆಡೆಗೆ ಸಾಗಲಿ ಎಂದು ಸಂವಿಧಾನ ರಚನೆಯಾಗಿತ್ತು. ಆದರೆ ಇಂದು ಹಿಂದಿನ ನಿಜವಾದ ಜನತಾ ಸೇವೆ ಇದೆಯೇ?. ಜನರಿಂದ ಜನರಿಗಾಗಿ ಜನರ ಸಹಕಾರ ಎಂಬ ಪ್ರಜಾಪ್ರಭುತ್ವದ ಆಶಯ ಎಲ್ಲಿ ಹೋಗಿ ನಿಂತಿದೆ?. ಮಾನವೀಯ ಮೌಲ್ಯಗಳು ನಶಿಸುತ್ತಿದೆಯಲ್ಲ. ವಿದ್ಯಾರ್ಥಿಗಳೇ ನಿಮ್ಮ ಭವಿಷ್ಯ ಏನಾಗಬಹುದು ಒಮ್ಮೆ ಯೋಚನೆ ಮಾಡಬೇಕಾದ ಚಿಂತನೆ ಕಾಡುತ್ತಿದೆ ಎಂದು ನಿವೃತ್ತ ಲೋಕಾಯುಕ್ತ ಜಸ್ಟೀಸ್ ಸಂತೋಷ್ ಹೆಗ್ಡೆರವರು ಹೇಳಿದರು.


ಫೆ.26 ರಂದು ಜೈನ ಭವನದಲ್ಲಿ ನಡೆದ ಗಾಂಧಿ ವಿಚಾರ ವೇದಿಕೆ ಪುತ್ತೂರು ಘಟಕ ಮತ್ತು ಮಹಾತ್ಮ ಗಾಂಧಿ ಶಾಂತಿ ಪ್ರತಿಷ್ಠಾನ ಮಂಗಳೂರು ಜಂಟಿಯಾಗಿ ಆಯೋಜಿಸಿರುವ ಜನ ಸಂವಾದ-ಕರ್ನಾಟಕದ ಇಂದಿನ ಅಗತ್ಯಗಳು ಕಾರ್ಯಕ್ರಮದಲ್ಲಿ ಅವರು ಭ್ರಷ್ಟಾಚಾರ ನಿಯಂತ್ರಣ ಮತ್ತು ದಕ್ಷ ಆಡಳಿತದ ಬಗ್ಗೆ ವಿಷಯ ಮಂಡನೆ ಮತ್ತು ಸಂವಾದ'ದ ಕುರಿತು ಮಾತನಾಡಿದರು. ಪ್ರಜಾಪ್ರಭುತ್ವದ ಪ್ರಮುಖ ಅಂಗಗಳಾದ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗದ ಇಂದಿನ ಕಾರ್ಯವೈಖರಿ ನೋಡಿದಾಗ ತಿಳಿಯುತ್ತದೆ ಭ್ರಷ್ಟಾಚಾರ ನಿಯಂತ್ರಣದಲ್ಲಿದೆಯೇ ಎಂದು. ಯಾಕೆಂದರೆ ಇಂತಹ ಉನ್ನತ ಹುದ್ದೆಗೆ ಬರುವವರು ಕೋಟಿಗಟ್ಟಲೇ ಹಣ ತೆತ್ತು ಬರುವಾಗ ಅವರಿಗೆ ಜನಸೇವೆ ಮಾಡಲು ಸಾಧ್ಯವೇ?. ಇಂದು ಸಮಾಜದಲ್ಲಿ ಏನಾಗುತ್ತಿದೆ. ಧರ್ಮ ಹಾಗೂ ಭಾಷೆಯ ದುರ್ಬಳಕೆಯಾಗುತ್ತಿದೆ. ಹಿರಿಯರು ಹಾಗೂ ಕವಿಗಳು ಹೇಳಿದಂತೆಮೊದಲು ನೀ ಮಾನವನಾಗು’, ಹುಟ್ಟಿದಾಗ ಮಾನವನಾಗಿ ಹುಟ್ಟದೆ ಇದ್ರು, ಸಾಯುವಾಗ ಮಾನವನಾಗಿ ಸಾಯುವಂತಾಗಬೇಕು. ನಮಗೆ ಪದವಿ, ಹುದ್ದೆಗಳು ಬೇಕಾಗಿಲ್ಲ ಬದಲಾಗಿ ಮಾನವೀಯತೆ ಹಾಗೂ ತೃಪ್ತಿ ಇವಿಷ್ಟು ಸಾಕು ಮನುಷ್ಯನಿಗೆ ಬದುಕು ಕಾಣಲು ಎಂದರು.


ಅಕ್ರಮ ಗಣಿ ವರದಿಯಲ್ಲಿ ಮೂವರು ಸಿಎಂಗಳ ಹೆಸರನ್ನು ಪ್ರಸ್ತಾಪಿಸಿದ್ದೆ:


ನನಗೆ ಯಾವುದೇ ಪಿತ್ರಾರ್ಜಿತ ಆಸ್ತಿಯಾಗಲಿ, ತಾಯಿಯ ಆಸ್ತಿಯಾಗಲಿ, ಹೆಂಡತಿ ಕಡೆಯ ಆಸ್ತಿಯಾಗಲಿ ಇಲ್ಲ. ನನಗಿರುವುದು ಒಂದೇ ಫ್ಲ್ಯಾಟ್. ನಾನು ನನ್ನ ವೈಯಕ್ತಿಕ ಲಾಭಕ್ಕಾಗಿ ಏನೂ ಮಾಡಿಲ್ಲ ಮತ್ತು ಅದು ನನಗೆ ಬೇಡವೂ ಕೂಡ. ನಾನು ಲೋಕಾಯುಕ್ತ ಪದವಿಗೆ ಏರಿದಾಗ ನನ್ನ ಆಸ್ತಿಯನ್ನು ಘೋಷಿಸಿಕೊಂಡಿದ್ದೇ. ಇಂದು ಈ ಸಭೆಗೆ ನಾನು ವೈಯಕ್ತಿಕ ಖರ್ಚಿನಿಂದ ಬಂದಿದ್ದೇನೆ ಹೊರತು ಬೇರೇನೂ ಅಲ್ಲ. ನಾನು ಭ್ರಷ್ಟಾಚಾರದ ವಿರುದ್ಧ ಯಾಕೆ ಮಾತನಾಡುತ್ತೇನೆಂದರೆ ಇದಕ್ಕೆ. ಅಕ್ರಮ ಗಣಿ ವರದಿಯಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್‌ನ ಮೂವರು ಮುಖ್ಯಮಂತ್ರಿಗಳ ಹೆಸರನ್ನು ಧೈರ್ಯದಿಂದ ಉಲ್ಲೇಖ ಮಾಡಿರುತ್ತೇನೆ. ಆದರೆ ಗಾಂಧಿ ಹುಟ್ಟು ಹಾಕಿದ ಈ ದೇಶ, ಈ ಪ್ರಜಾಪ್ರಭುತ್ವ ಮುಂದೆ ೨೫ ಭಾಗ ಆಗಬಹುದು. ಆಗ ನಿಜವಾದ ಪ್ರಜಾಪ್ರಭುತ್ವದ ಅರ್ಥ, ಸ್ವಾತಂತ್ರ್ಯದ ಬೆಲೆ ಗೊತ್ತಾಗುವುದು. ಸರಕಾರ ತಪ್ಪು ಮಾಡಿದರೆ ಕೇಳುವ ಹಕ್ಕು ನಮ್ಮಲ್ಲಿರಬೇಕು. ಎಂದು ನಿವೃತ್ತ ಲೋಕಾಯುಕ್ತ ಜಸ್ಟೀಸ್ ಸಂತೋಷ್ ಹೆಗ್ಡೆರವರು ಹೇಳಿದರು.


ಕೋವಿಡ್‌ಗೆ, ಕ್ಯಾನ್ಸರ್‌ಗೆ ಮದ್ದಿದೆ, ದುರಾಸೆಗೆ ಮದ್ದಿಲ್ಲ:


ಮುಂದುವರೆದು ಮಾತನಾಡಿದ ಜಸ್ಟೀಸ್ ಸಂತೋಷ್ ಹೆಗ್ಡೆರವರು, ಭಾರತ ದೇಶದಲ್ಲಿ ಕಲ್ಲಿದ್ದಲು, ೨ಜಿ, ಕಾಮನ್‌ವೆಲ್ತ್ ಹೀಗೆ ಹಲವಾರು ಹಗರಣಗಳು ಬೆಳಕಿಗೆ ಬಂದಿದ್ದು ಮುಂದೆ ಇದು ಮತ್ತಷ್ಟು ಮುಂದುವರೆದಿವೆ. ಅಧಿಕಾರದಲ್ಲಿದ್ದವರು ಕೋಟಿ, ಕೋಟಿ ಹಣ ಕೊಳ್ಳೆ ಹೊಡೆದರೆ ದೇಶ ಅಭಿವೃದ್ಧಿ ಹೇಗೆ ಆಗಲು ಸಾಧ್ಯ. ಹಿಂದೆ ಸಣ್ಣ ಮಟ್ಟದಲ್ಲಿ ಆಗುತ್ತಿದ್ದ ಹಗರಣಗಳು ಇಂದು ದೊಡ್ಡ ಮಟ್ಟದಲ್ಲಿ ಆಗುತ್ತಿವೆ. ನಮ್ಮಲ್ಲಿ ದುರಾಸೆ ಎಂಬುದು ನಮ್ಮನ್ನು ಹಾಳು ಸ್ಥಿತಿಗೆ ಕೊಂಡೊಯ್ಯುತ್ತದೆ. ಕೋವಿಡ್, ಕ್ಯಾನ್ಸರ್‌ಗೆ ಮದ್ದಿದೆ ಆದರೆ ಈ ದುರಾಸೆಗೆ ಮದ್ದಿಲ್ಲ. ಗಾಂಧಿ ದಾರಿಯಂತೆ ನಾವು ನಮ್ಮಲ್ಲಿ ತೃಪ್ತಿ ಪಡುವ ಗುಣವನ್ನು ಅಳವಡಿಸಿಕೊಂಡಾಗ ಮಾತ್ರ ದುರಾಸೆಯನ್ನು ಮಟ್ಟ ಹಾಕಲು ಸಾಧ್ಯ ಎಂದರು.


ತಪ್ಪು ಮಾಡಿ ಜೈಲಿಗೆ ಹೋಗಿ ಬಂದವರಿಗೆ ಹಾರ ಹಾಕಿ ಸ್ವಾಗತಿಸುತ್ತಾರೆ:


ಹಿಂದಿನ ಕಾಲದಲ್ಲಿ ತಪ್ಪು ಮಾಡಿದವರು ಜೈಲಿಗೆ ಹೋದರೆ ಆ ಮನೆ ಕಡೆಗೆ ಹೋಗಬೇಡ ಎಂದು ಹೇಳಿ ಇಡೀ ಆ ವ್ಯಕ್ತಿಯ ಕುಟುಂಬವನ್ನೇ ಶಿಕ್ಷೆ ಎಂಬಂತೆ ಪರಿಬಣಿಸುತ್ತಿತ್ತು. ಆದರೆ ಇಂದು ಜೈಲಿಗೆ ಹೋದವರು ಜಾಮೀನು ತೆಗೆದುಕೊಂಡು ಹೊರಬಂದಾಕ್ಷಣ ಅವರಿಗೆ ಹೂಹಾರ ಹಾಕಿ ಸ್ವಾಗತಿಸ್ತಾರೆ. ಜೈಕಾರ ಹಾಕ್ತಾರೆ. ಇದರಿಂದ ಸಮಾಜಕ್ಕೆ ಏನು ಸಂದೇಶ ಕಳುಹಿಸುತ್ತದೆ. ಕೇಳಿದರೆ ಗಾಂಧಿ ಹೋಗಿಲ್ವ ಜೈಲಿಗೆ ಅಂತಾರೆ. ಆದರೆ ಗಾಂಧಿ ಜೈಲಿಗೆ ಹೋಗಿರುವುದು ಯಾತಕ್ಕೆ, ಇವರುಗಳು ಹೋಗುವುದು ಯಾತಕ್ಕೆ ಎಂಬ ಅರ್ಥವೇ ಗೊತ್ತಿಲ್ಲದವರಲ್ಲಿ ಏನೂಂತ ಮಾತನಾಡೋದು. ಇಂದಿನ ಸಮಾಜದ ಭಾವನೆ ಏನಾಗಿದೆ ಎಂಬುದನ್ನು ನಾವಿಂದು ತಿಳಿಯಬೇಕಾಗಿದೆ. ಇಲ್ಲಿ ತಪ್ಪು ಮಾಡಿದವರು ಪ್ರಮಾಣಿಕರು, ಪ್ರಾಮಾಣಿಕರು ಹುಚ್ಚರು ಎಂದಾಗಿದೆ ಎಂದು ನಿವೃತ್ತ ಲೋಕಾಯುಕ್ತ ಜಸ್ಟೀಸ್ ಸಂತೋಷ್ ಹೆಗ್ಡೆ ಹೇಳಿದರು.


ಎಲ್ಲಿ ಹೆಚ್ಚು ವೈದ್ಯರುಗಳು, ಆಸ್ಪತ್ರೆಗಳಿದ್ರೆ ಅಲ್ಲಿ ಪರಿಸರ, ಆರೋಗ್ಯ ಕಲುಷಿತಗೊಂಡಿದೆ ಎಂದರ್ಥ-ಬಿ.ಎಂ ಹನೀಫ್:


ಕರಾವಳಿ ಭಾಗದ ಸಾಮಾಜಿಕ ಅಗತ್ಯಗಳ ಬಗ್ಗೆ ಪತ್ರಕರ್ತರಾದ ಬಿ.ಎಂ ಹನೀಫ್ ಮಾತನಾಡಿ, ಕರಾವಳಿಯಲ್ಲಿ ಸಾಮಾಜಿಕ, ರಾಜಕೀಯ ಭಿನ್ನಮತವಿದ್ದರೂ ನಾವು ಸೇವಿಸುವ ಆಮ್ಲಜನಕ ಮಾತ್ರ ಒಂದೇ. ವಿದ್ಯಾರ್ಥಿಗಳು ಸಂವಿಧಾನದ ಪುಸ್ತಕಗಳನ್ನು ಓದಿ, ಗಾಂಧಿ ತತ್ವಗಳ ಬಗ್ಗೆ ಹೆಚ್ಚೆಚ್ಚು ತಿಳ್ಕೊಳ್ಳುವ ಆಸಕ್ತಿಯನ್ನು ಬೆಳೆಸಿಕೊಳ್ಳಿ. ಬೆಂಗಳೂರು, ಮುಂಬಯಿ, ಕೊಲ್ಲಿ ರಾಷ್ಟ್ರಗಳಲ್ಲಿ ಯಾವುದೇ ಜಾತಿ-ಮತ ಬೇಧಗಳು ಕಂಡು ಬರುವುದಿಲ್ಲ. ಆದರೆ ಈ ಕರಾವಳಿಯಲ್ಲಿ ಮಾತ್ರ ಇವುಗಳು ಹೆಚ್ಚೆಚ್ಚು ಕಂಡುಬರುವುದು ಯಾತಕ್ಕೆ. ಯಾಕೆಂದರೆ ಈ ಭಾಗದಲ್ಲಿ ರಾಜಕೀಯ ನಾಯಕರ ಅತಿಯಾದ ಪ್ರವೇಶದಿಂದ ಸಮಸ್ಯೆಗಳು ಆರಂಭವಾಗುವುದು ಎಂದ ಅವರು ಕರಾವಳಿಯಲ್ಲಿ ಎಲ್ಲರನ್ನು ಸಮಾನವಾಗಿ ನೋಡಿಕೊಳ್ಳುವ ಹಿಂದಿನ ರಾಜಕೀಯ ಧುರೀಣರ ಹೆಸರನ್ನು ಹೆಸರಿಸಬಹುದು ಆದರೆ ಈಗ ಅದು ಕಷ್ಟಸಾಧ್ಯ. ವಿಶಾಲ ಮನೋಭಾವದಿಂದ ಸಂಕುಚಿತ ಮನೋಭಾವದತ್ತ ಮುಖ ಮಾಡಿದ್ದರಿಂದ ಉದ್ಯೋಗಗಳ ಅಭಾವ ಜಾಸ್ತಿಯಾಗುತ್ತಿದೆ. ಎಲ್ಲಿ ಹೆಚ್ಚು ವೈದ್ಯರುಗಳು, ಆಸ್ಪತ್ರೆಗಳು ಬಂದ್ರೆ ಅಲ್ಲಿನ ಪರಿಸರ ಕಲುಶಿತಗೊಂಡಿದೆ, ಆರೋಗ್ಯಕರ ಪರಿಸರ ಇಲ್ಲವೆಂಬುದರ್ಥ ಎಂದರು. ಅಂದು ಮನುಷ್ಯತ್ವ ವಿಭಜಿಸುವಂತಹ ರೀತಿಯಲ್ಲಿ ಜಾತಿ-ಧರ್ಮವಿರಲಿಲ್ಲ. ಇಂದು ದುಡ್ಡಿನ ಮುಂದೆ ಮೌಲ್ಯಗಳ ವ್ಯವಸ್ಥೆ, ನೈತಿಕ ಪ್ರಜ್ಞೆ ಎಲ್ಲವೂ ನಶಿಸಿ ಹೋಗುತ್ತಿದೆ. ಸಮಾಜದಲ್ಲಿ ಕಲಿಯುವುದು ಒಂದೇ ಶಕ್ತಿ ಅದು ಮನುಷ್ಯತ್ವದ ಶಕ್ತಿ ಎಂದು ಬಿ.ಎಂ ಹನೀಫ್‌ರವರು ಹೇಳಿದರು.


ಎಳವೆಯಲ್ಲಿಯೇ ನೈತಿಕ ಶಿಕ್ಷಣ, ಒಳ್ಳೆಯ ವಿಚಾರಗಳನ್ನು ಭಿತ್ತುವಲ್ಲಿ ವಿಫಲರಾಗಿದ್ದೇವೆ-ಬಿರಾದಾರ್:


ವಿಜಯಪುರ ಚಾಣಕ್ಯ ಕರಿಯರ್ ಅಕಾಡೆಮಿಯ ನಿರ್ದೇಶಕ ಹಾಗೂ ಗಾಂಧಿ ವಿಚಾರ ವೇದಿಕೆಯ ವ್ಯವಸ್ಥಾಪಕ ಸದಸ್ಯರಾದ ಎನ್.ಎಂ ಬಿರಾದಾರರವರು `ಯುವಜನತೆಯ ಅಗತ್ಯತೆಗಳು’ ಬಗ್ಗೆ ಮಾತನಾಡಿ, ನಾಡು ಕಟ್ಟುವವರು ಯುವಜನತೆ, ನಾಡಿನ ಭವಿಷ್ಯವೂ ಯುವಜನತೆಯಲ್ಲಿದೆ. ಇಂದಿನ ಕಾಲದಲ್ಲಿ ಯುವಜನತೆ ಎತ್ತ ಸಾಗುತ್ತಿದ್ದಾರೆ. ಪ್ರೀತಿ-ಪ್ರೇಮ-ವೈಫಲ್ಯ, ಜೂಜಾಟದ ಆಟ, ಮದ್ಯಪಾನ, ಡ್ರಗ್ಸ್, ಲೈಂಗಿಕ ಚಪಲದಿಂದಾಗಿ ಫೋಕ್ಸೋ ಕಾಯ್ದೆಯಡಿ ಸುಮಾರು ನಾಲ್ಕು ಸಾವಿರಕ್ಕೂ ಮಿಕ್ಕಿ ಯುವಕರು ಜೈಲಿನಲ್ಲಿದ್ದಾರೆ. ದೇಶದ ಆಸ್ತಿ ಆಗಬೇಕಾದ ಯುವಜನತೆ ಅನ್ಯ ದಾರಿಯಲ್ಲಿ ಹೋಗುತ್ತಿರುವುದು ಖೇದಕರ ಎಂದ ಅವರು ಮಕ್ಕಳಲ್ಲಿ ಎಳವೆ ಪ್ರಾಯದಲ್ಲಿಯೇ ನೈತಿಕ ಶಿಕ್ಷಣ, ಒಳ್ಳೆಯ ವಿಚಾರಗಳನ್ನು ಭಿತ್ತುವಲ್ಲಿ ನಾವು ವಿಫಲರಾಗಿದ್ದೇವೆ. ಮಕ್ಕಳಿಗೆ ಭವಿಷ್ಯದ ಜೀವನದ ಬದುಕನ್ನು ತಿಳಿಯಪಡಿಸುವ ಅಗತ್ಯವಿದೆ. ಶಾಲಾ-ಕಾಲೇಜುಗಳಲ್ಲಿ ಇಂತಹ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ಕಲಿಸಬೇಕಾಗಿದೆ. ಗಾಂಧಿ ಯಾಕೆ ಪ್ರಸ್ತುತವಾಗುತ್ತಾರೆಂದರೆ ಅವರಲ್ಲಿನ ನೈತಿಕ ಗುಣ. ಅದರಂತೆ ಜಸ್ಟೀಸ್ ಸಂತೋಷ್ ಹೆಗ್ಡೆಯವರೂ ಕೂಡ. ವಿದ್ಯಾರ್ಥಿಗಳು ಶುದ್ಧ ಕೈ, ಶುದ್ಧ ದೃಷ್ಟಿ ಮತ್ತು ಶುದ್ಧ ಮನಸ್ಸಿನೊಂದಿಗೆ ಇರೋದನ್ನು ಕಲಿಯಬೇಕು ಎಂದರು. ಗಾಂಧೀಜಿ ಕೂಡ ಮಾನವರೇ. ಆದರೆ ಅವರಲ್ಲಿನ ಸಣ್ಣಪುಟ್ಟ ದೋಷಗಳನ್ನು ಇಂದು ವೈಭವಿಕರಿಸಲಾಗುತ್ತದೆ. ವಿಭಜನೆಗೆ ಗಾಂಧಿ ಕಾರಣ, ಸ್ವಾತಂತ್ರ್ಯಕ್ಕೆ ಗಾಂಧಿ ಕಾರಣರಲ್ಲ. ಇದು ಯಾವ ಚಿಂತನೆ ಎಂದು ಅವರು ಹೇಳಿದರು.


ಮನಸ್ಸುಗಳಲ್ಲಿನ ಭ್ರಷ್ಟಾಚಾರವನ್ನು ಕಿತ್ತು ತೆಗೆಯಬೇಕು-ಝೇವಿಯರ್ ಡಿ’ಸೋಜ:


ಅಧ್ಯಕ್ಷತೆ ವಹಿಸಿದ ಗಾಂಧಿ ವಿಚಾರ ವೇದಿಕೆ ಪುತ್ತೂರು ಇದರ ಅಧ್ಯಕ್ಷರಾದ ಝೇವಿಯರ್ ಡಿ’ಸೋಜರವರು ಮಾತನಾಡಿ, ಜಸ್ಟೀಸ್ ಸಂತೋಷ್ ಹೆಗ್ಡೆಯವರು ಹೇಳಿದಂತೆ ಇಂದು ನಮ್ಮ ದೇಶ ಎತ್ತ ಸಾಗುತ್ತಿದೆ ಎನ್ನುವ ಕಳವಳ ಎದುರಾಗಿದೆ. ಯಾವುದೇ ರಂಗದಲ್ಲೂ ಭ್ರಷ್ಟಾಚಾರ ಎಂಬುದು ತಾಂಡವವಾಡುತ್ತಿದೆ. ಮುಖ್ಯವಾಗಿ ಮನಸ್ಸು, ಮನಸ್ಸುಗಳಲ್ಲಿ ಭ್ರಷ್ಟಾಚಾರ ತುಂಬಿ ತುಳುಕಿಹೋಗಿದೆ. ಮನಸ್ಸುಗಳಲ್ಲಿ ಭ್ರಷ್ಟಾಚಾರ ಉಂಟು ಮಾಡಬಾರದು. ಜಸ್ಟೀಸ್ ಸಂತೋಷ್ ಹೆಗ್ಡೆರವರ ಸಮಗ್ರತೆಯ ಶಕ್ತಿ ನಮಗೆ ಬಹಳ ಮಾದರಿಯಾಗಿದೆ ಮಾತ್ರವಲ್ಲ ಅನುಸರಿಸಲು ಯೋಗ್ಯವಾದದ್ದಾಗಿದೆ ಎಂದರು.


ಮುಖ್ಯ ಅತಿಥಿಯಾಗಿ ಚಿಂತಕರಾದ ವಿಲ್‌ಫ್ರೆಡ್ ಡಿ’ಸೋಜ ಪುತ್ತೂರು, ಉಪಸ್ಥಿತಿಯಾಗಿ ಗಾಂಧಿ ವಿಚಾರ ವೇದಿಕೆಯ ಮಾತೃ ಘಟಕದ ಆಧ್ಯಕ್ಷ ಶ್ರೀಧರ ಭಿಡೆ, ಮಂಗಳೂರು ಮಹಾತ್ಮಾ ಗಾಂಧಿ ಶಾಂತಿ ಪ್ರತಿಷ್ಠಾನದ ಕಾರ್ಯದರ್ಶಿ ಇಸ್ಮಾಯಿಲ್‌ರವರು ಸಂದರ್ಭೋಚಿತವಾಗಿ ಮಾತನಾಡಿದರು. ಆರಂಭದಲ್ಲಿ ವಂದನಾ ಸ್ತುತಿ ಹಾಡಲಾಯಿತು. ಗಾಂಧಿ ವಿಚಾರ ವೇದಿಕೆಯ ಮಾತೃ ಘಟಕದ ಉಪಾಧ್ಯಕ್ಷ ಅಣ್ಣಾ ವಿನಯಚಂದ್ರರವರು ಸ್ವಾಗತಿಸಿದರು. ಪುತ್ತೂರು ಗಾಂಧಿ ವಿಚಾರ ವೇದಿಕೆಯ ಕಾರ್ಯದರ್ಶಿ ಚಿನ್ಮಯ್ ಕೃಷ್ಣ, ಆಡಳಿತಾಧಿಕಾರಿ ಹಾಗೂ ವಿದ್ಯಾಮಾತಾ ಅಕಾಡೆಮಿ ಮುಖ್ಯಸ್ಥ ಭಾಗ್ಯೇಶ್ ರೈ, ಉಪಾಧ್ಯಕ್ಷ ನಿವೃತ್ತ ಉಪನ್ಯಾಸಕ ಚಂದ್ರಹಾಸ ರೈಯವರು ಅತಿಥಿಗಳಿಗೆ ಶಾಲು ಹೊದಿಸಿ ಹೂ ನೀಡಿ ಸ್ವಾಗತಿಸಿದರು. ಗಾಂಧಿ ವಿಚಾರ ವೇದಿಕೆಯ ಮಾತೃ ಘಟಕದ ಪ್ರಧಾನ ಕಾರ್ಯದರ್ಶಿ ಅರವಿಂದ ಚೊಕ್ಕಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪುತ್ತೂರು ಗಾಂಧಿ ವಿಚಾರ ವೇದಿಕೆಯ ಉಪಾಧ್ಯಕ್ಷ ಗೋಪಾಲಕೃಷ್ಣ ಉಪಾಧ್ಯಾಯ ವಂದಿಸಿದರು. ಲಿಟ್ಲ್ ಫ್ಲವರ್ ಶಾಲೆಯ ಶಿಕ್ಷಕ ಬಾಲಕೃಷ್ಣ ಪೊರ್ದಾಲ್ ಕಾರ್ಯಕ್ರಮ ನಿರೂಪಿಸಿದರು.


ಸರ್ವಧರ್ಮ ಸಮ್ಮೇಳನದಿಂದ ಸಮಾಜ ಸುಸ್ಥಿತಿಯತ್ತ..
ಕರ್ನಾಟಕದಲ್ಲಿ ಹೆಚ್ಚು ಭಾಷೆಗಳಿವೆ, ಧಾರ್ಮಿಕ ಕೇಂದ್ರಗಳಿವೆ, ವೈವಿಧ್ಯಮಯ ಸಂಸ್ಕೃತಿಗಳಿವೆ ಆದರೂ ಮನುಷ್ಯ ಸಂಕುಚಿತ ಮನೋಭಾವನೆಗೆ ಒಳಗಾಗಿದ್ದಾನೆ. ಪ್ರತಿ ಧಾರ್ಮಿಕ ಕೇಂದ್ರಗಳಲ್ಲಿ ಹಿಂದೆ ಎಲ್ಲಾ ಜಾತಿಯವರಿಗೆ ಸಮಾರಂಭಗಳನ್ನು ಏರ್ಪಡಿಸುತ್ತಿದ್ದರು. ಆದರೆ ಇಂದು ಅವರವರ ಧರ್ಮಕ್ಕೇ ಸೀಮಿತರಾದವರನ್ನು ಮಾತ್ರ ಕಾರ್ಯಕ್ರಮಕ್ಕೆ ಕರೆಯಿಸಿಕೊಳ್ಳುತ್ತಾರೆ. ಹೀಗಾದರೆ ನಮ್ಮೊಳಗೆ ಸಮನ್ವಯತೆ ಸಾಧಿಸೋದು ಹೇಗೆ?. ಆಗಿನ ಸಂಸ್ಕೃತಿಗೂ ಇಂದಿನ ಸಂಸ್ಕೃತಿಗೂ ಬಹಳ ವ್ಯತ್ಯಾಸವಿದೆ. ಸರ್ವ ಧರ್ಮದವರು ಒಟ್ಟಾಗಬೇಕಾದರೆ ಅಲ್ಲಿ ವರ್ಷಕ್ಕೆ ಒಮ್ಮೆ ಸರ್ವಧರ್ಮ ಸಮ್ಮೇಳನದಂತಹ ಕಾರ್ಯಕ್ರಮ ಮಾಡಿದರೆ ಸಮಾಜ ಸುಸ್ಥಿತಿಯತ್ತ ಸಾಗಬಲ್ಲುದು.
ಬಿ.ಎಂ ಹನೀಫ್, ಪತ್ರಕರ್ತರು

ಹಿಂದಿನ ನೀತಿಪಾಠ ಈಗ ಬೇಡವಾಗಿದೆ..
ನಾವು ಚಿಕ್ಕದಿರುವಾಗ ಶಾಲೆಯಲ್ಲಿ ಬದುಕುವುದನ್ನು ಹೇಗೆ ಕಲಿಯಬೇಕು, ಇತರರನ್ನು ಹೇಗೆ ಬದುಕಿಸಿಕೊಳ್ಳಬೇಕು ಮತ್ತು ಸಮಾಜದಲ್ಲಿ ನಮ್ಮ ಗುಣ-ನಡತೆಗಳು ಯಾವ ತೆರನಾಗಿರಬೇಕು ಎನ್ನುವ ನೀತಿಪಾಠವೊಂದಿತ್ತು. ಗುರುಗಳು ಮಕ್ಕಳಿಗೆ ಈ ತೆರನಾಗಿ ದೃಷ್ಟಾಂತಗಳೊಂದಿಗೆ ಎಲ್ಲರೂ ಒಂದೇ ಎನ್ನುವಂತೆ ನೀತಿಪಾಠವನ್ನು ಕಲಿಸಿಕೊಡುತ್ತಿದ್ದರು. ಆದರೆ ಈಗ ಹಿಂದಿನ ಆ ನೀತಿಪಾಠ ಯಾರಿಗೂ ಬೇಡವಾಗಿದೆ. ಈ ನೀತಿಪಾಠದಿಂದ ಯಾರಿಗೂ ಹಣ ಮಾಡಿಕೊಳ್ಳಲು ಸಾಧ್ಯವಿಲ್ಲ. ಮುಂದಿನ ದಿನಗಳಲ್ಲಿ ಇದು ಯಾವ ಮಟ್ಟಕ್ಕೆ ಹೋಗಬಹುದು ಎಂಬುದನ್ನು ಊಹಿಸಲು ಸಾಧ್ಯವಾಗದು.
-ಜಸ್ಟೀಸ್ ಎನ್.ಸಂತೋಷ್ ಹೆಗ್ಡೆ, ನಿವೃತ್ತ ಲೋಕಾಯುಕ್ತರು

ಸಂವಾದ..
ಸಭಾ ಕಾರ್ಯಕ್ರಮದ ಬಳಿಕ ಜನ ಸಂವಾದ ಕಾರ್ಯಕ್ರಮ ಏರ್ಪಟ್ಟಿದ್ದು, ಇದರಲ್ಲಿ ಮಾಜಿ ಶಾಸಕಿ ಶಕುಂತಳಾ ಟಿ.ಶೆಟ್ಟಿ, ವಿದ್ಯಾಮಾತಾ ಅಕಾಡೆಮಿಯ ವಿದ್ಯಾರ್ಥಿಗಳು, ನಿವೃತ್ತ ಸೈನಿಕರು, ಮಹಿಳೆಯರು, ಯುವಜನತೆ, ಹಿರಿಯರು, ಕಿರಿಯರು, ಸಾರ್ವಜನಿಕರು ಭಾಗವಹಿಸಿದರು. ಸಭಿಕರಿಂದ ಕೇಳಲ್ಪಟ್ಟ ಪ್ರಶ್ನೆಗಳಿಗೆ ನಿವೃತ್ತ ಲೋಕಾಯುಕ್ತ ಜಸ್ಟೀಸ್ ಎನ್.ಸಂತೋಷ್ ಹೆಗ್ಡೆ, ಪತ್ರಕರ್ತ ಬಿ.ಎಂ ಹನೀಫ್, ವಿಜಯಪುರ ಚಾಣಕ್ಯ ಕರಿಯರ್ ಅಕಾಡೆಮಿಯ ನಿರ್ದೇಶಕ ಹಾಗೂ ಗಾಂಧಿ ವಿಚಾರ ವೇದಿಕೆಯ ವ್ಯವಸ್ಥಾಪಕ ಸದಸ್ಯರಾದ ಎನ್.ಎಂ ಬಿರಾದಾರ, ಚಿಂತಕರಾದ ವಿಲ್‌ಫ್ರೆಡ್ ಡಿ’ಸೋಜ ಉತ್ತರಿಸಿದರು.

LEAVE A REPLY

Please enter your comment!
Please enter your name here