ಶ್ರೀಧಾಮದಿಂದ ವಿಶ್ವಶಾಂತಿಯನ್ನು ಬಯಸುವ ಕೆಲಸವಾಗುತ್ತಿದೆ: ಮಾಣಿಲ ಶ್ರೀ
ನಾಸ್ತಿಕರನ್ನು ಆಸ್ತಿಕರನ್ನಾಗಿ ಪರಿವರ್ತಿಸುವ ಕೆಲಸ ಆಗಬೇಕಿದೆ : ಶ್ರೀ ಚಿದಾನಂದ ಗುರೂಜಿ
ಸಾಮಾಜದ ಏಳಿಗೆಗಾಗಿ ಶ್ರೀಗಳ ಪ್ರಯತ್ನ ಅಪಾರ: ಸೌಂದರ್ಯ ರಮೇಶ್
ಮಾಣಿಲ ಕ್ಷೇತ್ರವೊಂದು ಕಲ್ಪತರು ಇದ್ದಂತೆ: ಲಕ್ಷ್ಮಣ ಗೌಡ
ವಿಟ್ಲ: ಸ್ವಸ್ಥ ಸಮಾಜದ ನಿರ್ಮಾಣಕ್ಕೆ ಎಲ್ಲರ ಸಹಕಾರ ಅಗತ್ಯ. ಧ್ವೇಷ ಭಾವ ತೊರೆದು ಪ್ರೀತಿ ಭಾವ ಎಲ್ಲರಲ್ಲಿ ಬರಲಿ. ಅರಿವಿನ ಒಳಗಿನ ಗುರುವನ್ನು ತೋರಿಸುವ ಪ್ರಯತ್ನ ನಿರಂತರವಾಗಿ ನಡೆಯುತ್ತಿದೆ. ಶ್ರೀಧಾಮದಿಂದ ವಿಶ್ವಶಾಂತಿಯನ್ನು ಬಯಸುವ ಕೆಲಸವಾಗುತ್ತಿದೆ. ಮನುಷ್ಯ ಜೀವನದಲ್ಲಿ ಗುರು ಹಾಗೂ ಗುರಿ ಮುಖ್ಯ ಎಂದು ಶ್ರೀಧಾಮ ಮಾಣಿಲ ಶ್ರೀ ಮಾಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿರವರು ಹೇಳಿದರು.
ಅವರು ಶ್ರೀಧಾಮದಲ್ಲಿ ಫೆ.26ರಂದು ನಡೆದ ಕ್ಷೇತ್ರದ ಪ್ರತಿಷ್ಠಾ ವರ್ದಂತ್ಯುತ್ಸವದ ಅಂಗವಾಗಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಆತ್ಮ ಸಂಬಂಧದಲ್ಲಿ ತಾತ್ಪರತೆ ಇದೆ. ನಾವು ಯೋಚನೆ ಮಾಡಬೇಕಾದ ಕಾಲಘಟ್ಟದಲ್ಲಿದ್ದೇವೆ. ಯಾಂತ್ರಿಕ ಬದುಕಿನ ಸೋಗಿನಲ್ಲಿ ತಮ್ಮತನವನ್ನು ನಾವು ಕಳೆದುಕೊಳ್ಳುತ್ತಿದ್ದೇವೆ. ತಾಯಿಯ ಸ್ಥಾನದ ಪಾವಿತ್ರ್ಯತೆಯನ್ನು ಉಳಿಸುವುದರೊಂದಿಗೆ ನಮ್ಮ ಮಕ್ಕಳನ್ನು ಪ್ರಜ್ಞಾವಂತರನ್ನಾಗಿ ಮಾಡಬೇಕಿದೆ.
ಪಾಪ ಪುಣ್ಯ ಮನುಷ್ಯ ಜೀವನದಲ್ಲಿ ನಿರಂತರವಾಗಿ ನಡೆಯುತ್ತಿರುತ್ತದೆ. ಮನುಷ್ಯನ ಪುಣ್ಯ ಸಂಚಯನದ ಸ್ಥಳಗಳು ಧಾರ್ಮಿಕ ಶ್ರದ್ಧಾ ಕೇಂದ್ರಗಳು. ದೇವಸ್ಥಾನದ ಪಾವಿತ್ರ್ಯತೆ ಉಳಿಸಲು ಪ್ರಯತ್ನಿಸಬೇಕು. ಯಾರನ್ನು ಕೇವಳವೆಂದು ತಿಳಿಯಬೇಡಿ. ಜೀವನದಲ್ಲಿ ಸಂಶಯ ಬೇಡ ಸಮರ್ಪಣೆ ಅಗತ್ಯ. ಸೇವೆ, ಸಮರ್ಪಣೆ ನನ್ನ ಜೀವನದ ಗುರಿ. ದೇಹಕ್ಕೆ ದಣಿವಿಲ್ಲ ಮನಸ್ಸಿಗೆ ಧಣಿವಿದೆ. ಮಕ್ಕಳ ಜೀವನದ ಬದ್ಧತೆ, ದೇಶದ ಭದ್ರತೆ ಬಗ್ಗೆ ಯೋಚಿಸಬೇಕಾಗಿದೆ. ಭಕ್ತಿಯ ಶಕ್ತಿಯಿಂದ ಕ್ಷೇತ್ರದಲ್ಲಿ ನಿತ್ಯ ನಿರಂತರ ಕೆಲಸ ಕಾರ್ಯಗಳು ನಡೆಯುತ್ತಿರುತ್ತದೆ. ತ್ಯಾಗ ಮತ್ತು ಸೇವೆಗೆ ಶಕ್ತಿ ಕೊಡುವವಳು ಮಹಾಲಕ್ಷ್ಮೀ ಎಂದರು.
ಚಿಕ್ಕಮಗಳೂರಿನ ಶ್ರೀ ಸತ್ಯಶನೀಶ್ವರ ಕ್ಷೇತ್ರದ ಶ್ರೀ ಚಿದಾನಂದ ಗುರೂಜಿರವರು ಆಶೀರ್ವಚನ ನೀಡಿ ಜೀವನ ಪಾವನ ಮಾಡಲು ಧರ್ಮದ ಆಚರಣೆ ಅಗತ್ಯ. ಲೌಕಿಕ ಜಗತ್ತಿನಲ್ಲಿ ಬದುಕು ನಡೆಸಲು ಧರ್ಮ ಅಗತ್ಯ. ಪಂಚ ಧರ್ಮವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ನಾವು ಇನ್ನೊಬ್ಬರನ್ನು ಅರ್ಥೈಸಿ ಬದುಕಬೇಕು. ಗುರುವಿನ ಸ್ಮರಣೆ ಅಗತ್ಯ. ನಾಸ್ತಿಕರನ್ನು ಆಸ್ತಿಕರನ್ನಾಗಿ ಪರಿವರ್ತಿಸುವ ಕೆಲಸ ಆಗಬೇಕಿದೆ ಎಂದರು.
ಬೆಂಗಳೂರಿನ ಉದ್ಯಮಿ ಸೌಂದರ್ಯ ರಮೇಶ್ ರವರ ಮಾತನಾಡಿ ಶ್ರೀಗಳ ಪಾದಸ್ಪರ್ಶವಾದ ಕ್ಷೇತ್ರಗಳೆಲ್ಲವೂ ಪುಣ್ಯ ಪಾವನ ತಾಣವಾಗಿದೆ. ಏನೂ ಇಲ್ಲದ ಭರಡು ಭೂಮಿಯಾಗಿದ್ದ ಮಾಣಿಲವನ್ನು ಪುಣ್ಯಧಾಮವನ್ನಾಗಿಸಿದ ಶ್ರೀಗಳ ಪ್ರಯತ್ನ ಅಪಾರ.
ಆರಂಭದ ದಿನಗಳಿಂದಲೂ ನಾನು ಈ ಕ್ಷೇತ್ರಕ್ಕೆ ನಿರಂತರವಾಗಿ ಬರುತ್ತಿದ್ದೇನೆ. ಬಹಳಷ್ಟು ಬದಲಾವಣೆಗಳನ್ನು ನಾನಿಲ್ಲಿ ಕಂಡಿದ್ದೇನೆ. ಸಾಮಾಜದ ಏಳಿಗೆಗಾಗಿ ನಿರಂತರವಾಗಿ ಶ್ರಮಿಸುತ್ತಿರುವ ಶ್ರೀಗಳ ಸೇವಾ ಕೈಂಕರ್ಯ ಅಭಿನಂದನೀಯ ಎಂದರು.
ಬೆಂಗಳೂರಿನ ಉದ್ಯಮಿ ಲಕ್ಷ್ಮಣ ಗೌಡರವರು ಮಾತನಾಡಿ ಕ್ಷೇತ್ರವನ್ನು ಕಂಡು ತುಂಬ ಸಂತಸವಾಗಿದೆ. ಕ್ಷೇತ್ರದಲ್ಲಿ ನಿತ್ಯ ನಿರಂತರ ಅನ್ನದಾನ ನಡೆಯುತ್ತಿರುವುದು ಬಹಳ ಸಂತಸದ ವಿಚಾರ. ಮಾಣಿಲ ಕ್ಷೇತ್ರವೊಂದು ಕಲ್ಪತರು ಇದ್ದಂತೆ ಎಂದರು. ಈ ಒಂದು ಹಳ್ಳಿಯಲ್ಲಿ ಇಷ್ಟೊಂದು ಸುಂದರ ಆಲಯ ನಿರ್ಮಾಣವಾಗಿರುವುದರ ಹಿಂದೆ ಶ್ರೀಗಳ ಪ್ರಯತ್ನ ಬಹಳಷ್ಟಿದೆ ಎಂದರು.
ಉದ್ಯಮಿ ಬಾಸ್ಕರ ಶೆಟ್ಟಿ ಪುಣೆ, ಅಳಿಕೆ ನಾಗಬ್ರಹ್ಮ ಕ್ಷೇತ್ರದ ಟ್ರಸ್ಟಿ ಕೃಷ್ಣ ಪ್ರಸಾದ್ ಮಂಗಳೂರು, ಸಮಾಜ ಸೇವಕ ರಾಮಣ್ಣ ಉಪ್ಪಿನಂಗಡಿ, ಉಡುಪಿ ನಿತ್ಯಾನಂದ ಮಠದ ಮಹಾಬಲ ಕುಂದರ್, ಕಾಸರಗೋಡು ಜಿ.ಪಂ. ಸದಸ್ಯೆ ಕಮಲಾಕ್ಷಿ ವಿನೋದ್ ವರ್ಕಾಡಿ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವೇದಿಕೆಯಲ್ಲಿ ಕಲಾವಿದ ಮಂಜು ವಿಟ್ಲ, ಸಾಮಾಜಿಕ ಕಾರ್ಯಕರ್ತರಾದ ಲಕ್ಷ್ಮಣ ಗೌಡ ಬೆಂಗಳೂರು, ಸುಜಯ ಸದಾನಂದ ಕಳಸ, ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಐತು ಕುಲಾಲ್ ಪೆರ್ಡೂರು ಕನ್ಯಾನ, ಲೋಕೇಶ್ ಕುಂದಾಪುರ, ವೈದ್ಯೆ ರೇವತಿ ಹಾಗೂ ಭರತನಾಟ್ಯ ಕಲಾವಿದೆ ಕಾವ್ಯ ಭಟ್ ರವರನ್ನು ಸನ್ಮಾನಿಸಲಾಯಿತು.
ಲಕ್ಷ್ಮಣ ಗಟ್ಟಿ ನಂದಾವರ ರವರು ರಚಿಸಿದ ‘ಮಹಿಮೆದ ಮಾಣಿಲ’ ಎನ್ನುವ ವೀಡಿಯೋವನ್ನು ಶ್ರೀಗಳು ಈ ಸಂದರ್ಭದಲ್ಲಿ ಬಿಡುಗಡೆ ಮಾಡಿದರು.
ಟ್ರಸ್ಟಿ ತಾರನಾಥ ಕೊಟ್ಟಾರಿ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಗೀತಾ ಪುರುಷೋತ್ತಮ
ಪ್ರಾರ್ಥಿಸಿದರು. ಅಶ್ವಿತ್ ಒಡೀಲು, ಅಭಿಜಿತ್ ಒಡೀಲು, ವಸಂತಿ ಶೆಟ್ಟಿ, ಗೀತಾ ಪುರುಷೋತ್ತಮ, ರೇಷ್ಮಾ ಶೆಟ್ಟಿ ಸನ್ಮಾನ ಪತ್ರ ವಾಚಿಸಿದರು. ಸಂತೋಷ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ವೈದ್ಧಿಕ ಕಾರ್ಯಕ್ರಮ:
ಬೆಳಗ್ಗೆ ಸಾಮೂಹಿಕ ಪ್ರಾರ್ಥನೆ, ಸ್ವಸ್ಥಿ ಪುಣ್ಯಾಹ ವಾಚನ, ೬ತೆಂಗಿನಕಾಯಿಯ ಗಣಯಾಗ, ನವಗ್ರಹಾರಾಧನೆ, ಚಂಡಿಕಾಯಾಗ, ಶ್ರೀದುರ್ಗಾ ಸನ್ನಿಧಿಯಲ್ಲಿ ನವಕಕಲಶಾಧಿವಾಸ, ವಿವಿಧ ಭಜನಾ ತಂಡಗಳಿಂದ ಭಜನೆ, ಶ್ರೀ ಮಹಾಲಕ್ಷ್ಮೀ ಸಾನಿಧ್ಯದಲ್ಲಿ ಪಂಚವಿಂಶತಿ ಕಲಶಾಧಿವಾಸ, ಮಧ್ಯಾಹ್ನ ಯಾಗದ ಪೂರ್ಣಾಹುತಿ ಪ್ರಸಾದ ವಿತರಣೆ ನಡೆಯಿತು.