ಉಪ್ಪಿನಂಗಡಿ: ಇಲ್ಲಿನ ಶ್ರೀ ಮಾಧವ ಶಿಶು ಮಂದಿರದ ಆಶ್ರಯದಲ್ಲಿ ಮಾತೃ ಮಂಡಳಿಯ ನೇತೃತ್ವದಲ್ಲಿ 16 ನೇ ವರ್ಷದ ಪವಿತ್ರ ಗಂಗಾ ಪೂಜೆ ಮಾತೃ ಸಂಗಮ ಹಾಗೂ ಗಾಳಿಪಟ ಉತ್ಸವವು ಭಾನುವಾರದಂದು ಉಪ್ಪಿನಂಗಡಿಯ ನೇತ್ರಾವತಿ ಹಾಗೂ ಕುಮಾರಧಾರ ನದಿ ಸಂಗಮ ಸ್ಥಳದಲ್ಲಿ ಜರುಗಿತು.
ಸಂಜೆ ವೇಳೆ ಅಬಾಲವೃದ್ದರಾದಿಯಾಗಿ ಗಾಳಿಪಟ ಉತ್ಸವವು ಹೆಚ್ಚಿನ ಸಂಖ್ಯೆಯ ಜನರ ಭಾಗೀಧಾರಿಕೆಯಲ್ಲಿ ನಡೆದು ಮನೋಲ್ಲಾಸಕರ ವಾತಾವರಣವನ್ನು ಸೃಷ್ಠಿಸಿತು. ಕತ್ತಲಾವರಿಸುತ್ತಿದ್ದಂತೆಯೇ ನಡೆದ ಗಂಗಾಪೂಜೆಯಲ್ಲಿ ಪ್ರಧಾನ ಪೂಜಾ ಕರ್ತೃಗಳಾಗಿ ರಮೇಶ್- ಮೋಹಿನಿ ದಂಪತಿ ಪೂಜಾ ವಿಧಿ ವಿಧಾನವನ್ನು ನೆರವೇರಿಸಿದರು.
ಮಾತೃ ಸಂಗಮದ ಸಭಾ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಸರಸ್ವತಿ ವಿದ್ಯಾಕೇಂದ್ರದ ಶಿಕ್ಷಕಿ ಪ್ರೇಮಲತಾ ಎ. ಯವರು, ಹಿಂದೂ ಧರ್ಮ ಸಂಸ್ಕೃತಿಯ ಉಳಿವಿನ ಹಿಂದೆ ಹಿಂದೂ ಸಮಾಜದ ಸುದೃಢತೆ ಅಗತ್ಯವೆನಿಸಿದೆ. ಸಂಖ್ಯಾಬಲದಲ್ಲಿ ದಿನೇ ದಿನೇ ಕುಸಿತದ ಅನುಪಾತವನ್ನು ತೋರುವ ಹಿಂದೂಗಳಲ್ಲಿ ಜನ ಸಂಖ್ಯೆಯ ಅಗತ್ಯತೆಯ ಅರಿವು ಮೂಡಬೇಕಾಗಿದೆ ಎಂದರು. ಸಭಾಧ್ಯಕ್ಷತೆಯನ್ನು ವಹಿಸಿದ್ದ ಸಾಮಾಜಿಕ ಚಿಂತಕಿ ಕಾಮಾಕ್ಷಿ ಜಿ. ಹೆಗ್ಡೆ ಮಾತನಾಡಿ, ಸಮಾಜದೊಳಗಿನ ಲೋಪದೋಷವನ್ನು ತಿದ್ದಿಕೊಂಡು ಸಂಘಟಿತ ಸಮಾಜದ ನಿರ್ಮಾಣಕ್ಕೆ ಶ್ರಮಿಸುತ್ತಿರುವ ನಡೆ ಶ್ಲಾಘನೀಯವೆಂದರು.
ವೇದಿಕೆಯಲ್ಲಿ ಮಾತೃ ಮಂಡಳಿಯ ಅಧ್ಯಕ್ಷೆ ಸುಜಾತ ಕೃಷ್ಣ ಆಚಾರ್ಯ, ಸಂಚಾಲಕಿ ಶ್ಯಾಮಲಾ ಶೆಣೈ, ಪ್ರಧಾನ ಕಾರ್ಯದರ್ಶಿ ಪುಷ್ಪಲತಾ ಜನಾರ್ದನ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಪುತ್ತೂರು ಶಾಸಕ ಸಂಜೀವ ಮಟಂದೂರು, ಗ್ರಾಮ ಪಂಚಾಯತ್ ಅಧ್ಯಕ್ಷೆ ಉಷಾಚಂದ್ರ ಮುಳಿಯ, ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕರುಣಾಕರ ಸುವರ್ಣ, ಸದಸ್ಯರಾದ ಜಯಂತ ಪೊರೋಳಿ, ಹರಿರಾಮಚಂದ್ರ , ಮಹೇಶ್ ಬಜತ್ತೂರು , ಪ್ರೇಮಲತಾ ಕಾಂಚನ, ಸುನಿಲ್ ಅನಾವು, ಗಣ್ಯರಾದ ವೆಂಕಟರಮಣ ರಾವ್, ಸುಂದರ ಗೌಡ, ಕಂಗ್ವೆ ವಿಶ್ವನಾಥ ಶೆಟ್ಟಿ, ರಮೇಶ್ ಎನ್., ಹರೀಶ್ ಕಿಣಿ, ಶ್ರೀನಿವಾಸ ಪಡಿಯಾರ್, ಸುಬ್ರಹ್ಮಣ್ಯ ಶೆಣೈ, ಸುಧಾಕರ ಶೆಟ್ಟಿ, ಅಶ್ವಿನ್ ಕಿಣಿ, ಶಶಿಧರ್ ಶೆಟ್ಟಿ, ರಾಮಚಂದ್ರ ಮಣಿಯಾಣಿ, ವಂದನಾ ಶರತ್, ಗೋಪಾಲಕೃಷ್ಣ ನಾಯಕ್, ಮಹೇಶ್ ಕಿಣಿ, ಹರೀಶ್ ಭಂಡಾರಿ, ಸುನಿಲ್ ಸಂಗಮ್, ಶೋಭಾ ದಯಾನಂದ, ಶಶಿಕಲಾ ಭಾಸ್ಕರ್, ಸೀತಾ ಸತೀಶ್, ಸುಗಂದಿ, ಸುಮನ್ ಲದ್ವಾ, ವಿದ್ಯಾಧರ ಜೈನ್, ಸುದರ್ಶನ್, ನಿತೇಶ್ ಗಾಣಿಗ, ದೇವರಾಜ್, ಪ್ರಶಾಂತ್ ನೆಕ್ಕಿಲಾಡಿ, ರವೀಂದ್ರ ಆಚಾರ್ಯ, ಗೀತಾಲಕ್ಷ್ಮೀ ತಾಳ್ತಜೆ, ಸುಭದ್ರಾ ಭಟ್, ವಸಂತಿ ಆಚಾರ್ಯ, ಮಾಧವ ಆಚಾರ್ಯ, ಮೂಲಚಂದ್ರ ಕಾಂಚನ, ಶಿಲ್ಪಾ ಆಚಾರ್ಯ, ಜಯಶ್ರೀ ಜನಾರ್ದನ್, ಮನೋಜ್ ಶೆಟ್ಟಿ, ಜಗದೀಶ್ ಶೆಟ್ಟಿ, ಎನ್. ಉಮೇಶ್ ಶೆಣೈ, ಹರೀಶ್ ನಾಯಕ್ ನಟ್ಟಿಬೈಲ್, ಯತೀಶ್ ಶೆಟ್ಟಿ, ಶ್ವೇತಾ ಶಶಿಧರ್, ಜತೀಂದ್ರ ಶೆಟ್ಟಿ , ಜಗದೀಶ್ ನಾಯಕ್ ಮತ್ತಿತರ ಪ್ರಮುಖರು ಭಾಗವಹಿಸಿದರು.
ಗಮನ ಸೆಳೆದ ಗಂಗಾರತಿ ಹಣತೆ ಸಮರ್ಪಣೆ: ಈ ಬಾರಿಯ ಗಂಗಾ ಪೂಜೆಯಲ್ಲಿ ಗಂಗಾರತಿಯನ್ನು ವಿಶೇಷವಾಗಿ ನಡೆಸಲಾಗಿದ್ದು, ಸಮಾಜದ ಎಲ್ಲಾ ವರ್ಗಕ್ಕೆ ಸೇರಿದ 7 ಮಂದಿ ತರುಣರ ಭಾಗೀಧಾರಿಕೆಯಲ್ಲಿ ಗಂಗಾರತಿಯನ್ನು ನಡೆಸಲಾಯಿತು. ಭಾಗವಹಿಸಿದ ಮಾತೆಯರು, ಮಹನೀಯರು, ಮಕ್ಕಳೂ ನದಿಗೆ ಹಣತೆಗಳನ್ನು ಸಮರ್ಪಿಸಿ ಪೂಜೆಯನ್ನು ನೆರವೇರಿಸಿದರು. ಗಂಗಾ ಮಾತಾಕೀ ಜೈ ಎಂಬ ಘೋಷಣೆಯೊಂದಿಗೆ ಮೊಳಗಿದ ಈ ಕಾರ್ಯಕ್ರಮದಲ್ಲಿ ಶಿಶು ಮಂದಿರದ ಪುಟಾಣಿಗಳ ಶಂಖನಾದ ಆಕರ್ಷಕವಾಗಿ ಮೂಡಿ ಬಂದಿತು.
ಸಮಾಜದ ಸಾಮರಸ್ಯಕ್ಕೆ ಕೊಂಡಿಯಾಗಿರುವ ಕಾರ್ಯಕ್ರಮ: ದೇವರನ್ನು ಪೂಜಿಸುವ ಹಕ್ಕು ಎಲ್ಲರದ್ದಾಗಿದೆ. ದೇವರ ಆರಾಧನೆಯ ವಿಚಾರದಲ್ಲಿ ಯಾರಿಗೆ ಆಗಲಿ ಯಾವುದೇ ಅಡೆತಡೆಗಳು ಇರಬಾರದೆಂಬ ಸಂದೇಶವನ್ನು ಸಾರುವ ರೀತಿಯಲ್ಲಿ ಆರೆಸ್ಸೆಸ್ಸ್ ಮುಂದಾಳು ಡಾ. ಕಲ್ಲಡ್ಕ ಪ್ರಭಾಕರ ಭಟ್ರವರ ಮಾರ್ಗದರ್ಶನದಲ್ಲಿ ಗಂಗಾ ಪೂಜೆಯು ಇಲ್ಲಿ ನಡೆಯುತ್ತಿದೆ. ಸಾಮಾಹಿಕವಾಗಿ ನಡೆಯುವ ಗಂಗಾಪೂಜೆಯ ಪ್ರಧಾನ ಪೂಜಾ ಕರ್ತೃವಾಗಿ ಕಳೆದ ಹದಿನಾರು ವರ್ಷಗಳಿಂದಲೂ ಉಪೇಕ್ಷಿತ ಸಮಾಜಕ್ಕೇ ಸೇರಿದ ದಂಪತಿಗಳೇ ಇಲ್ಲಿ ಪೂಜೆಯನ್ನು ನೆರವೇರಿಸುತ್ತಿದ್ದು, ಪೂಜೆಯ ಮೊದಲ ಗೌರವವೂ ಅವರಿಗೆ ಸಲ್ಲುತ್ತಿದೆ. ಮಾತ್ರವಲ್ಲದೆ ಗಂಗಾರತಿಯನ್ನು ನಡೆಸುವ ಅವಕಾಶ ಸಮಸ್ತ ಹಿಂದೂ ಸಮಾಜದ ಎಲ್ಲರೂ ಅಧಿಕಾರ ಹಾಗೂ ಹಕ್ಕುಳ್ಳವರೆಂಬ ಸಂದೇಶವನ್ನು ಸಾರುವಂತೆ ಗಂಗಾರತಿಯನ್ನು ನೆರವೇರಿಸಲಾಗಿದೆ.