ನೆಲ್ಯಾಡಿ: ಪ್ರಸ್ತುತ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಎಜುಕೇಶನಲ್ ಸೊಸೈಟಿ ಉಜಿರೆ ಇದರ ಆಡಳಿತಕ್ಕೆ ಒಳಪಟ್ಟಿರುವ ಕಾಂಚನ ವೆಂಕಟಸುಬ್ರಹ್ಮಣ್ಯಂ ಸ್ಮಾರಕ ಪ್ರೌಢಶಾಲೆಯಲ್ಲಿ ಕಳೆದ 32 ವರ್ಷಗಳಿಂದ ಸಂಸ್ಕೃತ ಶಿಕ್ಷಕರಾಗಿ, 1 ವರ್ಷದಿಂದ ಪ್ರಭಾರ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸುತ್ತಿರುವ ಸೂರ್ಯಪ್ರಕಾಶ ಅವರು ಫೆ.28ರಂದು ಸೇವೆಯಿಂದ ನಿವೃತ್ತರಾಗಲಿದ್ದಾರೆ. ಇವರು 14-12-1990ರಂದು ಕಾಂಚನ ವೆಂಕಟಸುಬ್ರಹ್ಮಣ್ಯಂ ಸ್ಮಾರಕ ಪ್ರೌಢಶಾಲೆಯಲ್ಲಿ ಸಂಸ್ಕೃತ ಅಧ್ಯಾಪಕರಾಗಿ ಸೇವೆಗೆ ಸೇರಿದ್ದರು.
2022ರ ಫೆಬ್ರವರಿಯಿಂದ ಪ್ರಭಾರ ಮುಖ್ಯೋಪಾಧ್ಯಾಯರಾಗಿ ಜವಾಬ್ದಾರಿ ನಿರ್ವಹಿಸಿದ್ದಾರೆ. ಕರ್ನಾಟಕ ರಾಜ್ಯ ಪಠ್ಯಪುಸ್ತಕ ರಚನಾ ಸಮಿತಿಯ ಹತ್ತನೇ ತರಗತಿಯ ತೃತೀಯ ಭಾಷೆ ಸಂಸ್ಕೃತ ಪಠ್ಯ ಪುಸ್ತಕ ರಚನೆ, ಎಸ್.ಎಸ್.ಎಲ್.ಸಿ ಪರೀಕ್ಷಾ ಮೌಲ್ಯಮಾಪನ ಕಾರ್ಯದಲ್ಲಿ ಕೇಂದ್ರದ ಮುಖ್ಯಸ್ಥರಾಗಿಯೂ ಕಾರ್ಯ ನಿರ್ವಹಿಸಿದ್ದರು.
ಮುದ್ಯ ಪಂಚಲಿಂಗೇಶ್ವರ ದೇವಾಲಯದ ಜೀರ್ಣೋದ್ಧಾರ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ, ಬನ್ನಂಜೆ ಗೋವಿಂದಾಚಾರ್ಯರ ನಿಕಟವರ್ತಿಯಾಗಿ ದೇವಾಲಯದ ಏಳಿಗೆಗಾಗಿ ಅವಿರತ ಶ್ರಮ ವಹಿಸಿದ್ದಾರೆ. ಇವರು ಬಜತ್ತೂರು ಮುದ್ಯ ಅನಂತಕೃಷ್ಣ ಉಡುಪ ಮತ್ತು ಲಲಿತಾ ದಂಪತಿ ಪುತ್ರ.