ನೂರು ವರ್ಷಗಳ ಬಳಿಕ ಶ್ರೀ ಸದಾಶಿವ ದೇವರಿಗೆ ಜಾತ್ರೋತ್ಸವ ಸಂಭ್ರಮ-ಮಾ.2ರಿಂದ ಆಲಡ್ಕ ಜಾತ್ರೆ

0

ಪುತ್ತೂರು: ನೂರು ವರ್ಷಗಳ ಬಳಿಕ ಗ್ರಾಮದಲ್ಲಿ ಜಾತ್ರೋತ್ಸವದ ಸಂಭ್ರಮ ಮನೆ ಮಾಡಿದೆ. ಮುಂಡೂರು ಗ್ರಾಮದ ಆಲಡ್ಕದಲ್ಲಿ ನೆಲೆಯಾಗಿರುವ ಶ್ರೀ ಸದಾಶಿವ ದೇವರಿಗೆ ಮಾ.02 ಮತ್ತು 03 ರಂದು ಜಾತ್ರೋತ್ಸವ ಹಾಗೂ ದೈವಗಳ ನೇಮೋತ್ಸವ ನಡೆಯುತ್ತಿದೆ. ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಬಳಿಕದ ಪ್ರಥಮ ವರ್ಷದ ಜಾತ್ರೋತ್ಸವ ಇದಾಗಿದೆ. ಮಾ.02 ರಂದು ಬೆಳಿಗ್ಗೆ ನೂತನ ರಂಗಮಂಟಪದಲ್ಲಿ ಗಣಹೋಮ, ಭಜನಾ ಕಾರ್ಯಕ್ರಮ ನಡೆಯಲಿದೆ. ಸಂಜೆ ಹಸಿರು ಹೊರೆಕಾಣಿಕೆ ಸಮರ್ಪಣೆ ನಡೆಯಲಿದ್ದು ಬಳಿಕ ಶ್ರೀ ಸತ್ಯನಾರಾಯಣ ಪೂಜೆ, ರಂಗಪೂಜೆ ನಡೆದು ಭಕ್ತಾದಿಗಳಿಗೆ ಪ್ರಸಾದ ವಿತರಣೆ ನಡೆಯಲಿದೆ. ರಾತ್ರಿ ನೂತನ ರಂಗಮಂಟಪದ ಲೋಕಾರ್ಪಣೆ ಕಾರ್ಯಕ್ರಮದ ಬಳಿಕ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ. ಸಭಾಕಾರ್ಯಕ್ರಮದ ಬಳಿಕ ಭಕ್ತಾದಿಗಳಿಗೆ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ‘ಕಲ್ಜಿಗದ ಕಾಳಿ ಮಂತ್ರದೇವತೆ ’ ಎಂಬ ತುಳು ನಾಟಕ ನಡೆಯಲಿದೆ.

ಧಾರ್ಮಿಕ ಸಭಾ ಕಾರ್ಯಕ್ರಮ
ಮಾ.2 ರಂದು ಸಂಜೆ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದರು ಆಶೀರ್ವಚನ ನೀಡಲಿದ್ದು, ಶಾಸಕರಾದ ಸಂಜೀವ ಮಠಂದೂರು ರಂಗಮಂಟಪದ ಉದ್ಘಾಟನೆ ಮಾಡಲಿದ್ದಾರೆ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ದಾನಿ ಮಿತ್ರಂಪಾಡಿ ಜಯರಾಮ ರೈ ಅಬುದಾಬಿಯವರು ಸಭಾಧ್ಯಕ್ಷತೆ ವಹಿಸಲಿದ್ದು ಅತಿಥಿಗಳಾಗಿ ಜಿಲ್ಲಾ ಧಾರ್ಮಿಕ ಪರಿಷತ್‌ನ ಸದಸ್ಯ ಮುರಳೀಕೃಷ್ಣ ಹಸಂತಡ್ಕ, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಮುಳಿಯ ಕೇಶವ ಪ್ರಸಾದ್, ವಾಸ್ತುತಜ್ಞ ಪಿ.ಜಿ ಜಗನ್ನೀವಾಸ ರಾವ್, ತಾಪಂ ಮಾಜಿ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಸಂಪ್ಯ ವೆಂಕಟೇಶ್ವರ ಸಾ ಮಿಲ್‌ನ ವಿಶ್ವನಾಥ ನಾಯಕ್, ಕೆದಂಬಾಡಿ ಗ್ರಾಪಂ ಅಧ್ಯಕ್ಷ ರತನ್ ರೈ ಕುಂಬ್ರ, ಮುಂಡೂರು ಗ್ರಾಪಂ ಅಧ್ಯಕ್ಷೆ ಪುಷ್ಪಾ ಭಾಗವಹಿಸಲಿದ್ದಾರೆ. ಶ್ರೀ ಸದಾಶಿವ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿಯವರಿಗೆ ಇದೇ ಸಂದರ್ಭದಲ್ಲಿ ಸನ್ಮಾನ ಕಾರ್ಯಕ್ರಮ ನಡೆಯಲಿದೆ.

ಜಾತ್ರೋತ್ಸವ /ನೇಮೋತ್ಸವ ಸಂಭ್ರಮ
ಮಾ.03 ರಂದು ಬೆಳಿಗ್ಗೆ ದೇವತಾ ಪ್ರಾರ್ಥನೆ, ಮಹಾಗಣಪತಿ ಪಂಚವಿಂಶತಿ ಕಲಶಪೂಜೆ, ಮಧ್ಯಾಹ್ನ ಕಲಶಾಭಿಷೇಕ, ಮಹಾಪೂಜೆ ನಡೆದು ಭಕ್ತಾದಿಗಳಿಗೆ ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ದೈವಗಳ ಭಂಡಾರ ತೆಗೆಯುವ ಕಾರ್ಯಕ್ರಮ ನಡೆದು ಶ್ರೀ ದೇವರಿಗೆ ಮಹಾಪೂಜೆ, ದೇವರ ಬಲಿ ಹೊರಟು ಶ್ರೀ ಭೂತಬಲಿ ಮಹೋತ್ಸವ, ವಸಂತಕಟ್ಟೆ ಪೂಜೆ, ದರ್ಶನ ಬಲಿ, ಬಟ್ಟಲು ಕಾಣಿಕೆ, ಪ್ರಸಾದ ವಿತರಣೆ, ವೈದಿಕ ಮಂತ್ರಾಕ್ಷತೆ ನಡೆದು ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ 10 ಗಂಟೆಯಿಂದ ಶ್ರೀ ಕ್ಷೇತ್ರದ ದೈವಗಳಿಗೆ ವಿಜೃಂಭಣೆಯ ನೇಮೋತ್ಸವ ನಡೆಯಲಿದೆ.

ಎಲ್ಲಾ ಕಾರ್ಯಕ್ರಮಗಳಲ್ಲಿ ಊರಪರವೂರ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ದೇವರ ಗಂಧಪ್ರಸಾದ ಹಾಗೂ ಅನ್ನಪ್ರಸಾದವನ್ನು ಸ್ವೀಕರಿಸುವಂತೆ ದೇವಸ್ಥಾನದ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here