ಪುತ್ತೂರು: ಬಲ್ನಾಡು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿದ್ದ ಶರೀಫ್ ರವರ ವರ್ಗಾವಣೆಯಿಂದ ತೆರವಾದ ಸ್ಥಾನಕ್ಕೆ ಬಂಟ್ವಾಳ ತಾಲೂಕಿನ ಕನ್ಯಾನ ಗ್ರಾ.ಪಂ. ಪ್ರಭಾರ ಪಿಡಿಓ ದೇವಪ್ಪ ಪಿ.ಆರ್. ವರ್ಗಾವಣೆಗೊಂಡು ಆಗಮಿಸಿದ್ದಾರೆ. ದೇವಪ್ಪರವರು ಮುಂಭಡ್ತಿ ಪಡೆದು ಬಲ್ನಾಡು ಗ್ರಾಮ ಪಂಚಾಯತಿಗೆ ವರ್ಗಾವಣೆ ಪಡೆದಿದ್ದಾರೆ.
ಅರಿಯಡ್ಕ ಗ್ರಾಮದ ಮಾಡ್ನೂರು ನಿವಾಸಿಯಾಗಿರುವ ದೇವಪ್ಪ ಪಿ.ಆರ್.ರವರು ಕೊಳ್ತಿಗೆ ಮಂಡಲ ಪಂಚಾಯತ್, ಅರಿಯಡ್ಕ ಗ್ರಾ.ಪಂನಲ್ಲಿ ಗುಮಾಸ್ತರಾಗಿ, ಕಾಣಿಯೂರು ಗ್ರಾ.ಪಂನಲ್ಲಿ ಗ್ರೇಡ್-2 ಕಾರ್ಯದರ್ಶಿಯಾಗಿ, ಸಜಿಪಮುನ್ನೂರು ಗ್ರಾ.ಪಂನಲ್ಲಿ ಗ್ರೇಡ್-1 ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸಿದ್ದರು. ನಂತರ ಬಂಟ್ವಾಳ ತಾಲೂಕಿನ ಪಜೇರು, ಪುದು, ವೀರಕಂಭ, ತುಂಬೆ, ಬಾಳ್ತಿಲ ಗ್ರಾ.ಪಂಗಳಲ್ಲಿ ಪ್ರಭಾರ ಪಿಡಿಓ ಆಗಿ ಕರ್ತವ್ಯ ನಿರ್ವಹಿಸಿ 2017ರಲ್ಲಿ ಪಿಡಿಓ ಆಗಿ ಮುಂಭಡ್ತಿ ಪಡೆದು ಸವಣೂರಿಗೆ ವರ್ಗಾವಣೆಗೊಂಡಿದ್ದರು. ಇದೇ ಸಮಯದಲ್ಲಿ ಉಂಟಾದ ವಿವಾದಕ್ಕೆ ಸಂಬಂಧಿಸಿ ಹಿಂಭಡ್ತಿ ಪಡೆದು ಮಾಣಿಲ, ಕರೋಪಾಡಿ ಹಾಗೂ ಕನ್ಯಾನದಲ್ಲಿ ಪ್ರಭಾರ ಪಿಡಿಓ ಆಗಿ ಕರ್ತವ್ಯ ನಿರ್ವಹಿಸಿದ್ದರು. ಇದೇ ವಿಚಾರದಲ್ಲಿ ದೇವಪ್ಪರವರು ನ್ಯಾಯಾಲಯದ ಮೆಟ್ಟಿಲೇರಿದ್ದು ನ್ಯಾಯಾಲಯ ದೇವಪ್ಪರವರ ಅರ್ಜಿಯನ್ನು ಪುರಸ್ಕರಿಸಿ ಮುಂಭಡ್ತಿಯೊಂದಿಗೆ ಹಿಂಭಡ್ತಿ ನೀಡಿದ ಅವಧಿಯ ವೇತನ ಹಾಗೂ ಇತರ ಸೌಲಭ್ಯವನ್ನು ನೀಡುವಂತೆ ಆದೇಶ ನೀಡಿದೆ. ಈ ಹಿನ್ನೆಲೆಯಲ್ಲಿ ದೇವಪ್ಪರವರು ಖಾಯಂ ಪಿಡಿಓ ಆಗಿ ಮತ್ತೆ ಮುಂಭಡ್ತಿ ಪಡೆದು ಬಲ್ನಾಡು ಗ್ರಾ.ಪಂಗೆ ವರ್ಗಾವಣೆಗೊಂಡಿದ್ದಾರೆ