ಪುತ್ತೂರು: ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗಳು ಮಾ.9ರಿಂದ ಆರಂಭವಾಗಿದ್ದು ಮೊದಲ ದಿನ ಪರೀಕ್ಷೆ ನಿರಾಂತಕವಾಗಿ ನಡೆದಿದೆ. ಪುತ್ತೂರು ಕಡಬ ಸೇರಿದಂತೆ ದ.ಕ.ಜಿಲ್ಲೆಯ 52 ಪರೀಕ್ಷಾ ಕೇಂದ್ರಗಳಲ್ಲಿ ಒಟ್ಟು 242 ವಿದ್ಯಾರ್ಥಿಗಳು ಗೈರಾಗಿದ್ದಾರೆ.
ಪುತ್ತೂರು, ಕಡಬದಲ್ಲಿ 10 ಪರೀಕ್ಷಾ ಕೇಂದ್ರ ಸೇರಿದಂತೆ ದ.ಕ.ಜಿಲ್ಲೆಯಲ್ಲಿ ಒಟ್ಟು 52 ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿತ್ತು. ಪುತ್ತೂರುನಲ್ಲಿ 5, ಕಡಬದಲ್ಲಿ 5, ಬೆಳ್ತಂಗಡಿಯಲ್ಲಿ 6, ಮಂಗಳೂರು ತಾಲೂಕಿನಲ್ಲಿ 18, ಬಂಟ್ವಾಳದಲ್ಲಿ 6, ಸುಳ್ಯದಲ್ಲಿ 2, ಮೂಡುಬಿದಿರೆಯಲ್ಲಿ 4, ಮುಲ್ಕಿಯಲ್ಲಿ 2, ಉಳ್ಳಾಲ ತಾಲೂಕಿನಲ್ಲಿ 4 ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿತ್ತು. ಸರಕಾರಿ 15, ಅನುದಾನಿತ 21, ಅನುದಾನ ರಹಿತ 16 ಕಾಲೇಜುಗಳಲ್ಲಿ ಕೇಂದ್ರಗಳನ್ನು ತೆರೆಯಲಾಗಿತ್ತು.
ಮಾ.9ರಂದು ನಡೆದ ಕನ್ನಡ ಪರೀಕ್ಷೆಗೆ 19,385 ರೆಗ್ಯುಲರ್ ವಿದ್ಯಾರ್ಥಿಗಳು ಹೆಸರು ನೋಂದಾಯಿಸಿದ್ದು 19,169 ವಿದ್ಯಾರ್ಥಿಗಳು ಹಾಜರಾಗಿ 216 ವಿದ್ಯಾರ್ಥಿಗಳು ಗೈರಾಗಿದ್ದಾರೆ. ಕನ್ನಡ ಪರೀಕ್ಷೆಗೆ 120 ಪುನರಾವರ್ತಿತ ವಿದ್ಯಾರ್ಥಿಗಳು ಹೆಸರು ನೋಂದಾಯಿಸಿದ್ದು 94 ವಿದ್ಯಾರ್ಥಿಗಳು ಹಾಜರಾಗಿ 26 ವಿದ್ಯಾರ್ಥಿಗಳು ಗೈರಾಗಿದ್ದಾರೆ. ಅರಬಿಕ್ ಪರೀಕ್ಷೆಗೆ 134 ವಿದ್ಯಾರ್ಥಿಗಳು ಹೆಸರು ನೋಂದಾಯಿಸಿದ್ದು ಎಲ್ಲಾ ವಿದ್ಯಾರ್ಥಿಗಳು ಹಾಜರಾಗಿದ್ದಾರೆ. ಬೆಳಗ್ಗೆ 10:15ಕ್ಕೆ ಪರೀಕ್ಷೆ ಆರಂಭಗೊಂಡು 1:15ಕ್ಕೆ ಮುಕ್ತಾಯಗೊಂಡಿದ್ದು, ಯಾವುದೇ ತೊಂದರೆಯಿಲ್ಲದೆ ಪರೀಕ್ಷೆಗಳು ನಡೆದಿದೆ ಎಂದು ಡಿಡಿಪಿಐ ಮಾಹಿತಿ ನೀಡಿದ್ದಾರೆ.
ಮಾ.10ರಂದು ಯಾವುದೇ ಪರೀಕ್ಷೆ ನಡೆಯುವುದಿಲ್ಲ. ಮಾ.11ರಂದು ಗಣಿತ ಶಾಸ್ತ್ರ ಮತ್ತು ಶಿಕ್ಷಣ ಶಾಸ್ತ್ರ ಪರೀಕ್ಷೆ ನಡೆಯಲಿದೆ.