ಪುತ್ತೂರು: ದ.ಕ ಜಿಲ್ಲಾ ಪ್ರಗತಿಪರ ರೈತ ಮಹಿಳೆ ಪ್ರಶಸ್ತಿಗೆ ಡಾ| ಆಶಾ ಶಂಕರ್ ಭಂಡಾರಿ ಆಯ್ಕೆಯಾಗಿದ್ದಾರೆ. ಶಿವಮೊಗ್ಗದ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಮಾ.17 ರಿಂದ 20ರವರೆಗೆ ನಡೆಯಲಿರುವ ಕೃಷಿ ಮತ್ತು ತೋಟಗಾರಿಕಾ ಮೇಳದಲ್ಲಿ ಜರುಗಲಿರುವ ಪ್ರಗತಿಪರ ರೈತ/ ರೈತ ಮಹಿಳೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪುತ್ತೂರು ತಾಲೂಕಿನ ಕುರಿಯ ಗ್ರಾಮದ ಡಿಂಬ್ರಿಗುತ್ತು ಡಾ|ಆಶಾ ಶಂಕರ್ ಭಂಡಾರಿಯವರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದ.ಕ ಜಿಲ್ಲಾ ಪ್ರಗತಿಪರ ರೈತ ಮಹಿಳೆ ಪ್ರಶಸ್ತಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಪ್ರಸ್ತುತ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯವು ಸಮಗ್ರ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡು ಪ್ರಗತಿಯತ್ತ ಸಾಗುತ್ತಿರುವ ರೈತ/ರೈತ ಮಹಿಳೆಯರ ಸಾಧನೆಗಳನ್ನು ಗುರುತಿಸಲು ಪ್ರಗತಿಪರ ರೈತ/ರೈತ ಮಹಿಳೆ ಪ್ರಶಸ್ತಿಯನ್ನು ನೀಡುತ್ತಿದೆ.
ದಶಮಾನಗಳಿಂದ ಭಾರತ, ಜಪಾನ್, ಯು.ಏ.ಇ., ಡೆನ್ಮಾರ್ಕ್, ಸಿಂಗಾಪುರ್, ಚೀನಾ, ಹಾಂಗ್ಕಾಂಗ್ ಮುಂತಾದ ದೇಶ-ವಿದೇಶಗಳ ನಗರ ಪ್ರದೇಶಗಳಲ್ಲಿ ಪ್ರತಿಷ್ಟಿತ ಬಹುರಾಷ್ಟ್ರೀಯ ಐಟಿ ಕಂಪೆನಿಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದರೂ ದೇಶದ ಬೆನ್ನೆಲುಬಾದ ಕೃಷಿ ಕ್ಷೇತ್ರದಲ್ಲಿ ಇತ್ತೀಚೆಗೆ ಇವರು ಆಸಕ್ತಿ ತೋರಿಸಿ ಕೃಷಿ ಇಲಾಖೆ, ತೋಟಗಾರಿಕಾ ಇಲಾಖೆ ಮತ್ತು ಅರಣ್ಯ ಇಲಾಖೆಗಳ ಸಮನ್ವಯದೊಂದಿಗೆ ಸಮಗ್ರ ಕೃಷಿ ಅಭಿವೃದ್ಧಿ ಮಾಡಿರುತ್ತಾರೆ. ಕೃಷಿ ಪ್ರಧಾನ ಕುಟುಂಬದಲ್ಲಿ ಜನಿಸಿದ ಡಾ|ಆಶಾರವರಿಗೆ ತಂದೆ ಡಿಂಬ್ರಿಗುತ್ತು ಕೊರಗಪ್ಪ ರೈ ಪ್ರೋತ್ಸಾಹ ನೀಡಿದ್ದಾರೆ.
ಡಾ. ಆಶಾರವರು ತಮ್ಮ ಪ್ರಾಥಮಿಕ, ಪ್ರೌಡ ಹಾಗೂ ಪದವಿಪೂರ್ವ ವಿದ್ಯಾಭ್ಯಾಸವನ್ನು ಪುತ್ತೂರು ಹಾಗೂ ಪದವಿ ಶಿಕ್ಷಣದೊಂದಿಗೆ ಎಂ.ಎಸ್.ಡಬ್ಲೂ ಮತ್ತು ಪಿ.ಎಚ್.ಡಿ.ಯನ್ನು ಮೈಸೂರಿನಲ್ಲಿ ಪೂರೈಸಿದ್ದಾರೆ, ಸುಮಾರು ಎರಡು ದಶಕಗಳಿಂದ ಕರ್ನಾಟಕ ಸರಕಾರ ಮತ್ತು ಹಲವಾರು ಭಾರತೀಯ ಹಾಗೂ ಮಲ್ಟಿ ನ್ಯಾಷನಲ್ ಕಾರ್ಪೊರೇಟರ್ ಕಂಪೆನಿಗಳಲ್ಲಿ ಮಾನವ ಸಂಪನ್ಮೂಲ ವಿಭಾಗದಲ್ಲಿ ಹಿರಿಯ ಅಧಿಕಾರಿಯಾಗಿ ಕೆಲಸ ನಿರ್ವಹಿಸಿದ್ದಾರೆ. ಸ್ನಾತಕೋತ್ತರ ಪದವಿ ಎಮ್.ಎಸ್.ಡಬ್ಲೂ. ಲ್ಲಿ ಮೈಸೂರು ವಿಶ್ವವಿದ್ಯಾನಿಲಯ ಮಟ್ಟದಲ್ಲಿ ಚಿನ್ನದ ಪದಕದೊಂದಿಗೆ ಪ್ರಥಮ ರಾಂಕ್ ಪಡೆದಿದ್ದಾರೆ.
ಇವರು ಬಾಲ್ಯದಿಂದಲೇ ಕ್ರೀಡಾಸ್ಪರ್ಧೆಗಳಲ್ಲಿ ಭಾಗವಹಿಸಿ ತಾಲೂಕು ಮತ್ತು ಜಿಲ್ಲಾ ಮಟ್ಟಗಳಲ್ಲಿ ಹಲವಾರು ಬಹುಮಾನಗಳನ್ನು ಗೆದ್ದುಕೊಂಡಿದ್ದರು. ದ್ವಿತೀಯ ಪಿಯುಸಿಯಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದಲ್ಲಿ ಹೆಪ್ಟಾತ್ತಲಾನ್ ಮತ್ತು ಡಿಸ್ಕಸ್ ತ್ರೋಗಳಲ್ಲಿ ಎರಡು ಗೋಲ್ಡ್ ಮೆಡಲ್, ಮಂಗಳೂರು ಮತ್ತು ಮೈಸೂರಿನಲ್ಲಿದ್ದ ಕರ್ನಾಟಕ ರಾಜ್ಯ ಕ್ರೀಡಾ ಹಾಸ್ಟೆಲ್ಗೆ ಆಯ್ಕೆಯಾಗಿ ಜಿಲ್ಲಾಮಟ್ಟ, ರಾಜ್ಯಮಟ್ಟ, ಯೂನಿವರ್ಸಿಟಿ ಮಟ್ಟ ಹಾಗೂ ಅಂತರ ವಿಶ್ವವಿದ್ಯಾನಿಲಯ ಮಟ್ಟದಲ್ಲಿ ಹತ್ತು ಹಲವು ಚಿನ್ನ, ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ಗೆದ್ದುಕೊಂಡು ರಾಜ್ಯದ ಮುಖ್ಯಮಂತ್ರಿ ದಿವಂಗತ ರಾಮಕೃಷ್ಣ ಹೆಗಡೆಯವರಿಂದ ಪ್ರಶಸ್ತಿ ಪಡೆದಿದ್ದರು. ಭಾರತ ಸರಕಾರದ ಮಿನಿಸ್ಟರಿ ಆಫ್ ಯೂತ್ ಸರ್ವಿಸ್ ಅಂಡ್ ಸ್ಪೋರ್ಟ್ಸ್ ಏರ್ಪಡಿಸಿದ 1992ರಲ್ಲಿ ದೆಹಲಿಯಲ್ಲಿ ನಡೆದ ನ್ಯಾಷನಲ್ ಇಂಟಿಗ್ರೇಷನ್ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿದರು. ರಾಷ್ಟ್ರಮಟ್ಟದ ಅಥ್ಲೆಟಿಕ್ಸ್ನಲ್ಲಿ ಮೂರು ಚಿನ್ನದ ಪದಕ ಗೆದ್ದುಕೊಂಡರು.
ಬಹು ರಾಷ್ಟ್ರೀಯ ಕಂಪೆನಿಗಳಾದ ಸೋನಿ ಸಾಫ್ಟವೇರ್, ಡಾನ್ ಸ್ಕೆ ಬ್ಯಾಂಕ್ ಐ.ಟಿ. ಕಂಪೆನಿಗಳಲ್ಲಿ ಇಂಡಿಯ ಹೆಚ್. ಆರ್. ವಿಭಾಗ ಮುಖ್ಯಸ್ಥರಾಗಿ ಕೆಲಸ ನಿರ್ವಹಿಸುತ್ತಿರುವಾಗ ಕಾರ್ಪೊರೇಟ್ ಮಟ್ಟದಲ್ಲಿ ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಇವರ ಪತಿ ಹೇರೂರು ಶಂಕರ ಭಂಡಾರಿಯವರು ಮಲ್ಟಿ ನ್ಯಾಷನಲ್ ಐಟಿ ಕಂಪೆನಿಗಳಲ್ಲಿ ಫೈನಾನ್ಸ್ ಡೈರೆಕ್ಟರ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಇವರ ಪುತ್ರ ಕೃಷ್ಣ ಪ್ರಸಾದ್ ಭಂಡಾರಿಯವರು ಅಂತಿಮ ವರ್ಷದ ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ಪದವಿ ಪಡೆಯುತ್ತಿದ್ದಾರೆ. ಪುತ್ರಿ ಲಕ್ಷ್ಮಿ ಭಂಡಾರಿಯವರು ಪಿಯುಸಿ ಓದುತ್ತಿದ್ದಾರೆ.