ಪ್ರತೀ ದಿನ ತಮಗಿಷ್ಟ ಬಂದ ಆಹಾರ ಸೇವಿಸುವ ಶ್ರೀಮಂತರೂ ಕೂಡಾ ಹೊಟ್ಟೆ ತುಂಬುವ ಗತಿಯಿಲ್ಲದ ಬಡ ನಿರ್ಗತಿಕರ ಹಸಿವಿನ ಕಷ್ಟ, ಬಳಲನ್ನು ಸ್ವತಃ ಅನುಭವಿಸಲು ರಂಝಾನ್ನಲ್ಲಿ ಸಿದ್ದರಾಗುತ್ತಾರೆ. ಆರ್ಥಿಕ ಅಡಚಣೆಯಿಂದ ಬಡವರು ಅನುಭವಿಸುವ ಹಸಿವು ಮತ್ತು ದಾಹವನ್ನು ಶ್ರೀಮಂತರು ಉಪವಾಸದ ಮೂಲಕ ಆಸ್ವಾದಿಸುವಾಗ ಸ್ವಾಭಾವಿಕವಾಗಿ ಅವರೆಡೆಯಲ್ಲಿ ಮಾನಸಿಕ ಒಗ್ಗಟ್ಟು ಹಾಗೂ ಪರಸ್ಪರ ಸಹಾಯ ಸಹಕಾರದ ಮನೋಭಾವವೂ ಸೃಷ್ಟಿಯಾಗುವುದಲ್ಲದೇ ನಾವೆಲ್ಲರೂ ಸಮಾನರು ಎಂಬ ಸತ್ಯವೂ ಮನದಟ್ಟಾಗುತ್ತದೆ.
@ಯೂಸುಫ್ ರೆಂಜಲಾಡಿ
ಪುತ್ತೂರು: ಪವಿತ್ರ ರಂಝಾನ್ ತಿಂಗಳ ಆಗಮನವಾಗಿದೆ. ಮುಸಲ್ಮಾನ ಬಾಂಧವರ ಪಾಲಿಗೆ ರಂಝಾನ್ ತಿಂಗಳು ಅತೀ ಶ್ರೇಷ್ಠತೆಯುಳ್ಳ ಮಾಸವಾಗಿದೆ. ಈ ಬಾರಿ ಮಾ.23ರಿಂದ ಒಂದು ತಿಂಗಳು ಉಪವಾಸ ವೃತ ನಡೆಯಲಿದೆ. ಒಳಿತಿಗೆ ದುಪ್ಪಟ್ಟು ಪುಣ್ಯವೂ ಕೆಡುಕಿಗೆ ದುಪ್ಪಟ್ಟು ಪಾಪವೂ ಲಭಿಸಲ್ಪಡುವ, ಪವಿತ್ರ ಖುರ್ಆನ್ ಅವತೀರ್ಣಗೊಂಡ ತಿಂಗಳಾಗಿರುವ ರಂಝಾನ್ನಲ್ಲಿ ಮುಸ್ಲಿಮರು ಒಂದು ತಿಂಗಳು ಮುಂಜಾನೆಯಿಂದ ಮುಸ್ಸಂಜೆಯವರೆಗೆ ಅನ್ನ, ಪಾನೀಯಗಳನ್ನು ಉಪೇಕ್ಷಿಸಿ ನಿರಾಹಾರಿಯಾಗಿ ಹಸಿವಿನ ಹಾಗೂ ದಾಹದ ಅನುಭವವನ್ನು ಪಡೆಯುತ್ತಾರೆ. ಇದು ಇಸ್ಲಾಮಿನಲ್ಲಿ ಅರ್ಹರಿಗೆ ಕಡ್ಡಾಯವೂ ಆಗಿದೆ.
ರಂಝಾನ್ ತಿಂಗಳು ವಿಶೇಷವಾಗಿ ಅಲ್ಲಾಹನ ಆರಾಧನೆಗೆ ಹೆಚ್ಚಿನ ಸಮಯವನ್ನು ಮೀಸಲಿರಿಸಬೇಕಾದ ಮಾಸವಾಗಿದ್ದು ಎಲ್ಲಾ ರೀತಿಯ ಕೆಡುಕುಗಳಿಗೂ ಅಂತ್ಯ ಹಾಡಿ ಆತ್ಮ ಶುದ್ದೀಕರಣದೊಂದಿಗೆ ಬದಲಾವಣೆ ಆಗಬೇಕಾದ ಮಾಸವೂ ಆಗಿದೆ. ರಂಝಾನ್ನಲ್ಲಿ ದಾನ ಧರ್ಮಗಳನ್ನು ಅಧಿಕಗೊಳಿಸುವುದು, ಉಪವಾಸಿಗರಿಗೆ ಇಫ್ತಾರ್ ಏರ್ಪಡಿಸುವುದು, ಖುರ್ಆನ್ ಪಾರಾಯಣ ಅಧಿಕಗೊಳಿಸುವುದು, ರಾತ್ರಿ ವಿಶೇಷ ನಮಾಜ್ ‘ತರಾವೀಹ್’ ನಿರ್ವಹಿಸುವುದು, ಜೀವನದಲ್ಲಿ ಮಾಡಿರುವ ತಪ್ಪು, ಕೆಡುಕುಗಳಿಗೆ ಪಶ್ಚಾತಾಪ ಪಡುವುದು, ನಮ್ಮಿಂದ ಯಾರಿಗಾದರೂ ನೋವು, ತೊಂದರೆಗಳಾಗಿದ್ದಲ್ಲಿ ಅವರಲ್ಲಿ ಕ್ಷಮೆ ಯಾಚಿಸುವುದು… ಹೀಗೆ ಹತ್ತು ಹಲವು ಸತ್ಕರ್ಮಗಳನ್ನು ಮೈಗೂಡಿಸಿಕೊಳ್ಳಲು ರಂಝಾನ್ ಉತ್ತಮ ಸಂದರ್ಭವಾಗಿದೆ.
ಆರೋಗ್ಯದ ದೃಷ್ಟಿಯಲ್ಲೂ ಉಪವಾಸ ಅತ್ಯಂತ ಮಹತ್ವವಾದುದು. ವರ್ಷದ 12 ತಿಂಗಳುಗಳ ಪೈಕಿ 11 ತಿಂಗಳಿನಲ್ಲಿ ನಿರಂತರವಾಗಿ ಸೇವಿಸುತ್ತಿದ್ದ ಆಹಾರ, ಪಾನೀಯಗಳನ್ನು ಒಂದು ತಿಂಗಳ ಕಾಲ ಮುಂಜಾನೆಯಿಂದ ಮುಸ್ಸಂಜೆವರೆಗೆ ತ್ಯಜಿಸುವುದರಿಂದ ಶರೀರ ಮತ್ತು ಮನಸ್ಸನ್ನು ಸ್ವಯಂ ನಿಯಂತ್ರಣದಲ್ಲಿಡಲು ಸಾಧ್ಯವಾಗುತ್ತದೆ. ವೈಜ್ಞಾನಿಕವಾಗಿಯೂ ಉಪವಾಸ ಬಹು ಉಪಯುಕ್ತವಾಗಿದೆ. ಅಲ್ಲದೇ ಮನುಷ್ಯರಿಗೆ ನಿರಂತರವಾಗಿ ಹೊಟ್ಟೆ ತುಂಬುವಾಗ ಅವರ ಮನಸ್ಸು, ಶರೀರ ಪಾಪ ಕೃತ್ಯಗಳತ್ತ ಆಕರ್ಷಿತವಾಗುತ್ತಿದ್ದು ಅದನ್ನು ಹಸಿವು ಮತ್ತು ದಾಹದ ಮೂಲಕ ಮಾತ್ರ ಕಡಿವಾಣ ಹಾಕಲು ಸಾಧ್ಯ. ವೃತ ಆಚರಿಸುವವರು ಎಲ್ಲ ವಿಧದ ಕೆಡುಕಿನ ಕ್ಷೇತ್ರದಿಂದಲೂ, ಅನಗತ್ಯ ಮಾತುಗಳಿಂದಲೂ, ಸಂಪೂರ್ಣವಾಗಿ ಮುಕ್ತರಾಗಿರಬೇಕು. ಇಲ್ಲದಿದ್ದಲ್ಲಿ ಹಗಲಿಡೀ ಹಸಿದು ಬಳಲಿದ ವ್ಯಕ್ತಿಗೆ ಉಪವಾಸದ ನೈಜ ಫಲ ಲಭಿಸಲಾರದು.
ಒಟ್ಟಿನಲ್ಲಿ ರಂಝಾನ್ ತಿಂಗಳು ಪ್ರತಿಯೊಬ್ಬರ ಪಾಲಿನ ಬದಲಾವಣೆಯ ಮಾಸವಾಗಿ ಪರಿವರ್ತನೆಯಾಗಲಿ. ಸಮಾಜದಲ್ಲಿ ಸೌಹಾರ್ದತೆ ಗಟ್ಟಿಗೊಳ್ಳಲಿ ಎಂಬ ಆಶಯದೊಂದಿಗೆ ಸರ್ವರಿಗೂ ರಂಝಾನ್ ಶುಭಾಶಯಗಳು.