ಶೃಂಗೇರಿಯಲ್ಲಿ ನಿರ್ಮಾಣವಾದ ಶಾರದೆ ವಿಗ್ರಹ ಕಾಶ್ಮೀರದಲ್ಲಿ ಪ್ರತಿಷ್ಠೆ: ಸುಬ್ರಹ್ಮಣ್ಯ ನಟ್ಟೋಜ
ಪುತ್ತೂರು: ಶೃಂಗೇರಿಯಲ್ಲಿ ನಿರ್ಮಾಣವಾದ 3 ಅಡಿ ಎತ್ತರ, 100 ಕೆ.ಜಿ ತೂಕದ ಪಂಚಲೋಹದ ಶಾರದಾ ಮಾತೆಯ ವಿಗ್ರಹವನ್ನು ಪಾಕ್ ಗಡಿ ಬಳಿಯ ತೀತ್ವಾಲ್ ಬಳಿ ಇತ್ತೀಚೆಗೆ ಯಶಸ್ವಿಯಾಗಿ ಪ್ರತಿಷ್ಠಾಪನೆ ಮಾಡಲಾಗಿದೆ. ತನ್ಮೂಲಕ ಒಂದನೇ ಶತಮಾನದಿಂದಲೂ ಹಿಂದೂಗಳ ಧಾರ್ಮಿಕ ಶ್ರದ್ಧಾಕೇಂದ್ರವಾಗಿದ್ದು, ತದನಂತರ ದುಷ್ಟ ಅರಸರು ಹಾಗೂ ಪಾಕ್ ದಾಳಿಯಿಂದ ಶಿಥಿಲವಾಗಿದ್ದ ಈ ಶಾರದಾದೇವಿಯ ಆರಾಧನಾ ಸ್ಥಳ ಮತ್ತೆ ಪುನರುಜ್ಜೀವಗೊಂಡಿದೆ ಎಂದು ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಹೇಳಿದರು.
ಪುತ್ತೂರಿನ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಮಹಾವಿದ್ಯಾಲಯದಲ್ಲಿ “ಕಾಶ್ಮೀರದ ಶಾರದಾ ಪೀಠದಲ್ಲಿ ಶಾರದೆ ದೇಗುಲ ಪ್ರತಿಷ್ಠಾಪನೆ” ಕುರಿತು ವಿಶೇಷ ಉಪನ್ಯಾಸ ನೀಡಿ ಮಾ.29ರಂದು ಮಾತನಾಡಿದರು.
ಈ ಹಿಂದೆ ಇದ್ದ ಈ ದೇಗುಲದ ಸುತ್ತುಪೌಳಿಯನ್ನು ಮತಾಂಧ ರಾಜರು ನಾಶ ಮಾಡಿದ್ದರು. ಬಳಿಕ ಭಾರತ ಪಾಕಿಸ್ಥಾನ ಯುದ್ಧ ಸಂದರ್ಭದಲ್ಲಿ ಪಾಕಿಸ್ತಾನ ಸೈನಿಕರು ದೇಗುಲವನ್ನು ಸಂಪೂರ್ಣ ಹಾಳುಗೆಡವಿದರು. ಇದರ ಪಕ್ಕದಲ್ಲೇ ಕಿಶನ್ ಗಂಗಾ ನದಿ ಹರಿಯುತ್ತಿದ್ದು, ಅದರಾಚೆಗೆ ಪಾಕ್ ಆಕ್ರಮಿತ ಗಡಿ ಭಾಗವಿದೆ. ದೇಗುಲದ ಕೂಗಳತೆ ದೂರದಲ್ಲಿ ಪಾಕಿಸ್ತಾನ ಅತಿಕ್ರಮಿತ ಭಾರತದ ಪ್ರದೇಶವಿದೆ. ಈಗ ಸ್ಥಾಪನೆಯಾಗಿರುವ ಶಾರದಾ ಮಂದಿರ ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಸರ್ವಜ್ಞ ಪೀಠಕ್ಕಿಂದ ಏಳು ಕಿಲೋಮೀಟರ್ ದೂರದಲ್ಲಿದೆ. ಇದೀಗ ಸರ್ವಜ್ಞ ಪೀಠವನ್ನು ಅಲಂಕರಿಸಿದ ಶ್ರೀ ಶಂಕರಾಚಾರ್ಯರು ನಡೆದಾಡಿದ ಜಾಗದಲ್ಲಿ ಮತ್ತೆ ಶಾರದ ಮಾತೆಯ ವಿಗ್ರಹ ಈಗ ಪ್ರತಿಷ್ಠಾಪನೆಗೊಂಡಂತಾಗಿದೆ. ಭಾರತೀಯ ಸೇನಾಧಿಕಾರಿಗಳ ಸಹಕಾರದೊಂದಿಗೆ ದೇಗುಲದಲ್ಲಿ ಪೂಜಾ ಕಾರ್ಯಗಳು ನಡೆದವು ಎಂದು ಮಾಹಿತಿ ನೀಡಿದರು.
ಕಾಶ್ಮೀರ ಪಂಡಿತರ ನೇತೃತ್ವ:
ದೇಗುಲ ನಾಶದ ಬಳಿಕ ಸ್ಥಳೀಯ ಕಾಶ್ಮೀರಿ ಪಂಡಿತರೂ ಸ್ಥಳದಿಂದ ದೂರವಾಗಿದ್ದರು. ಆದರೆ ಇದೀಗ ಮತ್ತೆ ದೇಗುಲದತ್ತ ಆಗಮಿಸುತ್ತಿದ್ದಾರೆ. ರವೀಂದ್ರ ಪಂಡಿತ್ ಎಂಬವರ ನೇತೃತ್ವದಲ್ಲಿ ದೇಗುಲ ನಿರ್ಮಾಣವಾಗಿದೆ. ವಿಶೇಷವೆಂದರೆ ಸ್ಥಳೀಯ ಮುಸ್ಲಿಮರೂ ಈ ದೇಗುಲ ನಿರ್ಮಾಣಕ್ಕೆ ಕೈಜೋಡಿಸಿದ್ದಾರೆ. ಪ್ರತಿಷ್ಠಾಪನೆ ಸಂದರ್ಭ ಕೆಲವೇ ಕೆಲವು ಹಿಂದೂಗಳು ಭಾಗವಹಿಸಿದ್ದರು. ವಿಶೇಷವೆಂದರೆ ತಮಿಳುನಾಡಿನಿಂದ ವೃದ್ಧ ದಂಪತಿಗಳೂ ಪೂಜೆಗಾಗಿ ತೀತ್ವಾಲ್‌ಗೆ ಆಗಮಿಸಿದ್ದರು ಎಂದು ವಿವರಣೆ ನೀಡಿದರು.
ದೈವೀ ಶಕ್ತಿ ಅನಾವರಣ:
ತೀತ್ವಾಲ್ ಬಳಿ ಮೈಕೊರೆವ ಚಳಿ ಇದ್ದು, ಪ್ರತಿಷ್ಠಾಪನೆ ನಡೆವ ಹಿಂದಿನ ದಿನ ಪ್ರಬಲ ಭೂಕಂಪ ನಡೆದಿತ್ತು. ರಿಕ್ಟರ್ ಮಾಪಕದಲ್ಲಿ 6.6 ತೀವ್ರತೆ ದಾಖಲಾಗಿತ್ತು. ರಾತ್ರಿ ಮಲಗಿದ್ದ ನಾವು ಮನೆಯಿಂದ ಹೊರಗೆ ಓಡಿಬಂದೆವು. ಆದರೆ ಅಷ್ಟು ತೀವ್ರ ಭೂಕಂಪನವಾದರೂ ಯಾವುದೇ ಸಮಸ್ಯೆ ಉಂಟಾಗದಿರುವುದು ದೈವೀ ಶಕ್ತಿ ತನ್ನ ಪವಾಡ ತೋರಿಸಿರುವುದಕ್ಕೆ ಸಾಕ್ಷಿಯಾಗಿದೆ ಎಂದು ಮಾಹಿತಿ ನೀಡಿದರು. ಪೋಟೊ ಹಾಗೂ ದೃಶ್ಯಾವಳಿಗಳ ಮೂಲಕ ವಿದ್ಯಾರ್ಥಿಗಳಿಗೆ ದೇಗುಲ ಪ್ರತಿಷ್ಟಾಪನೆಯ ಕುರಿತಾದ ಮಾಹಿತಿ ನೀಡಲಾಯಿತು.
ಈ ಸಂದರ್ಭ ಪ್ರಾಚಾರ್ಯ ರಾಕೇಶ ಕುಮಾರ್ ಕಮ್ಮಜೆ, ಅಂಬಿಕಾ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಗಣೇಶ್ ಪ್ರಸಾದ್, ವಿವಿಧ ವಿಭಾಗಗಳ ಮುಖ್ಯಸ್ಥರು, ಉಪನ್ಯಾಸಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.