ಚುನಾವಣಾ ನೀತಿ ಸಂಹಿತೆ ಜಾರಿ; ನಿರ್ಬಂಧಗಳೇನು? ವಿನಾಯ್ತಿ ಏನು?

0

ಚುನಾವಣೆಗೆ ದಿನಾಂಕ ಘೋಷಣೆ ಆದ ಮಾ.29ರಿಂದ ಮೇ 13ರಂದು ಮತ ಎಣಿಕೆ ಮುಗಿದ ಬಳಿಕವೂ ಎರಡು ದಿನ ಅಂದರೆ ಮೇ 15ರ ತನಕ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ. ನೀತಿ ಸಂಹಿತೆ ಎಂದರೆ ಏನು? ನಿಯಮಗಳು ಏನಿವೆ? ರಾಜಕೀಯ ಪಕ್ಷಗಳು, ಅಭ್ಯರ್ಥಿಗಳಿಗೆ ಏನೆಲ್ಲಾ ನಿರ್ಬಂಧ ಇರುತ್ತದೆ ಎಂಬ ವಿವರ ಇಲ್ಲಿದೆ.

ಸರ್ಕಾರ ಹೊಸ ಯೋಜನೆ ಘೋಷಿಸುವಂತಿಲ್ಲ. ಹೊಸ ಕಾರ್ಯಕ್ರಮಗಳ ಅನುಷ್ಠಾನ ಮಾಡುವಂತಿಲ್ಲ. ಹೊಸ ಯೋಜನೆಗಳ ಉದ್ಘಾಟನೆ, ಶಂಕುಸ್ಥಾಪನೆ ಮಾಡುವಂತಿಲ್ಲ. ಹೊಸ ಯೋಜನೆಗೆ ಹಣ ನೀಡುವಂತಿಲ್ಲ.ಹೊಸ ಟೆಂಡರ್ ಕರೆಯುವಂತಿಲ್ಲ. ಈಗಾಗಲೇ ಕರೆದಿದ್ದ ಟೆಂಡರ್ ಫೈನಲ್ ಮಾಡುವಂತಿಲ್ಲ. ಸಚಿವರು, ಶಾಸಕರು ಸರ್ಕಾರಿ ವಾಹನ ಬಳಸುವಂತಿಲ್ಲ. ಅಧಿಕಾರಿಗಳ ಜೊತೆ ಸಚಿವರು, ಶಾಸಕರು ಸಭೆ ನಡೆಸುವಂತಿಲ್ಲ. ರಾಜಕೀಯ ನಾಯಕರು ಸರ್ಕಾರಿ ವಸತಿ ಗೃಹ ಬಳಸುವಂತಿಲ್ಲ. ಬೆಳಗ್ಗೆ 6ರಿಂದ ರಾತ್ರಿ 10ರವರೆಗೆ ಮಾತ್ರ ಧ್ವನಿವರ್ಧಕ ಬಳಕೆ ಮಾಡಬೇಕು. ಮಂದಿರ, ಮಸೀದಿ, ಚರ್ಚ್ ಸೇರಿದಂತೆ ಧಾರ್ಮಿಕ ಸ್ಥಳಗಳಲ್ಲಿ ಚುನಾವಣಾ ಪ್ರಚಾರ ಮಾಡುವಂತಿಲ್ಲ. ಧರ್ಮ, ಜಾತಿ ವಿಷಯಾಧಾರಿತವಾಗಿ ಮತ ಕೇಳುವಂತಿಲ್ಲ. ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದಾಗ ಕಾರ್ಯ ಪ್ರಗತಿಯಲ್ಲಿ ಇರುವ ಅಭಿವೃದ್ಧಿ ಯೋಜನೆ ಮುಂದುವರೆಸಬಹುದು. ಈಗಾಗಲೇ ಜಾರಿಯಲ್ಲಿ ಇರುವ ಸರ್ಕಾರಿ ಕಾರ್ಯಕ್ರಮಗಳ ಮುಂದುವರಿಕೆಗೆ ಅಡ್ಡಿ ಇರುವುದಿಲ್ಲ. ಕಾರ್ಯಕ್ರಮಗಳಿಗೆ ಹೊಸ ಫಲಾನುಭವಿಗಳನ್ನು ಆಯ್ಕೆ ಮಾಡುವಂತಿಲ್ಲ. ರಾಜ್ಯ ಸರ್ಕಾರ ಸಂಪುಟ ಸಭೆ ನಡೆಸಬಹುದು, ಆದರೆ ನಿರ್ಣಯ ಕೈಗೊಳ್ಳುವಂತಿಲ್ಲ. ಬರ ಮತ್ತು ಪ್ರವಾಹ ಪರಿಸ್ಥಿತಿಯ ಪರಿಶೀಲನೆ ನಡೆಸುವುದಕ್ಕೆ ಅಡ್ಡಿ ಇಲ್ಲ. ಕುಡಿಯುವ ನೀರು ಪೂರೈಕೆ, ಗೋಶಾಲೆ ತೆರೆಯುವುದಕ್ಕೂ ಅಡ್ಡಿ ಇಲ್ಲ. ಸಾರ್ವಜನಿಕ ಬಳಕೆಯ ಅಭಿವೃದ್ದಿ ಕಾರ್ಯಗಳನ್ನು ಅಧಿಕಾರಿಗಳು ಉದ್ಘಾಟನೆ ಮಾಡಬಹುದು.

ವೈಯಕ್ತಿಕ ಟೀಕೆಗಿಲ್ಲ ಅವಕಾಶ

ಒಬ್ಬರ ಕೆಲಸ ಕಾರ್ಯಗಳ ಬಗ್ಗೆ ಮಾತ್ರ ಮತ್ತೊಬ್ಬ ರಾಜಕಾರಣಿ ಟೀಕೆ ಟಿಪ್ಪಣಿ ಮಾಡಬಹುದು. ವೈಯಕ್ತಿಕ ಟೀಕೆ, ಕೋಮು ಸಂಘರ್ಷಕ್ಕೆ ಆಸ್ಪದ ನೀಡುವಂತಹ ಹೇಳಿಕೆ ನೀಡಬಾರದು. ವೈಯಕ್ತಿಕ ನಿಂದನೆ ಅಥವಾ ಜಾತಿ ನಿಂದನೆ ಮಾಡುವಂತಿಲ್ಲ, ಸಭೆ ಸಮಾರಂಭ ನಡೆಸಲು ಪೊಲೀಸರ ಅನುಮತಿ ಬೇಕು, ಜನರ ಖಾಸಗಿ ಬದುಕಿಗೆ ಧಕ್ಕೆ ತರುವಂತೆ ಪ್ರಚಾರ ಮಾಡುವಂತಿಲ್ಲ.

LEAVE A REPLY

Please enter your comment!
Please enter your name here