ಶೋಕ, ಮೋಹವ ತೊರೆದರೆ ಜಗತ್ತಿನಲ್ಲಿ ಶಾಂತಿ ನೆಮ್ಮದಿ ಸಾಧ್ಯ: ಒಡಿಯೂರು ಶ್ರೀ
ಈಗಿನ ಕಾಲಘಟ್ಟದಲ್ಲಿ ಸಾಮೂಹಿಕ ಪ್ರಾರ್ಥನೆ ಅತೀ ಅಗತ್ಯ: ಕಣಿಯೂರು ಶ್ರೀ
ಭಜನಾ ಮಂದಿರ ಸಂಸ್ಕಾರ ನೀಡುವ ಕೇಂದ್ರವಾಗಬೇಕು: ಸಾಧ್ವಿ
ವಿಟ್ಲ: ಎಲ್ಲರ ಸಹಾಯದ ಮೂಲಕ ಇಷ್ಟೊಂದು ಉತ್ತಮ ಧರ್ಮ ಕಾರ್ಯ ಇಲ್ಲಿ ಸಾಕಾರವಾಗಿದೆ. ಭಜನೆ ಎಂದರೆ ಸಂಸ್ಕೃತಿ. ಭಗವಂತನನ್ನು ಒಲಿಸಲು ಭಜನೆ ಉತ್ತಮ ರಹದಾರಿ. ಹಿರಿಯರ ಹಾದಿಯನ್ನು ನೆನೆಯುವ ಕೆಲಸವಾಗಬೇಕು. ಶೋಕ ಮತ್ತು ಮೋಹವನ್ನು ಬಿಟ್ಟರೆ ಜಗತ್ತಿನಲ್ಲಿ ಶಾಂತಿ ನೆಮ್ಮದಿ ಸಾಧ್ಯ. ರಾಮ ಎಂದರೆ ಆನಂದ ಎಂದು ಒಡಿಯೂರು ಶ್ರೀಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.
ಅವರು ಪಳ್ಳದಕೋಡಿ ಶ್ರೀರಾಮ ಭಜನಾ ಮಂದಿರದಲ್ಲಿ ಶ್ರೀರಾಮದೇವರ ಛಾಯಾಚಿತ್ರ ಅನಾವರಣ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಪಂಚಭೂತವನ್ನು ಬಿಟ್ಟು ಜಗತ್ತು ಇಲ್ಲ. ರಾಮಗಣಿತದ ಸೂತ್ರ ಅರಿತಲ್ಲಿ ಬದುಕು ಸುಲಲಿತ. ತ್ಯಾಗದಲ್ಲಿ ನಿಜವಾದ ಆನಂದವಿದೆ. ಆದರ್ಶಕ್ಕೆ ಇನ್ನೊಂದು ಹೆಸರು ರಾಮ ದೇವರು. ಧರ್ಮ ಶ್ರದ್ಧೆ ಇದ್ದರೆ ಬದುಕು ಹಸನು ಎಂದರು.
ಕಣಿಯೂರು ಶ್ರೀ ಚಾಮುಂಡೇಶ್ವರಿ ಕ್ಷೇತ್ರದ ಶ್ರೀ ಮಹಾಬಲೇಶ್ವರ ಸ್ವಾಮೀಜಿ ಆಶೀರ್ವಚನ ನೀಡಿ ಹಿಂದಿನ ಕಾಲದಲ್ಲಿ ಜನರಿಗೆ ಭಜನೆಯ ಬಗ್ಗೆ ಅರಿವಿರಲಿಲ್ಲ. ಭಜನೆಗೆ ಈ ಕಾಲಘಟ್ಟದಲ್ಲಿ ಬಹಳಷ್ಟು ಮಹತ್ವ ಬರುತ್ತಿದೆ. ಹಲವರ ತ್ಯಾಗದ ಪ್ರತಿರೂಪವಾಗಿ ಸುಂದರ ಭಜನಾ ಮಂದಿರ ನಿರ್ಮಾಣವಾಗಿದೆ. ಭಗವಂತನ ಪ್ರೇರಣೆ ಅತೀ ಮುಖ್ಯ. ಈಗಿನ ಕಾಲಘಟ್ಟದಲ್ಲಿ ಸಾಮೂಹಿಕ ಪ್ರಾರ್ಥನೆ ಅತೀ ಅಗತ್ಯ ಎಂದರು.
ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಸಾಧ್ವಿ ಮತಾನಂದಮಯೀ ಆಶೀರ್ವಚನ ಮಾಡಿ ವ್ಯಕ್ತಿತ್ವದ ಸಂಕಲ್ಪ ಇಂದಿಲ್ಲಿ ಸಾಕಾರವಾಗಿದೆ.
ರಾಮ ಸ್ಮರಣೆಯಿಂದ ಪಾಪ ದೂರವಾಗುವುದು. ಸಮತ್ವವೇ ರಾಮತತ್ವ. ರಾಮ ನಮಗೆ ಆದರ್ಶ. ಜೀವಿತದಲ್ಲಿ ಗುರಿ, ಗುರು ಮುಖ್ಯ, ಅವು ಎರಡಿದ್ದರೆ ಜೀವನ ಸಾರ್ಥಕವಾಗುತ್ತದೆ. ಭಜನಾ ಮಂದಿರ ಸಂಸ್ಕಾರ ನೀಡುವ ಕೇಂದ್ರವಾಗಬೇಕು. ಸಮಾಜ ಗೊಂದಲ, ಭಯದಲ್ಲಿದೆ. ಅವೆಲ್ಲವೂ ದೂರವಾಗಿ ನೆಮ್ಮದಿಯ ಬದುಕು ನಮಗೆ ಸಿಗುವಂತಾಗಲಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಾಬಲ ಶೆಟ್ಟಿ ಪಟ್ಲಗುತ್ತು ವಹಿಸಿದ್ದರು. ಎಸ್.ಸಿ.ಡಿ.ಸಿ.ಸಿ.ಬ್ಯಾಂಕ್ ನಿರ್ದೇಶಕ ಟಿ. ಜಿ. ರಾಜಾರಾಮ ಭಟ್, ಅನಂತಪುರ ದೇವಸ್ಥಾನದ ಅಧ್ಯಕ್ಷ ಮಾಧವ ಕಾರಂತ, ಮಿತ್ತನಡ್ಕ ಶ್ರೀ ಮಲರಾಯ ದೈವಸ್ಥಾನದ ಆಡಳಿತ ಮುಕ್ತೇಸರ ಮುಗುಳಿ ತಿರುಮಲೇಶ್ವರ ಭಟ್, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಿಟ್ಲ ವಲಯ ಯೋಜನಾಧಿಕಾರಿ ಕೆ. ಚೆನ್ನಪ್ಪ ಗೌಡ, ಕ್ಷೇತ್ರದ ಇಂಜಿನಿಯರ್ ಸಂತೋಷ್, ಭಜನಾ ಮಂದಿರ ಅಧ್ಯಕ್ಷ ಸಂಕಪ್ಪ ಶೆಟ್ಟಿ ಪಳ್ಳದಕೋಡಿ, ಮಾತೃ ಮಂಡಳಿ ಅಧ್ಯಕ್ಷೆ ಸುಖದಾ ಮೋಹನ ಪಾಟಾಳಿ, ಕೇಶವ ಭಟ್ ಉಪಸ್ಥಿತರಿದ್ದರು.
ದಿನೇಶ್ ಮಿತ್ತನಡ್ಕ ಪ್ರಾರ್ಥಿಸಿದರು. ಶ್ರೀಪತಿ ಭಟ್ ಸ್ವಾಗತಿಸಿದರು. ಯಶವಂತ ವಿಟ್ಲ ಕಾರ್ಯಕ್ರಮ ನಿರೂಪಿಸಿದರು. ಸಾಯೀಶ್ವರೀ ಡಿ.ಶೆಟ್ಟಿ ವಂದಿಸಿದರು.