ಕೆಯ್ಯೂರು: ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಸಬ್ಇನ್ಸ್ಪೆಕ್ಟರ್ ಆಗಿರುವ ಕೆಯ್ಯೂರಿನ ಪ್ರದೀಪ್ ಪೂಜಾರಿಯವರು 2022ನೇ ಸಾಲಿನ ಮುಖ್ಯಮಂತ್ರಿ ಚಿನ್ನದ ಪದಕಕ್ಕೆ ಭಾಜನರಾಗಿದ್ದಾರೆ.
ಇವರು 2010ನೇ ಸಾಲಿನಲ್ಲಿ ಪೊಲೀಸ್ ಸಬ್ ಇನ್ಸ್ಸ್ಪೆಕ್ಟರ್ ಆಗಿ ಆಯ್ಕೆಗೊಂಡಿದ್ದು, ನಿವೃತ್ತ ಸರ್ವೆ ಸೂಪರ್ ವೈಸರ್ ಬಾಲಕೃಷ್ಣ ಪೂಜಾರಿ ಕೆಂಗುಡೇಲು ಮತ್ತು ಗುಣವತಿ ದಂಪತಿ ಪುತ್ರ ರಾಜಾನುಕುಂಟೆ, ಆವಲಹಳ್ಳಿ, ಕಮರ್ಷಿಯಲ್ ಸ್ಟ್ರೀಟ್, ಶಿಡ್ಲಘಟ್ಟ ಗ್ರಾಮಾಂತರ, ವಿಶ್ವನಾಥಪುರ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. ಪ್ರಸ್ತುತ ಚಿಕ್ಕಬಳ್ಳಾಪುರ ಗ್ರಾಮಾಂತರ ಮತ್ತು ಹೊರವಲಯ ಪೊಲೀಸ್ ಠಾಣೆಯಲ್ಲಿ ಪಿ.ಎಸ್.ಐ ಆಗಿ ಕರ್ತವ್ಯ ನಿರ್ವಹಿಸುತ್ತಿರುತ್ತಾರೆ. ವಿಮಾನದಲ್ಲಿ ಬೆಂಗಳೂರು ನಗರಕ್ಕೆ ಮತ್ತು ಬೆಂಗಳೂರು ಹೊರ ವಲಯಕ್ಕೆ ಬಂದು ಬಾಡಿಗೆಗೆ ಬೈಕನ್ನು ಪಡೆದು ಬೆಂಗಳೂರು ನಗರದಲ್ಲಿ ಸರಗಳ್ಳತನವನ್ನು ಮಾಡಿ, ವಿಮಾನದಲ್ಲಿ ವಾಪಸ್ ಹೋಗುವ ಪ್ರವೃತ್ತಿವುಳ್ಳ ಬವೇರಿಯಾ ಗ್ಯಾಂಗ್ ಅನ್ನು ಪಂಜಾಬಿನಲ್ಲಿ ಪತ್ತೆ ಮಾಡಿ ಆರೋಪಿತರಿಂದ 500 ಗ್ರಾಂ ಚಿನ್ನವನ್ನು ಅಮಾನತ್ತುಪಡಿಸಿ ನೊಂದವರಿಗೆ ನ್ಯಾಯಾಲಯದ ಮುಖಾಂತರ ಹಿಂದಿರುಗಿಸಿರುತ್ತಾರೆ.
2022 ನೇ ಸಾಲಿನಲ್ಲಿ ಪೆರೇಸಂದ್ರ ಗ್ರಾಮದ ಶ್ರೀನಾರಾಯಣಸ್ವಾಮಿ ಎ.ಎಸ್.ಐ ರವರ ಮನೆಯಲ್ಲಿ ನಡೆದ ಡಕಾಯಿತಿ ಪ್ರಕರಣದಲ್ಲಿ ದೇಶದಲ್ಲಿಯೇ ಗ್ಯಾಂಗ್ ಸ್ಟರ್ ಎಂದು ಕುಖ್ಯಾತಿ ಪಡೆದ ಉತ್ತರಪ್ರದೇಶದ ಹೈದರ್ ಮತ್ತು ತಂಡವನ್ನು ಉತ್ತರಾಖಾಂಡ್ ರಾಜ್ಯದಲ್ಲಿ ಪತ್ತೆ ಮಾಡಿ ಅವರಿಂದ 12 ಲಕ್ಷ ರೂಪಾಯಿ ನಗದು, 4 ಪಿಸ್ತೂಲು, 24 ಜೀವಂತ ಗುಂಡುಗಳು ಮತ್ತು ಬಂಗಾರದ ಒಡವೆಗಳನ್ನು ಅಮಾನತ್ತುಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ. ಆವಲಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ತಲೆ, ರುಂಡ, ಮುಂಡವನ್ನು ಬೇರ್ಪಡಿಸಿ ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿತರನ್ನು ಹಿಡಿಯುವಲ್ಲಿ ಯಶಸ್ವಿಯಾಗಿರುತ್ತಾರೆ. ಎಟಿಎಂ ಕೇಂದ್ರಗಳ ಬಳಿ ಹಣ ಡ್ರಾ ಮಾಡಲು ಬರುವ ಸಾರ್ವಜನಿಕರನ್ನು ಯಾಮಾರಿಸಿ ಅವರ ಕಾರ್ಡುಗಳನ್ನು ಬದಲಾಯಿಸಿ ಹಣವನ್ನು ಡ್ರಾ ಮಾಡಿ ಮೋಸ ಮಾಡುತ್ತಿದ್ದ ಸಾಗರ್ನ ಕಿರಣ್ ಕುಮಾರ್ ಎಂಬುವರನ್ನು ಪತ್ತೆ ಮಾಡಿ ಪ್ರಕರಣಗಳನ್ನು ಬೆಳಕಿಗೆ ತಂದಿರುತ್ತಾರೆ.
ಆವಲಹಳ್ಳಿ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಹಗಲು ಮತ್ತು ರಾತ್ರಿ ವೇಳೆಯಲ್ಲಿ ಮನೆ ಕಳವು ಮತ್ತು ಡಕಾಯಿತಿ ಮಾಡುತ್ತಿದ್ದ ಅಂತರ್ ರಾಜ್ಯ ಕಳ್ಳರನ್ನು ಪತ್ತೆ ಮಾಡಿ ಒಡವೆಗಳನ್ನು ಹಾಗೂ ಹಣವನ್ನು ವಶಪಡಿಸಿಕೊಂಡು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿರುತ್ತಾರೆ. ಇವರು ಕೆಯ್ಯೂರು, ಫಿಲೋಮಿನಾ, ಆಳ್ವಾಸ್ ಶಾಲೆಯ ಹಳೆ ವಿದ್ಯಾರ್ಥಿ.