ಪುತ್ತೂರು: ಜೆಡಿಎಸ್ ಪುತ್ತೂರು ವಿಧಾನಸಭಾ ಕ್ಷೇತ್ರ ಪಕ್ಷದ ತುರ್ತು ಸಭೆಯು ಎ.4ರಂದು ಪುತ್ತೂರು ಅಮರ್ ಕಾಂಪ್ಲೆಕ್ಸ್ನಲ್ಲಿರುವ ಪಕ್ಷದ ಕಚೇರಿಯಲ್ಲಿ ಜೆಡಿಎಸ್ ಪುತ್ತೂರು ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಅಶ್ರಫ್ ಕಲ್ಲೇಗ ರವರ ನೇತೃತ್ವದಲ್ಲಿ ನಡೆಯಿತು.
ಚುನಾವಣೆ ಅಧಿಸೂಚನೆ ಹೊರಡಿಸಿದ ತಕ್ಷಣ ನಾಮಪತ್ರ ಸಲ್ಲಿಸುವ ತೀರ್ಮಾನ ಮಾಡಲಾಯಿತು.
ಕಾಂಗ್ರೆಸ್ ಬಿಜೆಪಿ ಆಂತರಿಕ ಕಚ್ಚಾಟದಿಂದ ಟಿಕೆಟ್ ಘೋಷಣೆಯಾಗದೆ ಗೊಂದಲದಲ್ಲಿರುವ ಪುತ್ತೂರಿನ ಮತದಾರರಿಗೆ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಅತ್ಯಧಿಕ ಮತದಾರರಿರುವ ಒಕ್ಕಲಿಗ ಹಾಗೂ ಮುಸ್ಲಿಂ ಸಮುದಾಯದ ಐ.ಸಿ ಕೈಲಾಸ್ ಅಥವಾ ಅಶ್ರಫ್ ಕಲ್ಲೇಗರಲ್ಲಿ ಒಬ್ಬರನ್ನು ಕಣಕ್ಕಿಳಿಸುವ ಬಗ್ಗೆ ತೀರ್ಮಾನಿಸಲಾಯಿತು.
ಜೆಡಿಎಸ್ ಅಧಿಕಾರಕ್ಕೆ ಬಂದರೆ ಉಚಿತ ಶಿಕ್ಷಣ, ಪ್ರತೀ ಗ್ರಾಮಕ್ಕೆ ಹೈಟೆಕ್ ಆಸ್ಪತ್ರೆ, ಬಡ ರಿಕ್ಷಾ ಚಾಲಕರಿಗೆ ತಿಂಗಳಿಗೆ 2 ಸಾವಿರ ರೂ, ಬಡ ಕುಟುಂಬಕ್ಕೆ ವರ್ಷಕ್ಕೆ 5 ಉಚಿತ ಗ್ಯಾಸ್ ಸಿಲಿಂಡರ್, ಎಪ್ಪತ್ತು ವರ್ಷ ಮೇಲ್ಪಟ್ಟ ವೃದ್ಧರಿಗೆ ತಿಂಗಳಿಗೆ 5 ಸಾವಿರ ರೂ, ಪಕ್ಷವು ಪೂರ್ಣ ಬಹುಮತದಲ್ಲಿ ಅಧಿಕಾರಕ್ಕೆ ಬಂದರೆ ಸ್ತ್ರೀ ಶಕ್ತಿ ಸ್ವಸಹಾಯ ಗುಂಪುಗಳ ಸಂಪೂರ್ಣ ಸಾಲಮನ್ನಾ, ಪುತ್ತೂರಿನ ಹಲವಾರು ವರ್ಷಗಳ ಕನಸಿನ ಕೂಸಾದ ಸರಕಾರಿ ಮೆಡಿಕಲ್ ಕಾಲೇಜು ಹಾಗೂ ಸರಕಾರಿ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವ ಮಹತ್ವಾಕಾಂಕ್ಷಿ ಯೋಜನೆಯನ್ನು ಕಾರ್ಯಕರ್ತರ ಮೂಲಕ ಮನೆ ಮನೆಗೆ ತಲುಪಿಸುವ ತೀರ್ಮಾನ ಕೈ ಗೊಳ್ಳಲಾಯಿತು.
ಸಭೆಯಲ್ಲಿ ಜೆಡಿಎಸ್ ಪುತ್ತೂರು ವಿಧಾನಸಭಾ ಕ್ಷೇತ್ರ ಹಿಂದುಳಿದ ವರ್ಗಗಳ ಅಧ್ಯಕ್ಷ ಪ್ರಭಾಕರ್ ಸಾಲ್ಯಾನ್, ಜೆಡಿಎಸ್ ಮಾಜಿ ಅಧ್ಯಕ್ಷ ಐ.ಸಿ ಕೈಲಾಸ್, ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಮಹಾವೀರ್ ಜೈನ್, ಪದ್ಮಾ ಮಣಿಯನ್, ಇಬ್ರಾಹಿಂ ಕೆದಿಲ, ಫಾರೂಕ್ ಕಲ್ಲೇಗ, ಸುಂದರ, ಮೋನು ಕಾರ್ಖಾನೆ, ಹಂಝ ಕಬಕ, ಚಂದ್ರ ಬೀರಿಗೆ, ನಝೀರ್ ಬಪ್ಪಳಿಗೆ, ವಿಕ್ಟರ್ ಗೊನ್ಸಾಲಿಸ್, ಹಂಝ ರಾಮನಗರ ಉಪಸ್ಥಿತರಿದ್ದರು.
ಅಶ್ರಫ್ ಕಲ್ಲೇಗ ಕಾರ್ಯಕ್ರಮ ನಿರೂಪಿಸಿದರು. ಮಹಾವೀರ್ ಜೈನ್ ವಂದಿಸಿದರು.