ಕ್ರೈಸ್ತ ದೇವಾಲಯಗಳಲ್ಲಿ ಸಂಭ್ರಮದ `ಈಸ್ಟರ್ ಹಬ್ಬ’ ಆಚರಣೆ

0

ಯೇಸುಕ್ರಿಸ್ತರ ಪುನರುತ್ಥಾನ ಸತ್ಯ ಜೀವಿತದ ಭರವಸೆ, ಜೀವನದ ಜ್ಯೋತಿ-ವಂ|ಡೆನ್ಝಿಲ್ ಲೋಬೊ

ಪುತ್ತೂರು: ಎಷ್ಟೋ ಮಹಾನ್ ವ್ಯಕ್ತಿಗಳು ಈ ಭೂಮಿಯಲ್ಲಿ ಜನಿಸಿ ಮರಣಿಸಿದ್ದಾರೆ. ಅವರು ಎಂದೂ ಪುನರುತ್ಥಾನ ಹೊಂದಿಲ್ಲ. ಆದರೆ ಯೇಸುಕ್ರಿಸ್ತರು ದೇವಪುತ್ರರು, ಸ್ವಯಂ ದೈವಸ್ವರೂಪಿಯಾಗಿದ್ದು ಮೂರನೇ ದಿನ ಪುನರುತ್ಥಾನ ಹೊಂದಿರುವುದು ಸತ್ಯವಾಗಿದೆ. ಯೇಸುಕ್ರಿಸ್ತರ ಪುನರುತ್ಥಾನ ಮಾನವನಿಗೆ ಸತ್ಯ ಜೀವಿತದ ಭರವಸೆ ಹಾಗೂ ಮನುಷ್ಯನಲ್ಲಿನ ಅಂಧಕಾರವನ್ನು ಹೋಗಲಾಡಿಸುವ ಜೀವನದ ಜ್ಯೋತಿಯಾಗಿದೆ ಎಂದು ಉಜಿರೆ ದಯಾಳ್‌ಬಾಗ್ ಇಲ್ಲಿನ ಧರ್ಮಗುರು ವಂ|ಎಡ್ವಿನ್ ಡಿ’ಸೋಜರವರು ಹೇಳಿದರು.


ದೇಶದಾದ್ಯಂತ ಆಚರಿಸುವ ಯೇಸುಕ್ರಿಸ್ತರ ಪುನರುತ್ಥಾನ ಸಾರುವ `ಈಸ್ಟರ್ ಹಬ್ಬ’ದ ಕುರಿತು ನಗರದ ಹೊರವಲಯದಲ್ಲಿರುವ ಮರೀಲು ಸೆಕ್ರೇಡ್ ಹಾರ್ಟ್ ಚರ್ಚ್‌ನಲ್ಲಿ ನಡೆದ ದಿವ್ಯ ಬಲಿಪೂಜೆಯಲ್ಲಿ ಅವರು ಕ್ರೈಸ್ತ ಭಕ್ತಾದಿಗಳಿಗೆ ಬೈಬಲ್ ವಾಚಿಸಿ ಸಂದೇಶ ನೀಡಿದರು. ಯೇಸುಕ್ರಿಸ್ತರು ಬೋಧನೆ ಮತ್ತು ಸಾಧನೆ ಮುಖಾಂತರ ತಾವು ದೇವಪುತ್ರರು ಎಂಬುದನ್ನು ಸಾಕ್ಷಾತ್ಕರಿಸಿದವರು. ಬದುಕಿನಲ್ಲಿ ಕಷ್ಟ-ಸಂಕಷ್ಟಗಳು ಬಂದಾಗ ಮಾನವನು ಎಂದಿಗೂ ಭರವಸೆ ಮತ್ತು ವಿಶ್ವಾಸವನ್ನು ಕಳೆದುಕೊಳ್ಳಬಾರದು. ಯೇಸುಕ್ರಿಸ್ತರು ಕೊಟ್ಟ ಬೆಳಕಿನಲ್ಲಿ ಸಾಗಿದಾಗ ಜೀವನ ಸಾರ್ಥಕವಾಗುತ್ತದೆ. ಯೇಸುಕ್ರಿಸ್ತರು ಪುನರುತ್ಥಾನರಾದಂತೆ ನಾವೂ ಒಂದು ದಿನ ಪುನರುತ್ಥಾನ ಹೊಂದುವೆವು ಎಂಬುದು ಕ್ರೈಸ್ತ ವಿಶ್ವಾಸಿ ಜನರ ವಿಶ್ವಾಸವಾಗಿದೆ. ಪ್ರಭು ಯೇಸುಕ್ರಿಸ್ತರು ತನ್ನ ಇಹಲೋಕದ ಜೀವನದುದ್ದಕ್ಕೂ ವ್ಯಕ್ತಪಡಿಸಿದ ಆಸೆ ಮಾನವನನ್ನು ಪಾಪದಿಂದ ಬಿಡಿಸಿ, ನಿತ್ಯ ಜೀವನದೆಡೆಗೆ ಕರೆದೊಯ್ಯುದಾಗಿತ್ತು ಎಂದ ಅವರು ಯೇಸುಕ್ರಿಸ್ತರು ನಮ್ಮ ಬಾಳಿನ ಆಶಾಕಿರಣವಾಗಿ, ನಮ್ಮಲ್ಲಿ ಅಡಗಿರುವ ಕತ್ತಲನ್ನು ದೂರ ಮಾಡುತ್ತಾರೆ. ಮನುಷ್ಯರಾಗಿ ಭೂಮಿಗೆ ಬಂದು ದೀನತೆಯ ಪಾಠ ಕಲಿಸಿ ಮೃತ್ಯುಂಜಯರಾಗಿ ಸಾವನ್ನು ಜಯಿಸಿ ಜೀವಕ್ಕೆ ಗೆಲುವನ್ನಿತ್ತಿದ್ದಾರೆ. ಈಸ್ಟರ್ ಹಬ್ಬವು ನಾವು ಹೇಗೆ ಪರಿಶುದ್ಧತೆ ಮತ್ತು ಪಾವಿತ್ರ್ಯ ಕಾಪಾಡಿಕೊಳ್ಳಬಹುದು ಎಂಬುದರ ಬಗ್ಗೆ ಗಮನವನ್ನು ಸೆಳೆಯುತ್ತದೆ. ಮಾನವ ಯೇಸುಕ್ರಿಸ್ತರಂತೆ ಶ್ರೇಷ್ಠತೆಯನ್ನು ಬಯಸುವುದಾದರೆ ಅವರಂತೆ ಸೇವಾ ಮನೋಭಾವವನ್ನು ನಮ್ಮಲ್ಲಿ ಮೊದಲು ಬೆಳೆಸಿಕೊಳ್ಳಬೇಕು ಎಂದು ಅವರು ಹೇಳಿದರು.

ಚರ್ಚ್ ಪ್ರಧಾನ ಧರ್ಮಗುರು ವಂ|ವಲೇರಿಯನ್ ಫ್ರ್ಯಾಂಕ್, ವಂ|ಡೆನ್ಝಿಲ್ ಲೋಬೊರವರು ದಿವ್ಯ ಬಲಿಪೂಜೆಯಲ್ಲಿ ಪಾಲ್ಗೊಂಡರು.
ಮಾಯಿದೆ ದೇವುಸ್ ಚರ್ಚ್‌ನಲ್ಲಿ ಪ್ರಧಾನ ಧರ್ಮಗುರು ವಂ|ಲಾರೆನ್ಸ್ ಮಸ್ಕರೇನ್ಹಸ್, ಸಹಾಯಕ ಧರ್ಮಗುರು ವಂ|ಕೆವಿನ್ ಲಾರೆನ್ಸ್ ಡಿ’ಸೋಜ, ಧರ್ಮಗುರುಗಳಾದ ವಂ|ಸ್ಟ್ಯಾನಿ ಪಿಂಟೋ, ವಂ|ಅಶೋಕ್ ರಾಯನ್ ಕ್ರಾಸ್ತಾ, ಬನ್ನೂರು ಸಂತ ಅಂತೋನಿ ಚರ್ಚ್‌ನಲ್ಲಿ ಪ್ರಧಾನ ಧರ್ಮಗುರು ವಂ|ಬಾಲ್ತಜಾರ್ ಪಿಂಟೋ, ಸಹಾಯಕ ಧರ್ಮಗುರು ವಂ|ಬೆನೆಡಿಕ್ಟ್ ಗೋಮ್ಸ್, ಹಿರಿಯ ಧರ್ಮಗುರು ವಂ|ಆಲ್ಫೋನ್ಸ್ ಮೊರಾಸ್, ಉಪ್ಪಿನಂಗಡಿ ದೀನರ ಕನ್ಯಾಮಾತಾ ದೇವಾಲಯದಲ್ಲಿ ಪ್ರಧಾನ ಧರ್ಮಗುರು ವಂ|ಅಬೆಲ್ ಲೋಬೋ, ಬೆಳ್ಳಾರೆ ಚರ್ಚ್‌ನಲ್ಲಿ ವಂ|ಆಂಟನಿ ಪ್ರಕಾಶ್ ಮೊಂತೇರೊರವರು ಅಲ್ಲದೆ ತಾಲೂಕಿನ ವಿವಿಧ ಚರ್ಚ್‌ಗಳಲ್ಲಿ ಧರ್ಮಗುರುಗಳು ಹಬ್ಬದ ದಿವ್ಯ ಬಲಿಪೂಜೆಯನ್ನು ನೆರವೇರಿಸಿದರು.


ತಾಲೂಕಿನಾದ್ಯಂತ ಇರುವ ಚರ್ಚ್‌ಗಳಲ್ಲಿ ಧರ್ಮಗುರುಗಳ ಸಹಿತ ಆಯಾ ಚರ್ಚ್‌ನ ಪಾಲನಾ ಸಮಿತಿಯ ಉಪಾಧ್ಯಕ್ಷ, ಕಾರ್ಯದರ್ಶಿ, ಚರ್ಚ್ ಪಾಲನಾ ಸಮಿತಿ ಸದಸ್ಯರು, ಸ್ಯಾಕ್ರಿಸ್ಟಿಯನ್, ಗುರಿಕಾರರು, ಧರ್ಮಭಗಿನಿಯರು, ವೇದಿ ಸೇವಕರು, ಗಾಯನ ಮಂಡಳಿ ಸದಸ್ಯರು ಸಹಕರಿಸಿದರು. ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಧಾರ್ಮಿಕ ವಿಧಿವಿಧಾನಗಳಲ್ಲಿ ಪಾಲ್ಗೊಂಡರು.

ಅಶೀರ್ವಚಿಸಿದ ಪವಿತ್ರ ಜಲ ಭಕ್ತಾಧಿಗಳಿಗೆ ವಿತರಣೆ…
ದಿವ್ಯ ಬಲಿಪೂಜೆ ಬಳಿಕ ಆಯಾ ಚರ್ಚ್‌ಗಳಲ್ಲಿ ಅಶೀರ್ವಚಿಸಿದ ಪವಿತ್ರ ಜಲವನ್ನು ಭಕ್ತಾಧಿಗಳಿಗೆ ವಿತರಿಸಲಾಯಿತು. ಮಾಯಿದೆ ದೇವುಸ್ ಚರ್ಚ್‌ನಲ್ಲಿ ಕ್ರಿಶ್ಚಿಯನ್ ಲೈಫ್ ಕಮ್ಯೂನಿಟಿಯ ಸದಸ್ಯರು, ಬನ್ನೂರು, ಮರೀಲು, ಬೆಳ್ಳಾರೆ, ಉಪ್ಪಿನಂಗಡಿ ಹಾಗೂ ಆಯಾ ಚರ್ಚ್‌ಗಳಲ್ಲಿ ಐಸಿವೈಎಂ, ಕೆಥೋಲಿಕ್ ಸಭಾದ ಸದಸ್ಯರು ಪವಿತ್ರ ಜಲವನ್ನು ವಿತರಿಸಲು ನೆರವಾದರು. ಯೇಸುಕ್ರಿಸ್ತರ ಪುನರುತ್ಥಾನದ ಸಂಭ್ರಮದಲ್ಲಿ ಕ್ರೈಸ್ತ ಬಾಂಧವರು ಒಬ್ಬರನ್ನೊಬ್ಬರು ಅಪ್ಪಿಕೊಂಡು, ಕೈ ಕುಲುಕಿಕೊಂಡು ಹಬ್ಬದ ಸಂತೋಷವನ್ನು ವಿನಿಮಯ ಮಾಡಿಕೊಂಡು ಸಂಭ್ರಮಿಸಿದರು.

LEAVE A REPLY

Please enter your comment!
Please enter your name here