





ಉಪ್ಪಿನಂಗಡಿ: 2013 ಎಪ್ರಿಲ್ 9 ರಂದು ಉಪ್ಪಿನಂಗಡಿ ಸಮೀಪದ ಪೆರ್ನೆ ಎಂಬಲ್ಲಿ ಅಡುಗೆ ಅನಿಲ ಸಾಗಾಟದ ಟ್ಯಾಂಕರ್ ಅಪಘಾತಕ್ಕೀಡಾಗಿ ಅನಿಲ ಸೋರಿಕೆಯೊಂದಿಗೆ ಅಗ್ನಿ ಅನಾಹುತ ಸಂಭವಿಸಿದ ಭೀಕರ ಘಟನೆಯಿಂದ 13 ಮಂದಿ ಸಾವನ್ನಪ್ಪಿ ಹಲವು ಮಂದಿ ಗಾಯಗೊಂಡ ಘಟನೆಗೆ ಹತ್ತು ವರ್ಷ ಸಂದರೂ ಅದರ ಕಹಿ ನೆನಪು ಇನ್ನೂ ಮಾಸದೆ ಅಚ್ಚಳಿಯದೆ ಉಳಿದಿದೆ.


ಮಂಗಳೂರಿನಿಂದ ಬೆಂಗಳೂರಿನತ್ತ ಅನಿಲ ಸಾಗಾಟದ ಟ್ಯಾಂಕರ್ ಪೆರ್ನೆ ತಿರುವಿನಲ್ಲಿ ಅಪಘಾತಕ್ಕೀಡಾಗಿ ಮಗುಚಿ ಬಿತ್ತು. ಈ ಪರಿಣಾಮ ಅನಿಲ ಸೋರಿಕೆಯುಂಟಾಗಿ ಅಗ್ನಿ ಸ್ಪರ್ಶಗೊಂಡ ಕಾರಣ ಬೆಂಕಿಯ ಕೆನ್ನಾಲಿಗೆಯು ಪರಿಸರದಾದ್ಯಂತ ವ್ಯಾಪಿಸಿ ಮನೆ, ಅಂಗಡಿಯೊಳಗಿದ್ದ ಜನರೆಲ್ಲಾ ಬೆಂಕಿಗೆ ಸಿಲುಕಿದರು. ಇದರಿಂದಾಗಿ ಮಹಿಳೆ ಮಕ್ಕಳನ್ನು ಒಳಗೊಂಡಂತೆ 9 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದರೆ, ಗಾಯಾಳುಗಳ ಪೈಕಿ ನಾಲ್ವರು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು.
ಘಟನೆಯಲ್ಲಿ ಸಿಲುಕಿ ಮೈಯಲ್ಲಿದ್ದ ಬಟ್ಟೆ ಬರೆಯೆಲ್ಲಾ ಸುಟ್ಟು , ಮೈ ಚರ್ಮ ಸುಟ್ಟು ಜೀವ ಉಳಿಸಲು ಯುವಕನೋರ್ವ ಹೆದ್ದಾರಿಯಲ್ಲಿ ಓಡೋಡಿ ಬರುತ್ತಿರುವ ಹೃದಯ ವಿದ್ರಾವಕ ದೃಶ್ಯವೊಂದು ವಿಡಿಯೋ ಚಿತ್ರೀಕರಣದಲ್ಲಿ ಸೆರೆಯಾಗಿದ್ದು, ಮನ ಕಲಕುವಂತಿತ್ತು. ಅಂದು ಟ್ಯಾಂಕರ್ ದುರಂತ ಸಂಭವಿಸಿದ ಬಳಿಕ ಸಂತ್ರಸ್ತರಿಗೆ ನ್ಯಾಯ ಒದಗಿಸಿಕೊಡಲು ಕೋಡಿಂಬಾಡಿ ರೈ ಎಸ್ಟೇಟ್ ಎಜ್ಯುಕೇಷನಲ್ ಆಂಡ್ ಚಾರಿಟೇಬಲ್ ಟ್ರಸ್ಟ್ನ ಪ್ರವರ್ತಕ ಅಶೋಕ್ ಕುಮಾರ್ ರೈಯವರು ಸಂತ್ರಸ್ಥರ ಹೋರಾಟ ಸಮಿತಿ ರೂಪಿಸಿ ಬಹಳಷ್ಟು ಹೋರಾಟ ಮಾಡಿದ್ದರು.
ಗ್ರಾಮದ ದೈವವೊಂದರ ಆರಾಧನೆ ನಿಂತಿರುವುದರಿಂದ ಕೆಲ ಸಮಯದಲ್ಲೇ ಗ್ರಾಮದಲ್ಲಿ ಭೀಕರವಾದ ಅನಾಹುತವೊಂದು ಸಂಭವಿಸಲಿದೆ ಎಂಬ ಪ್ರಶ್ನಾ ಚಿಂತನೆಯಲ್ಲಿ ವ್ಯಕ್ತಗೊಂಡ ಎಚ್ಚರಿಕೆಯ ಬೆನ್ನಲ್ಲೇ ಈ ಅವಘಡ ಸಂಭವಿಸಿತ್ತು. ಬಳಿಕದ ದಿನಗಳಲ್ಲಿ 13 ನಾಗರ ಹಾವುಗಳ ಸರಣಿ ಸಾವಿನಿಂದ ಕಂಗೆಟ್ಟ ಜನರು ಅಷ್ಠಮಂಗಲ ಪ್ರಶ್ನಾ ಚಿಂತನೆಯಲ್ಲಿ ಕಾರಣವನ್ನು ಸಂಶೋಧಿಸಿದಾಗ ಮಾಡತ್ತಾರು ಕೊರತಿಕಟ್ಟೆಯ ವ್ಯಾಘ್ರ ಚಾಮುಂಡಿ ದೈವಸ್ಥಾನದ ಭಂಡಾರ ಮನೆಯು ಜೀರ್ಣಾವಸ್ಥೆಯಲ್ಲಿ ಪತ್ತೆಯಾಗಿರುವುದು, ಬಳಿಕ ಕಾಡು ಆವರಿಸಿದ್ದ ದೈವ ಸ್ಥಾನದ ಜೀರ್ಣೋದ್ದಾರ ಕಾರ್ಯ ನಡೆದು ಕಳೆದ ಫೆಬ್ರವರಿಯಲ್ಲಿ ದೈವಸ್ಥಾನದ ಬ್ರಹ್ಮಕಲಶೋತ್ಸವವು ವೈಭವದಿಂದ ನಡೆದಿರುವುದು ಸದ್ಯಕ್ಕೆ ಇತಿಹಾಸವಾಗಿದೆ.











