ಅಭಿವೃದ್ಧಿಗೆ ಮೊದಲೇ ಬತ್ತಿದ ಕೆರೆಮೂಲೆಯ ಕೆರೆ

0

ಉಪ್ಪಿನಂಗಡಿ: ದಿನೇ ದಿನೇ ವಾತಾವರಣದ ಉಷ್ಣತೆ ಏರಿಕೆಯಾಗುತ್ತಿದ್ದು, ಬಿಸಿಲ ಬೇಗೆ ತಡೆಯಲಾರದಂತಿದೆ. ಈ ನಡುವೆ ಜಲಮೂಲಗಳೆಲ್ಲಾ ಬತ್ತಿ ಹೋಗುತ್ತಿದ್ದು, ಇಲ್ಲಿನ ಮಠದ ಬಳಿಯ ಕೆರೆಮೂಲೆಯ ಸಾರ್ವಜನಿಕ ಕೆರೆಯೂ ಅದರಲ್ಲೊಂದಾಗಿದೆ.

ಉಪ್ಪಿನಂಗಡಿ ಗ್ರಾ.ಪಂ.ನ 6ನೇ ವಾರ್ಡ್‌ನಲ್ಲಿ ಪುರಾತನ ಕೆರೆಯೊಂದಿದ್ದು, ಇದರಿಂದಾಗಿ ಈ ಪ್ರದೇಶಕ್ಕೆ ಕೆರೆಮೂಲೆ ಎಂದೇ ಹೆಸರು ಬಂದಿದೆ. ಈ ಹಿಂದೆ ಇಲ್ಲಿನ ಸುತ್ತಮುತ್ತಲಿನ ಪ್ರದೇಶದವರು ಕೃಷಿ ಸೇರಿದಂತೆ ಇನ್ನಿತರ ಚಟುವಟಿಕೆಗಳಿಗೆ ಜಲಮೂಲಕ್ಕಾಗಿ ಈ ಕೆರೆಯನ್ನೇ ಆಶ್ರಯಿಸುತ್ತಿದ್ದರು. ಆ ಕಾಲದಲ್ಲಿ ಬಿರು ಬೇಸಿಗೆಯಲ್ಲೂ ಈ ಕೆರೆ ಬತ್ತಿದ ಉದಾಹರಣೆ ಇರಲಿಲ್ಲ. ಆದರೆ ಕಾಲಕ್ರಮೇಣ ಈ ಕೆರೆ ಸರಕಾರದ ನಿರ್ಲಕ್ಷ್ಯಕ್ಕೆ ಸಿಲುಕಿದ್ದು, ಹೂಳು ತುಂಬಿ ಸಂಪೂರ್ಣ ಮುಚ್ಚಿ ಹೋದಂತಹ ಸ್ಥಿತಿಯಲ್ಲಿತ್ತು. ಎಂಟು ವರ್ಷಗಳ ಹಿಂದೆ ಕೆರೆಯನ್ನು ಉಳಿಸಬೇಕೆಂಬ ನಿಟ್ಟಿನಲ್ಲಿ ಸರಕಾರ ಹೂಳೆತ್ತಿ, ಭಾಗಶಃ ತಡೆಗೋಡೆಯನ್ನು ನಿರ್ಮಿಸಿತ್ತು. ಆದರೆ ಮತ್ತೆ ಇದರತ್ತ ಯಾರೂ ಮುಖ ಮಾಡುವವರಿಲ್ಲ. ಆದ್ದರಿಂದ ಹೂಳು ತುಂಬಿ ಮತ್ತದೇ ಸ್ಥಿತಿಗೆ ಕೆರೆ ಬಂದಿತ್ತು.

ಉದ್ಯೋಗ ಖಾತ್ರಿ ಯೋಜನೆಯಡಿ 27 ಲಕ್ಷ ರೂ. ಅಂದಾಜು ವೆಚ್ಚದಲ್ಲಿ ಈ ಕೆರೆಯನ್ನು ಅಭಿವೃದ್ಧಿ ಪಡಿಸುವ ಪ್ರಸ್ತಾಪಕ್ಕೆ 2022-23ನೇ ಸಾಲಿನಲ್ಲಿ ಮಂಜೂರಾತಿ ದೊರಕಿದೆ. ಕೆರೆಯ ಬಳಿ ಈ ಕುರಿತಾಗಿ ನಾಮಫಲಕ ಕೂಡಾ ಅಳವಡಿಸಲಾಗಿದೆ. ಆದರೆ ಕೆರೆಯ ಅಭಿವೃದ್ಧಿ ಕಾಮಗಾರಿ ಮಾತ್ರ ಇನ್ನೂ ಆರಂಭವಾಗಿಲ್ಲ. ಕೆರೆಯ ಅಭಿವೃದ್ಧಿ ಕಾಮಗಾರಿ ಆರಂಭವಾಗುವ ಮೊದಲೇ ಈ ಕೆರೆ ಬತ್ತಿ ಬರಡಾಗಿದೆ.

LEAVE A REPLY

Please enter your comment!
Please enter your name here