ಉಪ್ಪಿನಂಗಡಿ: ಮಕ್ಕಳಲ್ಲಿ ವ್ಯಾಪಾರ ವಹಿವಾಟು ಚಟುವಟಿಕೆಗಳ ಅರಿವು ಮೂಡಿಸುವ ಸಲುವಾಗಿ ಉಪ್ಪಿನಂಗಡಿಯ ವೇದಶಂಕರ ನಗರದಲ್ಲಿನ ಶ್ರೀ ರಾಮ ಶಾಲೆಯಲ್ಲಿ ಸೋಮವಾರದಂದು ನಡೆಸಲಾದ ಮಕ್ಕಳ ಸಂತೆ ಎಂಬ ವ್ಯಾಪಾರ ಮೇಳದಲ್ಲಿ ಮಕ್ಕಳು ವ್ಯವಹಾರಿಕ ಚತುರತೆಯನ್ನು ಮೆರೆದು ಗಮನ ಸೆಳೆದರು.
ಮನೆಯ ತೋಟದಲ್ಲಿ ಬೆಳೆಸಿದ ತರಕಾರಿ, ಹಣ್ಣು ಹಂಪಲುಗಳೊಂದಿಗೆ ಒಂದಷ್ಟು ವಿದ್ಯಾರ್ಥಿ ವಿದ್ಯಾರ್ಥಿನಿಯರು ಅಂಗಡಿಗಳನ್ನು ತೆರೆದರೆ, ಇನ್ನು ಕೆಲವು ವಿದ್ಯಾರ್ಥಿ ವಿದ್ಯಾರ್ಥಿನಿಯರು ಚರುಂಬುರಿ, ಹಣ್ಣಿನ ಜ್ಯೂಸ್, ಹಿಡಿಸೂಡಿಯಂತಹ ವಸ್ತುಗಳ ಮಾರಾಟ ಮಳಿಗೆಯನ್ನು ತೆರೆದಿದ್ದರು. ಸಂತೆಯ ಪ್ರಾರಂಭದಲ್ಲಿ ಬಿಗು ನಿಲುವಿನಿಂದ ವ್ಯಾಪಾರ ವಹಿವಾಟು ನಡೆಸಿದ ಎಳೆ ವ್ಯಾಪಾರಿಗಳು ಬಳಿಕ ಉದಾರತೆಯನ್ನು ಮೆರೆದು ಚೌಕಾಸಿಗೆ ಮಾನ್ಯತೆ ನೀಡಿ ತಮ್ಮ ತಮ್ಮಲ್ಲಿನ ವಸ್ತುಗಳ ಮಾರಾಟಕ್ಕೆ ಆದ್ಯತೆ ನೀಡುತ್ತಿದ್ದುದು ಕಂಡು ಬಂತು. ಮಕ್ಕಳಲ್ಲಿನ ವ್ಯಾಪಾರಿ ಕೌಶಲ್ಯವನ್ನು ಕಂಡು ಬಹುತೇಕ ಮಂದಿ ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಸುನಿಲ್ ಅನಾವು, ಸಂಚಾಲಕ ಯು ಜಿ ರಾಧಾ , ಉಪಾಧ್ಯಕ್ಷೆ ಅನುರಾಧ ಶೆಟ್ಟಿ, ಪೋಷಕ ಸಂಘದ ಅಧ್ಯಕ್ಷ ಮೋಹನ್ ಭಟ್, ಇಂದ್ರಪ್ರಸ್ಥ ವಿದ್ಯಾಲಯದ ಅಧ್ಯಕ್ಷ ಕರುಣಾಕರ ಸುವರ್ಣ, ರಾಧಾಕೃಷ್ಣ ಬೊಳ್ಳಾವು, ಉದಯ ಅತ್ರಮಜಲು, ಜಯಶ್ರೀ ಜನಾರ್ಧನ್, ಶಾಲಾ ಮುಖ್ಯೋಪಾಧ್ಯಾಯಿನಿ ವಿಮಲಾ ತೇಜಾಕ್ಷಿ ಮತ್ತಿತರರು ಭಾಗವಹಿಸಿದ್ದರು.