ಕುಮಾರಧಾರನ ತಲುಪದ ನೇತ್ರಾವತಿ ಜಲಕ್ಷಾಮದ ಭೀತಿ

0

ಉಪ್ಪಿನಂಗಡಿ: ಬಿಸಿಲಿನ ತಾಪಮಾನ ದಿನೇ ದಿನೇ ಏರಿಕೆಯಾಗುತ್ತಲೇ ಇದ್ದು, ಇದರಿಂದಾಗಿ ಮಳೆಗಾಲದಲ್ಲಿ ಮೈದುಂಬಿ ಹರಿದು ಜೀವಸೆಲೆಯಾಗಿದ್ದ ನೇತ್ರಾವತಿ ನದಿಯೂ ಈ ಬಾರಿ ನೀರಿಲ್ಲದೆ ಬತ್ತಿ ಹೋಗಿದ್ದು, ಉಪ್ಪಿನಂಗಡಿಯಲ್ಲಿ ತನ್ನ ಹರಿವನ್ನೇ ನಿಲ್ಲಿಸಿದೆ. ಬಿಸಿಲಿನ ಪ್ರಖರತೆಗೆ ಜಲಮೂಲಗಳೆಲ್ಲಾ ಬತ್ತಿ ಹೋಗಿದ್ದು, ಜಲಕ್ಷಾಮದ ಭೀತಿ ಎದುರಾಗಿದೆ.


ಚಿಕ್ಕಮಗಳೂರು ಜಿಲ್ಲೆಯ ಸಂಸೆಯಲ್ಲಿ ಹುಟ್ಟಿ ಪಶ್ಚಿಮ ಘಟ್ಟಗಳನ್ನು ಸೀಲಿಕೊಂಡು ಓಡೋಡಿ ಬರುವ ನೇತ್ರಾವತಿ ನದಿ ಹಾಗೂ ಸುಬ್ರಹ್ಮಣ್ಯದ ಕುಮಾರಪರ್ವತದಲ್ಲಿ ಹುಟ್ಟಿ ಬೆಟ್ಟ, ಗುಡ್ಡಗಳನ್ನು ಸೀಳಿಕೊಂಡು ಬರುವ ಕುಮಾರಧಾರ ನದಿಯು ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ಸನ್ನಿಧಿಯ ಬಳಿ ಸಂಗಮಗೊಂಡು ಪಶ್ಚಿಮದ ಅರಬ್ಬಿ ಸಮುದ್ರದತ್ತ ಹರಿಯುತ್ತಿದ್ದವು. ಆದರೆ ಈ ಬಾರಿಯ ಬಿರು ಬೇಸಿಗೆಯಲ್ಲಿ ಮಾತ್ರ ನೇತ್ರಾವತಿ ನದಿಯು ನೀರಿಲ್ಲದೆ ಸೊರಗಿ ಹೋಗಿದ್ದು, ಕುಮಾರಧಾರ ನದಿಯನ್ನು ಸಂಗಮಿಸುವ ಮೊದಲೇ ತನ್ನ ಹರಿವನ್ನು ಕಡಿತಗೊಳಿಸಿದ್ದಾಳೆ. ಮೂರು ವರ್ಷದ ಹಿಂದೆ ಕೂಡಾ ಇದೇ ರೀತಿಯ ಸ್ಥಿತಿ ನೇತ್ರಾವತಿಗೆ ಬಂದಿದ್ದು, ನೀರಿಲ್ಲದೆ ಬತ್ತಿ ಹೋಗಿರುವ ಜೀವನದಿಯಿಂದಾಗಿ ಈ ಬಾರಿ ಮತ್ತೆ ನಾಡಿನಲ್ಲಿ ನೀರಿನ ಅಭಾವ ಉಂಟಾಗುವ ಭೀತಿ ಎದುರಾಗಿದೆ.


ಮಳೆ ನೀರು ಇಂಗುತ್ತಿಲ್ಲ:
ಮಳೆ ನೀರು ಇಂಗಲು ಪ್ರಮುಖ ಕೊಡುಗೆಗಳನ್ನು ನೀಡುತ್ತಿದ್ದ ಭತ್ತ ಗದ್ದೆಗಳು, ಕೆರೆಗಳು ಇಂದು ಈ ಭಾಗದಲ್ಲಿ ನಾಶವಾಗಿವೆ. ಗದ್ದೆಯ ಜಾಗವನ್ನು ಅಡಿಕೆ ತೋಟ, ಕಾಂಕ್ರೀಟ್ ಕಟ್ಟಡಗಳು ಆವರಿಸಿವೆ. ವಾತಾವರಣವನ್ನು ತಂಪಿಡಲು ಸಹಕಾರಿಯಾಗಿದ್ದ ಬೃಹದಾಕರಾದ ಮರಗಳು ಅಭಿವೃದ್ಧಿಗಾಗಿ ಬಲಿಯಾಗಿವೆ. ನೇತ್ರಾವತಿ ನದಿ ಹಾದು ಬರಬೇಕಾದರೆ ಸಾವಿರಾರು ಎಕರೆ ಕೃಷಿ ತೋಟಗಳನ್ನು ದಾಟಿಕೊಂಡೇ ಬರುತ್ತಿವೆ. ನದಿ ತೀರದ ತೋಟಗಳಿಗೆ ನೀರುಣಿಸಲು ಸಾವಿರಾರು ಪಂಪ್‌ಗಳು ಉಭಯ ನದಿಗಳ ದಡಗಳಲ್ಲಿದ್ದು, ಕೃಷಿಕನಿಗೆ ಉಚಿತ ವಿದ್ಯುತ್ ಸೌಲಭ್ಯವಿರುವುದರಿಂದ ರಾತ್ರಿ- ಹಗಲೆನ್ನದೇ ವಿದ್ಯುತ್ ಇದ್ದಷ್ಟು ಕಾಲ ನದಿಯ ನೀರನ್ನು ಹೀರಿಕೊಳ್ಳುತ್ತಲೇ ಇರುತ್ತವೆ. ಕೆಲವರ ತೋಟದಲ್ಲಿ ನೀರು ಹೆಚ್ಚಾಗಿ ಹೊರ ಹರಿದು ಪೋಲಾಗುತ್ತಿದ್ದರೂ, ಪಂಪ್‌ಗಳು ಮಾತ್ರ ಚಾಲನೆಯಲ್ಲೇ ಇರುವಂತಹ ಸ್ಥಿತಿಯೂ ಇದೆ. ಇವೆಲ್ಲವುಗಳು ಕೂಡಾ ನದಿ ಬತ್ತಿ ಹೋಗಲು ಕಾರಣಗಳಾಗಿವೆ.


ಅಂತರ್ಜಲಕ್ಕೆ ಕನ್ನ:
ಉಪ್ಪಿನಂಗಡಿ, 34ನೇ ನೆಕ್ಕಿಲಾಡಿ, ಪೆರ್ನೆ, ಇಳಂತಿಲ ಪಂಚಾಯತ್ ವ್ಯಾಪ್ತಿಯನ್ನು ಸೀಳಿಕೊಂಡೇ ನೇತ್ರಾವತಿ ನದಿ ಹರಿದರೂ ಇಲ್ಲಿನ ಗ್ರಾ.ಪಂ.ಗಳು ಜನರಿಗೆ ಕುಡಿಯುವ ನೀರು ನೀಡಲು ಪ್ರಮುಖವಾಗಿ ಆಶ್ರಯಿಸಿರೋದು ಕೊಳವೆ ಬಾವಿಗಳನ್ನೇ. ಇನ್ನು ಕೃಷಿಕರೂ ಕೂಡಾ ಮೊರೆ ಹೋಗಿರೋದು ಕೊಳವೆ ಬಾವಿಯನ್ನೇ. ಒಂದೊಂದು ತೋಟದಲ್ಲಿ ಮೂರ್‍ನಾಲ್ಕು ಕೊಳವೆ ಬಾವಿಗಳನ್ನು ಕೊರೆಯಿಸಿರುವುದು ಕಾಣಬಹುದು. ನದಿ ತೀರದ ಕೆಲ ಕೃಷಿಕರೂ ಕೂಡಾ ಕೊಳವೆ ಬಾವಿಯನ್ನೇ ನೆಚ್ಚಿಕೊಂಡಿದ್ದಾರೆ. ಇಲ್ಲಿ ಒಂದೆಡೆ ನದಿ ಬತ್ತಿ ಹೋದರೆ, ಅಂತರ್ಜಲ ಮಟ್ಟ ಕೂಡಾ ಪಾತಾಳಕ್ಕೆ ಕುಸಿದಿದೆ.


ಮಳೆಗಾಲದ ಬಳಿಕ ಕೆಲವು ಕಡೆ ಒಂದೆರಡು ಮಳೆ ಬಂತಾದರೂ, ಅದು ನದಿ ನೀರಿನ ಹೆಚ್ಚಳಕ್ಕೆ ಕಾರಣವಾಗಿಲ್ಲ. ಹಗಲು ಹೊತ್ತಿನಲ್ಲಿ ಭೂಮಿ ಕಾದ ಕೆಂಡದಂತಿದ್ದು, ನೀರನ್ನೆಲ್ಲಾ ಭೂಮಿಯೇ ತನ್ನ ಒಡಲಿಗೆ ಎಳೆದುಕೊಳ್ಳುತ್ತಿದೆ. ಇನ್ನು ವಾತಾವರಣದ ಉಷ್ಣತೆಯಿಂದಾಗಿ ಇದ್ದ ನೀರು ಆವಿಯಾಗತೊಡಗಿವೆ. ಇದು ಕೇವಲ ನೇತ್ರಾವತಿ ನದಿಯ ಕಥೆಯಲ್ಲ. ಕುಮಾರಧಾರ ನದಿಯ ಅವಸ್ಥೆಯೂ ಇದೇ ಆಗಿದೆ. ಪ್ರಕೃತಿಯ ನಾಶ ನಿರಂತರ ನಡೆಯುತ್ತಿದ್ದು, ಇದರಿಂದಾಗಿ ಬಿಸಿಲಿನ ಪ್ರಖರತೆಯಿಂದಾಗಿ ಜಲ ಮೂಲಗಳೆಲ್ಲವೂ ಬತ್ತಿ ಹೋಗಿ ಈ ಬಾರಿ ಜೀವನದಿಗಳು ಹರಿಯುವ ಭಾಗದಲ್ಲೇ ಜಲಕ್ಷಾಮ ಉಂಟಾಗುವ ಭೀತಿ ಎದುರಾಗಿದೆ.

LEAVE A REPLY

Please enter your comment!
Please enter your name here