ಅಶೋಕ್ ರೈ ಪುತ್ತೂರು ಕಾಂಗ್ರೆಸ್ ಅಭ್ಯರ್ಥಿ; ಘೋಷಣೆಯೊಂದೇ ಬಾಕಿ- ವ್ಯಾಪಕ ಪ್ರಚಾರ

0

ಪುತ್ತೂರು: ಮೇ 10ರಂದು ನಡೆಯಲಿರುವ ಕರ್ನಾಟಕ ವಿಧಾನಸಭಾ ಚುನಾವಣೆಗೆ ಪುತ್ತೂರು ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲು ಕೋಡಿಂಬಾಡಿ ಅಶೋಕ್ ಕುಮಾರ್ ರೈಯವರಿಗೆ ಪಕ್ಷದ ಹೈಕಮಾಂಡ್ ಅವಕಾಶ ಕಲ್ಪಿಸಿದ್ದು ಅಧಿಕೃತ ಘೋಷಣೆ ಮಾತ್ರ ಬಾಕಿ ಉಳಿದಿದೆ ಎಂದು ವ್ಯಾಪಕವಾಗಿ ಪ್ರಚಾರವಾಗುತ್ತಿದೆ.

ಕಾಂಗ್ರೆಸ್ ಮೂರನೇ ಪಟ್ಟಿಯಲ್ಲಿ ಅಶೋಕ್ ಕುಮಾರ್ ರೈ ಹೆಸರು: ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಿಗೆ ಸಂಬಂಧಿಸಿ ಕಾಂಗ್ರೆಸ್ ಎರಡು ಹಂತದಲ್ಲಿ ಅಭ್ಯರ್ಥಿಗಳ ಪಟ್ಟಿಯನ್ನು ಈಗಾಗಲೇ ಬಿಡುಗಡೆಗೊಳಿಸಿದೆ. ಪುತ್ತೂರು ಸೇರಿದಂತೆ ಕೆಲವೊಂದು ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಘೋಷಿಸಲು ಬಾಕಿ ಇರಿಸಿಕೊಂಡಿದೆ. ಕಾಂಗ್ರೆಸ್‌ನ ಮೂರನೇ ಪಟ್ಟಿಯಲ್ಲಿ ಅಶೋಕ್ ಕುಮಾರ್ ರೈಯವರ ಹೆಸರು ಘೋಷಣೆಯಾಗಲಿದೆ. ಪುತ್ತೂರು ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್‌ನಲ್ಲಿ ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ,ಕೋಡಿಂಬಾಡಿ ರೈ ಎಸ್ಟೇಟ್ ಮಾಲಕ ಅಶೋಕ್ ಕುಮಾರ್ ರೈ ಮತ್ತು ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿಯವರ ಹೆಸರು ಪಮುಖ ರೇಸ್‌ನಲ್ಲಿತ್ತು. ಇದೀಗ ಕೆಪಿಸಿಸಿ ಮತ್ತು ಸ್ಕ್ರೀನಿಂಗ್ ಕಮಿಟಿ ಅಶೋಕ್ ಕುಮಾರ್ ರೈಯವರ ಹೆಸರನ್ನು ಅಂತಿಮಗೊಳಿಸಿದೆ. ಎಐಸಿಸಿಯ ಅಂತಿಮ ಮುದ್ರೆಯೊಂದಿಗೆ ಪಟ್ಟಿ ಅಧಿಕೃತವಾಗಿ ಬಿಡುಗಡೆಗೊಳ್ಳಲಿದ್ದು ಪುತ್ತೂರು ಕ್ಷೇತ್ರಕ್ಕೆ ಅಶೋಕ್ ಕುಮಾರ್ ರೈ ಹೆಸರು ಘೋಷಣೆಯಾಗುವುದು ಖಚಿತವಾಗಿದೆ ಎಂದು ವ್ಯಾಪಕವಾಗಿ ಪ್ರಚಾರವಾಗುತ್ತಿದೆ.ಇತ್ತ ಬಿಜೆಪಿ ಅಭ್ಯರ್ಥಿಯಾಗಿ ಆಶಾ ತಿಮ್ಮಪ್ಪ ಗೌಡ ಅವರು ಈಗಾಗಲೇ ಅಧಿಕೃತವಾಗಿ ಘೋಷಣೆಯಾಗಿರುವುದರಿಂದ ಶಕುಂತಳಾ ಶೆಟ್ಟಿಯವರಿಗೆ ಇಲ್ಲವೇ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆಯಾಗಿರುವ ಅನಿತಾ ಹೇಮನಾಥ ಶೆಟ್ಟಿಯವರಿಗೆ ಕಾಂಗ್ರೆಸ್‌ನಲ್ಲಿ ಅವಕಾಶ ದೊರೆಯಲಿದೆ ಎಂಬ ಮಾತುಗಳೂ ಕೇಳಿ ಬರುತ್ತಿವೆ. ಮತ್ತೊಂದೆಡೆ, ಪ್ರತಿ ಚುನಾವಣೆ ಸಂದರ್ಭದಲ್ಲೂ ಕಾವು ಹೇಮನಾಥ ಶೆಟ್ಟಿಯವರ ಹೆಸರು ಪ್ರಸ್ತಾಪವಾಗಿ ಕೊನೆಗೆ ಅವರಿಗೆ ಅವಕಾಶ ನಿರಾಕರಣೆಯಾಗುತ್ತಿರುವುದರಿಂದ ಈ ಬಾರಿಯಾದರೂ ಅವರಿಗೆ ಅವಕಾಶ ದೊರೆಯುವ ಸಾಧ್ಯತೆ ಇದೆ ಎಂದೂ ಕೆಲವರು ಹೇಳುತ್ತಿದ್ದಾರೆ. ಒಂದೆರಡು ದಿನಗಳಲ್ಲಿ ಕಾಂಗ್ರೆಸ್ ವರಿಷ್ಠರು ಅಭ್ಯರ್ಥಿ ಘೋಷಣೆ ಮಾಡುವುದರೊಂದಿಗೆ ಗೊಂದಲಗಳಿಗೆ ಇತಿಶ್ರೀ ಹಾಡಲಿದ್ದಾರೆ.

ಅಶೋಕ್ ಕುಮಾರ್ ರೈ ಇಂದು ದೇವಳಕ್ಕೆ: ಅಶೋಕ್ ಕುಮಾರ್ ರೈಯವರು ಏ.12ರಂದು ಬೆಳಿಗ್ಗೆ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದ ಬಳಿಕ ಮಠಂತಬೆಟ್ಟು ಮಹಿಷಮರ್ದಿನಿ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಲಿದ್ದಾರೆ ಎಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here