ಇವರ ರಿಕ್ಷಾದಲ್ಲಿ ಜ್ಯೂಸ್ ಫ್ರೀ…!-ಬಿಸಿಲ ತಾಪಕ್ಕೆ ಪ್ರಯಾಣಿಕರಿಗೆ ನೆರವಾಗುವ ರಿಕ್ಷಾ ಚಾಲಕ

0

ಬರಕ : ಸಿದ್ದಿಕ್‌ ಕುಂಬ್ರ


ಪುತ್ತೂರು:ರಿಕ್ಷಾದಲ್ಲಿ ಪ್ರಯಾಣಿಸುವ ವೇಳೆ ಏರಿದ ತಾಪಮಾನದಿಂದ ಮುಖಕ್ಕೆ ರಾಚುವ ಬಿಸಿಲ ಝಳ. ಕುಡಿಯಲು ಒಂದಿಷ್ಟು ತಂಪಾದ ಜ್ಯೂಸ್‌ ಸಿಗುತ್ತಿದ್ದರೆ ಚೆನ್ನಾಗಿತ್ತು ಎಂದು ನೀವು ಯೋಚನೆ ಮಾಡಿದ್ದರೆ ಅದು ತಪ್ಪಲ್ಲ. ನೀವು ಪುತ್ತೂರಿನಲ್ಲಿದ್ದರೆ ನಿಮ್ಮ ಯೋಚನೆ ನಿಜವಾಗಲಿದೆ. ನೆಹರೂನಗರ ನಿವಾಸಿ ಸುನೀಲ್‌ ಎಂಬವರು ತನ್ನ ರಿಕ್ಷಾದಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಪುನರ್‌ ಪುಳಿ ಜ್ಯೂಸ್‌ ಉಚಿತವಾಗಿ ನೀಡುವ ಮೂಲಕ ಜನರ ದಾಹ ಇಂಗಿಸುವ ಕೆಲಸ ಮಾಡುತ್ತಿದ್ದಾರೆ.

ಪುತ್ತೂರು ನಗರದಲ್ಲಿ ಸುನೀಲ್‌ ಅವರ ರಿಕ್ಷಾದಲ್ಲಿ ನೀವು ಪ್ರಯಾಣ ಮಾಡಿದರೆ ನಿಮಗೆ ಜ್ಯೂಸ್ ಫ್ರೀಯಾಗಿ ಕುಡಿಯಬಹುದು. ತಂಪಾದ ತಾಜಾ ಪುನರ್ಪುಳಿ ಜ್ಯೂಸ್ ದೊರೆಯುವ ರಿಕ್ಷಾ ನೆಹರೂ ನಗರದ ಚಾಲಕ ಸುನಿಲ್ ಎಂಬವರಿಗೆ ಸೇರಿದ್ದು. ಪುತ್ತೂರು ನಗರ ಸೇರಿದಂತೆ ಜಿಲ್ಲೆಯಾಧ್ಯಂತ ಬಿಸಿಲ ತಾಪ ಜೋರಾಗಿಯೇ ಇದೆ. ಮನೆಯಿಂದ ಹೊರಗೆ ಬರಲಾರದಷ್ಟು ತಾಪ ಇದೆ. ಇದಕ್ಕಾಗಿ ತನ್ನ ರಿಕ್ಷಾದಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ತನ್ನ ರಿಕ್ಷಾದ ಒಂದು ಭಾಗದಲ್ಲಿ ಪುನರ್ಪುಳಿ ಜ್ಯೂಸ್ ಇಡಲಾಗಿದ್ದು, ಸುಮಾರು 15 ಲೀಟರ್ ಸಾಮರ್ಥ್ಯದ ಸಣ್ಣ ಫೈಬರ್ ಟ್ಯಾಂಕ್‌ನಲ್ಲಿ ಜ್ಯೂಸ್ ತುಂಬಿಸಲಾಗಿದೆ. ಕುಡಿಯುವಾಗ ತಂಪಾಗಿರಲೆಂದು ಐಸ್ ತುಂಡುಗಳನ್ನೂ ಹಾಕಲಾಗಿರುತ್ತದೆ. ಬೇಸಿಗೆಯಲ್ಲಿ ಜ್ಯೂಸ್ ಉಳಿದ ಸಮಯದಲ್ಲಿ ಅದೇ ಟ್ಯಾಂಕ್‌ನಲ್ಲಿ ಕುಡಿಯುವ ನೀರು ಇದ್ದೇ ಇರುತ್ತದೆ.
ಕಳೇದ 6 ವರ್ಷಗಳಿಂದ ಪುತ್ತೂರು ನಗರದಲ್ಲಿ ರಿಕ್ಷಾ ಚಾಲಕರಾಗಿರುವ ಸುನಿಲ್ ಮೂಲತ ಕೇರಳದವರು. ಆದರೆ ಕಳೆದ 6 ವರ್ಷಗಳಿಂದ ನೆಹರೂನಗರದಲ್ಲಿ ವಾಸ್ತವ್ಯವಿದ್ದಾರೆ. ಕಳೆದ ಎರಡು ವರ್ಷಗಳಿಂದ ಜ್ಯೂಸ್ ಕೊಡುವ ಮೂಲಕ ಸಮಾಜ ಸೇವೆಯನ್ನು ಆರಂಭಿಸಿದ್ದಾರೆ. ಇವರ ಸೇವೆಯನ್ನು ಪ್ರಯಾಣಿಕರು ಕೊಂಡಾಡಿದ್ದಾರೆ. ಬೇಸಿಗೆಯಲ್ಲಿ ಮಾತ್ರವಲ್ಲದೆ ವಿಶೇಷ ಹಬ್ಬಗಳ ಸಂದರ್ಬದಲ್ಲಿ, ಎಲ್ಲಾ ಧರ್ಮದ ಹಬ್ಬಗಳ ಸಂದರ್ಭದಲ್ಲಿಯೂ ರಿಕ್ಷಾದಲ್ಲಿ ಉಚಿತವಾಗಿ ಜ್ಯೂಸ್ ನೀಡುವ ಮೂಲಕ ಮಹಾನ್‌ ಮಾನವತಾವಾಧಿಯಾಗಿ ಚಾಲಕ ಸುನಿಲ್ ಗುರುತಿಸಿಕೊಂಡಿದ್ದಾರೆ

ರಿಕ್ಷಾದಲ್ಲಿ ಪ್ರಯಾಣಿಸುವವ ಪ್ರಯಾಣಿಕರಿಗೆ ಮಾತ್ರವಲ್ಲ ಇತರರಿಗೂ ಕುಡಿಯಬಹುದು. ಖಾಲಿಯಾದರೆ ಪುನ ತುಂಬಿಸುತ್ತೇನೆ. ಕೆಲವೊಮ್ಮೆ ಎರಡು ಬಾರಿ ತುಂಬಿಸಬೇಕಾಗುತ್ತದೆ. ದಾಹ ಉಳ್ಳವನಿಗೆ ನೀರು ಕೊಡುವುದು ಅಥವಾ ಜ್ಯೂಸ್ ಕೊಡುವುದು ಪುಣ್ಯದಾಯಕವಾದ ಕಾರ್ಯ ಎಂದು ನಾನು ನಂಬಿದ್ದೇನೆ. ಪುತ್ತೂರು ದೇವರ ಜಾತ್ರೋತ್ಸವದ ಪ್ರಯುಕ್ತ ಪ್ರತೀ ವರ್ಷ ಸ್ಪೆಶಲ್ ಆಗಿ ಜ್ಯೂಸ್ ಮಾಡುತ್ತೇನೆ.
ಸುನಿಲ್ , ರಿಕ್ಷಾ ಚಾಲಕ

LEAVE A REPLY

Please enter your comment!
Please enter your name here