ಪುತ್ತೂರು : “ಸೋನ್ಸ್ ಅವರು ಸಹಜ ಕೃಷಿಯಿಂದ ನಿಜಾರ್ಥದಲ್ಲಿ ಮಣ್ಣಿನ ಮಗ” ಎಂದು ಜೈನ ಮಠದ ಭಟ್ಟಾರಕ ಶ್ರೀ ಚಾರುಕೀರ್ತಿ ಪಂಡಿತಾಚಾರ್ಯ ಮಹಾ ಸ್ವಾಮೀಜಿ ಹೇಳಿದ್ದಾರೆ. ಡಾ. ನರೇಂದ್ರ ರೈ ದೇರ್ಲ ಅವರ ಕೃತಿ ಎಲ್ ಸಿ ಸೋನ್ಸ್ ಸೃಷ್ಟಿಸಿದ ಫಲ ಪ್ರಪಂಚ “ಸೋನ್ಸ್ ಫಾರ್ಮ್” ಬಿಡುಗಡೆಗೊಳಿಸಿ ಮಾತನಾಡಿದರು.
ಮೂಡಬಿದ್ರೆಯ ಕನ್ನಡ ಭವನದಲ್ಲಿ ಎ.16ರಂದು ಡಾ. ಎಲ್.ಸಿ ಸೋನ್ಸ್ ಅಭಿಮಾನಿ ಬಳಗದ ವತಿಯಿಂದ ನಡೆದ ಸಾರ್ವಜನಿಕ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಈ ಕೃತಿಯನ್ನು ಬಿಡುಗಡೆಗೊಳಿಸಲಾಯಿತು.
ಕೃತಿಯ ಕುರಿತು ಮಾತನಾಡಿದ ಅಡಿಕೆ ಪತ್ರಿಕೆಯ ಸಂಪಾದಕ ಶ್ರೀ ಪಡ್ರೆ, ದೇರ್ಲ ಅವರ ಕೃತಿ ಕುತೂಹಲ ಅರಳಿಸುತ್ತದೆ. ಗೃಹಿಣಿಯರ ಜತೆಗೆ ಕೃಷಿಕರ ತ್ಯಾಗ ಸಾಧನೆಯ ಬದುಕನ್ನು ದಾಖಲಿಸುವಲ್ಲಿ ಸಾಹಿತ್ಯ ವಲಯ ಹಿಂದುಳಿದಿರುವ ಆತಂಕದ ನಡುವೆ ಸೋನಸ್ ಕುರಿತಾದ ಈ ಕೃತಿ ತೋಟಗಾರಿಕೆ ವಿವಿ ವಿದ್ಯಾರ್ಥಿಗಳಿಗೆ, ಹೋಸ್ಕೂಲ್ ವಿದ್ಯಾರ್ಥಿಗಳಿಗೆ ಅಗತ್ಯವಿರುವ ಪಠ್ಯ ವಿಷಯವಾಗಿದೆ ಎಂದು ಹೇಳಿದರು.
ಮಾಜಿ ಸಚಿವ ಅಭಯ ಚಂದ್ರ ಜೈನ್, ಚೌಟರ ಅರಮನೆಯ ಕುಲದೀಪ್, ಉದ್ಯಮಿ ಶ್ರೀಪತಿ ಭಟ್, ರೋಟರಿ ಎಜುಕೇಶನ್ ಸೊಸೈಟಿ ಅಧ್ಯಕ್ಷ ನಾರಾಯಣ ಪಿ.ಎಂ. ಸೋನ್ಸ್ ಕುಟುಂಬಸ್ಥರು ಸೇರಿದಂತೆ ಹಲವು ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು.