ಪ್ರಜ್ಞಾವಂತ ನಾಗರಿಕರು ಮದ್ಯಪಾನದ ಆಮಿಷಕ್ಕೆ ಬಲಿಯಾಗಬಾರದು-ಮತದಾರರ ಜಾಗೃತಿ ಪತ್ರ ಬಿಡುಗಡೆ ಮಾಡಿದ ಜನಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷ ಪದ್ಮನಾಭ ಶೆಟ್ಟಿ

0

ಪುತ್ತೂರು: ಮದ್ಯ ಇನ್ನಿತರ ಆಮಿಷಕ್ಕೆ ಬಲಿಯಾಗಿ ಮತ ಚಲಾಯಿಸಿದಲ್ಲಿ ಕೇವಲ ಹೆಂಡಕ್ಕಾಗಿ ನಮ್ಮನ್ನು ನಾವು ಮಾರಿಕೊಂಡಂತೆ. ಇದರಿಂದ ಮತದಾರರು ಜಾಗೃತಗೊಳ್ಳಬೇಕು. ಅದೇ ರೀತಿ ಚುನಾವಣೆಗಳಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ಮದ್ಯ ಹಂಚುವುದಿಲ್ಲ, ಆಮಿಷ ಒಡ್ಡುವುದಿಲ್ಲ ಎಂದು ಪ್ರಮಾಣ ಮಾಡಬೇಕು ಮತ್ತು ಮದ್ಯ ಮುಕ್ತ ಆಡಳಿತವನ್ನು ಪ್ರಣಾಳಿಕೆಯಲ್ಲಿ ತೋರಿಸಬೇಕೆಂದು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ದ.ಕ.ಜಿಲ್ಲಾಧ್ಯಕ್ಷ ಪದ್ಮನಾಭ ಶೆಟ್ಟಿ ಹೇಳಿದರು.


ಪುತ್ತೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಮದ್ಯಮುಕ್ತ ಚುನಾವಣೆ ಕುರಿತು ಮತದಾರರ ಜಾಗೃತಿ ಪತ್ರವನ್ನು ಬಿಡುಗಡೆ ಮಾಡಿ, ಮೇ 10ರಂದು ವಿಧಾನಸಭಾ ಚುನಾವಣೆ ನಡೆಯಲಿದೆ. ಈ ಸಂದರ್ಭ ಮುಗ್ಧ ಜನರಿಗೆ ಮದ್ಯ ಕುಡಿಸಿ ಮತ ಪಡೆಯುವ ಪ್ರಯತ್ನ ನಡೆಯಬಹುದು. ಅಂತಹ ಪ್ರಯತ್ನಗಳು ಎಲ್ಲಿಯೇ ಆಗಲಿ, ಯಾರಿಂದಲೇ ಆಗಲಿ ನಡೆದಲ್ಲಿ ಅದನ್ನು ಬಲವಾಗಿ ವಿರೋಧಿಸಿ, ಮತದಾರರಿಗೆ ಹೆಂಡದ ಆಮಿಷ ಒಡ್ಡಿ ಮತ ಪಡೆಯುವ ಪ್ರಯತ್ನ ನಡೆಯುತ್ತಿರುವುದು ಗಮನಕ್ಕೆ ಬಂದಲ್ಲಿ ತಕ್ಷಣ ತಾಲೂಕಿನ ಮುಖ್ಯಚುನಾವಣಾಧಿಕಾರಿಗಳಿಗೆ, ತಹಸೀಲ್ದಾರ್‌ಗೆ ಮತ್ತು ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಿ ಎಂದರು.


ಡಾ| ಡಿ ವೀರೇಂದ್ರ ಹೆಗ್ಡೆಯವರ ಮಾರ್ಗದರ್ಶನದಿಂದ 19,923 ಜಾಗೃತಿ ಕಾರ್ಯಕ್ರಮ:
ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯು ಕಳೆದ 31 ವರ್ಷಗಳಿಂದ ಕರ್ನಾಟಕ ರಾಜ್ಯದಾದ್ಯಂತ ವ್ಯಸನಮುಕ್ತ ಸಮಾಜ ನಿರ್ಮಾಣ ಮಾಡುವ ದೃಷ್ಟಿಯಿಂದ ಕಾರ್ಯೋನ್ಮುಖವಾಗಿದೆ. ಸಂಘಟನೆಯ ಮೂಲಕ ಮದ್ಯವರ್ಜನ ಶಿಬಿರ, ಜಾಗೃತಿ ಮತ್ತು ಪ್ರಚಾರ ಕಾರ್ಯಕ್ರಮಗಳು ಸ್ವಾಸ್ಥ ಸಂಕಲ್ಪ ಕಾರ್ಯಕ್ರಮ, ಮಾದಕ ವಸ್ತುಗಳ ತಡೆಗಟ್ಟುವಿಕೆ ಮತ್ತು ನಿರ್ವಹಣೆ, ನವಜೀವನ ಸಮಿತಿ, ವ್ಯಸನಮುಕ್ತಿ ಮತ್ತು ಸಂಶೋಧನ ಕೇಂದ್ರ ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಾವಿರಾರು ವ್ಯಸನಭಾದಿತ ಕುಟುಂಬಗಳಿಗೆ ನೆರವಾಗಿದೆ. ಇವೆಲ್ಲ ಪೂಜ್ಯರಾದ ಡಾ| ಡಿ.ವೀರೇಂದ್ರ ಹೆಗ್ಡೆಯವರ ಮಾರ್ಗದರ್ಶನದಲ್ಲಿ ನಡೆಯುತ್ತಿದ್ದು ಇದುವರೆಗೆ 19,923 ಜಾಗೃತಿ ಕಾರ್ಯಕ್ರಮಗಳನ್ನು ಮಾಡಲಾಗಿದೆ ಎಂದು ಪದ್ಮನಾಭ ಶೆಟ್ಟಿ ಹೇಳಿದರು.


ವ್ಯಸನಮುಕ್ತರಿಗೆ ನವಜೀವನ ಸಮಿತಿ:
ಮದ್ಯವರ್ಜನ ಶಿಬಿರದ ಬಳಿಕ ವ್ಯಸನಮುಕ್ತರು ನವಜೀವನ ಸಮಿತಿಗಳನ್ನು ಸ್ಥಳೀಯವಾಗಿ ರಚಿಸಿ ಅನುಪಾಲನೆ ಮಾಡುತ್ತಿದ್ದಾರೆ. 4131 ನವಜೀವನ ಸಮಿತಿಗಳ ಮೂಲಕ ಪಾನಮುಕ್ತರು ಸಂಘಟಿತರಾಗುತ್ತಿದ್ದಾರೆ. ರಾಜ್ಯದಲ್ಲಿ 58 ಗ್ರಾಮಗಳು ಪಾನಮುಕ್ತ ಗ್ರಾಮಗಳಾಗಿ ಬದಲಾಗಿವೆ ಎಂದು ಹೇಳಿದ ಪದ್ಮನಾಭ ಶೆಟ್ಟಿಯವರು ಶಾಲಾ ಕಾಲೇಜುಗಳಲ್ಲೂ ಸ್ವಾಸ್ಥ ಸಂಕಲ್ಪ ಕಾರ್ಯಕ್ರಮ ನಡೆಸಲಾಗುತ್ತಿದೆ. 10,21,229 ವಿದ್ಯಾರ್ಥಿಗಳಿಗೆ ಸ್ವಾಸ್ಥ ಸಂಕಲ್ಪದ ಬೋಧನೆ ನೀಡಲಾಗಿದೆ ಎಂದರು.


ಭಜನೆ ಮದ್ಯವನ್ನು ದೂರಿಕರಿಸಿದೆ:
ಯುವ ಜನಾಂಗ ಇತ್ತೀಚಿನ ದಿನದಲ್ಲಿ ಮದ್ಯಪಾನ ಮಾಡುತ್ತಿರುವ ಕುರಿತು ಕಳವಳ ವ್ಯಕ್ತವಾಗಿದೆ. ಹಿಂದಿನ ಜನಾಂಗದಲ್ಲಿ ಹಿರಿಯರು ಮದ್ಯಪಾನ ಮಾಡುತ್ತಿದ್ದರು. ಇವತ್ತು ಯುವಜನತೆ ಮದ್ಯಪಾನದತ್ತ ಒಲವು ತೋರಿರುವುದು ಮದುವೆ, ಮದರಂಗಿ ಶಾಸ್ತ್ರದಂತಹ ಕಾರ್ಯಕ್ರಮಗಳಿಂದಾಗಿ. ಇಲ್ಲಿ ಸಹವಾಸ ದೋಷವು ಇದೆ. ಇದನ್ನು ತಡೆಯುವ ನಿಟ್ಟಿನಲ್ಲಿ ಜನಜಾಗೃತಿ ವೇದಿಕೆಯ ಮೂಲಕ ಶುಭಕಾರ್ಯಗಳಲ್ಲಿ ಭಜನೆಗೆ ಆದ್ಯತೆ ನೀಡಲು ಪ್ರೋತ್ಸಾಹಿಸಿದೆ. ಇದು ತುಂಬಾ ಪರಿಣಾಮ ಬೀರಿದೆ. ಇದರಿಂದ ದುಶ್ಚಟಗಳು ಕಡಿಮೆಯಾಗಿದೆ ಎಂದು ಜನಜಾಗೃತಿ ವೇದಿಕೆಯ ಜಿಲ್ಲಾ ಕಾರ್ಯದರ್ಶಿ ಮತ್ತು ಶ್ರೀ ಕ್ಷೇ.ಧ.ಗ್ರಾ.ಯೋಜನೆಯ ಜಿಲ್ಲಾ ನಿರ್ದೇಶಕ ಪ್ರವೀನ್ ಕುಮಾರ್ ಮತ್ತು ಉಡುಪಿ ಪ್ರಾದೇಶಿಕ ವಿಭಾಗದ ಜನಜಾಗೃತಿ ವೇದಿಕೆ ಯೋಜನಾಧಿಕಾರಿ ಗಣೇಶ್ ಆಚಾರ್ಯ ಅವರು ಹೇಳಿದರು.

ಚುನಾವಣೆಯ ಸಂದರ್ಭ ರಾಜಕೀಯ ಪಕ್ಷಗಳು ತಮ್ಮ ಪ್ರಣಾಳಿಕೆಯಲ್ಲಿ ವಿವಿಧ ಭರವಸೆಗಳನ್ನು ನೀಡುವ ಜೊತೆಗೆ ಮದ್ಯಮುಕ್ತ ಸರಕಾರ ಆಡಳಿತ ನೀಡುವ ಭರವಸೆಯನ್ನು ನೀಡಬೇಕು. ಯಾವ ಸರಕಾರವು ತಮ್ಮ ಬೇಡಿಕೆಗೆ ಸಮರ್ಪಕ ಉತ್ತರ ಕೊಡಲಿಲ್ಲ. ಹಾಗಾಗಿ ಯಾವುದೇ ಸರಕಾರ ಬರಲಿ ಮದ್ಯಮುಕ್ತ ಆಡಳಿತ ಕೊಡುವ ವ್ಯವಸ್ಥೆ ಆಗಬೇಕೆಂದು ಪದ್ಮನಾಭ ಶೆಟ್ಟಿ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಜನಜಾಗೃತಿ ವೇದಿಕೆ ಕಡಬ ತಾಲೂಕು ಅಧ್ಯಕ್ಷ ನ್ಯಾಯವಾದಿ ಮಹೇಶ್ ಕೆ.ಸವಣೂರು, ಜಿಲ್ಲಾ ಯೋಜನಾಧಿಕಾರಿ ಗೋಪಾಲ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here