ಕರ್ನಾಟಕಕ್ಕೆ ಭ್ರಷ್ಟಾಚಾರವೇ ದೊಡ್ಡ ಆತಂಕ – ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆಯಲ್ಲಿ ಪ್ರಿಯಾಂಕಾ ಗಾಂಧಿ

0

ಮಂಗಳೂರು:ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದರೆ ತುಳು ಭಾಷೆಯನ್ನು ಎಂಟನೇ ಪರಿಚ್ಛೇದಕ್ಕೆ ಸೇರಿಸುವುದು ಹಾಗೂ ಕರಾವಳಿಯ ಅಭಿವೃದ್ಧಿಗೆ ವಿಶೇಷ ಅನುದಾನ ನೀಡಲು ಬದ್ಧ ಎಂದು ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ.

ಮುಲ್ಕಿ ಕೊಲ್ನಾಡು ಬಳಿ ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು. ಕರ್ನಾಟಕಕ್ಕೆ ಭ್ರಷ್ಟಾಚಾರವೇ ದೊಡ್ಡ ಆತಂಕವಾಗಿದೆ. ಚುನಾವಣೆಯ ಸಂದರ್ಭ ದೇಶದ ಪ್ರಧಾನಿ, ಬಿಜೆಪಿ ಮುಖಂಡರು ಧರ್ಮ, ಜಾತಿ ಆತಂಕವಾದ ಬಗ್ಗೆ ಮಾತನಾಡುತ್ತಾರೆ. ಆದರೆ ಕರ್ನಾಟಕದ ಜನರು ನಿಜವಾಗಿ ಆತಂಕ ಪಡುವಂತಹ 40 ಪರ್ಸೆಂಟ್ ಭ್ರಷ್ಟಾಚಾರ, ರೈತರ, ನಿರುದ್ಯೋಗಿಗಳ ಕಾರ್ಮಿಕರ ಆತ್ಮಹತ್ಯೆ, ಅಡುಗೆ ಅನಿಲ, ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಂತಹ ಸಂಗತಿಯಾಗಿದೆ. ನಂದಿನಿಯನ್ನು ಅಮೂಲ್ ಜೊತೆ ವಿಲೀನಗೊಳಿಸುವ ಯತ್ನ ರಾಜ್ಯದ ಜನರನ್ನು ಆತಂಕಕ್ಕೆ ಈಡು ಮಾಡಿದೆ. ಇಂದಿರಾ ಗಾಂಧಿಯವರು ಇಲ್ಲಿನ ಬ್ಯಾಂಕ್‌ಗಳನ್ನು ರಾಷ್ಟ್ರೀಕರಣ ಮಾಡಿ ಜನರಿಗೆ ಸೇವೆ ನೀಡಿದರೆ ಪ್ರಧಾನಿ ಮೋದಿ ಈ ಬ್ಯಾಂಕ್‌ಗಳನ್ನು ವಿಲೀನ ಮಾಡಿದ್ದಾರೆ ಎಂದು ಪ್ರಿಯಾಂಕಾ ಗಾಂಧಿ ಹೇಳಿದರು.
ಕರ್ನಾಟಕದಲ್ಲಿ ಪದವೀಧರ ನಿರುದ್ಯೋಗಿ ಯುವಕರಿಗೆ ಮಾಸಿಕ 2000 ರೂ., ಡಿಪ್ಲೊಮಾ ಮಾಡಿದ ನಿರುದ್ಯೋಗಿಗಳಿಗೆ ಮಾಸಿಕ 1500 ರೂಪಾಯಿ ನೀಡುವ ಯುವ ನಿಧಿ ಕಾರ್ಯಕ್ರಮ, ಪ್ರತಿ ಕುಟುಂಬದ ಒಡತಿಗೆ ಮಾಸಿಕ ರೂ.2೦೦೦ ನೀಡುವ ಗೃಹ ಲಕ್ಷ್ಮೀ ಯೋಜನೆ, ಬಡವರಿಗೆ ಪ್ರತಿ ತಿಂಗಳು 10 ಕೆ.ಜಿ ಅಕ್ಕಿ ನೀಡುವ ಯೋಜನೆ, ಮಹಿಳೆಯರಿಗೆ ಸರಕಾರಿ ಬಸ್ಸಿನಲ್ಲಿ ಉಚಿತ ಪ್ರಯಾಣ ಮೊದಲಾದ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳು ಕರ್ನಾಟಕದಲ್ಲಿ ಜಾರಿಯಾಗಲಿದೆ. ತುಳು ಭಾಷೆಯನ್ನು ಎಂಟನೆ ಪರಿಚ್ಛೇದದಲ್ಲಿ ಸೇರಿಸುವ ಹಾಗೂ ಕರಾವಳಿಯ ಸಮಗ್ರ ಅಭಿವೃದ್ಧಿಗೆ ವಿಶೇಷ ಅನುದಾನ ನೀಡಲು ಕಾಂಗ್ರೆಸ್ ಬದ್ಧವಾಗಿದೆ. ರಾಜ್ಯದಲ್ಲಿ ಭರ್ತಿಯಾಗದೆ ಖಾಲಿ ಉಳಿದಿರುವ ಎರಡೂವರೆ ಲಕ್ಷ ಉದ್ಯೋಗವನ್ನು ಭರ್ತಿ ಮಾಡಲು ಕಾಂಗ್ರೆಸ್ ಸರಕಾರ ಕ್ರಮ ಕೈಗೊಳ್ಳಲಿದೆ. ಈ ಬಗ್ಗೆ ಸಂದೇಹ ಬೇಡ ಕಾಂಗ್ರೆಸ್ ಅಧಿಕಾರಕ್ಕೆ ಬಂದಿರುವ ಛತ್ತೀಸ್‌ಗಡ್, ರಾಜಸ್ಥಾನದಲ್ಲಿ ಕಾಂಗ್ರೆಸ್ ನೀಡಿದ ಭರವಸೆ ಈಡೇರಿಸಿದೆ ಎಂದು ಪ್ರಿಯಾಂಕಾ ತಿಳಿಸಿದ್ದಾರೆ.

ಸಮಾರಂಭದಲ್ಲಿ ಮಾಜಿ ಕೇಂದ್ರ ವಿತ್ತ ಸಚಿವ ಬಿ.ಜನಾರ್ದನ ಪೂಜಾರಿ, ದ.ಕ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ವಿಧಾನ ಪರಿಷತ್ ಶಾಸಕ ಕೆ.ಹರೀಶ್ ಕುಮಾರ್, ಶಾಸಕ ಯು.ಟಿ.ಖಾದರ್, ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್, ವಿಧಾನ ಪರಿಷತ್ ಶಾಸಕ ಡಾ|ಮಂಜುನಾಥ ಭಂಡಾರಿ, ಮಾಜಿ ಸಚಿವರಾದ ಅಭಯಚಂದ್ರ ಜೈನ್, ಎಐಸಿಸಿ ವಕ್ತಾರರಾದ ಚರಣ್ ಸಿಂಗ್ ಸಪ್ರಾ, ಎಐಸಿಸಿ ಪ್ರಧಾನ ಕಾರ್ಯದರ್ಶಿ ರೋಜಿ ಎಂ ಜೋನ್, ಪುತ್ತೂರಿನ ಮಾಜಿ ಶಾಸಕರಾದ ಶಕುಂತಳಾ ಶೆಟ್ಟಿ, ಮಾಜಿ ಸಂಸದ ಇಬ್ರಾಹಿಂ ಹಾಗೂ ಕಾಂಗ್ರೆಸ್ ಮುಖಂಡರಾದ ಆರತಿಕೃಷ್ಣ, ಮುಹಮ್ಮದ್ ಮಸೂದ್, ಇಬ್ರಾಹಿಂ ಕೋಡಿಜಾಲ್, ಜಿ.ಎ.ಬಾವ, ಭರತ್ ಮುಂಡೋಡಿ, ಲುಕ್ಮಾನ್ ಬಂಟ್ವಾಳ, ನಿಕೇತ್‌ರಾಜ್, ಶಾಲೆಟ್ ಪಿಂಟೋ , ಮಮತಾ ಗಟ್ಟಿ, ಅಭ್ಯರ್ಥಿಗಳಾದ ಇನಾಯತ್ ಅಲಿ ಉಪಸ್ಥಿತರಿದ್ದರು.ಮೂಡಬಿದ್ರೆ ಕ್ಷೇತ್ರದ ಅಭ್ಯರ್ಥಿ ಮಿಥುನ್ ರೈ ಸ್ವಾಗತಿಸಿದರು. ಕಾಂಗ್ರೆಸ್ ಸೇವಾ ದಳದ ಜಿಲ್ಲಾಧ್ಯಕ್ಷ ಪುತ್ತೂರಿನ ಜೋಕಿಂ ಡಿಸೋಜರವರು ಸೇವಾದಳದ ಗೌರವ ನೀಡಿದರು. ಸಹಸ್ರಾರು ಕಾರ್ಯಕರ್ತರು ಆಗಮಿಸಿದ್ದರು.

LEAVE A REPLY

Please enter your comment!
Please enter your name here