ಪುತ್ತೂರು:ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಭಾವಚಿತ್ರವಿದ್ದ ಬ್ಯಾನರ್ಗೆ ಚಪ್ಪಲಿ ಹಾರ ಹಾಕಿದ್ದ ಪ್ರಕರಣದಲ್ಲಿ ಬಂಧಿತ ಕಾರ್ಯಕರ್ತರಿಗೆ ಪೊಲೀಸ್ ದೌರ್ಜನ್ಯ ನಡೆಸಿದ ಆರೋಪ ಎದುರಿಸುತ್ತಿರುವ ಪುತ್ತೂರು ಉಪವಿಭಾಗದ ಡಿವೈಎಸ್ಪಿ ವೀರಯ್ಯ ಹಿರೇಮಠ ಅವರು ರಜೆಯಲ್ಲಿ ತೆರಳಿದ್ದು ಬಂಟ್ವಾಳ ಉಪವಿಭಾಗದ ಡಿವೈಎಸ್ಪಿ ಪ್ರತಾಪ್ಸಿಂಗ್ ತೋರಟ್ ಅವರಿಗೆ ಪುತ್ತೂರು ಉಪವಿಭಾಗದ ಹೆಚ್ಚುವರಿ ಪ್ರಭಾರವನ್ನೂ ನೀಡಲಾಗಿದೆ.
ಬ್ಯಾನರ್ ಪ್ರಕರಣದಲ್ಲಿ ಪೊಲೀಸರು 9 ಮಂದಿ ಕಾರ್ಯಕರ್ತರನ್ನು ಬಂಧಿಸಿದ್ದರು.ಬಂಧಿತರನ್ನು ರಾತ್ರಿ ವೇಳೆಯೇ ಡಿವೈಎಸ್ಪಿ ಕಚೇರಿಗೆ ಕರೆದೊಯ್ದು ಅವರ ಮೇಲೆ ದೌರ್ಜನ್ಯ ನಡೆಸಲಾಗಿತ್ತು ಎಂದು ಆರೋಪಿಸಲಾಗಿದೆ.ಪೊಲೀಸ್ ದೌರ್ಜನ್ಯದ ಕುರಿತು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.
ಸಾಮಾಜಿಕ ಜಾಲ ತಾಣಗಳಲ್ಲಿಯೂ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು.ಗಾಯಗೊಂಡಿರುವ 7 ಮಂದಿ ಯುವಕರು ಪುತ್ತೂರು ಮಹಾವೀರ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.ತೀವ್ರ ಗಾಯಗೊಂಡಿರುವ ಬಜರಂಗದಳದ ಸಹಸಂಚಾಲಕರೂ ಆಗಿರುವ ನರಿಮೊಗ್ರು ನಿವಾಸಿ ಅವಿನಾಶ್ ಎಂಬವರ ತಂದೆ ನೀಡಿದ್ದ ದೂರಿನ ಮೇರೆಗೆ ಪೊಲೀಸರ ವಿರುದ್ಧ ಪ್ರಕರಣ ದಾಖಲಾಗಿತ್ತು.
ಎಡಿಜಿಪಿ ಸೂಚನೆ ಡಿವೈಎಸ್ಪಿಗೆ ರಜೆ:
ಘಟನೆ ಕುರಿತು ಸೂಕ್ತ ತನಿಖೆ ನಡೆಸಿ ಕ್ರಮಕೈಗೊಳ್ಳುವುದಾಗಿ ರಾಜ್ಯ ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ಅವರು ತಿಳಿಸಿದ್ದರು.ಎಡಿಜಿಪಿಯವರ ಸೂಚನೆಯಂತೆ ಡಿವೈಎಸ್ಪಿ ವೀರಯ್ಯ ಹಿರೇಮಠ ಅವರು ರಜೆಯಲ್ಲಿ ತೆರಳಿದ್ದು ಬಂಟ್ವಾಳ ಉಪವಿಭಾಗದ ಡಿವೈಎಸ್ಪಿ ಪ್ರತಾಪ್ ಸಿಂಗ್ ಅವರಿಗೆ ಪುತ್ತೂರು ಉಪವಿಭಾಗದ ಪ್ರಭಾರವನ್ನೂ ವಹಿಸಲಾಗಿದೆ ಎಂದು ತಿಳಿದು ಬಂದಿದೆ.
ಎಸ್.ಐ.,ಪಿಸಿ ಅಮಾನತು
ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಪ್ಯ ಗ್ರಾಮಾಂತರ ಠಾಣೆಯ ಎಸ್.ಐ. ಆಗಿದ್ದ ಶ್ರೀನಾಥ್ ರೆಡ್ಡಿ ಹಾಗೂ ಕಾನ್ಸ್ಟೇಬಲ್ ಹರ್ಷಿತ್ ಎಂಬವರ ವಿರುದ್ಧ ಇಲಾಖಾ ವಿಚಾರಣೆ ಕಾಯ್ದಿರಿಸಿ ಸೇವೆಯಿಂದ ಅಮಾನತುಗೊಳಿಸಿ ಈಗಾಗಲೇ ಎಸ್ಪಿ ಡಾ|ಅಮಟೆ ವಿಕ್ರಂ ಅವರು ಆದೇಶ ಮಾಡಿದ್ದಾರೆ.ಡಿವೈಎಸ್ಪಿಯವರ ನೇತೃತ್ವದಲ್ಲಿಯೇ ಕಾರ್ಯಕರ್ತರ ಮೇಲೆ ಪೊಲೀಸರು ಹಲ್ಲೆ ನಡೆಸಿರುವುದರಿಂದ ಅವರ ವಿರುದ್ಧವೂ ಕಾನೂನು ಕ್ರಮಕೈಗೊಳ್ಳಬೇಕು ಎಂದು ಹಲವರಿಂದ ಆಗ್ರಹ ವ್ಯಕ್ತವಾಗಿತ್ತು.ಡಿವೈಎಸ್ಪಿಯವರ ವಿರುದ್ಧ ಮೇಲಽಕಾರಿಗಳಿಗೆ ವರದಿ ಮಾಡುವುದಾಗಿ ಎಸ್ಪಿಯವರು ಮಾಹಿತಿ ನೀಡಿದ್ದರು.