ಸೇವಾ ಅವಧಿಯಲ್ಲಿ ಮಾಡುವ ಸೇವೆ ಜನಪರವಾಗಿರಬೇಕು : ನವೀನ್ ಭಂಡಾರಿ
ಕಡಬ: ಸರಕಾರದ ಸೇವಾ ಅವಧಿಯಲ್ಲಿ ನಾವು ಮಾಡುವ ಪ್ರಾಮಾಣಿಕ ಸೇವಾ ಕಾರ್ಯತತ್ಪರತೆ ಮುಂದಿನ ಪೀಳಿಗೆಗೆ ಮಾದರಿಯಾಗಬೇಕು ಎಂದು ಕಡಬ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಕುಮಾರ್ ಭಂಡಾರಿ ಹೇಳಿದರು.
ಬುಧವಾರ ಕಡಬ ತಾಲೂಕು ಪಂಚಾಯಿತಿಯ ನೂತನ ಕಟ್ಟಡದ ಸಭಾಂಗಣದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯಲ್ಲಿ25 ವರ್ಷಗಳಿಗೂ ಹೆಚ್ಚಿನ ಕಾಲ ಸೇವೆ ಸಲ್ಲಿಸಿ ನಿವೃತ್ತರಾದ ಮರ್ದಾಳ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಶೇಖರ್, ಆಲಂಕಾರು ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಜಗನ್ನಾಥ ಶೆಟ್ಟಿ ಹಾಗೂ ರಾಮಕುಂಜ ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ಜೆರಾಲ್ಡ್ ಮಸ್ಕರೇನ್ಹಸ್ ಅವರ ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನಿವೃತ್ತಿ ಹೊಂದುತ್ತಿರುವ ಮೂರು ಜನ ಅಭಿವೃದ್ಧಿ ಅಧಿಕಾರಿಗಳು ತಮ್ಮ ಸೇವಾ ದಿನಗಳಲ್ಲಿ ಅತ್ಯುತ್ತಮ ಸೇವೆ ನೀಡಿ ಬದುಕು ಸಾರ್ಥಕಗೊಳಿಸಿದ್ದಾರೆ. ಮಂಡಲ ಪಂಚಾಯಿತಿ ವ್ಯವಸ್ಥೆಯಿಂದ ಸೇವೆ ಸಲ್ಲಿಸಿದವರು ಇಂದು ಸೇವಾ ನಿವೃತ್ತಿಯಾಗುತ್ತಿರುವುದು ಬಹಳ ಅಪರೂಪ ಮತ್ತು ವಿಶೇಷ ಇವರ ಅನುಭವ ಮತ್ತು ಕಾರ್ಯತತ್ಪರತೆ ಅನನ್ಯ ಇವರು ಗ್ರಾಮೀಣಾಭಿವೃದ್ಧಿಯಲ್ಲಿ ಜನರಿಗೆ ಅತ್ಯಂತ ಆಪ್ತರಾಗಿ ಸೇವೆಯನ್ನು ನೀಡಿದ್ದಾರೆ ಎಂದು ಹೇಳಿದ ನವೀನ್ ಭಂಡಾರಿ ನಿವೃತ್ತರ ಮುಂದಿನ ಬದುಕಿಗೆ ಶುಭ ಹಾರೈಸಿದರು.
ಪುತ್ತೂರು ತಾ.ಪಂ. ಸಹಾಯಕ ನಿರ್ದೇಶಕಿ ಶೈಲಜಾ ಭಟ್, ಕಡಬ ತಾ.ಪಂ. ಸಹಾಯಕ ನಿರ್ದೇಶಕ ಚೆನ್ನಪ್ಪ ಗೌಡ, ರಾಜ್ಯ ಸರಕಾರಿ ನೌಕರರ ಸಂಘದ ಕಡಬ ತಾಲೂಕಿನ ಅಧ್ಯಕ್ಷ ವಿಮಲ್, ಪಂ. ಅಭಿವೃದ್ಧಿ ಅಧಿಕಾರಿಗಳ ದ.ಕ.ಜಿಲ್ಲಾ ಸಂಘದ ಅಧ್ಯಕ್ಷ ನಾಗೇಶ್ ಅತಿಥಿಗಳಾಗಿ ಮಾತನಾಡಿ ಶುಭ ಹಾರೈಸಿದರು. ಬೀಳ್ಕೊಡುಗೆ ಸ್ವೀಕರಿಸಿದ ಶೇಖರ್, ಜಗನ್ನಾಥ ಶೆಟ್ಟಿ, ಜೆರಾಲ್ಡ್ ಮಸ್ಕರೇನ್ಹಸ್ ಮಾತನಾಡಿ, ತಮ್ಮ ವೃತ್ತಿ ಜೀವನಕ್ಕೆ ಸೇರಿ ಅಲ್ಲಿಂದ ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ತಮ್ಮ ವಿವಿಧ ಮಜಲುಗಳ ಸೇವೆಯನ್ನು ಹಾಗೂ ನಿವೃತ್ತಿಯವರೆಗಿನ ಸೇವಾ ಅನುಭವವನ್ನು ಬಿಚ್ಚಿಟ್ಟರು. ಸರಕಾರಿ ಸೇವೆಯನ್ನು ಜನರಿಗೆ ನೀಡುವಲ್ಲಿ ಸಹಕಾರವನ್ನು ನೀಡಿದ ಎಲ್ಲರಿಗೂ ಕೃತಜ್ಞತೆಗಳನ್ನು ಸಲ್ಲಿಸಿದರು.
ಬೀಳ್ಕೊಡುಗೆ ಸಮಾರಂಭ:
ತಾಲೂಕು ಪಂಚಾಯಿತಿ ವತಿಯಿಂದ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖಾ ನೌಕರರ ಸಂಘದ ವತಿಯಿಂದ, ರಾಜ್ಯ ಸರಕಾರಿ ನೌಕರರ ಸಂಘದ ವತಿಯಿಂದ, ನಿವೃತ್ತ ಪಂ. ಅಭಿವೃದ್ಧಿ ಅಧಿಕಾರಿಗಳ ವತಿಯಿಂದ, ಕಡಬ ಮಹಾತ್ಮ ಗಾಂಧಿ ನರೇಗಾ ನೌಕರರ ಸಂಘದ ವತಿಯಿಂದ ಪ್ರತ್ಯೇಕವಾಗಿ ಅಭಿನಂದನಾ ಪತ್ರ, ಸ್ಮರಣಿಕೆಗಳನ್ನು ನೀಡಿ ಗೌರವಿಸಲಾಯಿತು. ಕಡಬ ತಾ.ಪಂ. ಸಹಾಯಕ ನಿರ್ದೇಶಕ ಚೆನ್ನಪ್ಪ ಗೌಡ ಕಜೆಮೂಲೆ ಸ್ವಾಗತಿಸಿದರು, ಸಿಬ್ಬಂದಿ ಭರತ್ ರಾಜ್ ನಿರೂಪಿಸಿ, ವಂದಿಸಿದರು. ತಾಲೂಕು ವ್ಯವಸ್ಥಾಪಕ ಭುವನೇಂದ್ರ ಕುಮಾರ್ ಮತ್ತು ಕೊಂಬಾರು ಪಂ. ಅಭಿವೃದ್ಧಿ ಅಧಿಕಾರಿ ರಾಘವೇಂದ್ರ ಗೌಡ ಸಹಕರಿಸಿದರು.