ಪುತ್ತೂರು:ಗ್ರಾಮ ಪಂಚಾಯತ್ ಅನುಮತಿ ನೀಡದ ಪಂಪ್ಸೆಟ್ ಅರ್ಜಿಯನ್ನು ಕಾನೂನು ಚೌಕಟ್ಟಿನಲ್ಲಿ ತಿರಸ್ಕರಿಸಿದ್ದಕ್ಕೆ ಗುತ್ತಿಗೆದಾರರೊಬ್ಬರು ಮೆಸ್ಕಾಂ ಬನ್ನೂರು ಕಚೇರಿಗೆ ಹೋಗಿ ಅಲ್ಲಿ ಕರ್ತವ್ಯನಿರತರಾಗಿದ್ದ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರರಿಗೆ ಕೊಲೆ ಬೆದರಿಕೆಯೊಡ್ಡಿದ್ದಾಗಿ ಆರೋಪ ವ್ಯಕ್ತವಾಗಿದ್ದು ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೆಸ್ಕಾಂ ಎಇಇ ರಾಮಚಂದ್ರ ಅವರು ನೀಡಿರುವ ದೂರಿನ ಮೇರೆಗೆ ಗುತ್ತಿಗೆದಾರ ಸನಾ ಇಲೆಕ್ಟಿçಕಲ್ಸ್ ಮಾಲಕ ಮಹಮ್ಮದ್ ನಿಸಾರ್ ಎಂಬವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.ಜೂ. 14ರಂದು ಬನ್ನೂರು ಮೆಸ್ಕಾಂ ಉಪವಿಭಾಗದ ಕಚೇರಿ ಛೇಂಬರ್ನಲ್ಲಿ ನಾನು ಕರ್ತವ್ಯದಲ್ಲಿದ್ದ ವೇಳೆ ಒಳಗೆ ಪ್ರವೇಶಿಸಿದ ಗುತ್ತಿಗೆದಾರ ಮಹಮ್ಮದ್ ನಿಸಾರ್ ಅವರು, `ನನ್ನ ಅರ್ಜಿದಾರರಾದ ಪುತ್ತೂರು ತಾಲೂಕು ಮುಂಡೂರು ಗ್ರಾಮದ ಶೇಷಪ್ಪ ನಾಯ್ಕ ಎಂಬವರ ಮಗ ರಮೇಶ್ ಎಂಬವರ ಕೃಷಿ ನೀರಾವರಿ ಪಂಪ್ ಸೆಟ್ಗೆ ನೀಡಿದ ಅರ್ಜಿಯನ್ನು ಯಾಕೆ ತಿರಸ್ಕರಿಸುತ್ತೀರಿ’ ಎಂದು ಕೇಳಿ ಬಳಿಕ ಅವಾಚ್ಯ ಶಬ್ದಗಳಿಂದ ನಿಂದಿಸಿ ಕೊಲೆ ಬೆದರಿಕೆಯೊಡ್ಡಿರುವುದಾಗಿ ರಾಮಚಂದ್ರ ಅವರು ನೀಡಿರುವ ದೂರಿನಲ್ಲಿ ಆರೋಪಿಸಿದ್ದಾರೆ.
ಪಂಚಾಯತ್ ಅನುಮತಿ ನೀಡದ ಹಿನ್ನೆಲೆಯಲ್ಲಿ ತಿರಸ್ಕಾರ
ಪಂಪ್ಸೆಟ್ಗೆ ವಿದ್ಯುತ್ ಸಂಪರ್ಕಕ್ಕೆ ಮುಂಡೂರು ಗ್ರಾಮ ಪಂಚಾಯತ್ ಅನುಮತಿ ನೀಡಿಲ್ಲ.ಪಂಪ್ಸೆಟ್ಗೆ ವಿದ್ಯುತ್ ಸಂಪರ್ಕಕ್ಕೆ ಸಂಬಂಧಿಸಿದ ಗ್ರಾಮ ಪಂಚಾಯತ್ನಿಂದ ನಿರಾಕ್ಷೇಪಣಾ ಪತ್ರ ಬೇಕು.ಈ ಪ್ರಕರಣದಲ್ಲಿ ನಿರಾಕ್ಷೇಪಣಾ ಪತ್ರ ಇಲ್ಲದೇ ಇದ್ದುದರಿಂದ, ಪಂಪ್ಸೆಟ್ಗೆ ವಿದ್ಯುತ್ ಸಂಪರ್ಕ ಕೋರಿದ್ದ ಅರ್ಜಿಯನ್ನು ಇಲಾಖಾ ನಿಯಮದ ತೊಡಕಿನಿಂದ ತಿರಸ್ಕರಿಸಲಾಗಿದೆ.ಇದೇ ವಿಚಾರವಾಗಿ ಗುತ್ತಿಗೆದಾರ ಮಹಮ್ಮದ್ ನಿಸಾರ್ ಕರ್ತವ್ಯಕ್ಕೆ ಅಡ್ಡಿ ಪಡಿಸಿ ಕೊಲೆ ಬೆದರಿಕೆಯೊಡ್ಡಿದ್ದಾರೆ ಎಂದು ರಾಮಚಂದ್ರ ಅವರು ತಿಳಿಸಿದ್ದಾರೆ.