ಪುತ್ತೂರು: ನಾನು ಬುತ್ತಿ ತಂದಿದ್ದೇನೆ ನಿಮಗೆ ಊಟ ರೆಡಿಯಾಗಿದೆ.. ಮೀನಿನ ಗಮಗಮ ಪರಿಮಳ ಬರುತ್ತಿದೆ ಎಂದು ಹೇಳಿ ಮನೆಯಿಂದ ತಂದಿದ್ದ ಬುತ್ತಿ ತೆರೆದು ಎಲ್ಲರಿಗೂ ಹಂಚಿ ತಾನೂ ಊಟ ಮಾಡುವ ಮೂಲಕ ತಾನೋರ್ವ ಸಾಧಾರಣ ವ್ಯಕ್ತಿ ಎನ್ನುವ ರೀತಿಯಲ್ಲಿ ಪುತ್ತೂರು ಶಾಸಕ ಅಶೋಕ್ ರೈ ಸಿಂಪ್ಲಿಸಿಟಿ ಮೆರೆದಿದ್ದಾರೆ.
ಜೂ.20 ರ ಮಂಗಳವಾರ ಪುತ್ತೂರಿನ ಪ್ರವಾಸಿ ಬಂಗ್ಲೆಯಲ್ಲಿ ಕೆಎಂಎಫ್ ಮಿನಿ ಡೈರಿ ಯೋಜನೆಗೆ ಸಂಬಂಧ ಪಟ್ಟಂತೆ ಅಧಿಕಾರಿಗಳ ಸಭೆಯನ್ನು ಕರೆದಿದ್ದರು. ಸಭೆಯಲ್ಲಿ ಪುತ್ತೂರು ಸಹಾಯಕ ಕಮಿಷನರ್ ಸಹಿತ ಕೆಎಂಎಫ್ ಅಧಿಕಾರಿಗಳು, ಪದಾಧಿಕಾರಿಗಳು ಉಪಸ್ಥಿತರಿದ್ದರು. ಸಭೆ ಮುಗಿದ ಬಳಿಕ ಶಾಸಕರು, ಎಲ್ಲರಿಗೂ ಊಟದ ವ್ಯವಸ್ಥೆ ಮಾಡಿದ್ದೇವೆ, ವೆಜ್ ಮತ್ತು ನಾನ್ ವೆಜ್ ಎರಡೂ ವ್ಯವಸ್ಥೆ ಮಾಡಿದ್ದೇವೆ ಯಾರೂ ಊಟ ಮಾಡದೆ ಹೋಗಬೇಡಿ ಎಂದು ಮುಂದೆ ನಿಂತು ಎಲ್ಲರಿಗೂ ಊಟದ ವ್ಯವಸ್ಥೆ ಮಾಡಿದ್ದಾರೆ.
ನೀವು ಊಟ ಮಾಡಲ್ವೇ ಎಂಬ ಪ್ರಶ್ನೆ ಎದುರಿಂದ ಬಂದಾಗ, ನಾನು ಬುತ್ತಿ ತಂದಿದ್ದು ಅದನ್ನು ಊಟ ಮಾಡುತ್ತೇನೆ ಎಂದು ಹೇಳಿ ಮನೆಯಿಂದ ತಂದಿದ್ದ ಬುತ್ತಿಯನ್ನು ತೆರೆದು ಎಲ್ಲರ ಜತೆ ಊಟಕ್ಕೆ ಕುಳಿತಿದ್ದಾರೆ. ಚಪಾತಿ, ತೊಂಡೆಕಾಯಿ ಪಲ್ಯ ಮತ್ತು ಮಾಂಜಿ ಮೀನಿನ ತವಾ ಫ್ರೈ ಬುತ್ತಿಯಲ್ಲಿತ್ತು. ಮನೆಯೂಟದ ಸವಿ ನೋಡುವಂತೆ ಮಾಂಜಿ ತವಾ ಫ್ರೈಯನ್ನು ಸುತ್ತಮುತ್ತ ಕುಳಿತ ಎಲ್ಲರಿಗೂ ಹಂಚಿದ ಶಾಸಕರು ಎಲ್ಲರೊಂದಿಗೆ ನಗುನಗುತ ಮನೆಯೂಟ ಸವಿದರು. ಮುಜುಗರದಿಂದಲೋ, ಶಾಸಕರ ವ್ಯಕ್ತಿತ್ವಕ್ಕೋ ಎಲ್ಲರೂ ಶಾಸಕರ ಮುಖ ನೋಡುತ್ತಲೇ ಅವರ ಸಿಂಪ್ಲಿಸಿಟಿಗೆ ಮೆಚ್ಚುಗೆ ಸೂಚಿಸಿ ಊಟ ಮುಗಿಸಿದರು.