@ ಸಿಶೇ ಕಜೆಮಾರ್
ಪುತ್ತೂರು: ಜೂನ್ ಮೊದಲ ವಾರದಲ್ಲಿ ಆರಂಭವಾಗಬೇಕಾದ ಮುಂಗಾರು ಇನ್ನೂ ಶುರುವಾಗದೇ ಇರುವುದು ಕೃಷಿಕರಲ್ಲಿ ಆತಂಕ ಉಂಟು ಮಾಡಿದೆ. ರಾಜ್ಯದಲ್ಲಿ ಮಳೆಯ ಕೊರತೆ ಎದ್ದು ಕಾಣುತ್ತಿದ್ದು ಇದು ಬಿಪರ್‌ಜಾಯ್ ಚಂಡಮಾರುತ ತಂದಿಟ್ಟ ಆಪತ್ತು ಆಗಿದೆ. ಹೀಗಾಗಿ ಕರ್ನಾಟಕ ಸೇರಿದಂತೆ ದೇಶದ ಬಹುತೇಕ ರಾಜ್ಯಗಳು ಮಳೆ ಕೊರತೆ ಎದುರಿಸುವಂತಾಗಿದೆ. ಇದೇ ರೀತಿ ಮುಂದುವರಿದರೆ ಕುಡಿಯುವ ನೀರಿನ ಕೊರತೆ ಹಾಗೂ ಕೃಷಿ ಚಟುವಟಿಕೆಗಳಿಗೆ ಭಾರೀ ಹಿನ್ನಡೆ ಆಗಲಿದೆ. ಒಟ್ಟಾರೆಯಾಗಿ ಮುಂದಿನ ದಿನಗಳಲ್ಲಿ ಮಳೆಯ ಪ್ರಮಾಣ ಹೇಗಿರಲಿದೆ ಎಂಬುದರ ಮೇಲೆ ಕೃಷಿ ಭವಿಷ್ಯ ನಿಂತಿದೆ.
ಕೈ ಕೊಟ್ಟ ಮುಂಗಾರು
ರಾಜ್ಯಕ್ಕೆ ಪ್ರತಿವರ್ಷವೂ ಜೂನ್ ಮೊದಲ ವಾರದಲ್ಲಿ ಮುಂಗಾರು ಪ್ರವೇಶವಾಗುತ್ತಿತ್ತು. ಆದರೆ ಈ ಬಾರಿ ಒಂದು ವಾರ ತಡವಾಗಿ ಮುಂಗಾರು ಮಳೆ ಆಗಮನವಾಗಿದೆ. ತಡವಾಗಿ ಮಳೆ ಆರಂಭವಾದರೂ ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಸುರಿಯಲಿಲ್ಲ. ಮುಂಗಾರು ಮಳೆ ಮಾರುತಗಳು ರಾಜ್ಯದ ಮೇಲೆ ಬೀಸುತ್ತಿವೆಯಾದರೂ ತೇವಾಂಶ ಕಳೆದುಕೊಂಡಿದೆ. ಬಿಪರ್‌ಜಾಯ್ ಚಂಡಮಾರುತ ಮುಂಗಾರು ಮಾರುಗಳ ತೇವವನ್ನು ಹೀರಿಬಿಟ್ಟಿತ್ತು ಹೀಗಾಗಿ ಮುಂದಿನ ಮುಂಗಾರು ಮಾರುತ ತೇವಾಂಶ ಸಹಿತವಾಗಿ ರಾಜ್ಯದ ಮೇಲೆ ಬೀಸುವ ನಿರೀಕ್ಷೆ ಇದೆ ಎನ್ನುತ್ತಾರೆ ಹವಾಮಾನ ತಜ್ಞರು.
28 ವರ್ಷಗಳಲ್ಲೇ ಇದೇ ಮೊದಲು
ಮುಂಗಾರು ಆರಂಭವಾದ ಮೊದಲ ವಾರದಲ್ಲೇ ಶೇ.71 ರಷ್ಟು ಮಳೆ ಕೊರತೆ ರಾಜ್ಯದಲ್ಲಿ ಎದುರಾಗಿದೆ. ಇದರಿಂದಾಗಿ ಬಿತ್ತನೆ ಪ್ರಮಾಣ ಕೂಡ ಕಡಿಮೆಯಾಗಿದೆ. ಇದು ಕಳೆದ 28 ವರ್ಷಗಳಲ್ಲೇ ಇದೇ ಮೊದಲು ಎನ್ನುತ್ತಾರೆ ಹವಾಮಾನ ಇಲಾಖೆಯವರು, ವಾಡಿಕೆ ಪ್ರಕಾರ ಜೂನ್ 1 ರಿಂದ 10 ರ ಅವಧಿಯಲ್ಲಿ ಸರಾಸರಿ 51 ಮಿಲಿ ಮೀಟರ್ ಮಳೆ ಆಗಬೇಕಿತ್ತು ಆದರೆ ಈ ಬಾರಿ ರಾಜ್ಯದಲ್ಲಿ ಕೇವಲ 14 ಮಿಲಿ ಮೀಟರ್ ಮಳೆ ಸುರಿದಿದೆ. ಮಲೆನಾಡು, ಕರಾವಳಿ ಭಾಗ ಸೇರಿದಂತೆ ಯಾವುದೇ ಭಾಗದಲ್ಲೂ ಸಾಮಾನ್ಯ ಮಳೆ ಆಗಿಲ್ಲ.ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಮಳೆಯ ಭಾರೀ ಕೊರತೆ ಇದೆ.
ಆತಂಕದಲ್ಲಿ ಕೃಷಿಕರು
ಕರಾವಳಿ ಪ್ರದೇಶದಲ್ಲಿ ಈ ಹೊತ್ತಿಗೆ ಮಳೆ ಬಂದು ಒಸರು ಆಗುವ ಸಮಯ. ಹಳ್ಳ ಕೊಲ್ಲಗಳಲ್ಲಿ ನೀರು ತುಂಬಿಕೊಂಡು ಕೃಷಿಕರು ಕೃಷಿ ಕಾರ್ಯದಲ್ಲಿ ತೊಡಗಿಕೊಳ್ಳುವ ಸಮಯವಾಗಿದೆ. ಆದರೆ ಈ ಬಾರಿ ಒಸರು ಬಿಡಿ ಕಣಿವೆಯಲ್ಲಿ ನೀರು ಹರಿದು ಹೋಗುವಷ್ಟು ಕೂಡ ಮಳೆ ಬಂದಿಲ್ಲ. ಗದ್ದೆಗಳಲ್ಲಿ ಇನ್ನೂ ಒಸರು ಆಗಿಲ್ಲ, ಬತ್ತಿ ಹೋದ ಬಾವಿಗಳಲ್ಲಿ ನೀರೇ ತುಂಬಿಲ್ಲ. ಕುಡಿಯುವ ನೀರಿಗಾಗಿ ಜನರು ಈಗಲೂ ಹರಸಾಹಸ ಪಡುತ್ತಿದ್ದಾರೆ. ಒಸರು ಆಗದೇ ಇರುವುದರಿಂದ ಕೃಷಿಕರು ಕಂಗಲಾಗಿದ್ದಾರೆ. ಭತ್ತ ಕೃಷಿಕರು ಆಕಾಶ ನೋಡುವಂತಾಗಿದೆ. ಈ ವರ್ಷದ ಮುಂಗಾರು ಜನರ ಜೊತೆ ಜೂಟಾಟವಾಡುತ್ತಿದೆ. ಆಗೊಮ್ಮೆ ಈಗೊಮ್ಮೆ ಭರ್ರನೆ ಸುರಿವ ಮಳೆ ಬಳಿಕ ಸುಡು ಬಿಸಿಲು..
ಬಿಪರ್‌ಜಾಯ್ ಚಂಡಮಾರುತ ಪ್ರಭಾವ
ಮುಂಗಾರು ಮಾರುತಗಳ ಅಲ್ಲೋಲ ಕಲ್ಲೋಲಕ್ಕೆ ಮುಖ್ಯ ಕಾರಣ ಬಿಪರ್‌ಜಾಯ್ ಚಂಡಮಾರುತ ಎನ್ನಲಾಗುತ್ತಿದೆ. ಬಿಪರ್‌ಜಾಯ್ ಚಂಡಮಾರುತದಿಂದಾಗಿ ರಾಜಸ್ಥಾನ, ಗುಜರಾತ್, ಸಿಕ್ಕಿಂ ಮತ್ತು ಅಸ್ಸಾಂನಲ್ಲಿ ಭಾರೀ ಮಳೆಯಾಗಿದೆ. ದೇಶದ ತುಂಬೆಲ್ಲಾ ಸುರಿಯಬೇಕಾಗಿದ್ದ ಮಳೆ ರಾಜಸ್ಥಾನ ಮತ್ತು ಗುಜರಾತ್‌ನಲ್ಲಿ ಸುರಿದಿದೆ. ಮುಖ್ಯವಾಗಿ ಮುಂಗಾರು ಮಳೆಯ ಪ್ರಭಾವ ಜೂನ್‌ನಿಂದ ಆರಂಭವಾಗಿ ಸೆಪ್ಟಂಬರ್‌ವರೆಗೂ ಇರುತ್ತದೆ. ಸೆಪ್ಟೆಂಬರ್ ಹಾಗೂ ಅಕ್ಟೋಬರ್ ತಿಂಗಳಿನಲ್ಲಿ ಹಿಂಗಾರು ಮಳೆ ಆರಂಭವಾಗುತ್ತದೆ. ಆದರೆ ಈ ಬಾರಿ ಜೂನ್ ಅಂತ್ಯವಾಗುತ್ತ ಬಂದರೂ ಮುಂಗಾರು ಮಳೆ ಅಷ್ಟಾಗಿ ಸುರಿಯಲಿಲ್ಲ. ಹವಾಮಾನ ಇಲಾಖೆಯ ಪ್ರಕಾರ ಜೂನ್ ಅಂತ್ಯದಿಂದ ಮಳೆ ಶುರುವಿಟ್ಟುಕೊಳ್ಳುತ್ತೆ ಎನ್ನುತ್ತಾರೆ. ಮುಂಗಾರು ಮಳೆಯಲ್ಲಿ ಮತ್ತೆ ಕೊರತೆ ಕಂಡುಬಂದರೆ ರಾಜ್ಯಕ್ಕೆ ಬರ ಬಂದರೂ ಅಚ್ಚರಿಪಡಬೇಕಾಗಿಲ್ಲ ಒಟ್ಟಿನಲ್ಲಿ ವರುಣನ ಕೃಪೆ ರಾಜ್ಯದ ಮೇಲೆ ಇರಲಿ ಎನ್ನುವುದೇ ಎಲ್ಲರ ಆಶಯ.
ಬತ್ತಿ ಹೋದ ಬಾವಿಯಲ್ಲಿ ನೀರೇ ತುಂಬಿಲ್ಲ
ಈ ವರ್ಷ ಎಪ್ರೀಲ್ ಅಂತ್ಯಕ್ಕೆ ಆಗುವಾಗಲೇ ಬಹುತೇಕ ಕಡೆಗಳಲ್ಲಿ ನೀರಿನ ಅಭಾವ ಆರಂಭವಾಗಿದೆ. ಏಕೆಂದರೆ ವರ್ಷದ ಆರಂಭದಲ್ಲಿ ಅಂದರೆ ಫೆಬ್ರವರಿ, ಮಾರ್ಚ್ ತಿಂಗಳಿನಲ್ಲಿ ಒಮ್ಮೆಯೂ ಮಳೆ ಬರಲಿಲ್ಲ. ಸುಡು ಬಿಸಿಲು, ಬಿಸಿ ಗಾಳಿಯ ಪರಿಣಾಮವಾಗಿ ಕೆರೆ, ಬಾವಿಯ ನೀರು ಬೇಗನೆ ಬತ್ತಿ ಹೋಗಿದೆ. ಹಾಗೇ ಬತ್ತಿ ಹೋದ ಬಾವಿಗಳಲ್ಲಿ ಜೂನ್ ಅಂತ್ಯವಾಗುತ್ತಾ ಬಂದರೂ ಇನ್ನೂ ನೀರಿನ ಒಸರು ಕಾಣಿಸಿಕೊಂಡಿಲ್ಲ, ಸರಿಯಾದ ಪ್ರಮಾಣದಲ್ಲಿ ಭೂಮಿಗೆ ಇಂಗಿ ಹೋಗುವಷ್ಟು ಮಳೆ ಬರದೇ ಇರುವುದೇ ಇದಕ್ಕೆ ಕಾರಣ ಎನ್ನುತ್ತಾರೆ ಹಿರಿಯರು.
ಜೂನ್ 25 ರಿಂದ ಮುಂಗಾರು ಚುರುಕು
ರಾಜ್ಯಾದಾದ್ಯಂತ ಜೂನ್.25 ರಿಂದ ಮುಂಗಾರು ಚುರುಕುಗೊಳ್ಳಲಿದ್ದು ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಉತ್ತರ ಒಳನಾಡಿನ ಸಹಿತ ಬಹುತೇಕ ಎಲ್ಲಾ ಜಿಲ್ಲೆಗಳಲ್ಲೂ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಮುಂಗಾರು ಮಳೆ ಬರದೇ ಇರುವುದರಿಂದ ಗದ್ದೆಯಲ್ಲಿ ಒಸರು ಆಗದೆ ಭತ್ತ ಕೃಷಿಗೆ ತೊಂದರೆಯಾಗಿದೆ. ಕಳೆದ ವರ್ಷ ಈ ಸಮಯಕ್ಕೆ ನೇಜಿ ನಾಟಿ ಮಾಡಿದ್ದೇವೆ. ಈ ವರ್ಷ ನೀರಿನ ಒಸರೇ ಆಗಿಲ್ಲ. ಕೃಷಿಕರು ಮಳೆಯನ್ನೇ ನಂಬಿಕೊಂಡವರು.ಕಳೆದ 65 ವರ್ಷಗಳಿಂದ ಅಂದರೆ ನನ್ನ ಹಿರಿಯರ ಕಾಲದಿಂದ ಭತ್ತ ಕೃಷಿ ಮಾಡುತ್ತಾ ಬಂದಿದ್ದೇವೆ. ಇನ್ನಾದರೂ ಸರಿಯಾದ ಪ್ರಮಾಣದಲ್ಲಿ ಮಳೆ ಬಂದರೆ ಸಾಕು.
ವಿನಯ ಕುಮಾರ್ ರೈ ಸರ್ವೆ, ಪ್ರಗತಿಪರ ಭತ್ತ ಕೃಷಿಕರು