ಪೆರಾಬೆ:ಪತ್ನಿಯ ಕೊಲೆಗೈದು ಬಾವಿಗೆ ಹಾಕಿದ್ದ ಪ್ರಕರಣ ; ಅಪರಾಧಿಗೆ ಜೀವಾವಧಿ ಶಿಕ್ಷೆ, ದಂಡ ವಿಧಿಸಿದ್ದ ಪುತ್ತೂರು ಜಿಲ್ಲಾ ನ್ಯಾಯಾಲಯದ ಆದೇಶ ಹೈಕೋರ್ಟ್‌ನಲ್ಲಿ ರದ್ದು

0

  • 2014ರಲ್ಲಿ ನಡೆದಿದ್ದ ಘಟನೆ
  • 2017ರಲ್ಲಿ ಶಿಕ್ಷೆ ಪ್ರಕಟ
  • ಬಾಲಸಾಕ್ಷಿ ಪರಿಗಣಿಸಿ ಶಿಕ್ಷೆ ಸರಿಯಲ್ಲ
  • ಪುತ್ತೂರು ಜಿಲ್ಲಾ ನ್ಯಾಯಾಲಯದ ತೀರ್ಪಿನ ವಿರುದ್ಧ ಹೈಕೋರ್ಟ್‌ಗೆ ಮೇಲ್ಮನವಿ
  • ಶಿಕ್ಷೆಯನ್ನು ರದ್ದುಪಡಿಸಿದ ಹೈಕೋರ್ಟ್
  • ಎಂಟೂವರೆ ವರ್ಷಗಳ ಬಳಿಕ ಆರೋಪಿ ಜೈಲಿನಿಂದ ಬಿಡುಗಡೆ

ಪುತ್ತೂರು:9 ವರ್ಷಗಳ ಹಿಂದೆ ಪೆರಾಬೆ ಗ್ರಾಮದ ಕೋಚಕಟ್ಟೆ ಎಂಬಲ್ಲಿ ಮಹಿಳೆಯೋರ್ವರನ್ನು ಕೊಲೆಗೈದು ಬಾವಿಗೆ ಹಾಕಿದ್ದ ಪ್ರಕರಣದಲ್ಲಿ ಅಪರಾಧಿಯಾಗಿ ಪರಿಗಣಿಸಲ್ಪಟ್ಟಿದ್ದ ಮೃತರ ಪತಿಗೆ ಪುತ್ತೂರಿನ ಐದನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯ ಆಜೀವಾವಧಿ ಶಿಕ್ಷೆ ವಿಧಿಸಿದ್ದನ್ನು ರಾಜ್ಯ ಹೈಕೋರ್ಟ್ ರದ್ದುಪಡಿಸಿದೆ. ಸೆರೆಮನೆಯಲ್ಲಿ ಶಿಕ್ಷೆ ಅನುಭವಿಸುತ್ತಿರುವ ಆರೋಪಿಯನ್ನು ಕೂಡಲೇ ಬಿಡುಗಡೆ ಮಾಡುವಂತೆ ಹೈಕೋರ್ಟ್ ಆದೇಶಿಸಿದೆ.

ಪೆರಾಬೆ ಗ್ರಾಮದ ಕೋಚಕಟ್ಟೆ ನಿವಾಸಿ ಲಕ್ಷ್ಮೀ(29ವ.)ಎಂಬವರನ್ನು ಕೊಲೆ ಮಾಡಿದ್ದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಆಕೆಯ ಪತಿ ಸುರೇಶ್ ಮುಗೇರ ಎಂಬವರಿಗೆ ಶಿಕ್ಷೆ ವಿಧಿಸಿ ಪುತ್ತೂರಿನ ಐದನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯ 2017ರ ಏಪ್ರಿಲ್ 24ರಂದು ತೀರ್ಪು ನೀಡಿತ್ತು.

ಇದು ಪ್ರಕರಣ: 2014ರ ನ.10ರ ರಾತ್ರಿ ಗಂಟೆ 9.30ಕ್ಕೆ ಘಟನೆ ನಡೆದಿತ್ತು. ಪೆರಾಬೆ ಗ್ರಾಮದ ಕೋಚಕಟ್ಟೆ ನಿವಾಸಿ ಸುರೇಶ್ ಮುಗೇರರವರು 9 ವರ್ಷಗಳ ಹಿಂದೆ(ಘಟನೆ ನಡೆದ ಸಂದರ್ಭ)ಬಂಟ್ವಾಳ ಗ್ರಾಮದ ಕಾವಳಪಡೂರು ಮದ್ವ ಎಂಬಲ್ಲಿಂದ ಲಕ್ಷ್ಮೀಯವರನ್ನು ವಿವಾಹವಾಗಿದ್ದರು. ಮದುವೆಯ ಬಳಿಕದ ದಿನಗಳಲ್ಲಿ 5 ವರ್ಷಗಳಿಂದ ಪತ್ನಿ ಲಕ್ಷ್ಮೀಯವರಿಗೆ ನಿರಂತರ ಮಾನಸಿಕ ಕಿರುಕುಳ, ಹಿಂಸೆ ನೀಡುತ್ತಿದ್ದ ಆರೋಪ ಸುರೇಶ್ ಅವರ ಮೇಲಿತ್ತು. 2014ರ ನ.10ರಂದು ರಾತ್ರಿ ಸಾಂಬಾರು ಪದಾರ್ಥ ಸರಿಯಾಗಿ ಇಲ್ಲವೆಂದು ಪತ್ನಿಯ ಜೊತೆ ತಗಾದೆ ಎತ್ತಿ ಸಿಟ್ಟುಗೊಂಡಿದ್ದ ಸುರೇಶ್ ಮರದ ಮಣೆಯಿಂದ ಲಕ್ಷ್ಮೀಯವರ ಹಣೆಗೆ ಹಲ್ಲೆ ನಡೆಸಿದ್ದರು. ಹಲ್ಲೆಯಿಂದ ತಪ್ಪಿಸಿಕೊಳ್ಳಲೆಂದು ಲಕ್ಷ್ಮೀಯವರು ಮನೆಯಿಂದ ಓಡಿಬಂದು ಸ್ಥಳೀಯ ಅಣಿಯೂರು ಯಾನೆ ತನಿಯಾರು ಎಂಬವರ ಜಮೀನಿಗೆ ತಲುಪುತ್ತಿದ್ದಂತೆ ಬೆನ್ನಟ್ಟಿಕೊಂಡು ಬಂದಿದ್ದ ಸುರೇಶ್‌ರವರು ಅಲ್ಲಿಯೂ ಲಕ್ಷ್ಮೀ ಅವರಿಗೆ ಹಲ್ಲೆ ನಡೆಸಿದ್ದರಿಂದ ಆಕೆ ಸ್ಥಳದಲ್ಲೇ ಮೃತಪಟ್ಟಿದ್ದರು. ಬಳಿಕ ಪತ್ನಿಯ ಶವವನ್ನು ಅಲ್ಲಿಯೇ ಪಕ್ಕದಲ್ಲಿದ್ದ ಬಾವಿಗೆ ಹಾಕಿದ್ದರು ಎಂದು ಆರೋಪಿಸಲಾಗಿತ್ತು.

ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ: ಶವ ಬಾವಿಗೆ ಹಾಕಿದ್ದ ಮಾರನೆ ದಿನ, ಪತ್ನಿ ಬಾವಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಸುರೇಶ್ ಗುಲ್ಲೆಬ್ಬಿಸಿದ್ದರು. ಸ್ಥಳಕ್ಕೆ ಆಗಮಿಸಿದ್ದ ಕಡಬ ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದರು.ಪತಿಯ ದೈಹಿಕ ಮತ್ತು ಮಾನಸಿಕ ಹಿಂಸೆ, ಕಿರುಕುಳದಿಂದ ನೊಂದು ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕಡಬ ಪೊಲೀಸ್ ಠಾಣೆಯಲ್ಲಿ ಆರಂಭದಲ್ಲಿ ಪ್ರಕರಣ ದಾಖಲಾಗಿತ್ತು.

ಆತ್ಮಹತ್ಯೆಯಲ್ಲಕೊಲೆ ಪಿಎಂ ರಿಪೋರ್ಟ್: ಲಕ್ಷ್ಮೀಯವರ ಮೃತ ದೇಹದ ಮರಣೋತ್ತರ ಪರೀಕ್ಷೆ ನಡೆಸಿದ್ದ ದೇರಳಕಟ್ಟೆ ಫಾರೆನ್ಸಿಕ್ ಲ್ಯಾಬ್‌ನ ಪ್ರೊ|ಡಾ.ಸೂರಜ್ ಎಸ್.ಶೆಟ್ಟಿಯವರಿಗೆ ಮೃತ ಲಕ್ಷ್ಮೀಯವರ ತಲೆ ಭಾಗದಲ್ಲಿ ಬಲವಾದ ಹಲ್ಲೆ ನಡೆದಿರುವ ಕುರಿತು ಗಾಯ ಕಂಡು ಬಂದಿತ್ತು. ಈ ಹಿನ್ನೆಲೆಯಲ್ಲಿ ಬಾವಿಯೊಳಗೆ ಕಲ್ಲು ಇತ್ಯಾದಿ ಏನಾದರೂ ಇದ್ದು ತಾಗಿರಬಹುದೇ ಎಂದು ಘಟನೆ ನಡೆದ ಸ್ಥಳ ಪರಿಶೀಲನೆ ನಡೆಸಿದ್ದರು.ಆದರೆ ಅಲ್ಲಿ ಬಾವಿಯೊಳಗೆ ಯಾವುದೇ ಬಂಡೆ ಕಲ್ಲು ಇತ್ಯಾದಿ ಕಂಡು ಬಂದಿರಲಿಲ್ಲ. ಕೆಸರಿನಿಂದ ಕೂಡಿದ ಬಾವಿಯಾಗಿತ್ತು. ಜತೆಗೆ ಬಾವಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದರೆ ಮೃತರ ಹೊಟ್ಟೆಯಲ್ಲಿ ನೀರು ಸೇರಿಕೊಳ್ಳುತ್ತದೆ. ಆದರೆ ಇಲ್ಲಿ ಲಕ್ಷ್ಮೀಯವರ ಮೃತದೇಹದ ಹೊಟ್ಟೆಯೊಳಗೆ ನೀರು ಕೂಡಾ ಇಲ್ಲದೇ ಇರುವುದರಿಂದಾಗಿ ಇದು ಆತ್ಮಹತ್ಯೆಯಲ್ಲ ಎಂಬ ತೀರ್ಮಾನಕ್ಕೆ ಬಂದಿದ್ದ ಡಾ.ಸೂರಜ್ ಶೆಟ್ಟಿಯವರು 2014ರ ನ.13ರಂದು, ‘ಇದು ಆತ್ಮಹತ್ಯೆಯಲ್ಲ ಕೊಲೆ’ ಎಂದು ಮರಣೋತ್ತರ ಪರೀಕ್ಷಾ ವರದಿ ನೀಡಿದ್ದರು. ಆ ಬಳಿಕ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ಆರೋಪಿ ಸುರೇಶ್ ಮುಗೇರರನ್ನು ಬಂಧಿಸಿದ್ದರು. ಮೃತ ಲಕ್ಷ್ಮೀಯವರ ಮಾವ, ಬಂಟ್ವಾಳ ಕಾವಳಪಡೂರು ಮದ್ವ ಕೃಷ್ಣಪ್ಪ ಅವರ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.ಪುತ್ತೂರು ಗ್ರಾಮಾಂತರ ಠಾಣೆಯ ಆಗಿನ ವೃತ್ತ ನಿರೀಕ್ಷಕ ಅನಿಲ್ ಎಸ್ ಕುಲಕರ್ಣಿಯವರು ಸಮಗ್ರ ತನಿಖೆ ನಡೆಸಿ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

ಆರೋಪಿಯ ಮಗನ ಸಹಿತ 15 ಸಾಕ್ಷಿಗಳ ವಿಚಾರಣೆ ನಡೆದಿತ್ತು: ಪ್ರಕರಣದ ಕುರಿತು ಪುತ್ತೂರಿನ ಐದನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿತ್ತು. ಮೃತರ ಪುತ್ರ ನಿತೇಶ್ ಕುಮಾರ್ ಸೇರಿದಂತೆ ಒಟ್ಟು 15 ಸಾಕ್ಷಿಗಳ ವಿಚಾರಣೆ ನಡೆದಿತ್ತು. ಮದುವೆಯಾದ ನಂತರದ ದಿನಗಳಲ್ಲಿ ತನಗೆ ಪತಿ ನಿರಂತರ ಕಿರುಕುಳ ನೀಡುತ್ತಿದ್ದ ಕುರಿತು ಲಕ್ಷ್ಮೀಯವರು ಸೋದರ ಮಾವ ಕೃಷ್ಣಪ್ಪ ಅವರ ಮನೆಗೆ ಹೋದ ಸಂದರ್ಭದಲ್ಲೆಲ್ಲಾ ಹೇಳಿಕೊಳ್ಳುತ್ತಿದ್ದರು. ದೀಪಾವಳಿ ಸಂದರ್ಭ ಒಂದು ವಾರ ಮಾವನ ಮನೆಯಲ್ಲಿದ್ದ ವೇಳೆಯೂ ಆಕೆ ಪತಿ ನೀಡುತ್ತಿದ್ದ ಮಾನಸಿಕ, ದೈಹಿಕ ಹಿಂಸೆಯ ಕುರಿತು ಆಕೆ ಮಾವನಲ್ಲಿ ತಿಳಿಸಿದ್ದರು. ಈ ವಿಚಾರವನ್ನು ಸಾಕ್ಷ್ಯ ವಿಚಾರಣೆ ಸಂದರ್ಭದಲ್ಲಿ ಕೃಷ್ಣಪ್ಪ ಅವರು ತಿಳಿಸಿದ್ದರು. ಮನೆಯಿಂದ ಹೊರ ಹೋಗಿದ್ದ ತಾಯಿ ಎಲ್ಲಿ ಎಂದು ಕೇಳಿದಾಗ ಆಕೆಯನ್ನು ಬಾವಿಗೆ ದೂಡಿ ಹಾಕಿರುವುದಾಗಿ ತಂದೆ ಹೇಳಿದ್ದರು ಎಂದು ಮೃತರ ಪುತ್ರ ಕೂಡಾ ಸಾಕ್ಷ್ಯ ನುಡಿದಿದ್ದರು. ಪ್ರಕರಣದ ಕುರಿತು ಆಗಿನ ಸರಕಾರಿ ಅಭಿಯೋಜಕ ಉದಯ ಕುಮಾರ್‌ರವರ ವಾದವನ್ನು ಪುರಸ್ಕರಿಸಿದ್ದ ಆಗಿನ ನ್ಯಾಯಾಧೀಶ ಎಂ.ರಾಮಚಂದ್ರ ಅವರು ಅಪರಾಧಿಗೆ ಶಿಕ್ಷೆ ವಿಧಿಸಿ 2017ರ ಏಪ್ರಿಲ್ 24ರಂದು ತೀರ್ಪು ನೀಡಿದ್ದರು.

ಬಾಲಸಾಕ್ಷಿ ಪರಿಗಣಿಸಿ ಶಿಕ್ಷೆ ವಿರುದ್ಧ ಹೈಕೋರ್ಟ್‌ಗೆ ಮೇಲ್ಮನವಿ: ಈ ಪ್ರಕರಣದಲ್ಲಿ ಮೃತರ ಪುತ್ರ, ಆಗಿನ್ನೂ ಆರು ವರ್ಷ ಪ್ರಾಯದವನಾಗಿದ್ದ ನಿತೇಶ್ ಕುಮಾರ್ ಅವರ ಬಾಲ ಸಾಕ್ಷಿಯನ್ನು ಪರಿಗಣಿಸಿ ಆರೋಪಿಯನ್ನು ಅಪರಾಧಿ ಎಂದು ಪರಿಗಣಿಸಿ ಶಿಕ್ಷೆ ವಿಧಿಸಿರುವುದು ಸರಿಯಲ್ಲ ಎಂದು, ಪುತ್ತೂರು ಐದನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯ ಸುರೇಶ್ ಮುಗೇರ ಅವರಿಗೆ ಶಿಕ್ಷೆ ವಿಧಿಸಿ ನೀಡಿದ್ದ ತೀರ್ಪಿನ ವಿರುದ್ಧ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಾಗಿತ್ತು. ಕೊಲೆ ಮಾಡಲು ಬಳಸಲಾಗಿತ್ತೆನ್ನಲಾದ ಆಯುಧ ಪತ್ತೆ ವಿಚಾರದಲ್ಲಿಯೂ ಪೊಲೀಸರು ಮತ್ತು ವೈದ್ಯರು ವ್ಯತಿರಿಕ್ತ ಹೇಳಿಕೆಗಳನ್ನು ನೀಡಿದ್ದಾರೆ ಎಂದೂ ಮೇಲ್ಮನವಿಯಲ್ಲಿ ತಿಳಿಸಲಾಗಿತ್ತು. 2017ರಲ್ಲಿಯೇ ಮೇಲ್ಮನವಿ ಸಲ್ಲಿಸಲಾಗಿತ್ತು. ನ್ಯಾಯಮೂರ್ತಿಗಳಾದ ಸೋಮಶೇಖರ್ ಮತ್ತು ರಾಜೇಶ್ ರೈ ಕಲ್ಲಂಗಳ ಅವರಿದ್ದ ದ್ವಿಸದಸ್ಯ ಪೀಠ ಮೇಲ್ಮನವಿಯ ವಿಚಾರಣೆಯನ್ನು ಪೂರ್ಣಗೊಳಿಸಿದೆ. ಪ್ರಕರಣದಲ್ಲಿ ಅಪರಾಧಿಯಾಗಿ ಪರಿಗಣಿಸಲ್ಪಟ್ಟು ಪುತ್ತೂರು ಐದನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯ ಸುರೇಶ್ ಮುಗೇರ ಅವರಿಗೆ ನೀಡಿದ್ದ ಶಿಕ್ಷೆಯನ್ನು ಹೈಕೋರ್ಟ್ ಪೀಠ ರದ್ದುಗೊಳಿಸಿದೆ.ಪ್ರಕರಣದಲ್ಲಿ ಆರೋಪಿ ಪರವಾಗಿ ವಕೀಲರಾದ ಪ್ರಶಾಂತ್ ರೈ ಪುಣ್ಚಪ್ಪಾಡಿ ಮತ್ತು ಹರಿಪ್ರಸಾದ್ ವಾದಿಸಿದ್ದರು.

ಜೈಲಿನಿಂದ ಬಿಡುಗಡೆಯಾದ ಸುರೇಶ್ ಮುಗೇರ:ಪುತ್ತೂರು ಐದನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯ ಶಿಕ್ಷೆ ವಿಧಿಸಿ ನೀಡಿದ್ದ ಆದೇಶವನ್ನು ರದ್ದುಪಡಿಸಿದ ಹೈಕೋರ್ಟ್, ಸೆರೆಮನೆಯಲ್ಲಿ ಶಿಕ್ಷೆ ಅನುಭವಿಸುತ್ತಿರುವ ಸುರೇಶ್ ಮುಗೇರ ಅವರನ್ನು ಕೂಡಲೇ ಬಿಡುಗಡೆಗೊಳಿಸಬೇಕು ಮತ್ತು ಶಿಕ್ಷೆಯ ದಂಡವಾಗಿ ಹಣ ಪಾವತಿಸಿದ್ದರೆ ಅದನ್ನು ಅವರಿಗೆ ಹಿಂತಿರುಗಿಸಬೇಕು ಎಂದು ಆದೇಶಿಸಿತ್ತು. ಹೈಕೋರ್ಟ್ ಆದೇಶದಂತೆ ಸುರೇಶ್ ಮುಗೇರ ಅವರು ಸೆರೆಮನೆಯಿಂದ ಬಿಡುಗಡೆಗೊಂಡಿದ್ದಾರೆ. ಘಟನೆಗೆ ಸಂಬಂಧಿಸಿ ಕಳೆದ ಎಂಟೂವರೆ ವರ್ಷಗಳಿಂದ ಸುರೇಶ್ ಮುಗೇರ ಅವರು ಸೆರೆಮನೆಯಲ್ಲಿದ್ದರು. ಈ ಪೈಕಿ ಎರಡೂವರೆ ವರ್ಷ ನ್ಯಾಯಾಂಗ ಬಂಧನದಲ್ಲಿದ್ದರೆ, ಉಳಿದ ಆರು ವರ್ಷ ಶಿಕ್ಷೆ ಅನುಭವಿಸಿದ್ದರು.

ಜಿಲ್ಲಾ ನ್ಯಾಯಾಲಯ ವಿಧಿಸಿದ್ದ ಶಿಕ್ಷೆಯ ಪ್ರಮಾಣ

ಈ ಘಟನೆಯಲ್ಲಿ ಮೂರು ಪ್ರತ್ಯೇಕ ಅಪರಾಧಗಳಿಗೆ ಸುರೇಶ್ ಅವರಿಗೆ ಪುತ್ತೂರಿನ ಐದನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯ ಶಿಕ್ಷೆ ವಿಧಿಸಿತ್ತು. ಕೊಲೆ ಮಾಡಿರುವ ಅಪರಾಧಕ್ಕೆ (ಸೆಕ್ಷನ್ 302) ಆಜೀವಾವಧಿ ಕಾರಾಗೃಹ ಶಿಕ್ಷೆ ಮತ್ತು ರೂ.5 ಸಾವಿರ ದಂಡ.ದಂಡ ತೆರಲು ತಪ್ಪಿದಲ್ಲಿ 6 ತಿಂಗಳ ಸಾದಾ ಸೆರೆಮನೆ ವಾಸ ಅನುಭವಿಸಲು ಆದೇಶಿಸಲಾಗಿತ್ತು. ಮಾನಸಿಕ, ದೈಹಿಕ ಹಿಂಸೆ (ಸೆಕ್ಷನ್ 498ಎ)ಗೆ 3 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು 5 ಸಾವಿರ ದಂಡ.ದಂಡ ತೆರಲು ತಪ್ಪಿದಲ್ಲಿ 6 ತಿಂಗಳು ಸಾದಾ ಸೆರೆಮನೆ ವಾಸ. ಸಾಕ್ಷ್ಯನಾಶ (ಸೆಕ್ಷನ್ 201 ಐಪಿಸಿ, 1860)ಕ್ಕೆ 7 ವರ್ಷ ಜೈಲು ಮತ್ತು ರೂ.3 ಸಾವಿರ ದಂಡ.ದಂಡ ತೆರಲು ತಪ್ಪಿದಲ್ಲಿ 3 ತಿಂಗಳು ಸಾದಾ ಸೆರೆಮನೆ ವಾಸ ಅನುಭವಿಸುವಂತೆ ಆದೇಶದಲ್ಲಿ ತಿಳಿಸಲಾಗಿತ್ತು.ವಸೂಲಿಯಾಗುವ ದಂಡ ರೂ.13 ಸಾವಿರದಲ್ಲಿ ತಲಾ 6 ಸಾವಿರ ರೂ.ಗಳನ್ನು ಮೃತರ ಮಕ್ಕಳಿಬ್ಬರಿಗೆ ನೀಡಬೇಕು. ಉಳಿಕೆ 1 ಸಾವಿರ ರೂ.ಸರಕಾರಕ್ಕೆ ಮುಟ್ಟುಗೋಲು. ಪ್ರಕರಣದ ಆರೋಪಿಯಾಗಿ ಬಂಧಿತನಾಗಿದ್ದ ಸುರೇಶ್ ಮುಗೇರ 2014ರ ಜನವರಿ 13ರಿಂದ ನ್ಯಾಯಾಂಗ ಬಂಧನದಲ್ಲಿದ್ದರೂ ಶಿಕ್ಷೆಯಲ್ಲಿ ಈ ಅವಧಿಯನ್ನು ಕಡಿತಗೊಳಿಸಲು ಪರಿಗಣಿಸದೆ, ನ್ಯಾಯಾಂಗ ಬಂಧನವೆಂದೇ ಪರಿಗಣಿಸುವಂತೆಯೂ ತೀರ್ಪಿನಲ್ಲಿ ಆದೇಶಿಸಲಾಗಿತ್ತು. ಜಿಲ್ಲಾ ನ್ಯಾಯಾಲಯದ ತೀರ್ಪನ್ನು ಹೈಕೋರ್ಟ್ ಇದೀಗ ರದ್ದುಪಡಿಸಿದೆ.

LEAVE A REPLY

Please enter your comment!
Please enter your name here