ಲೋಕಾಯುಕ್ತ ಬಲೆಗೆ ಬಿದ್ದ ಕೆ.ಆರ್.ಪುರ ತಹಶೀಲ್ದಾರ್ ಆಗಿದ್ದ ಅಜಿತ್ ರೈ
ಅಜಿತ್ ರೈ ಅಕ್ರಮ ಆಸ್ತಿ ಹಿಂದಿನ ರಹಸ್ಯ ಬಯಲಿಗೆಳೆಯಲು ಎಸ್ಐಟಿ ರಚನೆ
ದಾಳಿ ವೇಳೆ ಪತ್ತೆಯಾಗಿದೆ 500 ಕೋಟಿ ರೂ.ಗೂ ಅಧಿಕ ಮೌಲ್ಯದ ಆಸ್ತಿ
11 ದುಬಾರಿ ಬೆಲೆಯ ಕಾರುಗಳು, ದುಬಾರಿ ಬೈಕ್ಗಳೂ ಪತ್ತೆ
ಜು.6ರವರೆಗೆ ಲೋಕಾಯುಕ್ತ ಪೊಲೀಸರ ವಶಕ್ಕೆ ಅಜಿತ್ ಕುಮಾರ್ ರೈ
ಪುತ್ತೂರು: ಮತ್ತೆ ಫಾರ್ಮ್ಗೆ ಮರಳಿರುವ ಕರ್ನಾಟಕ ಲೋಕಾಯುಕ್ತ ಭ್ರಷ್ಟ ಅಧಿಕಾರಿಗಳಿಗೆ ಬಲೆಬೀಸುತ್ತಿದೆ. ಈ ನಡುವೆ ಜೂ.28ರಂದು ಭಾರೀ ಪ್ರಮಾಣದ ದಾಳಿಯನ್ನು ರಾಜ್ಯಾದ್ಯಂತ ನಡೆಸಿದ್ದು, ಭಾರೀ ಅಕ್ರಮ ಸಂಪತ್ತು ಪತ್ತೆಹಚ್ಚಿದೆ. ಈ ನಡುವೆ ಅಕ್ರಮ ಅಸ್ತಿ ಹೊಂದಿರುವ ಆರೋಪದ ಮೇಲೆ ಭ್ರಷ್ಟಚಾರ ನಿಯಂತ್ರಣ ಕಾಯ್ದೆಯಡಿ ಪ್ರಕರಣ ದಾಖಲಾಗಿರುವ. ಕೆ ಅರ್. ಪುರ ತಾಲೂಕಿನ ತಹಶಿಲ್ದಾರ್ ಅಜೀತ್ ರೈ ಸೊರಕೆ ವಿರುದ್ದದ ತನಿಖೆಗೆ ಇದೀಗ ವಿಶೇಷ ತನಿಖಾ ತಂಡವನ್ನೇ ರಚಿಸಲಾಗಿದೆ. ಈ ವಿಚಾರ ಕರ್ನಾಟಕ ಲೋಕಾಯುಕ್ತದ ಇತಿಹಾಸದಲ್ಲೇ ಪ್ರಥಮ ಎನ್ನಲಾಗಿದೆ. ಈ ಮೂಲಕ ಅಜಿತ್ ರೈ ಆಸ್ತಿಯ ಹಿಂದಿನ ಎಳೆ ಎಳೆ ಮಾಹಿತಿಯನ್ನು ಕಲೆಹಾಕಲು ಅಖಾಡ ಸಜ್ಜುಗೊಂಡಿದೆ.
ಜೂ.28ರಂದು ಬೆಳ್ಳಂಬೆಳಗ್ಗೆ ಕಣ್ಣು ಬಿಡುವ ಮುಂಚೆಯೇ ಕರ್ನಾಟಕದಾದ್ಯಂತ ಭ್ರಷ್ಟಾಚಾರದ ಆರೋಪ ಹೊತ್ತಿರುವ 15 ಅಧಿಕಾರಿಗಳ ಮನೆಗೆ ಲೋಕಾಯುಕ್ತ ಪೊಲೀಸರು ದಾಳಿ ಮಾಡಿದ್ದರು. ಈ ಸಂದರ್ಭದಲ್ಲಿ ಕೆ ಅರ್.ಪುರ ತಾಲ್ಲೂಕಿನ ಹಿಂದಿನ ತಹಶೀಲ್ದಾರ್, ಮೂಲತ: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಸರ್ವೆ ಗ್ರಾಮದ ಸೊರಕೆ ಬಳಿಯ ಸಾಗು ನಿವಾಸಿ ದಿ. ಅನಂದ ರೈಯವರ ಪುತ್ರ ಅಜಿತ್ ಕುಮಾರ್ ರೈ ಅವರ ಬಳಿ ಪತ್ತೆಯಾದ ಆಸ್ತಿ, ದುಡ್ಡು, ವಾಹನಗಳ ದಂಡು ನೋಡಿ ಲೋಕಾಯುಕ್ತ ಪೊಲೀಸರು ದಂಗುಬಡಿದಿದ್ದಾರೆ.
ಜೂ.28ರಂದು ಬೆಳ್ಳಂಬೆಳಗ್ಗೆ ಅಜಿತ್ ರೈಯವರ ಕೆಆರ್ ಪುರಂನಲ್ಲಿರುವ ಬಂಗಲೆ, ಚಂದ್ರಾ ಲೇಔಟ್ನ ಸ್ಕೈಲೈನ್ ಅಪಾರ್ಟ್ಮೆಂಟ್ನಲ್ಲಿರುವ ಫ್ಲ್ಯಾಟ್, ಸಹಕಾರ ನಗರದ ಫಾರ್ಚೂನ್ ಸೆಂಟರ್ ಅಪಾರ್ಟ್ಮೆಂಟ್ನಲ್ಲಿರುವ ಮನೆ, ದೇವನಹಳ್ಳಿ ಇಳತ್ತೋರೆ ಹಳ್ಳಿಯಲ್ಲಿರುವ ಫಾರ್ಮ್ಹೌಸ್, ಪುತ್ತೂರಿನ ಸೊರಕೆಯಲ್ಲಿರುವ ಮನೆ ಜೊತೆಗೆ ಅವರ ಬೇನಾಮಿಗಳೆಂದು ಶಂಕಿಸಲಾದ ಹಲವರ ಮನೆಗಳು ಸೇರಿದಂತೆ 11 ಸ್ಥಳಗಳ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ಮಾಡಿದ್ದರು. ಸರಿಸುಮಾರು 30 ಗಂಟೆಗಳಿಗೂ ಅಧಿಕ ಕಾಲ ತಲಾಶ್ನ ಬಳಿಕ 40 ಲಕ್ಷ ರೂ ನಗದು, 700 ಗ್ರಾಂ ಚಿನ್ನಾಭರಣ, ವಿದೇಶಿ ಮದ್ಯದ ಬಾಟಲಿಗಳು, ದುಬಾರಿ ವಾಚ್ಗಳು, 1.90 ಕೋಟಿ ರೂ ಮೌಲ್ಯದ ವಸ್ತುಗಳು, ದುಬಾರಿ ಬೆಲೆಯ 11 ಐಷರಾಮಿ ಕಾರುಗಳು, ಬೈಕ್ಗಳು, ೧೫೦ ಎಕರೆಗೂ ಹೆಚ್ಚು ಜಮೀನು ಸೇರಿದಂತೆ ಸದ್ಯದ ಮಾರುಕಟ್ಟೆ ಬೆಲೆಯಲ್ಲಿ 500 ಕೋಟಿಗೂ ಹೆಚ್ಚು ಮೌಲ್ಯದ ಬೇನಾಮಿ ಆಸ್ತಿ ಗಳಿಸಿರುವ ಆರೋಪ ಅಜಿತ್ ರೈ ಮೇಲಿದೆ. ಜೊತೆಗೆ ಶೋಧದ ವೇಳೆ ಸಾವಿರಾರು ಪುಟಗಳ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಬೇನಾಮಿಗಳ ಜತೆ ಅಜಿತ್ ರೈ ನಿಕಟ ನಂಟು ಹೊಂದಿರುವುದಕ್ಕೆ ಹಲವು ಪುರಾವೆಗಳೂ ಲಭಿಸಿವೆ. ಈ ಎಲ್ಲ ದಾಖಲೆಗಳ ಆಧಾರದಲ್ಲಿ ತನಿಖೆಯನ್ನು ಮತ್ತೆ ವಿಸ್ತರಿಸಲು ಸಿದ್ಧತೆ ನಡೆದಿದೆ.
ಅಜಿತ್ ರೈ ತನ್ನ ಸರ್ವೀಸ್ ಪಿರಿಯಡ್ನಲ್ಲಿ ಪಡೆದಿರುವ ವೇತನ ಮತ್ತು ಭತ್ಯೆಯನ್ನು ಲೆಕ್ಕಹಾಕಿದ್ರೆ ಸಿಗೋದು ವೇತನ ಮತ್ತು ಭತ್ಯೆ ರೂಪದಲ್ಲಿ ಒಟ್ಟು 1.20 ಕೋಟಿ. ಆದರೆ ಅವರ ಬಳಿ 11 ದುಬಾರಿ ಬೆಲೆಯ ಕಾರುಗಳು ಪತ್ತೆಯಾಗಿವೆ.ಅವುಗಳಲ್ಲಿ ಲ್ಯಾಂಡ್ ಕ್ರೂಸರ್ನ ಬೆಲೆ ಬರೋಬ್ಬರಿ 2.5 ಕೋಟಿ. ಅಂದರೆ ಒಂದು ಕಾರಿನ ಬೆಲೆಯೇ ಆರೋಪಿಯ ಒಟ್ಟು ವೇತನ ಭತ್ಯೆಯ ಎರಡು ಪಟ್ಟಿಗಿಂತ ಹೆಚ್ಚಾಗಿದೆ ಎಂದು ತನಿಖೆಯಿಂದ ತಿಳಿದುಬಂದಿರೋ ಮಾಹಿತಿ. ಅಷ್ಟೇ ಅಲ್ಲದೆ ವೋಲ್ವೋ ಎಕ್ಸ್ಸಿ-10, 4 ಟೊಯೊಟಾ ಫಾರ್ಚುನರ್, 4 ಮಹೀಂದ್ರಾ ಥಾರ್ ಜೀಪ್ಗಳು ಸಿಕ್ಕಿವೆ. ಹೀಗಾಗಿ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಆರೋಪದಡಿ ಅಜಿತ್ ರೈ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಈಗ ಪ್ರಕರಣವು ಒಂದು ಹಗರಣದ ಸ್ವರೂಪಕ್ಕೆ ತಲುಪಿದೆ. ಬಹು ಆಯಾಮದಲ್ಲಿ ತನಿಖೆ ನಡೆಸಬೇಕಿದ್ದು, ಇದಕ್ಕಾಗಿ ವಿಶೇಷ ತನಿಖಾ ತಂಡವನ್ನೇ ರಚಿಸಲಾಗಿದೆ. ಲೋಕಾಯುಕ್ತದ ಬೆಂಗಳೂರು ನಗರ ಘಟಕದ ಎಸ್ಪಿ ಕೆ.ವಿ. ಅಶೋಕ್ ಮೇಲುಸ್ತುವಾರಿಯಲ್ಲಿ, ಬೆಂಗಳೂರು ನಗರ ಘಟಕದ ಡಿವೈಎಸ್ಪಿ ಪ್ರಮೋದ್ ಕುಮಾರ್ ಎಸ್ಐಟಿಯ ನೇತೃತ್ವ ವಹಿಸಿದ್ದಾರೆ. ಅವರ ಜತೆ ಇಬ್ಬರು ಡಿವೈಎಸ್ಪಿ, ನಾಲ್ವರು ಇನ್ಸ್ಪೆಕ್ಟರ್ಗಳು ತಂಡದಲ್ಲಿದ್ದಾರೆ. ಹಲವು ಇತರ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಈ ತಂಡಕ್ಕೆ ನಿಯೋಜಿಸಲಾಗಿದೆ ಎಂದು ತಿಳಿದುಬಂದಿದೆ.
ಇಷ್ಟು ಮಾತ್ರ ಅಲ್ಲ ತಪಾಸಣೆಯ ವೇಳೆ ಅಜಿತ್ ರೈ ಬ್ರಾಂಡ್ ಲೋಗೋ ಸೀಕ್ರೆಟ್ ರಿವೀಲ್ ಆಗಿದೆ. ಎಎಸ್ಆರ್ ಹೆಸರಿನಲ್ಲಿ ಅಜಿತ್ ರೈ ಅಫೀಷಿಯಲ್ ಲೋಗೋ ತಯಾರಿಸಿದ್ದರು. ಎಎಸ್ಆರ್ ಎಂದರೆ ಅಜಿತ್ ಸೌಮ್ಯ ರೈ. ತನ್ನ ಹೆಸರಿನ ಜೊತೆ ಪತ್ನಿ ಸೌಮ್ಯ ಹೆಸರನ್ನು ಸೇರಿಸಿ ಅಜಿತ್ ರೈ ಲೋಗೋ ವಿನ್ಯಾಸ ಮಾಡಿದ್ದರು. ತನ್ನ ಬೈಕ್ ಕಾರು ಹಾಗೂ ಇತರೆ ವಸ್ತುಗಳಿಗೆ ವಿಶೇಷವಾಗಿ ಅಜಿತ್ ಅಂಟಿಸುತ್ತಿದ್ದರು. ಆಡಿ ಬೆನ್ಸ್ ಕಾರುಗಳ ಲೋಗೋ ಮಾದರಿಯಲ್ಲಿ ವಿನ್ಯಾಸ ಮಾಡಿದ್ದನ್ನು ನೋಡಿ ಲೋಕಾಯುಕ್ತ ಅಧಿಕಾರಿಗಳು ಶಾಕ್ ಆಗಿದ್ದಾರೆ.ಇನ್ನು ಅಜಿತ್ ರೈ ಬಳಿ ಪತ್ತೆಯಾಗಿರೋ ಎಲ್ಲಾ ವಾಹನಗಳ ನೋಂದಣಿ ಸಂಖ್ಯೆಯೂ 1368 ಎನ್ನುವುದು ವಿಶೇಷ. ಅಂದ್ರೆ ಸಂಖ್ಯಾಶಾಸ್ತ್ರದ ಆಧಾರದಲ್ಲೇ ಈ ಸಂಖ್ಯೆಯನ್ನು ಬಳಸಿಕೊಳ್ತಿದ್ರು ಎನ್ನೋದು ಮತ್ತೊಂದು ಅಚ್ಚರಿಯ ಸಂಗತಿ. ಈ ವಾಹನಗಳೆಲ್ಲವೂ ನವೀನ್ ಕುಮಾರ್ ಎಂಬ ಹೆಸರಲ್ಲಿ ನೋಂದಣಿಯಾಗಿರೋದು ಇನ್ನೊಂದು ಅಚ್ಚರಿಯ ಸಂಗತಿ. ಈ ಮೂಲಕ ನವೀನ್ ಕುಮಾರ್ ಬೇನಾಮಿ ವ್ಯಕ್ತಿ ಎನ್ನುವುದು ಲೋಕಾಯುಕ್ತ ಪೊಲೀಸರ ತನಿಖೆಯಲ್ಲಿ ಗೊತ್ತಾಗಿದೆ. ಇದರ ಜೊತೆಗೆ ಆರೋಪಿಯ ಸಹೋದರ ಆಶಿತ್ ರೈ ಹೆಸರಲ್ಲಿ 40 ಎಕರೆ ಜಮೀನು ನೋಂದಣಿಯಾಗಿದ್ದರೆ, ಸ್ನೇಹಿತ ಗೌರವ್ ಶೆಟ್ಟಿ ಹೆಸರಲ್ಲಿ 98 ಎಕರೆ ಜಮೀನು ನೋಂದಣಿಯಾಗಿದೆ. ಜೊತೆಗೆ ನಿಕಟವತಿಗಳಾದ ಕೃಷ್ಣಪ್ಪ, ಹರ್ಷವರ್ಧನ್, ಸೇರಿದಂತೆ ಕೆಲವರ ಹೆಸರಿನಲ್ಲಿ ಹೆಚ್ಚಿನ ಸ್ಥಿರಾಸ್ತಿಗಳಿದ್ದು, ಬೇನಾಮಿಗಳೆಂದು ಗುರುತಿಸಿರುವ ಎಲ್ಲ ವ್ಯಕ್ತಿಗಳನ್ನೂ ವಿಚಾರಣೆ ನಡೆಸಲು ತನಿಖಾ ತಂಡ ಮುಂದಾಗಿದೆ ಎಂದು ತಿಳಿದುಬಂದಿದೆ.
ಇನ್ನು ಪತ್ತೆಯಾಗಿರುವ 68 ಎಕರೆ ಜಮೀನಿನಲ್ಲಿ ಅಜಿತ್ ರೈ ಹಾರ್ಸ್ ರೈಡ್ ಟ್ರೇನಿಂಗ್ ಸೆಂಟರ್ ತೆರೆಯಲು ಯೋಜನೆ ರೂಪಿಸಿದ್ದರು ಎನ್ನುವ ಮಾಹಿತಿ ಇದೆ. ಜೊತೆಗೆ ದೊಡ್ಡಬಳ್ಳಾಪುರದಲ್ಲಿ ಪತ್ತೆಯಾಗಿರೋ ಜಮೀನಿನಲ್ಲಿ ಫಾರ್ಮುಲಾ ವನ್ ರೇಸಿಂಗ್ ಟ್ರ್ಯಾಕ್ ನಿರ್ಮಾಣಕ್ಕೆ ಬ್ಲ್ಯೂಪ್ರಿಂಟ್ ತಯಾರಾಗಿತ್ತು ಎನ್ನುವ ಮಾಹಿತಿಯೂ ಇದೆ. ಅಲ್ಲದೆ ಅಜಿತ್ ರೈ ಆಸ್ತಿಯಲ್ಲಿ ದ.ಕ. ಜಿಲ್ಲೆಯ ಪ್ರಭಾವಿ ರಾಜಕಾರಣಿ, ಉದ್ಯಮಿಗಳ ಪಾಲೂ ಇದೆ ಎನ್ನುವ ಮಾತು ಕೂಡ ಹರಿದಾಡುತ್ತಿದೆ. ಹೀಗಾಗಿ ದ.ಕ. ಜಿಲ್ಲೆಯಲ್ಲೂ ಈ ಎಲ್ಲಾ ಆರೋಪಗಳ ಬಗ್ಗೆ ಪಿನ್ ಟು ಪಿನ್ ಡೀಟೇಲ್ ಕಲೆಹಾಕಲು ಲೋಕಾಯುಕ್ತ ಮುಂದಾಗಿದೆ. ಹೀಗಾಗಿ ಗುರುವಾರ ಬಂಧನಕ್ಕೊಳಗಾಗಿದ್ದ ಅಜಿತ್ ಲೋಕಾಯುಕ್ತ ಪೊಲೀಸರು ಭ್ರಷ್ಠಾಚಾರ ನಿಯಂತ್ರಣ ಕಾಯ್ದೆ ವಿಶೇಷ ನ್ಯಾಯಾಲಯಕ್ಕೆ (ಸಿಸಿಎಚ್-78) ಆರೋಪಿಯನ್ನು ಶುಕ್ರವಾರ ಮಧ್ಯಾಹ್ನ ಹಾಜರುಪಡಿಸಿದ್ದರು. ಹೆಚ್ಚಿನ ವಿಚಾರಣೆ ಅಗತ್ಯವಿರುವುದರಿಂದ ಏಳು ದಿನಗಳ ಕಾಲ ತಮ್ಮ ವಶಕ್ಕೆ ನೀಡುವಂತೆ ಲೋಕಾಯುಕ್ತ ಪೊಲೀಸರು ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದು, ಅದನ್ನು ಮಾನ್ಯ ಮಾಡಿದ ನ್ಯಾಯಾಧೀಶ ಎಸ್.ವಿ. ಶ್ರೀಕಾಂತ್ ಜು.6ರವರೆಗೆ ಆರೋಪಿಯನ್ನು ತನಿಖಾ ತಂಡದ ವಶಕ್ಕೆ ನೀಡಿ ಆದೇಶ ನೀಡಿದ್ದಾರೆ.
ಈ ಹಿಂದೆ ಕೆ.ಆರ್.ಪುರದ ತಹಶೀಲ್ದಾರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಅಜಿತ್ ಕುಮಾರ್ ರೈಯವರನ್ನು ರಾಜಕಾಲುವೆ ಒತ್ತುವರಿದಾರರಿಗೆ ಸಹಕಾರ ನೀಡಿ ಹೈಕೋರ್ಟ್ನಿಂದ ತಡೆಯಾಜ್ಞೆ ತರಲು ಸಹಕಾರ ನೀಡಿದ್ದರು ಎಂಬ ಆರೋಪದಡಿ ಅವರನ್ನು ರಾಜ್ಯ ಸರಕಾರ ಅಮಾನತ್ತು ಮಾಡಿತ್ತು. ಕೆಲವು ದಿನಗಳ ಹಿಂದೆ ಅಮಾನತು ಆದೇಶವನ್ನು ಸರಕಾರ ಹಿಂಪಡೆದುಕೊಂಡಿದ್ದರಿಂದ ಮತ್ತೆ ಕೆಆರ್ ಪುರ ತಹಶೀಲ್ದಾರ್ ಆಗಿ ಕರ್ತವ್ಯಕ್ಕೆ ಹಾಜರಾಗಿದ್ದರು. ಕಳೆದ ಒಂದು ವಾರದ ಹಿಂದಷ್ಟೇ ಸ್ಥಳ ತೋರಿಸದೆ ವರ್ಗಾವಣೆ ಮಾಡಲಾಗಿತ್ತು. ಇದೀಗ ಲೋಕಾಯುಕ್ತ ಪೊಲೀಸರಿಂದ ದಾಳಿಗೆ ಒಳಗಾಗಿ ಪೊಲೀಸ್ ಕಸ್ಟಡಿಯಲ್ಲಿದ್ದಾರೆ.