ಕೃತಕ ನೆರೆ ಭೀತಿ ತಂದೊಡ್ಡಿದ ಹೆದ್ದಾರಿ ಚತುಷ್ಪಥ ಕಾಮಗಾರಿ-ರಸ್ತೆಯಲ್ಲೇ ಬಾಯ್ದೆರೆದು ನಿಂತ ಹಳ್ಳಗಳು

0

ಉಪ್ಪಿನಂಗಡಿ: ಪ್ರತಿ ಮಳೆಗಾಲದಲ್ಲಿಯೂ ಪ್ರವಾಹ ಭೀತಿ ಎದುರಿಸುವ ಉಪ್ಪಿನಂಗಡಿಯಲ್ಲಿ ಈ ಬಾರಿ ಚತುಷ್ಪಥ ರಾಷ್ಟ್ರಿಯ ಹೆದ್ದಾರಿ ಕಾಮಗಾರಿಯೂ ಕೃತಕ ನೆರೆಯ ಭಯ ಸೃಷ್ಟಿಸಿರುವುದು ಒಂದೆಡೆಯಾದರೆ, ಕೆಸರುಮಯ ರಸ್ತೆ, ಬ್ಲಾಕ್ ಆಗಿರುವ ಮೋರಿಗಳು, ಕಾಲಿಟ್ಟಾಗ ಹೂತು ಹೋಗುವಂತಹ ಹೆದ್ದಾರಿ ಬದಿಯ ಫುಟ್‌ಪಾತ್‌ಗಳು, ಹೆದ್ದಾರಿಯಲ್ಲೇ ಬಾಯ್ದೆರೆದು ನಿಂತಿರುವ ದೊಡ್ಡ ದೊಡ್ಡ ಹಳ್ಳದಂತಹ ಹೊಂಡಗಳು ಹೆದ್ದಾರಿ ಸಂಚಾರವೆನ್ನುವುದನ್ನು ದುಸ್ತರವಾಗುವಂತೆ ಮಾಡಿದೆ.


ನದಿಯಲ್ಲೇ ಕಾಮಗಾರಿ:
ಇಲ್ಲಿನ ಹಳೆಗೇಟು ಬಳಿ ನದಿಯಲ್ಲಿಯೇ ಚತುಷ್ಪಥ ಹೆದ್ದಾರಿಯ ಕಾಮಗಾರಿ ನಡೆದಿದ್ದು, ಉದ್ದಕ್ಕೆ ತಡೆಗೋಡೆ ಕಟ್ಟಿ ಅದಕ್ಕೆ ಮಣ್ಣು ತುಂಬಲಾಗಿದೆ. ಇದರಿಂದ ನೇತ್ರಾವತಿಯ ಅಗಲ ಮೊದಲಿಗಿಂತ ಕಡಿಮೆಯಾಗಿದೆ. ಕೂಟೇಲು ಬಳಿ ನೇತ್ರಾವತಿ ನದಿಯನ್ನು ಸೇರುವ ಸಣ್ಣ ಹೊಳಗೆ ಸೇತುವೆ ನಿರ್ಮಾಣವಾಗುತ್ತಿದ್ದು, ಈಗಿರುವ ಹೆದ್ದಾರಿ ಬದಿ ಚತುಷ್ಥಥಕ್ಕಾಗಿ ಈ ಹೊಳೆಯ ಅರ್ಧದಷ್ಟು ಭಾಗಕ್ಕೆ ಮಣ್ಣು ತುಂಬಲಾಗಿದೆ. ಹಳೆಗೇಟು ಬಳಿಯೂ ಕೂಡಾ ದೊಡ್ಡ ತೋಡೊಂದರಲ್ಲೇ ಮೇಲ್ಸೇತುವೆ ಕಾಮಗಾರಿ ನಡೆಯುತ್ತಿದ್ದು, ಇವೆಲ್ಲಾ ನೀರಿನ ಸರಾಗ ಹರಿಯುವಿಕೆಗೆ ತಡೆಯಾಗಲಿವೆ. ಆದ್ದರಿಂದ ಈ ಬಾರಿ ನೇತ್ರಾವತಿ- ಕುಮಾರಧಾರ ನದಿಗಳು ಮೊದಲಿನಂತೆ ಉಕ್ಕಿ ಹರಿದು ಪ್ರವಾಹ ಬರುವ ಮೊದಲೇ ಈ ಕಾಮಗಾರಿಯಿಂದಾಗಿ ಕೃತಕ ಪ್ರವಾಹದ ಭೀತಿ ಎದುರಾಗಿದೆ.


ಫುಟ್‌ಪಾತ್ ಕೆಸರುಮಯ:
ಉಪ್ಪಿನಂಗಡಿಯಲ್ಲಿ ಹೆಚ್ಚಿನ ಕಡೆ ಈಗಿನ ಹೆದ್ದಾರಿಯ ಬದಿಯಲ್ಲೇ ಚತುಷ್ಪಥ ಹೆದ್ದಾರಿ ಹಾದು ಹೋಗುತ್ತದೆ. ಅಲ್ಲಿ ಮಣ್ಣು ತುಂಬಿಸುವ ಕಾಮಗಾರಿಗಳು ನಡೆದಿದ್ದು, ಅವೆಲ್ಲಾ ಮಳೆಗೆ ಕೊಚ್ಚಿ ಹೋಗುತ್ತಿರುವುದರಿಂದ ಕೆಲವು ಕಡೆ ಹೆದ್ದಾರಿಯೇ ಕೆಸರುಮಯವಾಗಿದೆ. ಇನ್ನು ಕೆಲವು ಕಡೆ ಈಗಿರುವ ಹೆದ್ದಾರಿಯ ಬದಿಗೆ ಮಣ್ಣು ಹಾಕಲಾಗಿದ್ದು, ಹೆದ್ದಾರಿ ಬದಿಯ ಫುಟ್‌ಪಾತ್‌ನಲ್ಲಿ ಕಾಲಿಟ್ಟರೆ ಕಾಲುಗಳು ಹೂತು ಹೋಗುವಂತಹ ಸ್ಥಿತಿಯಿದೆ. ಇದರಿಂದ ಪಾದಚಾರಿಗಳಿಗೆ ಹೆದ್ದಾರಿಯಲ್ಲೇ ನಡೆಯಬೇಕಾದ ಸ್ಥಿತಿ ಬಂದೊದಗಿದೆ.


ಹಳ್ಳದಂತಿರುವ ಹೊಂಡಗಳು:
ಚತುಷ್ಪಥ ಹೆದ್ದಾರಿ ಕಾಮಗಾರಿಗಾಗಿ ಕೆಲವು ಕಡೆ ಮೇಲ್ಸೇತುವೆ ಕಾಮಗಾರಿಗಳು ಈಗಿನ ಹೆದ್ದಾರಿಯಲ್ಲೇ ಬರುತ್ತಿದ್ದು, ಅಲ್ಲಿ ಸಂಚಾರಕ್ಕೆ ಪರ್ಯಾಯ ರಸ್ತೆಯನ್ನು ಮಾಡಿಕೊಡಲಾಗಿದೆ. ಆದರೆ ಈ ಬಾರಿಯ ಮಳೆಗಾಲದಲ್ಲಿ ಈ ರಸ್ತೆಗಳೆಲ್ಲಾ ಹೊಂಡಮಯವಾಗಿದ್ದು, ಮಳೆಗಾಲದಲ್ಲಿ ನೀರು ತುಂಬಿ ಹೆದ್ದಾರಿಯಲ್ಲಿ ದೊಡ್ಡ ದೊಡ್ಡ ಹಳ್ಳಗಳು ನಿರ್ಮಾಣವಾದಂತೆ ಕಾಣುತ್ತಿವೆ. ಇದು ವಾಹನಗಳ ಸಂಚಾರಕ್ಕೆ ಸಮಸ್ಯೆಗಳನ್ನು ತಂದೊಡ್ಡಿದೆ.


ಮೋರಿ ಬ್ಲಾಕ್: ಕೃತಕ ನೆರೆ:
34 ನೆಕ್ಕಿಲಾಡಿಯ ಹಳೆ ಮಂಗಳೂರು ರಸ್ತೆಯ ಬಳಿ ಚತುಷ್ಪಥ ಕಾಮಗಾರಿಯಿಂದಾಗಿ ಮಣ್ಣು ತುಂಬಿ ಮೋರಿಯು ಬ್ಲಾಕ್ ಆಗಿದ್ದು, ಇದರಿಂದ ಆ ಪರಿಸರದಲ್ಲಿ ಕೃತಕ ನೆರೆ ಉಂಟಾಗಿದೆ. ಒಬ್ಬರ ಮನೆಗೆ ನೀರು ನುಗ್ಗಿದರೆ, ಇನ್ನೊಬ್ಬರ ಜಾಗದ ಆವರಣ ಗೋಡೆ ಕುಸಿದು ಬಿದ್ದಿದೆ. ಒಟ್ಟಿನಲ್ಲಿ ಚತುಷ್ಪಥ ಕಾಮಗಾರಿಯಿಂದಾಗಿ ಬೇಸಿಗೆಯಲ್ಲಿ ಧೂಳು, ಮಳೆಗಾಲದಲ್ಲಿ ಕೆಸರು ಎನ್ನುವ ಸ್ಥಿತಿಯ ನಡುವೆಯೇ ಇನ್ನು ಹಲವೆಡೆ ಮೋರಿ ಬ್ಲಾಕ್, ಮಣ್ಣು ಜರಿದಿರುವುದು, ಚರಂಡಿ ಮುಚ್ಚಿರುವುದರಿಂದ ಹಲವು ಸಮಸ್ಯೆ- ಸಂಕಷ್ಟಗಳನ್ನು ಚತುಷ್ಪಥ ಹೆದ್ದಾರಿ ಕಾಮಗಾರಿಯು ತಂದಿಟ್ಟಿದೆ.

ಚತುಷ್ಪಥ ಹೆದ್ದಾರಿ ಕಾಮಗಾರಿಯ ಸಂದರ್ಭ ಮೊದಲಿದ್ದ ಚರಂಡಿಗಳು ಮುಚ್ಚಿ ಹೋಗಿವೆ. ಆಮೇಲೆ ಹೆದ್ದಾರಿ ಕಾಮಗಾರಿಗಳಲ್ಲಿ ಗುತ್ತಿಗೆದಾರರು ಹೆಚ್ಚಿನ ಕಡೆ ಅದಕ್ಕೆ ಸರಿಯಾಗಿ ಚರಂಡಿ ಮಾಡಿ ಪರ್ಯಾಯ ವ್ಯವಸ್ಥೆ ಮಾಡಲಿಲ್ಲ. ಇದರಿಂದ ನೀರು ಎಲ್ಲೆಂದರಲ್ಲಿ ಹರಿದು ಜನರಿಗೆ, ಕೃಷಿಗೆ ತೊಂದರೆಯಾಗುವಂತಾಗಿದೆ. ರಸ್ತೆ ಬದಿಯಲ್ಲಿ ಮಣ್ಣನ್ನು ಹಾಕುವ ಸಂದರ್ಭವೂ ಅದನ್ನು ಸರಿಯಾಗಿ ಗಟ್ಟಿಗೊಳಿಸುವ ಪ್ರಯತ್ನ ನಡೆದಿಲ್ಲ. ಇದರಿಂದಾಗಿ ಹೆದ್ದಾರಿಯ ಬದಿಗೆ ಇಳಿದ ಘನ ವಾಹನಗಳ ಚಕ್ರಗಳು ಅಲ್ಲೇ ಮಣ್ಣಿನಡಿ ಹೂತು ಹೋಗಿ ಬಾಕಿಯಾಗುವಂತಾಗಿದೆ. ಮೇಲ್ಸೇತುವೆ ಕಾಮಗಾರಿ ಸಂದರ್ಭ ಪರ್ಯಾಯ ರಸ್ತೆ ಮಾಡಿಕೊಟ್ಟರೂ ಅದಕ್ಕೆ ಸರಿಯಾದ ಡಾಮರೀಕರಣದ ವ್ಯವಸ್ಥೆ ಮಾಡಿಲ್ಲ. ಇದರಿಂದಾಗಿ ಹೆದ್ದಾರಿಯಲ್ಲಿ ದೊಡ್ಡ ದೊಡ್ಡ ಗುಂಡಿಗಳು ಸೃಷ್ಟಿಯಾಗಿದ್ದು, ಒಂದೆಡೆ ಇವುಗಳು ವಾಹನ ಸಂಚಾರಕ್ಕೆ ತೊಂದರೆಪಡಿಸಿದರೆ, ಇನ್ನೊಂದೆಡೆ ಇಲ್ಲಿಂದ ಹೋಗುವ ಶಾಲಾ ಮಕ್ಕಳು ಸೇರಿದಂತೆ ಪಾದಚಾರಿಗಳು, ದ್ವಿಚಕ್ರ ವಾಹನ ಸವಾರರು ಕೆಸರ ಸ್ನಾನ ಮಾಡಬೇಕಾದ ಪರಿಸ್ಥಿತಿ ಬಂದೊದಗಿದೆ.


ಅಬ್ದುರ್ರಹ್ಮಾನ್ ಯುನಿಕ್
ಕಾರ್ಯದರ್ಶಿ, ವಾಣಿಜ್ಯ ಮತ್ತು ಕೈಗಾರಿಕಾ ಸಂಘ ಉಪ್ಪಿನಂಗಡಿ

ಚುತುಷ್ಪಥ ಹೆದ್ದಾರಿ ಕಾಮಗಾರಿ ನಡೆಸುವ ಸಂದರ್ಭ ಇದ್ದ ಚರಂಡಿಗಳನ್ನು ಮುಚ್ಚಿ ಬಳಿಕ ಅದಕ್ಕೆ ಸರಿಯಾದ ವ್ಯವಸ್ಥೆ ಮಾಡದಿರುವುದರಿಂದ 34 ನೆಕ್ಕಿಲಾಡಿಯಲ್ಲಿ ಬಾಲಕೃಷ್ಣ ಚೌಟ ಎಂಬವರ ಮನೆಗೆ ನೀರು ನುಗ್ಗುವಂತಾಗಿದೆ. ಹಂಝ ಎಂಬವರ ಮನೆಯ ಆವರಣ ಗೋಡೆ ಕುಸಿದು ಬಿದ್ದಿದೆ. ಬೊಳುವಾರು ಮಸೀದಿಯ ಬಳಿ ಹೆದ್ದಾರಿಯಲ್ಲಿ ನೀರು ನಿಲ್ಲುವಂತಾಗಿದೆ. ಅಲ್ಲದೇ, ಹೆದ್ದಾರಿಯಲ್ಲಿ ದೊಡ್ಡ ದೊಡ್ಡ ಹೊಂಡಗಳು ಸೃಷ್ಟಿಯಾಗಿ ಸಂಚಾರ ಕಷ್ಟಸಾಧ್ಯವಾಗಿದೆ.


ಪ್ರಶಾಂತ್ ನೆಕ್ಕಿಲಾಡಿ ಅಧ್ಯಕ್ಷರು, 34 ನೆಕ್ಕಿಲಾಡಿ ಗ್ರಾ.ಪಂ.

LEAVE A REPLY

Please enter your comment!
Please enter your name here