ಪುತ್ತೂರು: ಕಳೆದೆರಡು ದಿನಗಳಿಂದ ನಿರಂತರ ಸುರಿಯುತ್ತಿರುವ ಮಳೆಯ ಪರಿಣಾಮ ಅರಿಯಡ್ಕ ಗ್ರಾಮದ ಅರಿಯಡ್ಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಒಂದರಿಂದ 5 ಕೊಠಡಿಗಳಿರುವ ಶಾಲಾ ಕಟ್ಟಡದ ಒಂದು ಭಾಗದ ಗೋಡೆ ಬಿರುಕುಬಿಟ್ಟಿದ್ದು ಅಪಾಯದ ಸ್ಥಿತಿಯಲ್ಲಿದೆ. ಗೋಡೆ ಬಿರುಕುಬಿಟ್ಟ ಹಿನ್ನೆಲೆಯಲ್ಲಿ ಆ ಕೊಠಡಿಗಳಲ್ಲಿ ಪಾಠ ಕೇಳುತ್ತಿದ್ದ ವಿದ್ಯಾರ್ಥಿಗಳನ್ನು ಪಕ್ಕದ ಕಟ್ಟಡಕ್ಕೆ ಶಿಕ್ಷಕರು ಸ್ಥಳಾಂತರ ಮಾಡಿದ್ದಾರೆ. ಶತಮಾನದ ಹೊಸ್ತಿಲಲ್ಲಿರುವ ಅರಿಯಡ್ಕ ಶಾಲೆಯ ಈ ಕಟ್ಟಡವು ಸುಮಾರು 80 ವರ್ಷಗಳ ಹಳೆಯ ಕಟ್ಟಡ ಆಗಿದೆ. ಈ ಬಗ್ಗೆ ಜು.24 ರಂದು ಶಾಲೆಗೆ ಭೇಟಿ ನೀಡಿದ ಶಾಸಕ ಅಶೋಕ್ ಕುಮಾರ್ ರೈಯವರು ಬಿರುಕುಬಿಟ್ಟ ಶಾಲಾ ಕಟ್ಟಡವನ್ನು ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಿರಂತರ ಸುರಿಯುತ್ತಿರುವ ಮಳೆಯ ಪರಿಣಾಮ ಅಲ್ಲಲ್ಲಿ ಕೆಲವೊಂದು ಅನಾಹುತಗಳು ಸಂಭವಿಸುತ್ತಿರುತ್ತದೆ. ಈ ಶಾಲಾ ಕಟ್ಟಡವು ಕೂಡ ಅತ್ಯಂತ ಹಳೆಯ ಕಟ್ಟಡವಾಗಿರುವುದರಿಂದ ಗೋಡೆ ಬಿರುಕುಬಿಟ್ಟಿದೆ. ಗೋಡೆ ಬಿರುಕುಬಿಟ್ಟಿರುವುದನ್ನು ಗಮನಿಸಿದ ಶಿಕ್ಷಕರು ತಕ್ಷಣವೇ ಮಕ್ಕಳನ್ನು ಇನ್ನೊಂದು ಕಟ್ಟಡಕ್ಕೆ ಸ್ಥಳಾಂತರ ಮಾಡುವ ಮೂಲಕ ಮಕ್ಕಳ ಜೀವಕ್ಕೆ ಯಾವುದೇ ತೊಂದರೆ ಬರದಂತೆ ನೋಡಿಕೊಂಡಿದ್ದಾರೆ.
ಶಾಲೆಗಳ ಅಭಿವೃದ್ಧಿಗೆ 3 ಕೋಟಿ 61 ಲಕ್ಷ ರೂ.ಅನುದಾನ
ಈಗಾಗಲೇ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿರುವ ಶಾಲೆಗಳ ಅಭಿವೃದ್ಧಿಗೆ ಸರಕಾರ 3 ಕೋಟಿ 61 ಲಕ್ಷ ರೂಪಾಯಿಗಳ ಅನುದಾನವನ್ನು ಬಿಡುಗಡೆಗೊಳಿಸಿದೆ. ಅದರಂತೆ ಶಾಲೆಗಳ ಅಭಿವೃದ್ಧಿಯಾಗಲಿದೆ ಎಂದು ಶಾಸಕರು ತಿಳಿಸಿದರು. ಲ್ಯಾಬ್, ಲೈಬ್ರೆರಿ ಸಹಿತ ಶಾಲಾ ಕಟ್ಟಡಗಳ ಅಭಿವೃದ್ಧಿಗೆ ಅನುದಾನ ನೀಡಲಾಗುವುದು, ಎಲ್ಲಿ ಲ್ಯಾಬ್ ಇಲ್ಲ ಅಲ್ಲಿ ಲ್ಯಾಬ್ ಕೊಠಡಿಗೆ ಸುಮಾರು 18 ಲಕ್ಷ ರೂ.ನೀಡಲಾಗುವುದು ಅದೇ ರೀತಿ ಲೈಬ್ರೆರಿ ಪುಸ್ತಕ ಖರೀದಿಗೆ, ಲ್ಯಾಬ್ ಸಾಮಾಗ್ರಿ ಖರೀದಿಗೆ ಅನುದಾನ ನೀಡಲಾಗುವುದು ಎಂದರು. ಇದಲ್ಲದೆ ಶಿಥಿಲಗೊಂಡ ಕಟ್ಟಡಗಳನ್ನು ತೆರವುಗೊಳಿಸಿ ನೂತನ ಕಟ್ಟಡ ನಿರ್ಮಾಣಕ್ಕೂ ಅನುದಾನ ನೀಡಲಾಗುವುದು ಎಂದ ಅವರು, ಅರಿಯಡ್ಕ ಶಾಲೆಯ ಕಟ್ಟಡವನ್ನು ಮಳೆ ಕಡಿಮೆಯಾದ ಕೂಡಲೇ ಸಂಪೂರ್ಣ ನೆಲಸಮ ಮಾಡಿ ಹೊಸ ಕಟ್ಟಡ ಕಟ್ಟಲು ಅನುದಾನ ನೀಡಲಾಗುವುದು ಎಂದು ತಿಳಿಸಿದರು.
13,500 ಶಿಕ್ಷಕರ ನೇಮಕಾತಿ
ಈಗಾಗಲೇ ಶಿಕ್ಷಣ ಸಚಿವರು ಹೇಳಿರುವಂತೆ ರಾಜ್ಯದಲ್ಲಿ ಸುಮಾರು 13 ಸಾವಿರದ 500 ಶಿಕ್ಷಕರ ನೇಮಕಾತಿಯನ್ನು ಕೂಡಲೇ ಮಾಡಲಾಗುವುದು ಎಂದು ಶಾಸಕರು ಈಗಾಗಲೇ ನೇಮಕಾತಿ ಆಗಿದ್ದು ಕೆಲವೊಂದು ಟೆಕ್ನಿಕಲ್ ಸಮಸ್ಯೆಗಳಿಂದ ಕೋರ್ಟ್ ಇದಕ್ಕೆ ತಡೆ ನೀಡಿತ್ತು. ಸದ್ಯದಲ್ಲೇ ಕೋರ್ಟ್ ತಡೆಯನ್ನು ಹಿಂತೆಗೆದುಕೊಂಡು ಆದೇಶ ಕೊಡಲಿದೆ ಎಂದು ತಿಳಿಸಿದ ಅವರು, ಭಾಷಾವಾರು ಶಿಕ್ಷಕರ ನೇಮಕಾತಿ ತಕ್ಷಣವೇ ಆಗಲಿದೆ ಎಂದು ಹೇಳಿದರು.
ಆಂಗ್ಲ ಮಾಧ್ಯಮಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ
ಕನ್ನಡ ಮಾಧ್ಯಮ ಶಾಲೆಗಳು ಮುಚ್ಚುತ್ತಿವೆ ಎಂಬ ಕೂಗು ಕಳೆದ ಕೆಲವು ವರ್ಷಗಳಿಂದ ಕೇಳುತ್ತಿದೆ. ಕನ್ನಡ ಮಾಧ್ಯಮ ಶಾಲೆಗಳನ್ನು ಉಳಿಸಿಕೊಳ್ಳಬೇಕಾದರೆ ಆಂಗ್ಲ ಮಾಧ್ಯಮ ವಿಭಾಗವನ್ನು ಪ್ರತಿ ಕನ್ನಡ ಮಾಧ್ಯಮ ಶಾಲೆಗಳಲ್ಲಿ ತೆರೆಯುವ ಅಗತ್ಯವಿದೆ ಎಂದ ಶಾಸಕರು, ಕೇವಲ ಶ್ರೀಮಂತರ ಮಕ್ಕಳು ಮಾತ್ರ ಖಾಸಗಿ ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಕಲಿಯುವುದಲ್ಲ ಬಡವರ ಮಕ್ಕಳಿಗೂ ಉತ್ತಮ ಗುಣಮಟ್ಟದ ಶಿಕ್ಷಣ ಸರಕಾರಿ ಶಾಲೆಗಳಲ್ಲಿ ಸಿಗುವಂತಾಗಬೇಕು ಈ ನಿಟ್ಟಿನಲ್ಲಿ ಕೆಪಿಎಸ್ ಮಾದರಿಯಲ್ಲಿ ಪ್ರತಿ ಕನ್ನಡ ಮಾಧ್ಯಮ ಶಾಲೆಗಳಲ್ಲೂ ಆಂಗ್ಲ ಮಾಧ್ಯಮ ವಿಭಾಗವನ್ನು ಆರಂಭಿಸಲು ಹೆಚ್ಚಿನ ಒತ್ತು ನೀಡಲಾಗುವುದು ಎಂದು ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದರು. ಕನ್ನಡಕ್ಕೆ ಮೊದಲ ಆದ್ಯತೆಯೊಂದಿಗೆ ಇಂಗ್ಲೀಷ್ ಮತ್ತು ಹಿಂದಿ ಭಾಷಾ ಶಿಕ್ಷಣವನ್ನು ಮಕ್ಕಳಿಗೆ ನೀಡುವ ಕೆಲಸ ಆಗಲಿದೆ. ಮುಂದಿನ ದಿನಗಳಲ್ಲಿ ಜನರು ತಮ್ಮ ಮಕ್ಕಳನ್ನು ಸರಕಾರಿ ಶಾಲೆಗಳಿಗೆ ಸೇರಿಸಲು ಕ್ಯೂ ನಿಲ್ಲುವಂತಾಗಬೇಕು ಎಂದು ಹೇಳಿದರು.
ಎಸ್‌ಡಿಎಂಸಿಯಿಂದ ಮನವಿ
ಶತಮಾನದ ಹೊಸ್ತಿಲಲ್ಲಿರುವ ಅರಿಯಡ್ಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಒಂದು ಕಟ್ಟಡ ಈಗಾಗಲೇ ಬಿರುಕು ಬಿಟ್ಟಿದ್ದು ಅಪಾಯದ ಸ್ಥಿತಿಯಲ್ಲಿದೆ. ಮೊದಲ ಕಟ್ಟಡಕ್ಕೆ ೨೦೨೫ ನೇ ವರ್ಷಕ್ಕೆ ನೂರು ವರ್ಷಗಳು ತುಂಬುತ್ತಿದೆ. ಆದ್ದರಿಂದ ಶಾಲೆಗೆ ನೂತನ ಕಟ್ಟಡದ ಅಗತ್ಯತೆ ಇದೆ. ಆದ್ದರಿಂದ ನೂತನ ಕಟ್ಟಡಕ್ಕೆ ಅನುದಾನ ನೀಡುವಂತೆ ಶಾಲಾಭಿವೃದ್ಧಿ ಸಮಿತಿ ವತಿಯಿಂದ ಶಾಸಕರಿಗೆ ಮನವಿಯನ್ನು ನೀಡಲಾಯಿತು. ಕ್ಷೇತ್ರ ಶಿಕ್ಷಣಾಧಿಕಾರಿಯವರ ಸೂಚನೆಯಂತೆ ಅಕ್ಷರ ದಾಸೋಹದ ಪರಿವೀಕ್ಷಣಾಧಿಕಾರಿ ಸುಂದರ ಗೌಡರವರು ಶಾಲೆಗೆ ಭೇಟಿ ನೀಡಿ ಶಾಲಾ ಶಿಕ್ಷಕರೊಂದಿಗೆ ಮಾಹಿತಿ ಪಡೆದುಕೊಂಡಿದ್ದಾರೆ.
ಶಾಸಕರೊಂದಿಗೆ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಎಂ.ಬಿ.ವಿಶ್ವನಾಥ ರೈ, ಉಪಾಧ್ಯಕ್ಷ ಮೌರಿಸ್ ಮಸ್ಕರೇನಸ್, ಎಸ್‌ಟಿ ಘಟಕದ ಅಧ್ಯಕ್ಷ ಮಹಾಲಿಂಗ ನಾಯ್ಕ, ಸಂತೋಷ್ ಭಂಡಾರಿ ಚಿಲ್ಮೆತ್ತಾರು, ಸಿದ್ದಿಕ್ ಸುಲ್ತಾನ್, ಶರೀಫ್ ಬಲ್ನಾಡು, ಹಬೀಬ್ ಕಣ್ಣೂರು ಉಪಸ್ಥಿತರಿದ್ದರು. ಶಾಲೆಯಲ್ಲಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಹನೀಫ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ, ಅರಿಯಡ್ಕ ಗ್ರಾಪಂ ಸದಸ್ಯ ಹರೀಶ್ ರೈ ಜಾರತ್ತಾರು, ಎಸ್‌ಡಿಎಂಸಿ ಮಾಜಿ ಅಧ್ಯಕ್ಷ ಮಹಮ್ಮದ್ ಬೊಳ್ಳಾಡಿ, ಪಂಚಾಯತ್ ಮಾಜಿ ಸದಸ್ಯ ಸುಂದರ, ಹಳೆ ವಿದ್ಯಾರ್ಥಿಗಳಾದ ರಫೀಕ್, ರವಿ ಜಾರತ್ತಾರು, ಹಿರಿಯ ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ ಬಶೀರ್ ಕೌಡಿಚ್ಚಾರು, ಕಾಂಗ್ರೆಸ್ ಅರಿಯಡ್ಕ ವಲಯಾಧ್ಯಕ್ಷ ಇಕ್ಬಾಲ್ ಹುಸೇನ್, ಕಾಂಗ್ರೆಸ್ ಒಳಮೊಗ್ರು ವಲಯಾಧ್ಯಕ್ಷ ಅಶೋಕ್ ಪೂಜಾರಿ ಬೊಳ್ಳಾಡಿ, ಹಾರೀಶ್ ಶೇಖಮಲೆ, ಗುರುವ, ಶಿವಪ್ಪ ಎಸ್, ಸತೀಶ್ ಎಸ್, ನಾರಾಯಣ ಎಸ್, ಹರೀಶ್ ಶೇಖಮಲೆ, ಅಂಗಾರ ಶೇಖಮಲೆ ಸೇರಿದಂತೆ ವಿದ್ಯಾರ್ಥಿಗಳ ಪೋಷಕರು, ಶಾಲಾ ಶಿಕ್ಷಕ ವೃಂದವರು ಉಪಸ್ಥಿತರಿದ್ದರು.