ಉಪ್ಪಿನಂಗಡಿ: ಏರಿಳಿತ ಕಂಡ ನದಿ ನೀರು

0

ಉಪ್ಪಿನಂಗಡಿ: ಜಿಲ್ಲೆಯ ಜೀವನದಿಗಳಾದ ನೇತ್ರಾವತಿ- ಕುಮಾರಧಾರ ನದಿ ಪಾತ್ರದ ಪ್ರದೇಶಗಳಲ್ಲಿ ಬಿರುಸಿನ ಮಳೆಯಾಗುತ್ತಿದ್ದು, ಜು. 24ರಂದು ಬೆಳಗ್ಗೆ ಇಳಿಕೆಗೊಂಡಿದ್ದ ನೇತ್ರಾವತಿ ನದಿ ನೀರು ರಾತ್ರಿಯಾಗುತ್ತಲೇ ಏರಿಕೆಗೊಂಡಿತ್ತು.
ನೇತ್ರಾವತಿ ನದಿಗಿಂತ ಕುಮಾರಧಾರ ನದಿಯಲ್ಲಿ ನೀರು ಹೆಚ್ಚಳವಿದ್ದು, ಹರಿಯುವಿಕೆಯ ವೇಗ ಕೂಡಾ ಬಿರುಸಿನಲ್ಲಿದೆ. ನೇತ್ರಾವತಿ ನದಿಯು ಶಾಂತವಾಗಿ ಹರಿಯುತ್ತಿದೆ. ಇದರಿಂದಾಗಿ ಎರಡು ನದಿಗಳು ಸಂಗಮಗೊಳ್ಳುವ ಜಾಗದಲ್ಲಿ ಕುಮಾರಧಾರ ನದಿಯ ನೀರಿನ ಹರಿಯುವಿಕೆಗೆ ನೇತ್ರಾವತಿಯಿಂದ ತಡೆಯೊಡ್ಡಲು ಸಾಧ್ಯವಾಗದಿರುವುದರಿಂದ ಕುಮಾರಧಾರ ನದಿಯ ನೀರು ಈ ಪ್ರದೇಶದಲ್ಲಿ ಶೇಖರಗೊಳ್ಳದೇ ನೇತ್ರಾವತಿಯೊಂದಿಗೆ ಕೂಡಿಕೊಂಡು ಪಶ್ಚಿಮಾಭಿಮುಖವಾಗಿ ಹರಿಯುತ್ತಿದೆ.


ರಾತ್ರಿ 8ರ ಸಮಯದಲ್ಲಿ ಇಲ್ಲಿನ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದ ಬಳಿ ನೇತ್ರಾವತಿ ನದಿಗಿಳಿಯುವ 38 ಮೆಟ್ಟಿಲುಗಳಲ್ಲಿ 35 ಮೆಟ್ಟಿಲುಗಳು ಮುಳುಗಿದ್ದು, 3 ಮೆಟ್ಟಿಲುಗಳು ಮಾತ್ರ ಕಾಣುತ್ತಿವೆ. ದೇವಾಲಯದ ಬಳಿ ಅಳವಡಿಸಿರುವ ಶಂಭೂರು ಅಣೆಕಟ್ಟು ಆಧಾರಿತ ಜಲಮಾಪಕದ ಪ್ರಕಾರ ಉಪ್ಪಿನಂಗಡಿಯಲ್ಲಿ ಅಪಾಯದ ಮಟ್ಟ 31.0 ಆಗಿದೆ. ಈಗ ನೇತ್ರಾವತಿ ನದಿಯ ಹರಿವಿನ ಮಟ್ಟ 29.07 ಇದೆ. ಸ್ಥಳದಲ್ಲಿ ಉಪ್ಪಿನಂಗಡಿ ಕಂದಾಯ ಹೋಬಳಿಯ ಉಪತಹಶೀಲ್ದಾರ್ ಚೆನ್ನಪ್ಪ ಗೌಡ, ಗೃಹರಕ್ಷಕ ದಳದವರನ್ನೊಳಗೊಂಡ ಪ್ರಾಕೃತಿಕ ವಿಕೋಪ ತಂಡ ಮೊಕ್ಕಾಂ ಇದ್ದು, ನದಿ ನೀರು ಹೆಚ್ಚಳಗೊಳ್ಳುತ್ತಿರುವ ಬಗ್ಗೆ ಅನೌನ್ಸ್‌ಮೆಂಟ್ ಮಾಡಲಾಗಿದೆ ಹಾಗೂ ನದಿಯ ಬಳಿ ಹಗ್ಗ ಕಟ್ಟುವ ಮೂಲಕ ದೇವಾಲಯದ ಬಳಿ ನದಿ ವೀಕ್ಷಣೆಗೆ ಬರುವವರನ್ನು ನದಿ ಬದಿಗೆ ಬರದಂತೆ ನಿರ್ಬಂಧಿಸಲಾಗಿದೆ.

ಮತ್ತೆ ಇಳಿಕೆ
ರಾತ್ರಿ ವೇಳೆ ನದಿ ನೀರಿನ ಮಟ್ಟ ಇಳಿಕೆಯಾಗಿದೆ. ರಾತ್ರಿ 10.45ರ ವೇಳೆಗೆ ನಾಲ್ಕೂವರೆ ಮೆಟ್ಟಿಲು ಕಾಣುತ್ತಿತ್ತು.

LEAVE A REPLY

Please enter your comment!
Please enter your name here