ಸರ್ವೆ ಗ್ರಾಮದ ಪರಾಡ್ ಎಂಬಲ್ಲಿ ನಡೆದ ಘಟನೆ-ಲಕ್ಷಾಂತರ ರೂ ನಷ್ಟ
ಪುತ್ತೂರು: ಮಧ್ಯರಾತ್ರಿ ದಿಢೀರ್ ಬೀಸಿದ ಗಾಳಿಗೆ ಒಂದೇ ತೋಟದ ಸುಮಾರು 150ರಷ್ಟು ಅಡಿಕೆ ಮರಗಳು ನೆಲಕ್ಕುರುಳಿದ ಘಟನೆ ಆ.1ರಂದು ಸರ್ವೆ ಗ್ರಾಮದ ಪರಾಡ್ ಎಂಬಲ್ಲಿ ವರದಿಯಾಗಿದೆ.
ಮಧ್ಯ ರಾತ್ರಿ ಗಂಟೆ 1.30ರ ವೇಳೆಗೆ ಏಕಾಏಕಿ ಭಾರೀ ಗಾಳಿ ಬೀಸಿದ ಪರಿಣಾಮ ಪರಾಡ್ ನಿವಾಸಿ ಅಬೂಬಕ್ಕರ್ ಎಂಬವರ ತೋಟದಲ್ಲಿ ಸುಮಾರು 150ರಷ್ಟು ಅಡಿಕೆ ಮರಗಳು ನೆಲಕ್ಕುರುಳಿದ್ದು ಅನೇಕ ಬೃಹದಾಕಾರದ ಮರಗಳು ಕೂಡಾ ಧರಾಶಾಹಿಯಾಗಿದೆ. ಅಡಿಕೆ ಮರವೊಂದು ಕೊಟ್ಟಿಗೆಗೆ ಬಿದ್ದ ಪರಿಣಾಮ ಕೊಟ್ಟಿಗೆಗೂ ಹಾನಿ ಸಂಭವಿಸಿದೆ. ಘಟನೆಯಿಂದ ಅಂದಾಜು 3 ಲಕ್ಷ ರೂ ನಷ್ಟ ಸಂಭವಿಸಿದೆ ಎಂದು ತಿಳಿದು ಬಂದಿದೆ.
ಮಧ್ಯರಾತ್ರಿ ಗಾಳಿ ಬೀಸಿದ ವೇಳೆ ಎಚ್ಚರಗೊಂಡ ಮನೆ ಮಂದಿ ಎದ್ದು ನೋಡಿದಾಗ ಮರಗಳು ನೆಲಕ್ಕುರುಳುವ ಶಬ್ದ ಕೇಳಿ ಬಂದಿತ್ತು. ಕೆಲವೇ ಸೆಕುಂಡುಗಳಷ್ಟು ಕಾಲ ಮಾತ್ರ ಗಾಳಿ ಬೀಸಿದ್ದು ಆ ವೇಳೆ ಅಡಿಕೆ ಮರ, ಇತರ ಮರಗಳು ಹಾಗೂ ಬಾಳೆ ಗಿಡಗಳು ನೆಲಕ್ಕುರುಳಿವೆ. 75ರಷ್ಟು ದೊಡ್ಡ ಅಡಿಕೆ ಮರಗಳು ಮತ್ತು 75ಷ್ಟು ಸಣ್ಣ ಅಡಿಕೆ ಮರಗಳು ಮುರಿದು ಬಿದ್ದಿದ್ದು ನಮಗೆ ತುಂಬಾ ನಷ್ಟವುಂಟಾಗಿದೆ ಎಂದು ಮನೆಯ ಯಜಮಾನ ಅಬೂಬಕ್ಕರ್ ಪರಾಡ್ ತಿಳಿಸಿದ್ದಾರೆ.
ಮುಂಡೂರು ಗ್ರಾಮ ಆಡಳಿತಾಧಿಕಾರಿ ಉಮೇಶ್ ಕಾವಡಿ ಹಾಗೂ ಗ್ರಾಮ ಸಹಾಯಕ ಹರ್ಷಿತ್ ನೇರೊಳ್ತಡ್ಕ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಸ್ಥಳಕ್ಕೆ ಮುಂಡೂರು ಸಿಎ ಬ್ಯಾಂಕ್ ನಿರ್ದೇಶಕ ಶಿವನಾಥ ರೈ ಮೇಗಿನಗುತ್ತು, ಮುಂಡೂರು ಗ್ರಾ.ಪಂ ಸದಸ್ಯರಾದ ಕರುಣಾಕರ ಗೌಡ ಎಲಿಯ, ಮಹಮ್ಮದ್ ಆಲಿ ಮತ್ತಿತರ ಹಲವಾರು ಮಂದಿ ಭೇಟಿ ನೀಡಿದ್ದಾರೆ.