ಕಡಬ: ಕಡಬ ತಾಲೂಕಿನ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳು ರಚಿಸಿರುವ ಆಯ್ದ ಕಥೆ ಕವನಗಳ ಹೊತ್ತಗೆ ‘ಅಕ್ಷರ ತೆನೆ’ ಯ ಲೋಕಾರ್ಪಣೆ ಮತ್ತು ಶಾಲಾ ಮಕ್ಕಳಿಗೆ ಸಾಹಿತ್ಯ ಜಾಗೃತಿ ಕಾರ್ಯಕ್ರಮ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕಡಬ ತಾಲೂಕು ಘಟಕ ಮತ್ತು ಕೊಂಬಾರು ಬೋಳ್ನಡ್ಕ ಸರಕಾರಿ ಉ.ಹಿ.ಪ್ರಾ ಶಾಲೆಯ ಆಶ್ರಯದಲ್ಲಿ ಆ.7ರಂದು ಕೊಂಬಾರು ಬೋಳ್ನಡ್ಕ ಶಾಲೆಯಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕ.ಸಾ.ಪ.ಕಡಬ ತಾಲೂಕು ಘಟಕದ ಅಧ್ಯಕ್ಷ ಕೆ.ಸೇಸಪ್ಪ ರೈ ರಾಮಕುಂಜ ಅವರು ಮಾತನಾಡಿ, ಸಾಹಿತ್ಯ ಜಾಗೃತಿ ಕಾರ್ಯಕ್ರಮ ಮುಂದೆ ಪ್ರತಿ ಶಾಲೆಯಲ್ಲಿಯೂ ನಡೆಯಲಿದೆ ಎಂದರು. ಕೊಂಬಾರು ಶಾಲಾ ಮುಖ್ಯಗುರು ಕೆ.ಚಿದಾನಂದ ಗೌಡರವರು ಕಾರ್ಯಕ್ರಮ ಉದ್ಘಾಟಿಸಿದರು. ‘ಅಕ್ಷರ ತೆನೆ’ ಕೃತಿಯನ್ನು ಪುತ್ತೂರು ಎಸ್ಆರ್ಕೆ ಲ್ಯಾಡರ್ಸ್ನ ಮಾಲಕ ಕೇಶವರವರು ಬಿಡುಗಡೆಗೊಳಿಸಿದರು. ಬೋಳಡ್ಕ ಶಾಲಾ ವಿದ್ಯಾರ್ಥಿಗಳಿಗೆ ಏರ್ಪಡಿಸಲಾದ ಕನ್ನಡ ಸಾಹಿತ್ಯ ಸ್ಪರ್ಧೆಯಲ್ಲಿ ವಿಜೇತರಿಗೆ ಶಾಲಾ ಎಸ್ಡಿಎಂಸಿ ಅಧ್ಯಕ್ಷ ರೇಗಪ್ಪ ಗೌಡರವರು ಬಹುಮಾನ ವಿತರಿಸಿದರು.
ಕಸಾಪ ಕಡಬ ತಾಲೂಕು ಘಟಕದ ನಿಕಟಪೂರ್ವ ಅಧ್ಯಕ್ಷ ಜನಾರ್ದನ ಗೌಡ ಪಣೆಮಜಲು, ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮಧುಸೂಧನ್ ಒಡೋಳಿ, ಎಸ್ಎಸ್ಪಿಯು ಕಾಲೇಜಿನ ಮುಖ್ಯಗುರು ಯಶವಂತ ರೈ ಉಪಸ್ಥಿತರಿದ್ದರು. ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯನಿ ಲೋಹಿತ ಎ., ಸ್ವಾಗತಿಸಿದರು. ಬೋಳಡ್ಕ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಅಬ್ರಹಾಂ ವಂದಿಸಿದರು. ಸಾಹಿತಿ, ಚೆನ್ನಾವರ ಶಾಲಾ ಮುಖ್ಯಶಿಕ್ಷಕ ಮಲ್ಲೇಶಯ್ಯರವರು ಅಕ್ಷರತೆನೆ ಕೃತಿ ಮೂಡಿಬಂದ ಬಗ್ಗೆ ತಿಳಿಸಿದರು. ಶಾಲಾ ಶಿಕ್ಷಕಿ ಮೋಹನಾ0ಗಿನಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು, ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು, ಕನ್ನಡ ಅಭಿಮಾನಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.