ಬೆಳ್ತಂಗಡಿ: ಹನ್ನೊಂದು ವರ್ಷಗಳ ಹಿಂದೆ ಧರ್ಮಸ್ಥಳದ ಮಣ್ಣಸಂಕದಲ್ಲಿ ನಡೆದ ಧರ್ಮಸ್ಥಳ ಗ್ರಾಮದ ಪಾಂಗಳ ನಿವಾಸಿಯಾಗಿದ್ದ ಉಜಿರೆ ಎಸ್.ಡಿ.ಎಂ. ಕಾಲೇಜು ವಿದ್ಯಾರ್ಥಿನಿ ಕು.ಸೌಜನ್ಯರವರ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರು ತನಿಖೆ ನಡೆಸಬೇಕು ಮತ್ತು ಕೊಲೆಗಡುಕರನ್ನು ಬಂಧಿಸಬೇಕು ಎಂದು ಆಗ್ರಹಿಸಿ ಬಿಜೆಪಿ ದ.ಕ. ಜಿಲ್ಲಾ ಘಟಕದ ವತಿಯಿಂದ ದ.ಕ. ಸಂಸದರಾದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಆ.27ರಂದು ಬೆಳ್ತಂಗಡಿ ತಾಲೂಕು ಕಚೇರಿ ಎದುರು ದ.ಕ ಮತ್ತು ಉಡುಪಿ ಜಿಲ್ಲೆಯ ಶಾಸಕರು ಹಾಗೂ ಸಾರ್ವಜನಿಕರ ಆಗ್ರಹ ಸಭೆ ನಡೆಯಿತು. ಅಧ್ಯಕ್ಷತೆ ವಹಿಸಿದ್ದ ಬಿಜೆಪಿ ರಾಜ್ಯಾಧ್ಯಕ್ಷರಾದ ದ.ಕ. ಸಂಸದ ನಳಿನ್ ಕುಮಾರ್ ಕಟೀಲ್, ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ಮಾಜಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ವಿ. ಸುನೀಲ್ ಕುಮಾರ್, ಸೌಜನ್ಯ ತಾಯಿ ಕುಸುಮಾವತಿ, ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಮತ್ತು ಮೂಡುಬಿದ್ರೆ ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿದರು.
ವೇದಿಕೆಯಲ್ಲಿ ಕು.ಸೌಜನ್ಯರವರ ಅಜ್ಜ ಬಾಬು ಗೌಡ, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ ಉಳ್ಳಿಪಾಡಿಗುತ್ತು, ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಭರತ್ ಶೆಟ್ಟಿ, ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ, ಕಾಪು ವಿಧಾನಸಭಾ ಕ್ಷೇತ್ರದ ಶಾಸಕ ಸುರೇಶ್ ಶೆಟ್ಟಿ ಗುರ್ಮೆ, ಬಿಜೆಪಿ ದ.ಕ ಜಿಲ್ಲಾ ಸಹ ಪ್ರಭಾರಿ ರಾಜೇಶ್ ಕಾಗೇರಿ, ಪುತ್ತೂರಿನ ಮಾಜಿ ಶಾಸಕ ಸಂಜೀವ ಮಠಂದೂರು, ಪುತ್ತೂರು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿದ್ದ ಆಶಾ ತಿಮ್ಮಪ್ಪ ಗೌಡ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪುತ್ತೂರು ಸೇರಿದಂತೆ ದ.ಕ ಮತ್ತು ಉಡುಪಿ ಜಿಲ್ಲೆಯ ಭಾಜಪಾ ಪ್ರಮುಖರು ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು.
ಭಾಜಪಾ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡುಬಿದ್ರೆ ಸ್ವಾಗತಿಸಿ, ಭಾಜಪಾ ಮಂಗಳೂರು ವಿಭಾಗದ ಪ್ರಭಾರಿ ಉದಯ್ ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಉಡುಪಿ ಭಾಜಪಾ ಜಿಲ್ಲಾಧ್ಯಕ್ಷ ಸುರೇಶ್ ನಾಯಕ್ ವಂದಿಸಿದರು. ವಂದೇ ಮಾತರಂ ಗೀತೆಯ ಮೂಲಕ ಸಭೆ ಆರಂಭಗೊಂಡಿತು. ನಂತರ ವೇದಿಕೆಯಲ್ಲಿ ಇರಿಸಲಾಗಿದ್ದ ಸೌಜನ್ಯರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ಕಾರ್ಯಕ್ರಮವನ್ನು ಬೆಳ್ತಂಗಡಿ ಸುದ್ದಿ ನ್ಯೂಸ್ ಯೂ ಟ್ಯೂಬ್ ಚಾನೆಲ್ ಮತ್ತು ಪುತ್ತೂರು ಸುದ್ದಿ ನ್ಯೂಸ್ ಯೂ ಟ್ಯೂಬ್ ಚಾನೆಲ್ ಮೂಲಕ ನೇರಪ್ರಸಾರ ಮಾಡಲಾಗಿತ್ತು.
ಧೀರಜ್ ಕೆಲ್ಲ, ಮಲ್ಲಿಕ್ ಜೈನ್, ಉದಯ್ ಜೈನ್, ಸೌಜನ್ಯ ತಾಯಿ ಕುಸುಮಾವತಿ ಉಪಸ್ಥಿತಿಯಲ್ಲಿ ವಿಹಿಂಪದಿಂದ ಪ್ರಾರ್ಥನೆ:
ಸೌಜನ್ಯರವರಿಗೆ ನ್ಯಾಯ ದೊರಕಬೇಕು ಎಂದು ಪ್ರಾರ್ಥಿಸಿ ವಿಶ್ವ ಹಿಂದೂ ಪರಿಷದ್ ಮತ್ತು ಬಜರಂಗದಳ ಬೆಳ್ತಂಗಡಿ ಪ್ರಖಂಡದ ವತಿಯಿಂದ ಧರ್ಮಸ್ಥಳದ ನೇತ್ರಾವತಿಯಿಂದ ಅಣ್ಣಪ್ಪ ಸ್ವಾಮಿ ಬೆಟ್ಟದವರೆಗೆ ಆ. 27ರಂದು ಪಾದಯಾತ್ರೆ ನಡೆಯಿತು. ಸೌಜನ್ಯ ಅವರ ತಾಯಿ ಕುಸುಮಾವತಿ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಇದೇ ವೇಳೆ ಧರ್ಮಸ್ಥಳ ಅಣ್ಣಪ್ಪ ಸ್ವಾಮಿ ಬೆಟ್ಟದ ದ್ವಾರದಲ್ಲಿ ಧೀರಜ್ ಕೆಲ್ಲ, ಮಲ್ಲಿಕ್ ಜೈನ್, ಉದಯ್ ಜೈನ್ ಪ್ರಾರ್ಥನೆ ನಡೆಸಿದರು.
11 ವರ್ಷಗಳ ಹಿಂದೆ ಧರ್ಮಸ್ಥಳದ ಪಾಂಗಳ ನಿವಾಸಿ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ತಮ್ಮ ಹೆಸರು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಪ್ರಾರ್ಥನೆ ನಡೆಸಿದರು. ಇದೇ ಸಂದರ್ಭದಲ್ಲಿ ಸೌಜನ್ಯ ತಾಯಿ ಕುಸುಮಾವತಿಯವರ ಉಪಸ್ಥಿತಿಯಲ್ಲಿ ವಿಹಿಂಪ, ಬಜರಂಗದಳದಿಂದ ಸೌಜನ್ಯ ಕೊಲೆ ಆರೋಪಿಗಳಿಗೆ ಶಿಕ್ಷೆಯಾಗಲಿ ಎಂದು ಪ್ರಾರ್ಥನೆ ಮಾಡಲಾಯಿತು. ವಿಹಿಂಪ ಮುಖಂಡ ಮುರಳಿಕೃಷ್ಣ ಹಂಸತ್ತಡ್ಕ ಸಂಘಟನೆಯ ಪರವಾಗಿ ಪ್ರಾರ್ಥಿಸಿದರು. ಯಾವುದೇ ಅಹಿತಕರ ಘಟನೆ ನಡೆಯದಂತೆ ಎಸ್ಪಿ ರಿಷ್ಯಂತ್ ಸಿ.ಬಿ., ಅಡಿಷನಲ್ ಎಸ್ಪಿ ಧರ್ಮಪ್ಪ, ಡಿವೈಎಸ್ಪಿ ಡಾ. ಗಾನಾ ಪಿ. ಕುಮಾರ್ ನೇತೃತ್ವದಲ್ಲಿ ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು.