ರಾಮಕುಂಜ: ಶಿಷ್ಯರಲ್ಲಿ ಸುಪ್ತವಾಗಿರುವ ಪ್ರತಿಭೆಯನ್ನು ಹೊರ ಜಗತ್ತಿಗೆ ಪರಿಚಯಿಸುವ ಹಾಗೂ ಶಿಷ್ಯರನ್ನು ಉನ್ನತ ಮಟ್ಟಕ್ಕೆ ಏರಿಸುವ ಕಾರ್ಯ ಗುರುವಿನದು. ತಾನು ದೀಪದ ಗೂಟದಂತೆ ಗುಪ್ತವಾಗಿ ಉಳಿದು ದೀಪಮಾತ್ರ ಬೆಳಗಲು ನೆರವಾಗುವಂತೆ ಆತನ ಉದ್ಯೋಗ. ಶಿಷ್ಯರ ಮೇಲೆ ವಾತ್ಸಲ್ಯ ತೋರಿ ಅವರ ತಪ್ಪುಗಳನ್ನು ತಿದ್ದಿ ಒಪ್ಪುಗಳನ್ನು ಒಪ್ಪಗೊಳಿಸುವ ಶಿಕ್ಷಕರ ಉದ್ಯೋಗ ಜಾಗತಿಕ ಮನ್ನಣೆ ಉಳ್ಳದ್ದು. ಭಾರತರತ್ನ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಈ ಕಾರಣಕ್ಕೆ ತನ್ನ ಜನ್ಮದಿನವನ್ನು ಶಿಕ್ಷಕರ ದಿನಾಚರಣೆಯನ್ನಾಗಿ ಮಾರ್ಪಡಿಸಿದ್ದು, ಭಾರತ ಕಂಡ ಶ್ರೇಷ್ಠ ತತ್ವ ಶಾಸ್ತ್ರಜ್ಞರೂ ಬರಹಗಾರರೂ ಆಗಿದ್ದ ಅವರು ಚಿರಸ್ಮರಣೀಯರು ಎಂದು ಶ್ರೀ ರಾಮಕುಂಜೇಶ್ವರ ಮಹಾವಿದ್ಯಾಲಯದ ಪ್ರಾಂಶುಪಾಲ ಗಣರಾಜ ಕುಂಬ್ಳೆಯವರು ನುಡಿದರು.