ಬಪ್ಪಳಿಗೆಯ ಅಂಬಿಕಾ ವಿದ್ಯಾಲಯ ಸಿಬಿಎಸ್‌ಇಯಲ್ಲಿ ಹಿಂದಿ ದಿನಾಚರಣೆ

0

ಹಿಂದಿ ರಾಷ್ಟ್ರೀಯ ಭಾಷೆಯಷ್ಟೇ ಅಲ್ಲ, ಏಕತೆಯ ಸಂಕೇತವೂ ಹೌದು : ಪುಷ್ಪಲತಾ


ಪುತ್ತೂರು : ಹಿಂದಿ ಭಾಷೆ ರಾಷ್ಟ್ರೀಯ ಭಾಷೆಯಷ್ಟೇ ಅಲ್ಲ, ಅದು ಏಕತೆಯ ಸಂಕತೇವೂ ಹೌದು. ಯಾವುದೇ ಭಾಷೆಯ ಬಗೆಗಿನ ದ್ವೇಷ ಒಳಿತಲ್ಲ. ಅದರಿಂದ ನಾವು ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಹಾಗಾಗಿ ಪ್ರತಿಯೊಂದು ಭಾಷೆಯನ್ನೂ ಗೌರವಿಸಬೇಕು ಎಂದು ನೆಲ್ಲಿಕಟ್ಟೆಯ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಹಿಂದಿ ಉಪನ್ಯಾಸಕಿ ಪುಷ್ಪಲತಾ ಹೇಳಿದರು.


ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ವಿದ್ಯಾಲಯ ಸಿ.ಬಿ.ಎಸ್.ಇ ಸಂಸ್ಥೆಯಲ್ಲಿ ಆಯೋಜಿಸಲಾಗಿದ್ದ ಅಂತಾರಾಷ್ಟ್ರೀಯ ಹಿಂದಿ ದಿವಸ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿ ಗುರುವಾರ ಮಾತನಾಡಿದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕೋಶಾಧಿಕಾರಿ ರಾಜಶ್ರೀ ನಟ್ಟೋಜ ಮಾತನಾಡಿ ನಾವಾಡುವ ಮಾತು ಯಾವಾಗಲೂ ನಮ್ಮ ಹೃದಯದಿಂದ ಬರಬೇಕು. ಹಾಗಿದ್ದಾಗ ಮಾತ್ರ ಎಲ್ಲರೂ ನಮ್ಮ ಮಾತುಗಳನ್ನು ಇಷ್ಟಪಡುತ್ತಾರೆ. ನಾವು ಯಾವಾಗ ಭಾವನಾತ್ಮಕವಾಗಿ, ಪ್ರೀತಿಯಿಂದ ಮಾತನಾಡುವುದಿಲ್ಲವೋ ಆಗ ಯಾರೂ ಕೂಡ ನಮ್ಮ ವ್ಯಕ್ತಿತ್ವವನ್ನು ಇಷ್ಟಪಡಲಾರರು. ಮಾತನಾಡುವುದು ಕೂಡಾ ಒಂದು ಕಲೆಯಾಗಿದೆ. ಭಾಷೆ ನಮಗೆ ಎಂದಿಗೂ ತಡೆಯಾಗಬಾರದು. ಹೆಚ್ಚು ಹೆಚ್ಚು ಭಾಷೆಯನ್ನು ಕಲಿಯುವ ಸಾಧ್ಯತೆ ಎಳೆಯ ವಯಸ್ಸಿನಲ್ಲಿ ಹೆಚ್ಚಿರುವುದರಿಂದ ಸಾಕಷ್ಟು ಭಾಷೆಗಳನ್ನು ನಮ್ಮದಾಗಿಸಿಕೊಳ್ಳಬೇಕು ಎಂದು ತಿಳಿಸಿದರು.


ವೇದಿಕೆಯಲ್ಲಿ ಸಂಸ್ಥೆಯ ಪ್ರಾಂಶುಪಾಲೆ ಮಾಲತಿ ಡಿ. ಭಟ್ ಉಪಸ್ಥಿತರಿದ್ದರು. ಎಂಟನೇ ತರಗತಿಯ ವಿದ್ಯಾರ್ಥಿನಿ ತನ್ವಿ. ಎ ರೈ ಸ್ವಾಗತಿಸಿ, ಏಳನೇ ತರಗತಿಯ ವಿದ್ಯಾರ್ಥಿನಿ ವಂಶಿಕ ವಂದಿಸಿದರು. ಹತ್ತನೇ ತರಗತಿಯ ವಿದ್ಯಾರ್ಥಿ ಶ್ರೀಲಕ್ಷ್ಮಿ ನಿರೂಪಿಸಿದರು. ಹಿಂದಿ ದಿವಸದ ಪ್ರಯುಕ್ತ ಆಯೋಜಿಸಲಾಗಿದ್ದ ವಿವಿಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಮಾಣ ಪತ್ರವನ್ನು ನೀಡಲಾಯಿತು. ನಂತರ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

LEAVE A REPLY

Please enter your comment!
Please enter your name here