ಹಿಂದಿ ಭಾಷೆಯಲ್ಲಿ ಯಕ್ಷಗಾನ ಪ್ರಯೋಗ – ‘ಭಸ್ಮಾಸುರ ಮೋಹಿನಿ’

0

ಮೆಚ್ಚುಗೆಗೆ ಪಾತ್ರವಾದ ಬೆಟ್ಟಂಪಾಡಿ ಕಾಲೇಜಿನ ವಿದ್ಯಾರ್ಥಿಗಳು

ಪುತ್ತೂರು: ಯಕ್ಷಗಾನ ಈ ನಾಡಿನ ಸಂಸ್ಕೃತಿಯ ಪ್ರತೀಕ. ಯಕ್ಷಗಾನವೆಂಬ ಮಾಧ್ಯಮದ ಮೂಲಕ ಪುರಾಣ, ಸಂಸ್ಕೃತಿಗಳ ಪ್ರಸಾರ ನಡೆಯುತ್ತಿದೆ. ಕನ್ನಡ ಮತ್ತು ತುಳು ಭಾಷೆಗಳಲ್ಲಿ ಪ್ರಸಂಗಗಳು ನಡೆಯುತ್ತಿರುವುದು ಸಾಮಾನ್ಯವಾಗಿದೆ. ಈ ಮಧ್ಯೆ ಅನೇಕ ಹಿರಿಯ ಕಲಾವಿದರು, ವಿಧ್ವಾಂಸರು ಯಕ್ಷಗಾನ ಪಸರಿಸುವಿಕೆಗೆ ಇಂಗ್ಲೀಷ್, ಹಿಂದಿ ಸೇರಿದಂತೆ ಇತರ ಭಾಷೆಗಳಲ್ಲೂ ಪ್ರದರ್ಶನ ನಡೆಸಿ ಯಶಸ್ವಿಯಾಗಿದ್ದಾರೆ. ಅಂತಹುದೇ ಒಂದು ಪ್ರಯೋಗ ಪ್ರಯತ್ನ ಬೆಟ್ಟಂಪಾಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳಿಂದಲೂ ನಡೆದಿದೆ. 

ಸೆ. 30 ರಂದು ಕಾಲೇಜಿನಲ್ಲ ನಡೆದ ಹಿಂದಿ ಪಖ್ವಾಡಾ ಸಮಾರೋಪ ಸಮಾರಂಭದ ವೇಳೆ ವಿದ್ಯಾರ್ಥಿಗಳಿಂದ ಹಿಂದಿ ಭಾಷೆಯ ಯಕ್ಷಗಾನ ‘ಭಸ್ಮಾಸುರ ಮೋಹಿನಿ’ ಪ್ರದರ್ಶನ ನಡೆದು ಮೆಚ್ಚುಗೆಗೆ ಪಾತ್ರವಾಯಿತು. ಯಕ್ಷಗಾನದ ಕನ್ನಡ ಹಾಡುಗಳನ್ನು ಛಂದಸ್ಸು ಧಕ್ಕೆಯಾಗದ ರೀತಿಯಲ್ಲಿ ಹಿಂದಿಗೆ ತರ್ಜೂಮೆಗೊಳಿಸಿ ಬರೆಯಲಾಗಿತ್ತು. ಉದಯೋನ್ಮುಖ ಯಕ್ಷಗಾನ ಭಾಗವತರಾದ ಕಾಲೇಜಿನ ಹಿರಿಯ ವಿದ್ಯಾರ್ಥಿ ನಾರಾಯಣ ಶರ್ಮ ರವರು ಭಾಗವತಿಕೆಯ ಶೈಲಿ ಮತ್ತು ನಿಯಮಗಳ ಉಲ್ಲಂಘನೆಯಾಗದಂತೆ ಹಿಂದಿಯಲ್ಲಿ ಹಾಡಿರುವುದು ವಿಶೇಷ ಪ್ರಯತ್ನವೆನಿಸಿತು. 

ಮುಮ್ಮೇಳದಲ್ಲಿಯೂ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಯಕ್ಷಗಾನದ ಯುವ ಪ್ರತಿಭೆಗಳು ಹಿಂದಿ ಸಂಭಾಷಣೆ ನಡೆಸಿ, ಯಕ್ಷಗಾನ ಕಲಾಪ್ರಕಾರದ ರೀತಿ ನಿಯಮಗಳಿಗೆ ಧಕ್ಕೆಯಾಗದ ರೀತಿಯಲ್ಲಿ ಅಭಿನಯಿಸಿದರು.  ಯಕ್ಷಗಾನದ ಕನ್ನಡ ಪದ್ಯವನ್ನು ಹಿಂದಿ ವಿಭಾಗ ಮುಖ್ಯಸ್ಥೆ ಕರುಣಾಲಕ್ಷ್ಮಿಯವರು ಅನುವಾದಿಸಿದರು. ಪ್ರಚೇತ್ ಆಳ್ವ ನಿರ್ದೇಶಿಸಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಹಿರಿಯ ಯಕ್ಷಗಾನ ಕೃತಿಕಾರ ಡಿ. ಸದಾಶಿವ ಭಟ್ ಪಳ್ಳು ರವರು ಮಾತನಾಡಿ ‘ಯಕ್ಷಗಾನದಲ್ಲಿ ಪ್ರಯೋಗಗಳು ನಡೆಯುವುದು ಸ್ವಾಗತಾರ್ಹ. 1991 ರಲ್ಲಿ ಕನ್ನಡ ಮಾತ್ರವಲ್ಲದೇ ಸಂಸ್ಕೃತ, ಇಂಗ್ಲೀಷ್, ಹಿಂದಿ ಭಾಷೆಗಳಲ್ಲಿ ಯಕ್ಷಗಾನ ಬರೆಯಲು ಆರಂಭಿಸಿದ್ದೆ. ಯಾವುದಾದರೂ ಹೊಸತು ಮಾಡಬೇಕೆಂಬುದು ನನ್ನ ಹಂಬಲವಾಗಿತ್ತು. ಮಕ್ಕಳ ಪ್ರಯತ್ನವನ್ನು ಮೆಚ್ಚಲೇಬೇಕು. ಪ್ರಯೋಗ ಮಾಡುವುದು ನಮ್ಮ ಹಕ್ಕು. ಅದನ್ನು ಮೆಚ್ಚುವುದು ಉಳಿದವರಿಗೆ ಬಿಟ್ಟದ್ದು‌’ ಎಂದರು.

ಸಭಾಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ. ವರದರಾಜ ಚಂದ್ರಗಿರಿಯವರು ಮಾತನಾಡಿ ‘ಯಕ್ಷಗಾನ ಈ ಮಣ್ಣಿನ ಕಲೆ. ಬಹುಭಾಷೆಯಲ್ಲಿ ಯಕ್ಷಗಾನದ ಪ್ರಯೋಗ ನಡೆದಿದೆ. ಬೆಟ್ಟಂಪಾಡಿ ಪರಿಸರದಲ್ಲಿಯೂ ಹಿಂದಿ ಭಾಷೆಯ ಮೂಲಕ ಪ್ರಯೋಗ ನಡೆದಿರುವುದು ದಾಖಲೆಯಾಗಿ ಉಳಿಯಲಿ. ಈ ಕಾಲೇಜಿನ ಅನೇಕ ವಿದ್ಯಾರ್ಥಿಗಳು ಯಕ್ಷಗಾನ ಕಲಾವಿದರಾಗಿ ಹೊರಹೋಗಿದ್ದಾರೆ. ಕಾರ್ಯಕ್ರಮ ಸಂತೋಷಭರಿತವಾಗಿ ನಡೆದಿದೆ’ ಎಂದರು.

ಮುಖ್ಯ ಅತಿಥಿ ಪುತ್ತೂರು ಐಸಿಎಆರ್ ಗೇರು ಸಂಶೋಧನಾಲಯದ ತಾಂತ್ರಿಕ ಅಧಿಕಾರಿ ಪ್ರಕಾಶ್ ಜಿ. ಭಟ್ ರವರು ಮಾತನಾಡಿ ‘ಮಕ್ಕಳ ಯಕ್ಷಗಾನ ನಮ್ಮನ್ನು ಮಂತ್ರಮುಗ್ದರನ್ನಾಗಿಸಿದೆ. ಈ ಭಾಗದಲ್ಲಿ ಹಿರಿಯ ಬಹುಭಾಷಾ ಯಕ್ಷಗಾನ ಸಾಹಿತಿಯವರು ಇರುವುದು ಆಶ್ಚರ್ಯಕರವಾಗಿದೆ. ಯಕ್ಷಗಾನದಲ್ಲಿರುವಷ್ಟು ಸಾಹಿತ್ಯ, ಸಂಗೀತ, ನಾಟ್ಯ, ತಾಳ ಬದ್ದತೆ ಬೇರೆ ಯಾವ ಕಲೆಯಲ್ಲಿ ಸಿಗಲಾರದು ಎಂದು ಹೇಳಿ ಬಹುಭಾಷಾ ಪ್ರೀತಿ ಇರಿಸಿಕೊಳ್ಳುವುದು  ಉತ್ತಮ ಸಮಾಜದಲ್ಲಿ ಅವಶ್ಯಕ ಎನಿಸಿದೆ’ ಎಂದರು.

ಮುಖ್ಯ ಅತಿಥಿ ಕೆಎಂಎಫ್ ನಿರ್ದೇಶಕ ನಾರಾಯಣ ಪ್ರಕಾಶ್ ರವರು ಮಾತನಾಡಿ ‘ವಿದ್ಯೆ ಇಲ್ಲದಿದ್ದರೆ ಯಾವುದೂ ಬದುಕಿನಲ್ಲಿ ಸಾಧ್ಯವಿಲ್ಲ. ವಿದ್ಯೆ ಸಮಾಜದಲ್ಲಿ ಎಲ್ಲವನ್ನೂ ಕೊಡುತ್ತದೆ.  ವಿದ್ಯೆ ಇಲ್ಲದಿದ್ದರೆ ಬದುಕಿಯೇನು ಎಂಬ ಭ್ರಮೆ ಬೇಡ’ ಎಂದು ಹೇಳಿ ತನ್ನ ಬದುಕಿನಲ್ಲಾದ ಅನುಭವವನ್ನು ಹೇಳಿಕೊಂಡರು. ಕಾಲೇಜಿನ ಗ್ರಂಥಾಲಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು ಕೆಎಎಸ್ ಐಎಎಸ್ ಪರೀಕ್ಷೆಗೂ ಅಗತ್ಯ ಅಧ್ಯಯನ ವಸ್ತು ಕೊಡಬಲ್ಲ ಗ್ರಂಥಾಲಯವಾಗಿದೆ’ ಎಂದರು. ಕಾಲೇಜಿನ  ಐಕ್ಯುಸಿ ಸಂಯೋಜಕ ಕಾಂತೇಶ್ ಉಪಸ್ಥಿತರಿದ್ದರು.

ಸನ್ಮಾನ
ಕಾಲೇಜಿನ ಹಿರಿಯ ವಿದ್ಯಾರ್ಥಿ ಯಕ್ಷಗಾನ ಭಾಗವತ ನಾರಾಯಣ ಶರ್ಮ ರವರನ್ನು ಸನ್ಮಾನಿಸಲಾಯಿತು.
ಹಿಮ್ಮೇಳದ ಚೆಂಡೆಯಲ್ಲಿ ಸಹಕರಿಸಿದ ರೋಷನ್ ಕಾಟುಕುಕ್ಕೆ, ಮದ್ದಳೆ ಪವನ್ ಕುಮಾರ್ ಎಸ್., ಮುಮ್ಮೇಳದ ವಿದ್ಯಾರ್ಥಿ ಕಲಾವಿದರಾದ ಮೋಹಿನಿ ಪಾತ್ರಧಾರಿ ಅನನ್ಯ ಎಸ್. ಅಡಿಗ, ಭಸ್ಮಾಸುರ ಪಾತ್ರಧಾರಿ  ಸಮನ್ವಿ ರೈ ನುಳಿಯಾಲು, ಮಹಾವಿಷ್ಣು ಪಾತ್ರಧಾರಿ ನಯನ ಬಿ. ಹಾಗೂ ಮಹಾಶಿವ ಪಾತ್ರಧಾರಿ ದೀಕ್ಷಿತ ಬಿ. ರವರನ್ನು ಗುರುತಿಸಿ ಗೌರವಿಸಲಾಯಿತು.

ಹಿಂದಿ ವಿಭಾಗ ಮುಖ್ಯಸ್ಥೆ ಕರುಣಾಲಕ್ಷ್ಮಿ ಸ್ವಾಗತಿಸಿದರು.ಗ್ರಂಥಪಾಲ, ಯಕ್ಷಗಾನ ವಿಭಾಗದ ಸಂಚಾಲಕ ರಾಮ ಕೆ. ವಂದಿಸಿದರು. ತೃತೀಯ ಬಿ.ಕಾಂ.ನ ವಿದ್ಯಾರ್ಥಿ ಆದರ್ಶ ಎನ್. ನಿರೂಪಿಸಿದರು.

ಸದಾಶಿವ ಭಟ್ ರವರನ್ನು ಸರಕಾರ ಗುರುತಿಸಬೇಕಿತ್ತು
ಸಾಹಿತ್ಯ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿರುವ ಬಹುಭಾಷಾ ಸಾಹಿತಿ ಡಿ. ಸದಾಶಿವ ಭಟ್ ಪಳ್ಳುರವರ ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ ಸರಕಾರಗಳು ಇಲ್ಲಿಯವರೆಗೆ ಗುರುತಿಸದೇ ಇರುವುದು ಖೇದಕರ’ ಎಂದರು.

LEAVE A REPLY

Please enter your comment!
Please enter your name here