ವಿವೇಕಾನಂದ ಪ. ಪೂ ಕಾಲೇಜಿನಲ್ಲಿ ವಿಜ್ಞಾನ ಹಾಗೂ ಗಣಿತ ಅಧ್ಯಾಪಕರ ಕಾರ್ಯಾಗಾರ ವಿವೇಕ ವಿಜ್ಞಾನ

0

ಅಧ್ಯಾಪಕರಲ್ಲಿ ಅಧ್ಯಯನಶೀಲತೆ ಹಾಗೂ ಪರಿಪೂರ್ಣತೆ ಅತ್ಯಗತ್ಯ-ಲೋಕೇಶ್ ಎಸ್ ಆರ್

ಪುತ್ತೂರು: ಅಧ್ಯಾಪಕರು ನಿರಂತರ ಅಧ್ಯಯನಶೀಲತೆ ಹಾಗೂ ಪರಿಪೂರ್ಣತೆಯನ್ನು ಪಡೆಯಬೇಕು. ಶಿಕ್ಷಣ ಕ್ಷೇತ್ರ ನಿರಂತರ ಬದಲಾವಣೆಯ ಕ್ಷೇತ್ರವಾಗಿದೆ. ವೇಗವಾಗಿ ಆಲೋಚನೆ ಮಾಡಬಲ್ಲ ವಿದ್ಯಾರ್ಥಿಗಳ ನಡುವೆ ಅವರ ವೇಗದ ಗತಿಗೆ ತಕ್ಕಂತಹ ವೇಗವನ್ನು ಸಾಧಿಸಬೇಕಿದೆ. ಹಾಗಾದಲ್ಲಿ ಮಾತ್ರ ಈ ಕ್ಷೇತ್ರ ಯಶಸ್ಸು ಸಾಧಿಸಬಹುದು ಎಂದು ಪುತ್ತೂರು ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್ ಆರ್ ಹೇಳಿದರು.

ವಿವೇಕಾನಂದ ಪದವಿಪೂರ್ವ ಕಾಲೇಜು ಮತ್ತು ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಛೇರಿ, ಶಾಲಾ ಶಿಕ್ಷಣ ಇಲಾಖೆ ಇದರ ಜಂಟಿ ಆಶ್ರಯದಲ್ಲಿ ಪುತ್ತೂರು ತಾಲೂಕಿನ ಮತ್ತು ಆಸುಪಾಸಿನ ಪ್ರೌಢಶಾಲಾ ವಿಜ್ಞಾನ & ಗಣಿತ ಅಧ್ಯಾಪಕರ ಕಾರ್ಯಾಗಾರ ವಿವೇಕ-ವಿಜ್ಞಾನ 2023 ಕಾರ್ಯಕ್ರಮವನ್ನು ವೈಜ್ಞಾನಿಕ ರೀತಿಯಲ್ಲಿ ಪ್ರಾಯೋಗಿಕವಾಗಿ ಉದ್ಘಾಟಿಸಿ ಅವರು ಮಾತನಾಡಿದರು.

ಒಂದು ಕಾಲದ ಜೀವನ ಪದ್ಧತಿ, ಶಿಕ್ಷಣದ ವ್ಯವಸ್ಥೆಗೂ ಮತ್ತು ಪ್ರಸ್ತುತ ಶಿಕ್ಷಣದ ವ್ಯವಸ್ಥೆಗೂ ಸಾಕಷ್ಟು ಬದಲಾವಣೆ ಇದೆ. ಕಾಲಕಾಲಕ್ಕೆ ಬದಲಾವಣೆ ಹೊಂದದೇ ಇರುವಂತಹುದು ಕಾಲಕ್ರಮದಲ್ಲಿ ನಶಿಸಿ ಹೋಗಿವೆ. ಹಾಗಾಗಿ ಬದಲಾವಣೆಗಳನ್ನು ಇರಿಸಿಕೊಂಡು ಕೆಲಸ ಮಾಡುವುದರ ಜೊತೆಗೆ ಅಧ್ಯಾಪಕನು ಶ್ರೇಷ್ಠತೆ ಹಾದಿಯಲ್ಲಿ ಮುನ್ನಡೆಯಲು ಮತ್ತು ತಮ್ಮನ್ನು ಜಾಗೃತಾವಸ್ಥೆಯಲ್ಲಿಟ್ಟುಕೊಳ್ಳಲು ಈ ಬಗೆಯ ತರಬೇತಿ ಕಾರ್ಯಾಗಾರಗಳು ಸಹಾಯ ಮಾಡುತ್ತವೆ ಎಂದರು.

ಕಾರ್ಯಕ್ರಮದ ಮುಖ್ಯ ಅತಿಥಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಕೃಷ್ಣಪ್ರಕಾಶ್ ಬಳ್ಳಂಬೆಟ್ಟು ಮಾತನಾಡಿ ಪ್ರತಿಯೊಬ್ಬ ಅಧ್ಯಾಪಕನಿಗೂ ತಾನ್ನೊಬ್ಬ ಉತ್ತಮ ಅಧ್ಯಾಪಕನಾಗಬೇಕೆಂಬ ಬಯಕೆ ಇದ್ದೇ ಇರುತ್ತದೆ. ಆದರೆ ಆ ಹಂತ ತಲುಪುವುದು ನಿರಂತರ ಪ್ರಯತ್ನದಿಂದಲೇ ಹೊರತು ನಿಷ್ಕಿಯತೆಯಿಂದಲ್ಲ. ಈ ಕಾರ್ಯಾಗಾರದ ಮೂಲಕ ಪ್ರತಿಯೊಬ್ಬ ವಿದ್ಯಾರ್ಥಿಯೂ ಉತ್ತೀರ್ಣನಾಗಿ ಸಾಧನೆಯ ಹಾದಿಯತ್ತ ಸಾಗುವಂತಾಗಲಿ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ರವೀಂದ್ರ ಪಿ ಮಾತನಾಡಿ ಪ್ರಶ್ನೆಗಳು ಉದ್ಭವಿಸಿದಾಗ ಅದು ವಿಜ್ಞಾನ ಎನಿಸಿಕೊಳ್ಳುತ್ತದೆ. ಹೇಳುವುದನ್ನು ಕೇಳಿ ಕಲಿಯುವುದು ಕಲಿಕೆ ಅಲ್ಲ, ಬದಲಾಗಿ ಸ್ವತ: ಪ್ರಶ್ನಿಸಿ ಉತ್ತರ ಕಂಡುಕೊಳ್ಳುವುದು ನಿಜವಾದ ಕಲಿಕೆ. ಶಿಕ್ಷಕರಾಗಿ ನಮ್ಮನ್ನು ಸದಾ ಕಾಲ ನೆನಪಿಸಿಕೊಳ್ಳುವಂತೆ ಮಾಡಲು ವಿದ್ಯಾರ್ಥಿಯ ಕಲಿಕೆಯನ್ನು ಜೀವನಕ್ಕೆ ಹೋಲಿಕೆ ಮಾಡಿ ತಿಳಿಸಿಕೊಡಬೇಕು. ವಿಜ್ಞಾನ ಮತ್ತು ವಿವೇಕ ಇವೆರಡು ಬದುಕಿನ ಆಧಾರ ಸ್ತಂಭ. ವಿಜ್ಞಾನದ ಕಲಿಕೆಯಲ್ಲಿ ಅನ್ವಯ ಮತ್ತು ಸಾಂಪ್ರಾದಾಯಿಕ ಪದ್ಧತಿಯ ಕಲಿಕೆಯನ್ನು ಅಳವಡಿಸಿಕೊಂಡರೆ ವಿಜ್ಞಾನದ ವಿಷಯವೂ ಕೂಡಾ ಆಸಕ್ತಿದಾಯಿಕವಾಗಿರಬಲ್ಲುದು. ಮಕ್ಕಳಲ್ಲಿ ಶಿಕ್ಷಣದ ಜೊತೆಗೆ ಜೀವನ ಮೌಲ್ಯವನ್ನು ರೂಪಿಸಬೇಕಾದ ಅಧ್ಯಾಪಕರು ಅವರ ಕಲಿಕೆಯಲ್ಲಿ ಆಸಕ್ತಿಯನ್ನು ಮೂಡಿಸಲು ಸಾಧ್ಯವಾದರೆ ಅದುವೇ ಶ್ರೇಷ್ಠವಾದ ಸಾಧನೆ. ಪ್ರಸ್ತುತ ಪ್ರೌಢಶಾಲಾ ಪಠ್ಯಕ್ರಮಗಳು ಅತ್ಯಂತ ಕ್ಲಿಷ್ಟಕರವಾಗಿದ್ದು ಅಧ್ಯಾಪಕರಿಗೆ ಕ್ಲಪ್ತ ಸಮಯದಲ್ಲಿ ಬೋಧಿಸುವುದಕ್ಕೆ ಅಸಾಧ್ಯವೆನಿಸಿದೆ. ಈ ನಿಟ್ಟಿನಲ್ಲಿ ಪಠ್ಯವನ್ನು ಸರಳೀಕರಿಸುವ ಉದ್ದೇಶದಿಂದ ಮತ್ತು ಸಾಮಾಜಿಕ ಜವಾಬ್ದಾರಿಯ ಬದ್ದತೆಯಿಂದ ಈ ಕಾರ್ಯಾಗಾರವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಪುತ್ತೂರು ತಾಲೂಕು ಎಸ್ ಎಸ್ ಎಲ್ ಸಿ ನೋಡಲ್ ಅಧಿಕಾರಿ ಹರಿಪ್ರಸಾದ ಎಂ ಉಪಸ್ಥಿತರಿದ್ದರು. ಪ್ರಾಂಶುಪಾಲ ಮಹೇಶ ನಿಟಿಲಾಪುರ ಸ್ವಾಗತಿಸಿ ಉಪನ್ಯಾಸಕಿ ಮಮತಾ ವಂದಿಸಿದರು. ಉಪನ್ಯಾಸಕಿ ದಯಾಮಣಿ ನಿರೂಪಿಸಿದರು.

ಕಾರ್ಯಕ್ರಮದ ಬಳಿಕ 10 ನೇ ತರಗತಿಯ ಗಣಿತ ಪಠ್ಯಕ್ರಮದ ಬಗ್ಗೆ ಉಪನ್ಯಾಸ ಕಾರ್ಯಕ್ರಮವು ಸುಳ್ಯ ಸರಕಾರಿ ಪದವಿಪೂರ್ವ ಕಾಲೇಜಿನ ಉಪಪ್ರಾಂಶುಪಾಲ ಪ್ರಕಾಶ ಮೂಡಿತ್ತಾಯರವರಿಂದ ನಡೆಯಿತು. ಹಾಗೆಯೇ ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಜೀವಶಾಸ್ತ್ರ ಪ್ರಯೋಗಗಳ ಪ್ರಾತ್ಯಕ್ಷಿಕೆ ಮತ್ತು ವಿವರಣೆಯು ಕಾಲೇಜಿನ ಉಪನ್ಯಾಸಕ ವೃಂದದವರಿಂದ ನಡೆಯಿತು.

LEAVE A REPLY

Please enter your comment!
Please enter your name here