ಪುತ್ತೂರು ಬ್ಲಾಕ್ ಅಲ್ಪಸಂಖ್ಯಾತ ಘಟಕದ ಕಾರ್ಯಕರ್ತರ ಸಭೆ-ಶಾಸಕರಿಗೆ ಸನ್ಮಾನ

0

ಜಾತಿ, ಮತ ಬೇಧವಿಲ್ಲದೆ ಎಲ್ಲರನ್ನೂ ಒಟ್ಟಾಗಿ ಸೇರಿಸುವುದೇ ಕಾಂಗ್ರೆಸ್ ಪಕ್ಷದ ಧ್ಯೇಯ: ಅಶೋಕ್ ರೈ

ಪುತ್ತೂರು: ನಾನು ಈ ಹಿಂದೆ ಬಿಜೆಪಿಯಲ್ಲಿದ್ದೆ, ಬಿಜೆಪಿಯಲ್ಲಿರುವಾಗಲೂ ನಾನು ಒಂದೇ ಒಂದು ದಿನ ಯಾವುದೇ ಧರ್ಮದವರ ಬಗ್ಗೆ ಕೀಳಾಗಿ ಮಾತನಾಡಿಲ್ಲ, ನನ್ನ ಟ್ರಸ್ಟ್ ಕಚೇರಿಗೆ ಜಾತಿ, ಮತ ಬೇಧವಿಲ್ಲದೆ ಎಲ್ಲರೂ ಬರುತ್ತಿದ್ದರು, ಎಲ್ಲರಿಗೂ ಸಹಾಯ ಮಾಡಿದ್ದೇನೆ. ಅದೇ ಪ್ರೀತಿ ನನ್ನನ್ನು ಈ ಸ್ಥಾನಕ್ಕೆ ತಂದು ನಿಲ್ಲಿಸಿದೆ, ಜಾತಿ , ಧರ್ಮ ಭೇದವಿಲ್ಲದೆ ಎಲ್ಲರನ್ನೂ ಒಟ್ಟಿಗೇ ಸೇರಿಸುವುದೇ ಕಾಂಗ್ರೆಸ್ ಪಕ್ಷದ ಧ್ಯೇಯವಾಗಿದೆ ಎಂದು ಪುತ್ತೂರು ಶಾಸಕ ಅಶೋಕ್ ರೈ ಹೇಳಿದ್ದಾರೆ.

ಅವರು ಪುತ್ತೂರು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಬ್ಲಾಕ್ ಅಲ್ಪಸಂಖ್ಯಾತ ಘಟಕದ ಕಾರ್ಯಕರ್ತರ ಸಭೆಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಕಳೆದ ಚುನಾವಣೆಯ ಸಂದರ್ಭದಲ್ಲಿ ಮುಸ್ಲಿಂ ಬಂಧುಗಳು ನನ್ನ ಪರವಾಗಿ ಮತ ಚಲಾಯಿಸಿದ್ದಾರೆ. ಎಸ್‌ಡಿಪಿಐ ಅಭ್ಯರ್ಥಿ ಕಣದಲ್ಲಿದ್ದರೂ ಅವರಿಗೆ ಬಿದ್ದ ಮತಗಳು ಎರಡು ಸಾವಿರ ಚಿಲ್ಲರೆ, ನನ್ನ ಮೇಲೆ ವಿಶ್ವಾಸವಿಟ್ಟು ನನಗೆ ಮತ ಹಾಕಿದ್ದಾರೆ. ಇತರ ಧರ್ಮದವರೂ ನನಗೆ ಮತ ಹಾಕಿದ್ದಾರೆ. ಎಲ್ಲಾ ಧರ್ಮದವರ ಪ್ರೀತಿ ವಿಶ್ವಾಸದಿಂದ ನಾನು ಇಂದು ಶಾಸಕನಾಗಿದ್ದೇನೆ, ವಿದೇಶದಿಂದ ಬಂದು ಮತ ಹಾಕಿದವರೂ ಇದ್ದಾರೆ, ಇಲ್ಲಿ ನನ್ನ ಪರ ಪ್ರಚಾರ ಮಾಡಿದವರೂ ಇದ್ದಾರೆ. ಅವರನ್ನೆಲ್ಲ ಮರೆಯಲು ಸಾಧ್ಯವೇ ಇಲ್ಲ ಎಂದು ಹೇಳಿದರು.

ಎಲ್ಲರ ಡಿಪಿಯೂ ನನ್ನ ಬಳಿ ಇದೆ:
ಗೆದ್ದ ಬಳಿಕ ಅನೇಕರು ಬಂದು ಅಶೋಕಣ್ಣ ನಿಮ್ಮ ಪರ ನಾವು ಕೆಲಸ ಮಾಡಿದ್ದೇವೆ ಎಂದು ಹೇಳಿದ್ದಾರೆ, ಅದರಲ್ಲಿ ಕೆಲವರು ಚುನಾವಣೆ ಮುಗಿಯುವ ತನಕವೂ ಬ್ಯಾಟಿನದ್ದೇ ಡಿಪಿ ಹಾಕಿದ್ದರು, ಚುನಾವಣೆ ವೇಳೆ ಬ್ಯಾಟಿನ ಡಿಪಿ ಹಾಕಿದವರ ಸ್ಕ್ರೀನ್ ಶಾಟ್ ನನ್ನಲ್ಲಿದೆ, ಜೊತೆಯಲ್ಲೇ ಇದ್ದು ಬ್ಯಾಟ್ ಬೀಸಿದವರು ಯಾರೆಂದು ನನಗೆ ಚೆನ್ನಾಗಿ ಗೊತ್ತಿದೆ. ಯಾರೆಲ್ಲಾ ಪಕ್ಷಕ್ಕೆ ವಿರುದ್ದವಾಗಿ ಮತ ಹಾಕಿದ್ದಾರೆ ಎಂಬ ವಿಚಾರವೂ ಗೊತ್ತಿದೆ. ಆದರೆ ನಾನು ಗೆದ್ದ ಬಳಿಕ ಅವರೆಲ್ಲರನ್ನೂ ಹತ್ತಿರ ಮಾಡಿಕೊಂಡಿದ್ದೇನೆ, ಯಾವುದೋ ಕಾರಣಕ್ಕೆ ಅವರು ಡಿ ಪಿ ಹಾಕಿರಬಹುದು ಅಥವಾ ಬ್ಯಾಟ್ ಬೀಸಿರಬಹುದು. ಬ್ಯಾಟ್ ಬೀಸಿದವರು, ಬಿಜೆಪಿಯವರು ನನ್ನ ಬಳಿ ಈಗ ಬರುತ್ತಿದ್ದಾರೆ, ಅವರ ಕೆಲಸ ಮಾಡಿಕೊಳ್ಳುತ್ತಿದ್ದಾರೆ. ಅಕ್ರಮ ಸಕ್ರಮ, 94ಸಿ ಮಾಡಿಸಿಕೊಡಿ ಎಂದು ಕೇಳುತ್ತಿದ್ದಾರೆ. ನಾನು ದ್ವೇಷದ ರಾಜಕೀಯ ಮಾಡುವುದಿಲ್ಲ ಅದು ರಾಜಕೀಯ ಧರ್ಮವೂ ಅಲ್ಲ, ಎಲ್ಲರನ್ನೂ ನಾನು ಹತ್ತಿರ ಕರೆಸುವೆ ಪಕ್ಷವನ್ನು ಕಟ್ಟಲು ಇದೆಲ್ಲವೂ ಬೇಕಾಗುತ್ತದೆ ಎಂದು ಶಾಸಕರು ಹೇಳಿದರು.

ಮುಸ್ಲಿಮರ ಆತಿಥ್ಯ ಭಯಂಕರ:
ಕಾರ್ಯಕ್ರಮಗಳಿಗೆ ತೆರಳಿದಾಗ ಮುಸ್ಲಿಂ ಬಾಂಧವರ ಆತಿಥ್ಯ ಭಯಂಕರವಾಗಿದೆ. ಯಾವುದೇ ಪಕ್ಷದವರು ಹೋದರೂ ಅವರು ಕೊಡುವ ಗೌರವ ಮೆಚ್ಚುವಂತದ್ದು. ಮುಸ್ಲಿಂರು ಇಷ್ಟೊಂದು ಆತಿಥ್ಯ ಮಾಡುತ್ತಾರೆ ಎಂದು ನನಗೆ ಕಾಂಗ್ರೆಸ್ ಪಕ್ಷ ಸೇರಿದ ಮೇಲೆಯೇ ಗೊತ್ತಾಗಿದ್ದು. ನಾವು ಧರ್ಮಗಳ ಭೇದ ಬಿಟ್ಟು ಒಂದೇ ತಾಯಿಯ ಮಕ್ಕಳಂತೆ ಬದುಕಬೇಕು. ಆಗ ಮಾತ್ರ ಭಾರತ ವಿಶ್ವಗುರುವಾಗಲು ಸಾಧ್ಯ. ಧರ್ಮಗಳ ಹೆಸರಿನಲ್ಲಿ ಹೊಡೆದಾಡಿಕೊಂಡರೆ ದೇಶ ಅಭಿವೃದ್ದಿಯಾಗಲು ಸಾಧ್ಯವಿಲ್ಲ. ನಾವು ಮನುಷ್ಯರನ್ನು ಪ್ರೀತಿಸುವ ವಿಶಾಲ ಮನಸ್ಸನ್ನು ಹೊಂದಬೇಕು ಎಂದು ಹೇಳಿದರು.

600 ಮಂದಿಗೆ ಶೀಘ್ರದಲ್ಲೇ ಮನೆ ಸೈಟ್:
ನನ್ನ ಟ್ರಸ್ಟ್ ಮೂಲಕ ನಿವೇಶನಕ್ಕೆ ಅರ್ಜಿ ಹಾಕಿದ ಸುಮಾರು 600 ಮಂದಿಗೆ ಶೀಘ್ರದಲ್ಲೇ ಮನೆ ಸೈಟ್ ನೀಡುತ್ತೇನೆ. ವಿಟ್ಲದಲ್ಲಿ 7 ಎಕ್ರೆ ಜಾಗವನ್ನು ಖರೀದಿ ಮಾಡಿದ್ದೇನೆ. ವಿಟ್ಲ, ಪುಣಚ ಭಾಗದ ಮನೆ ಇಲ್ಲದ ಬಡವರಿಗೆ ಅದನ್ನು ವಿತರಣೆ ಮಾಡುತ್ತೇನೆ. ಅವರಿಗೆ ಮನೆ ಕಟ್ಟಲು ಸಾಧ್ಯವೇ ಇಲ್ಲ ಎಂದಾದರೆ ದಾನಿಗಳ ಮೂಲಕ ಅವರಿಗೆ ಮನೆ ಕಟ್ಟಿಸುವ ಆಲೋಚನೆಯೂ ನಮ್ಮ ಮುಂದಿದೆ ಎಂದು ಹೇಳಿದರು. ಕ್ಷೇತ್ರದಾದ್ಯಂತ ಎಲ್ಲಾ ಗ್ರಾಮಗಳಲ್ಲಿ ಸೈಟ್ ಗುರುತಿಸಿ ಅದನ್ನು ಬಡವರಿಗೆ ನೀಡುವ ಕಾರ್ಯವನ್ನು ಮುಂದಿನ ದಿನಗಳಲ್ಲಿ ಮಾಡಲಿದ್ದೇನೆ. ಮನೆ ಇಲ್ಲದೆ ಎಷ್ಟು ದಿನ ಅವರು ಬಾಡಿಗೆ ಮನೆಯಲ್ಲಿರಬೇಕು. ಬಡವರೂ ನೆಮ್ಮದಿಯಾಗಿ ಸ್ವಂತ ಮನೆಯಲ್ಲಿ ವಾಸ ಮಾಡುವಂತಾಗಬೇಕು ಎಂಬುದೇ ನನ್ನ ಉದ್ದೇಶವಾಗಿದೆ ಎಂದು ಶಾಸಕರು ಹೇಳಿದರು.

ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ ಬಿ ವಿಶ್ವನಾಥ ರೈ ಮಾತನಾಡಿ, ಕಾಂಗ್ರೆಸ್ ಪಕ್ಷದ ಓಟು ಬ್ಯಾಂಕ್ ಆಗಿರುವ ಅಲ್ಪಸಂಖ್ಯಾತರು ಎಂದೆಂದೂ ಕಾಂಗ್ರೆಸ್‌ಗೆ ಬೆಂಬಲ ನೀಡುವವರೇ ಆಗಿದ್ದಾರೆ. ಅಲ್ಪಸಂಖ್ಯಾತರ ಅಭಿವೃದ್ದಿಗಾಗಿ ಸರಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ ಇದರ ಪ್ರಯೋಜನವನ್ನು ಪ್ರತೀಯೊಬ್ಬರೂ ಪಡೆದುಕೊಳ್ಳಬೇಕು ಎಂದು ಹೇಳಿದರು.

ನಗರ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದಾಲಿ ಮಾತನಾಡಿ, ಅಲ್ಪಸಂಖ್ಯಾತರು ಭಯದಿಂದ ಬದುಕುವ ವಾತಾವರಣ ಇತ್ತು. ಕಾಂಗ್ರೆಸ್ ಸರಕಾರ ಬಂದ ಮೇಲೆ ವಾತಾವರಣ ಬದಲಾಗಿದೆ. ಮುಂದಿನ ದಿನಗಳಲ್ಲಿ ಸರಕಾರ ಅಲ್ಪಸಂಖ್ಯಾತರ ಅಭಿವೃದ್ದಿಗೆ ಇನ್ನೂ ಹೆಚ್ಚಿನ ಅನುದಾನವನ್ನು ನೀಡಲಿದೆ ಎಂದು ಹೇಳಿದರು.
ಪುತ್ತೂರು ಬ್ಲಾಕ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಶಕೂರ್ ಹಾಜಿ ಪ್ರಾಸ್ತಾವಿಕವಾಗಿ ಮಾತನಾಡಿ, ಶಾಸಕ ಅಶೋಕ್ ರೈಯವರ ಕಾರ್ಯವೈಖರಿಯನ್ನು ಕೊಂಡಾಡಿದರು.
ವೇದಿಕೆಯಲ್ಲಿ ಕಾಂಗ್ರೆಸ್ ಮುಖಂಡರುಗಳಾದ ಮುರಳೀಧರ್ ರೈ ಮಠಂತಬೆಟ್ಟು, ಶಕೂರ್ ಹಾಜಿ ಮಿತ್ತೂರು, ತಾಲೂಕು ಅಕ್ರಮಸಕ್ರಮ ಸಮಿತಿ ಸದಸ್ಯರಾದ ಮಹಮ್ಮದ್ ಬಡಗನ್ನೂರು, ಸಂತೋಷ್ ಭಂಡಾರಿ ಚಿಲ್ಮೆತ್ತಾರು, ಅಮಲರಾಮಚಂದ್ರ, ನೂರುದ್ದೀನ್ ಸಾಲ್ಮರ, ಮುಸ್ಥಫಾ ಹಾಜಿ ಸುಳ್ಯ ಉಪಸ್ಥಿತರಿದ್ದರು. ಸಭೆಯಲ್ಲಿ ಅಸ್ಮಾ ಗಟ್ಟಮನೆ, ಸಿದ್ದಿಕ್ ಸುಲ್ತಾನ್, ಶರೀಫ್ ಬಲ್ನಾಡು, ಹಬೀಬ್ ಕಣ್ಣೂರು, ನ್ಯಾಯವಾದಿ ಸಾಹಿರಾ, ಕಾರ್ಯಕರ್ತರು ಮತ್ತಿತರರು ಉಪಸ್ಥಿತರಿದ್ದರು.

ಕೆಪಿಸಿಸಿ ಅಲ್ಪ ಸಂಖ್ಯಾತ ವಿಭಾಗದ ರಾಜ್ಯ ಪ್ರದಾನ ಕಾರ್ಯದರ್ಶಿ ಕೆ. ಎಂ. ಮುಸ್ತಫ, ಸಂಘಟನಾ ಕಾರ್ಯದರ್ಶಿ ನಝಿರ್ ಮಠ, ರಾಜ್ಯ ಅಲ್ಪ ಸಂಖ್ಯಾತ ಘಟಕದ ವತಿಯಿಂದ ಶಾಸಕರನ್ನು ಸನ್ಮಾನಿಸಲಾಯಿತು.

LEAVE A REPLY

Please enter your comment!
Please enter your name here