ಪುತ್ತೂರು: ಉದ್ಯೋಗ ಖಾತ್ರಿ ಯೋಜನೆಯು ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿರುವ ದುರ್ಬಲ ವರ್ಗದವರಿಗೆ ತುಂಬಾ ಸಹಕಾರಿಯಾಗಿದೆ ಆದುದರಿಂದ ಅರ್ಹ ಫಲಾನುಭವಿಗಳು ಈ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶರೀಫ್ ಹೇಳಿದರು.
ಕುಡಿಪ್ಪಾಡಿ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಅ.13ರಂದು ಮಹಾತ್ಮ ಗಾಂಧಿ ನರೇಗಾ ಯೋಜನೆಯ 2024-25 ನೇ ಸಾಲಿನ ಕಾರ್ಮಿಕ ಆಯವ್ಯಯ ತಯಾರಿಕೆ ಅಂಗವಾಗಿ ‘ಉದ್ಯೋಗ ಖಾತ್ರಿನಡಿಗೆ’ ಸುಸ್ಥಿರತೆಯೆಡೆಗೆ ಅಭಿಯಾನದ ವಿಶೇಷ ಸಭೆಯಲ್ಲಿ ಮಾತನಾಡಿದರು. ಈ ಯೋಜನೆಯು ಗ್ರಾಮೀಣ ಪ್ರದೇಶದ ಫಲಾನುಭವಿಗಳಿಗೆ ಮಾತ್ರ ಇರುವುದರಿಂದ ಇದರ ಸದುಪಯೋಗ ಪಡಿಸುವುದು ನಮ್ಮೆಲ್ಲರ ಕರ್ತವ್ಯ ಆದುದರಿಂದ ಮುಂದಿನ ವರ್ಷದಲ್ಲಿ ನಿಮ್ಮ ಜಮೀನಿನಲ್ಲಿ ಕೈಗೊಳ್ಳಬೇಕಾದ ಕಾಮಗಾರಿಗಳಿದ್ದರೆ ಗ್ರಾಮ ಪಂಚಾಯತಿಗೆ ಅರ್ಜಿ ಸಲ್ಲಿಸಿ ಈ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಕುಡಿಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸೋಮಪ್ಪ ಪೂಜಾರಿ ಇವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಕೊಡಿಪ್ಪಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪ್ರತಿಯೊಬ್ಬ ಅರ್ಹ ಕುಟುಂಬಗಳು ಈ ಮಹಾತ್ಮ ಗಾಂಧಿ ನರೇಗಾ ಯೋಜನೆಯ ಪ್ರಯೋಜನವನ್ನ ಪಡೆದುಕೊಂಡು ತೋಟಗಾರಿಕೆ ಪಶುಸಂಗೋಪನೆ ಬಚ್ಚಲು ಗುಂಡಿ ಮುಂತಾದ ಕಾಮಗಾರಿಗಳನ್ನ ಕೈಗೊಂಡು ಯೋಜನೆಯ ಅನುದಾನವನ್ನ ಸದುಪಯೋಗ ಪಡಿಸಿಕೊಳ್ಳಬೇಕೆಂದು ಹೇಳಿದರು. ಈ ಸಂದರ್ಭ ಯೋಜನೆಯ ಮಾಹಿತಿಯುಳ್ಳ ಕರಪತ್ರವನ್ನು ಹಂಚಲಾಯಿತು. ಈ ಸಂದರ್ಭ ಗ್ರಾಮ ಪಂಚಾಯತ್ ಕಾರ್ಯದರ್ಶಿ ಭವಾನಿ, ಸಿಬ್ಬಂದಿಗಳು ಉಪಸ್ಥಿತರಿದ್ದರು.
ಕಡ್ಡಾಯವಾಗಿ ಉದ್ಯೋಗ ಚೀಟಿ ಪಡೆದುಕೊಳ್ಳಿ
ಉದ್ಯೋಗ ಖಾತ್ರಿ ಯೋಜನೆಗೆ ಒಳಪಡುವ ಅರ್ಹ ಕುಟುಂಬಗಳು ಕಡ್ಡಾಯವಾಗಿ ಉದ್ಯೋಗ ಚೀಟಿಯನ್ನು ಪಡೆದುಕೊಂಡು ಉದ್ಯೋಗ ಖಾತ್ರಿ ಯೋಜನೆಯ ಫಲಾನುಭವವನ್ನು ಪಡೆದುಕೊಳ್ಳಬೇಕು. ಒಂದು ಅರ್ಹ ಕುಟುಂಬಕ್ಕೆ ಜೀವಿತಾವಧಿ ಎರಡುವರೆ ಲಕ್ಷದವರೆಗೆ ವೈಯಕ್ತಿಕ ಪ್ರಯೋಜನವನ್ನು ಪಡೆದುಕೊಳ್ಳಲು ಈ ಯೋಜನೆಯಲ್ಲಿ ಅವಕಾಶವಿದೆ.
ಭರತರಾಜ್, ತಾ.ಪಂ ನರೇಗಾ ಮಾಹಿತಿ ಶಿಕ್ಷಣ ಸಂವಹನ ಸಂಯೋಜಕ