ಪುತ್ತೂರು- ಮಂಗಳೂರು ಪ್ಯಾಸೆಂಜರ್ ರೈಲು ಆರಂಭಮಾಡದೇ ಇದ್ದರೆ ಉಗ್ರ ಪ್ರತಿಭಟನೆ: ಕಾವು ಹೇಮನಾಥ ಶೆಟ್ಟಿ
ಪುತ್ತೂರು: ರೈಲು ಸಂಚಾರಕ್ಕೆ ಸಂಬಂಧಿಸಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ನ.3ರಂದು ಪುತ್ತೂರಿನಲ್ಲಿ ಪುತ್ತೂರು ರೈಲು ಹೋರಾಟ ಸಮಿತಿ ವತಿಯಿಂದ ಪ್ರತಿಭಟನೆ ನಡೆಯಲಿದ್ದು, ಅದಕ್ಕೆ ಮುಂಚಿತವಾಗಿ ಬೇಡಿಕೆಗಳನ್ನು ಕೇಂದ್ರ ಸರಕರ ತಕ್ಷಣ ಈಡೇರಿಸಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಕಾವು ಹೇಮನಾಥ ಶೆಟ್ಟಿ ಆಗ್ರಹಿಸಿದ್ದಾರೆ.
ವಂದೇಭಾರತ್ ರೈಲು ಕೇವಲ ಕಾಸರಗೋಡಿನವರೆಗೆ ಮಾತ್ರ ಸಂಚಾರ ಮಾಡುತ್ತಿದ್ದು ಅದನ್ನು ಮಂಗಳೂರಿಗೂ ವಿಸ್ತರಣೆ ಮಾಡಬೇಕು. ವಂದೇಭಾರತ್ ರೈಲು ಮಂಗಳೂರಿಗೆ ಬಂದಲ್ಲಿ ಶಬರಿಮಲೆ ಸೇರಿದಂತೆ ಕೇರಳಕ್ಕೆ ತೀರ್ಥ ಯಾತ್ರೆಗೆ ಹೋಗುವ ಭಕ್ತರಿಗೆ ಪ್ರಯೋಜನವಾಗಲಿದೆ. ಸಂಸದರು ಕೇಂದ್ರ ರೈಲ್ವೇ ಸಚಿವರ ಜೊತೆ ಮಾತುಕತೆ ನಡೆಸಿ ವಂದೇಭಾರತ್ ರೈಲನ್ನು ಮಂಗಳೂರಿಗೂ ವಿಸ್ತರಣೆ ಮಾಡಬೇಕು. ಕೊರೊನಾ ಸಮಯದಲ್ಲಿ ರೈಲಿನಲ್ಲಿ ಪ್ರಯಾಣಿಸುವ ಹಿರಿಯ ನಾಗರಿಕರಿಗೆ ರಿಯಾಯಿತಿ ದರದ ಪಾಸ್ ನೀಡಲಾಗುತ್ತಿತ್ತು ಅದನ್ನು ರೈಲ್ವೇ ಇಲಾಖೆ ಸ್ಥಗಿತಗೊಳಿಸಿದ್ದು ಅದನ್ನು ಮತ್ತೆ ಪ್ರಾರಂಭಿಸಬೇಕು, ಮತ್ತು ಪುತ್ತೂರಿನಿಂದ ಮಂಗಳೂರಿಗೆ ಇದ್ದ ಪ್ಯಾಸೆಂಜರ್ ರೈಲು ಕೂಡಾ ಸ್ಥಗಿತಗೊಂಡಿದ್ದು ಅದನ್ನು ಮರು ಆರಂಭಿಸಬೇಕು ಎಂದು ಕಾವು ಹೇಮನಾಥ ಶೆಟ್ಟಿ ಆಗ್ರಹಿಸಿದ್ದಾರೆ. ಸಂಸದರು ತಕ್ಷಣವೇ ಈ ವಿಚಾರವನ್ನು ಕೆಂದ್ರ ರೈಲ್ವೇ ಸಚಿವರಿಗೆ ತಿಳಿಸುವ ಮೂಲಕ ಇಲ್ಲಿನ ರೈಲ್ವೇ ಪ್ರಯಾಣಿಕರ ಬೇಡಿಕೆಯನ್ನು ಈಡೇರಿಸಬೇಕು ಎಂದು ಆಗ್ರಹಿಸಿದ್ದಾರೆ.