ಮಾಣಿ- ಸಂಪಾಜೆ ಚತುಷ್ಪಥ ರಸ್ತೆ ಕಾಮಗಾರಿಗೆ ಶೀಘ್ರವೇ ಕೇಂದ್ರದ ಅಸ್ತು

0

2200 ಕೋಟಿ ರೂ ಪ್ರಸ್ತಾವನೆ ಸಲ್ಲಿಕೆ- ಶಾಸಕ ಅಶೋಕ್ ರೈ

ಪುತ್ತೂರು: ಮಾಣಿ-ಸಂಪಾಜೆ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ 2200 ಕೋಟಿ ರೂ ಪ್ರಸ್ತಾವನೆಯನ್ನು ಸಲ್ಲಿಸಲಾಗಿದ್ದು ಮುಂದಿನ ನಾಲ್ಕು ವರ್ಷದೊಳಗೆ ಹೆದ್ದಾರಿ ಕಾಮಗಾರಿ ಪೂರ್ಣಗೊಳ್ಳಲಿದ್ದು ಈ ಭಾಗದ ಜನತೆಯ ಬಹುವರ್ಷಗಳ ಕನಸು ನನಸಾಗುವ ಕಾಲ ಬಂದಿದೆ ಎಂದು ಪುತ್ತೂರು ಶಾಸಕರಾದ ಅಶೋಕ್ ರೈ ತಿಳಿಸಿದ್ದಾರೆ.
ಮಾಣಿಯಿಂದ ಸಂಪಾಜೆ ತನಕ 76 ಕಿ ಮೀ ರಸ್ತೆಯು ಮುಂದಿನ ದಿನಗಳಲ್ಲಿ ಚತುಷ್ಪಥ ರಸ್ತೆಯಾಗಿ ಮೇಲ್ದರ್ಜೆಗೇರಲಿದೆ. 76 ಕಿ ಮಿ ರಸ್ತೆ ಕಾಮಗಾರಿಗೆ ಮೊದಲ ಹಂತದಲ್ಲಿ 1100 ಕೋಟಿ ರೂ ಮತ್ತು ಎರಡನೇ ಹಂತದಲ್ಲಿ 1100 ಕೋಟಿ ರೂ ಒಟ್ಟು2200 ಕೋಟಿ ರೂ ಗಳ ಪ್ರಸ್ತಾವನೆಯನ್ನು ಕೇಂದ್ರಕ್ಕೆ ಸಲ್ಲಿಸಲಾಗಿದೆ.


ಕಳೆದ ಕೆಲದಿನಗಳ ಹಿಂದೆ ಚತುಷ್ಪಥ ರಸ್ತೆ ಕಾಮಗಾರಿ ವಿಚಾರಕ್ಕೆ ಸಂಬಂಧಿಸಿದಂತೆ ದೆಹಲಿಗೆ ಭೇಟಿ ನೀಡಿ ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳ ಜೊತೆ ಶಾಸಕ ಅಶೋಕ್ ರೈ ಹಾಗೂ ಮಂಗಳೂರು ಸಂಸದ ನಳಿನ್‌ಕುಮಾರ್ ಕಟೀಲ್ ಮಾತುಕತೆ ನಡೆಸಿದ್ದರು. ಮಾತುಕತೆ ವೇಳೆ ಮಾಣಿಯಿಂದ ಪುತ್ತೂರು ವರೆಗೆ ಚತುಷ್ಪಥ ರಸ್ತೆ ಕಾಮಗಾರಿಯ ವಿಚಾರವೂ ಚರ್ಚೆಯಾಗಿತ್ತು. ಆ ಬಳಿಕ ಕೇಂದ್ರ ಹೆದ್ದಾರಿ ಪ್ರಾಧಿಕಾರ ರೀಜನಲ್ ಮೆನೆಜರ್ ಅವರನ್ನು ಬೆಂಗಳೂರಿನಲ್ಲಿ ಭೇಟಿಯಾಗಿ ಶಾಸಕರು ಮತ್ತು ಸಂಸದರು ಚರ್ಚೆ ನಡೆಸಿದ್ದರು. ಇದೀಗ ಮಾಣಿಯಿಂದ ಸಂಪಾಜೆ ತನಕ ಚತುಷ್ಪಥ ಕಾಮಗಾರಿಗೆ ಹೆದ್ದಾರಿ ಪ್ರಾಧಿಕಾರ ಒಪ್ಪಿಕೊಂಡಿದ್ದು ಇದಕ್ಕೆ ಬೇಕಾದ ಎಲ್ಲಾ ಯೋಜನಾ ವರದಿಯನ್ನು ಸಿದ್ದಪಡಿಸಿಕೊಳ್ಳಲು ಮುಂದಾಗಿದೆ.
ಮಾಣಿಯಿಂದ ಸಂಪಾಜೆ ತನಕ ಭೂ ಒತ್ತುವರಿ ಪ್ರಕ್ರಿಯೆ, ಸೇತುವೆ ಕಾಮಗಾರಿ ಸೇರಿದಂತೆ ರಸ್ತೆ ಅಗಲೀಕರಣಕ್ಕೆ ಬೇಕಾದ ಎಲ್ಲಾ ಯೋಜನೆಗಳನ್ನು ಸಿದ್ದಪಡಿಸಲಾಗುತ್ತಿದ್ದು ಮುಂದಿನ ನಾಲ್ಕು ತಿಂಗಳೊಳಗೆ ಈ ಎಲ್ಲಾ ಪ್ರಕ್ರಿಯೆಗಳು ಪೂರ್ಣಗೊಳ್ಳಲಿದೆ. ಬಳಿಕ ಟೆಂಡರ್ ಪ್ರಕ್ರಿಯೆ ನಡೆಯಲಿದ್ದು ಮುಂದಿನ ನಾಲ್ಕು ವರ್ಷದೊಳಗೆ ಈ ಕಾಮಗಾರಿ ಪೂರ್ಣಗೊಳ್ಳಲಿದ್ದು ಮಾಣಿಯಿಂದ ಸಂಪಾಜೆ ತನಕ ಪೂರ್ಣ ಪ್ರಮಾಣದ ಚತುಷ್ಪಥ ರಸ್ತೆ ನಿರ್ಮಾಣವಾಗಲಿದೆ.

2 ಫೈಓವರ್ 1 ಅಂಡರ್‌ಪಾಸ್
ಬೈಪಾಸ್ ಹಾಗೂ ದರ್ಬೆಯ ಬಳಿ ಫ್ಲೈ ಓವರ್ ನಿರ್ಮಾಣವಾಗಲಿದೆ ಮತ್ತು ವಿವೇಕಾನಂದ ವಿದ್ಯಾ ಸಂಸ್ಥೆಯ ಬಳಿ ಅಂಡರ್‌ಪಾಸ್ ನಿರ್ಮಾಣವಾಗಲಿದೆ. ವಿದ್ಯಾರ್ಥಿಗಳ ಹಿತ ಮತ್ತು ಸಾರ್ವಜನಿಕರ ಹಿತದೃಷ್ಟಿಯಿಂದ ಅಂಡರ್‌ಪಾಸ್ ನಿರ್ಮಾಣ ಮಾಡಲಾಗುತ್ತದೆ. ಉಳಿದಂತೆ ಮಾಣಿಯಿಂದ ಸಂಪಾಜೆ ತನಕ ಅಗತ್ಯ ಇರುವ ಕಡೆಗಳಲ್ಲಿ ಫ್ಲೈ ಓವರ್ ಮತ್ತು ಅಂಡರ್ ಪಾಸ್ ಕಾಮಗಾರಿ ನಡೆಯಲಿದೆ.

ಶಾಸಕನಾಗಿ ಆಯ್ಕೆಯಾದ ಮೊದಲ ದಿನದಂದೇ ಚತುಷ್ಪಥ ರಸ್ತೆಯ ಕನಸು ಕಂಡಿದ್ದೆ. ಆ ಬಳಿಕ ನಾನು ಅದರ ಬಗ್ಗೆ ಮಾಹಿತಿ ಕಲೆ ಹಾಕಲು ಹೆದ್ದಾರಿ ಪ್ರಾಧಿಕಾರದ ದೆಹಲಿ ಮತ್ತು ಬೆಂಗಳೂರು ಕಚೇರಿಗೆ ಭೇಟಿ ನೀಡಿ ಅಧಿಕಾರಿಗಳ ಜೊತೆ ಚರ್ಚಿಸಿದ್ದೆ. ಇದೀಗ ನಾನು ಮತ್ತು ಸಂಸದರಾದ ನಳಿನ್‌ಕುಮಾರ್ ಕಟೀಲ್ ಕಾಮಗಾರಿಗೆ ಪ್ರಸ್ತಾವನೆಯನ್ನು ಕೇಂದ್ರ ಸರಕಾರಕ್ಕೆ ಸಲ್ಲಿಸಿದ್ದೇವೆ. ಪ್ರಸ್ತಾವನೆಗೆ ಕೇಂದ್ರದ ಒಪ್ಪಿಗೆ ದೊರಕಿದ್ದು ಮುಂದೆ ಯೋಜನಾ ವರದಿ ಸಿದ್ದಗೊಂಡ ಬಳಿಕ ಕಾಮಗಾರಿ ಪ್ರಕ್ರಿಯೆ ಪ್ರಾರಂಭಗೊಳ್ಳಲಿದೆ. ಒಟ್ಟು ಎರಡು ಹಂತದಲ್ಲಿ 2200ಕೋಟಿ ರೂ ಅನುದಾನಕ್ಕೆ ಪ್ರಸ್ತಾವನೆಯನ್ನು ಕಳುಹಿಸಲಾಗಿದ್ದು ಸುಮಾರು 3000 ಕೋಟಿ ರೂ ವೆಚ್ಚದಲ್ಲಿ ರಸ್ತೆ ಕಾಮಗಾರಿ ಪೂರ್ಣಗೊಳ್ಳಲಿದೆ. ಅಭಿವೃದ್ದಿಗಾಗಿ ನಾನು ಮತ್ತು ನಳಿನ್‌ಕುಮಾರ್ ಕಟೀಲ್ ಜೊತೆಯಾಗಿ ಈ ವಿಚಾರದಲ್ಲಿ ಕೆಲಸ ಮಾಡಿದ್ದೇವೆ . ಅಭಿವೃದ್ದಿಯಲ್ಲಿ ಯಾವುದೇ ರಾಜಕೀಯ ಇಲ್ಲ. ಜನತೆಯ ಬಹುವರ್ಷಗಳ ಕನಸು ಮತ್ತು ನನ್ನ ಕನಸು ನನಸಾಗಿದ್ದು ಇದು ಬಹಳ ಸಂತೋಷದ ವಿಚಾರವಾಗಿದೆ
ಅಶೋಕ್ ರೈ, ಶಾಸಕರು ಪುತ್ತೂರು

LEAVE A REPLY

Please enter your comment!
Please enter your name here